ADVERTISEMENT

ಮಿದುಳನ್ನು ತೊಳೆಯುವ ಫಿಲ್ಟರ್‌

ನೇಸರ ಕಾಡನಕುಪ್ಪೆ
Published 20 ಆಗಸ್ಟ್ 2024, 23:30 IST
Last Updated 20 ಆಗಸ್ಟ್ 2024, 23:30 IST
   

ವಯಸ್ಸಾದಂತೆ ಮಿದುಳಲ್ಲೂ ಕಸ ಸೇರುತ್ತದೆ – ಎಂದರೆ ನೀವು ನಂಬುತ್ತೀರ? ಇದು ಮನಸ್ಸಿಗೆ ಸಂಬಂಧಿಸಿದ ಕಸವಲ್ಲ; ಇದು ನರ, ರಕ್ತ, ಮಾಂಸಗಳಿರುವ ಅಂಗಕ್ಕೆ ಸೇರಿದ ವಿಚಾರ. ರಕ್ತನಾಳಗಳ ಮೂಲಕ ಹರಿಯುವ ರಕ್ತವು ತಾನು ಹರಿದ ಜಾಗದಲ್ಲೆಲ್ಲಾ ತನ್ನೊಳಗಿರುವ ವಿಷಪೂರಿತ ಅಂಶಗಳನ್ನು ಸೇರಿಸುತ್ತಿರುತ್ತದೆ. ಮಿದುಳು ದೇಹದ ಯುಕ್ತಿ ಕೇಂದ್ರವಾಗಿರುವ ಕಾರಣ ಅದು ಹಲವು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ವಿಜ್ಞಾನಿಗಳು ಈಗ ‘ಮಿದುಳಕಸ’ವನ್ನು ತೊಳೆಯುವ ತಂತ್ರಜ್ಞಾನವನ್ನು ಕಂಡುಹಿಡಿದಿರುವುದು ಕುತೂಹಲ ಮೂಡಿಸಿದೆ.

ಅಲ್ಜೈಮರ್ಸ್‌, ಪಾರ್ಕಿನ್‌ಸನ್‌ನಂತಹ ಕಾಯಿಲೆಗಳಿಗೆ ಪರಿಪೂರ್ಣವಾದ ಮದ್ದನ್ನು ಇದುವರೆಗೂ ಕಂಡುಹಿಡಿಯಲಾಗಿಲ್ಲ. ಮಿದುಳು ಕುಸಿಯುವ ಕಾಯಿಲೆ ಅಲ್ಜೈಮರ್ಸ್‌ ಆದರೆ, ನರಕೋಶಗಳಿಗೆ ಸಂಬಂಧಿಸಿದ ಕಾಯಿಲೆ ಪಾರ್ಕಿನ್‌ಸನ್‌; ಈ ಎರಡೂ ಕಾಯಿಲೆಗಳು ಮರೆಗುಳಿತನ, ದೇಹದ ಭಾಗಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಈ ಎರಡೂ ಕಾಯಿಲೆಗಳಿಗೆ ಮಿದುಳು ಮಲಿನಗೊಳ್ಳುವುದೂ ಒಂದು ಕಾರಣ ಎಂದು ವಿಜ್ಞಾನಿಗಳು ನಂಬಿದ್ದಾರೆ. ಹಾಗಾದರೆ, ಮಿದುಳನ್ನು ಶುಚಿಗೊಳಿಸಿದರೆ ಈ ಕಾಯಿಲೆಗಳಿಗೂ ಪರಿಹಾರ ಸಿಗುವುದೇ ಎನ್ನುವುದು ಸದ್ಯದ ಪ್ರಶ್ನೆ.

ಅಮೆರಿಕದ ನ್ಯೂಯಾರ್ಕ್‌ನ ಮಾನ್ರೋ ಕೌಂಟಿಯ ಯೂನಿವರ್ಸಿಟಿ ಆಫ್‌ ರಾಚೆಸ್ಟರ್‌ನ ಹಜೀಮ್‌ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂ‌ಗ್ ಪ್ರಾಧ್ಯಾಪಕ  ಡಗ್ಲಸ್ ಕೆಲ್ಲೇ ಈ ಸಂಶೋಧನೆ ಮಾಡಿದ್ದಾರೆ. ಇವರ ಪ್ರಕಾರ, ‘ಮಿದುಳಿನಲ್ಲಿ ಕಸವು ಒಮ್ಮೆಗೇ ಸೇರುವುದಲ್ಲ. ಅದು ನಾವು ಜನ್ಮಪಡೆದ ದಿನದಿಂದಲೂ ಆಗಿರುತ್ತದೆ. ಆದರೆ, ವರ್ಷಗಳು ಕಳೆದಂತೆ, ಅದರಲ್ಲೂ ಮಧ್ಯವಯಸ್ಸನ್ನು ದಾಟಿದಮೇಲೆ ಈ ಕಸದ ಪ್ರಮಾಣ ಹೆಚ್ಚಾಗಿ ಮಿದುಳು ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಆಗ, ಅದು ಹಲವು ಬಗೆಯ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ತಪ್ಪಿಸಲು ರಕ್ತಶೋಧ ತಂತ್ರಜ್ಞಾನ ಪೂರಕವಾಗಿದೆ’ ಎಂದು ವಿಶ್ಲೇಷಿಸಿದ್ದಾರೆ.

ADVERTISEMENT

ಏನಿದು ತಂತ್ರಜ್ಞಾನ?

ಮಿದುಳಿಗೆ ರಕ್ತವನ್ನು ಪೂರೈಸುವ ಮುಖ್ಯ ವಾಹಿನಿಗೆ ಫಿಲ್ಟರ್ ಅನ್ನು ಅಳವಡಿಸುವ ತಂತ್ರಜ್ಞಾನವಿದು. ಇದು ನ್ಯಾನೋ ತಂತ್ರಜ್ಞಾನವಾಗಿರುವ ಕಾರಣ ಅತಿ ಸೂಕ್ಷ್ಮವಾದುದು. ಹಾಗಾಗಿ, ‘ಫಿಲ್ಟರ್‌’ ಎಂದರೆ ಒಂದು ದೊಡ್ಡ ಸಾಧನ ಎಂದು ಭಾವಿಸಬೇಕಿಲ್ಲ. ಅತಿ ಸೂಕ್ಷ್ಮವಾದ ಕೇವಲ ಒಂದು ಕೂದಲಿನ ಸಾವಿರದ ಒಂದು ಭಾಗದಷ್ಟು ಸಣ್ಣದಾಗಿರುವ ಸಾಧನವೊಂದನ್ನು ರಕ್ತನಾಳದೊಳಗೆ ಸೇರಿಸಲಾಗುತ್ತದೆ. ರಕ್ತದಲ್ಲಿರುವ ಅನಗತ್ಯ ಪ್ರೊಟೀನ್‌, ಕೊಬ್ಬಿನಾಂಶ, ಕೆಲವು ರಾಸಾಯನಿಕಗಳ ದತ್ತಾಂಶವನ್ನು ಈ ಸಾಧನದಲ್ಲಿ ಸೇರಿಸಲಾಗಿರುತ್ತದೆ. ಈ ಬಗೆಯ ಅಂಶಗಳನ್ನು ಗುರುತಿಸುವ ಈ ಸಾಧನವು ತನ್ನಲ್ಲಿನ ವಿದ್ಯುತ್‌ ಸಂಜ್ಞೆಗಳ ಮೂಲಕ ಅಲ್ಲೇ ಅದನ್ನು ನಾಶ ಮಾಡುತ್ತದೆ.

ಅಲ್ಲದೇ. ಈ ಸಾಧನದೊಳಗೆ ಯಾವುದೇ ಬಗೆಯ ಬ್ಯಾಟರಿಯಾಗಲಿ, ಅಥವಾ ಕೃತಕ ಸಾಧನವಾಗಲಿ ಇರುವುದಿಲ್ಲ. ಮಿದುಳಿನಲ್ಲಿ ಸಾಕಷ್ಟು ಪ್ರಮಾಣದಲ್ಲೇ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಅದನ್ನೇ ಬಳಸಿಕೊಳ್ಳುವ ಈ ಸಾಧನವು ತನ್ನ ಕೆಲಸ ಮಾಡುತ್ತದೆ. ಹಾಗಾಗಿ, ಈ ಸಾಧನದಿಂದ ಯಾವುದೇ ಅಡ್ಡಪರಿಣಾಮ ಇರಲಾರದು. ಜೊತೆಗೆ, ಈ ಸಾಧನವೇ ಸಾವಯವ ವಸ್ತುಗಳಿಂದ ಮಾಡಲ್ಪಟ್ಟಿದೆ. ಆದ್ದರಿಂದ ದೇಹ ಈ ಸಾಧನವನ್ನು ತಿರಸ್ಕರಿಸದೇ ಸ್ವೀಕರಿಸುತ್ತದೆ ಎನ್ನುವುದನ್ನು ಡಗ್ಲಸ್ ವಿಶ್ಲೇಷಿಸಿದ್ದಾರೆ.

ಈಗಾಗಲೇ ಇಲಿಗಳು ಮೇಲೆ ಈ ಸಾಧನವನ್ನು ಪ್ರಯೋಗ ಮಾಡಲಾಗಿದೆ. ಈ ಪ್ರಯೋಗ ಯಶಸ್ವಿಯೂ ಆಗಿದೆ. ವೈದ್ಯಕೀಯ ನೈತಿಕ ಸಮಿತಿಯ ಒಪ್ಪಿಗೆ ಸಿಕ್ಕ ಕೂಡಲೇ ಮಾನವಪ್ರಯೋಗ ಕೂಡ ನಡೆಯಲಿದೆ. ಮಾನವಪ್ರಯೋಗಕ್ಕೆ ಸ್ವಯಂ ಪ್ರೇರಿತರಾಗಿ ಬರುವ ರೋಗಿಗಳನ್ನು ಬಳಸಲಾಗುತ್ತದೆ. ಈ ಪ್ರಯೋಗ ಯಶಸ್ವಿಯಾದಲ್ಲಿ ಅನೇಕ ಮಿದುಳು ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸಿಗಲಿರುವುದು ಈ ಸಂಶೋಧನೆಯ ಹೆಗ್ಗಳಿಕೆಯಾಗಿದೆ.

ಕೇವಲ ಸಾಧನ ಮಾತ್ರವೇ ಅಲ್ಲದೇ, ಔಷಧದ ಸ್ವರೂಪದಲ್ಲೂ ಈ ತಂತ್ರಜ್ಞಾನವನ್ನು ಬಳಸುವ ಉದ್ದೇಶವಿದೆ. ಕೆಲವು ರೋಗಿಗಳಿಗೆ ಸಾಧನ ಅಳವಡಿಸಲು ಹಲವು ಕಾರಣಗಳಿಂದ ಸಾಧ್ಯವಾಗುವುದಿಲ್ಲ. ಉದಾಹರಣೆಗೆ ವಯಸ್ಸು, ಚರ್ಮ ಅಥವಾ ಮಾಂಸಖಂಡಗಳಲ್ಲಿರುವ ದೋಷ ಮುಂತಾದ ಕಾರಣಗಳು ಕೆಲವೊಮ್ಮೆ ರೋಗಿಗಳನ್ನು ಶಸ್ತ್ರಚಿಕಿತ್ಸೆಗೆ ಅರ್ಹರನ್ನಾಗಿ ಮಾಡುವುದಿಲ್ಲ. ಅಂತಹ ರೋಗಿಗಳಿಗೆ ಔಷಧದ ಮೂಲಕ ನ್ಯಾನೋ ರೋಬಾಟ್‌ಗಳನ್ನು ಸೇರಿಸಿ ಅದನ್ನು ಚುಚ್ಚುಮದ್ದಿನ ಮೂಲಕ ದೇಹಕ್ಕೆ ಸೇರಿಸುವ ಸಿದ್ಧತೆಯೂ ನಡೆದಿದೆ. ಈ ತಂತ್ರಜ್ಞಾನ ಸಿದ್ಧವಾದರೆ, ಕಡಿಮೆ ಅಪಾಯದ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಧ್ಯತೆಯೂ ಇರಲಿದೆ.

ಈ ತಂತ್ರಜ್ಞಾನವನ್ನು ಸಾಧ್ಯವಾದಷ್ಟೂ ಕೈಗೆಟುಕುವ ಬೆಲೆಯಲ್ಲಿ ಅಭಿವೃದ್ಧಿಪಡಿಸಬೇಕು ಎನ್ನುವುದು ಡಗ್ಲಸ್‌ ಅವರ ಆಶಯವಾಗಿದೆ. ಏಕೆಂದರೆ ಅಲ್ಜೈಮರ್ಸ್‌ ಅಥವಾ ಪಾರ್ಕಿನ್‌ಸನ್‌ ಕಾಯಿಲೆಗಳು ರೋಗಿ ಹಾಗೂ ಕುಟುಂಬ ಸದಸ್ಯರನ್ನು ಆಗಲೇ ಸಾಕಷ್ಟು ಆರ್ಥಿಕವಾಗಿಯೂ ಮಾನಸಿಕವಾಗಿಯೂ ಕುಗ್ಗಿಸಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.