‘ಘರ್ ಕಿ ಮುರಗಿ’ ಇದು ಯುಟ್ಯೂಬ್‌ನಲ್ಲಿ ಲಭ್ಯವಿರುವ ಹಿಂದಿ ಕಿರುಚಿತ್ರ. ಕುಕ್ಕರ್‌ನ ವಿಷಲ್‌ನೊಂದಿಗೆ ಇದು ಆರಂಭಗೊಳ್ಳುತ್ತದೆ. ಮನೆಯ ಗೃಹಿಣಿ ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲರ ಇಷ್ಟದ ಅಡುಗೆ ಸಿದ್ಧಪಡಿಸುತ್ತಿದ್ದಾಳೆ. ಮಕ್ಕಳನ್ನು ಶಾಲೆಗೆ, ಮರೆಗುಳಿ ಪತಿಗೆ ಊಟದ ಡಬ್ಬಿ ಸಹಿತ ಕೀ ನೀಡುತ್ತಾಳೆ, ಅತ್ತೆ ಮಾವನಿಗೆ ಸರಿಯಾದ ಸಮಯಕ್ಕೆ ಚಹಾ, ಔಷಧ ನೀಡುತ್ತಾಳೆ. ಮಕ್ಕಳು ಮನೆಗೆ ಬಂದ ನಂತರ ಅವರ ಹೋಂ ವರ್ಕ್ ಹೀಗೆ ಎಲ್ಲವನ್ನೂ ನಿಭಾಯಿಸುವ ಈಕೆಯದ್ದು ದಶಾವತಾರ. ಭಾರತೀಯ ಚಿತ್ರರಂಗದಲ್ಲಿ ಗೃಹಿಣಿಯ ಇಂಥ ದೃಶ್ಯವುಳ್ಳ ಸಿನಿಮಾಗಳು ಸಾಕಷ್ಟಿವೆ.
ಈ ನಾಯಕಿಯಂತೆಯೇ ಮಾನವ ಮಾಡುವ ಕೆಲಸಗಳನ್ನು ನಿರ್ವಹಿಸಬಲ್ಲ ಸಾಧನಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಉದಾಹರಣೆಗೆ ಇಷ್ಟದ ಪದಾರ್ಥಗಳನ್ನು ಸಿದ್ಧಪಡಿಸುವುದು, ಮನೆಗೆಲಸ, ಮರೆತಿದ್ದನ್ನು ನೆನಪಿಸುವುದು, ಬೇಸರದಲ್ಲಿದ್ದರೆ, ಖುಷಿಯಾಗಿದ್ದರೆ ಮನಸ್ಸಿನ ಭಾವನೆಗಳಿಗೆ ತಕ್ಕಂತೆ ಮನೆಯ ದೀಪ ಬೆಳಗುವುದು, ಹಾಡು ಕೇಳಿಸುವುದು, ಕಥೆ ಹೇಳುವುದು ಇತ್ಯಾದಿ..
ಬಳಕೆದಾರರ ಬಯಕೆಗಳನ್ನು ಅರಿಯುವ ಕೃತಕ ಬುದ್ಧಿಮತ್ತೆಯನ್ನು ಯಂತ್ರಗಳಿಗೆ ಕಲಿಸುವ ಮಷಿನ್ ಲರ್ನಿಂಗ್ ಮೂಲಕ ಬೇಕಾದ್ದನ್ನು ಯಾವುದೇ ಪ್ರಯಾಸವಿಲ್ಲದೆ ಪಡೆಯುವ ಗೃಹೋಪಯೋಗಿ ಸಾಧನಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಇವುಗಳಲ್ಲಿ ರೆಫ್ರಿಜರೇಟರ್, ವಾಷಿಂಗ್ ಮಷಿನ್, ಭದ್ರತಾ ಕ್ಯಾಮೆರಾಗಳು, ಅವನ್, ನೆಲ ಸ್ವಚ್ಛಗೊಳಿಸುವ ಯಂತ್ರಗಳು, ಟಿ.ವಿ. ಹೀಗೆ ಬಹಳಷ್ಟು ಸಾಧನಗಳು ಇಂದು ಸ್ಮಾರ್ಟ್ ಆಗುವತ್ತ ದಾಪುಗಾಲಿಡುತ್ತಿವೆ. ಇಂಧನ ಕ್ಷಮತೆ, ಅಪಾರ ಬುದ್ಧಿಮತ್ತೆ, ಯಂತ್ರವನ್ನು ನಮ್ಮ ಬಯಕೆಗೆ ಅನುಗುಣವಾಗಿ ಪಳಗಿಸಬಲ್ಲ ತಂತ್ರಜ್ಞಾನಗಳನ್ನು ಇವು ಅಳವಡಿಸಿಕೊಳ್ಳುತ್ತಿವೆ.
ಸಾಮಾನ್ಯವಾಗಿ ಕಂಪ್ಯೂಟರ್‌ಗಳಿಗೆ ಅರ್ಥವಾಗುವುದು 0 ಹಾಗೂ 1 ಎಂಬ ಬೈನರಿ ಸಂಖ್ಯೆಗಳು ಮಾತ್ರ. ಆದರೆ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸ್ಸಿಂಗ್ (ಎನ್‌ಎಲ್‌ಪಿ) ಹಾಗು ಫಜಿ ಲಾಜಿಕ್ ಮೂಲಕ 0 ಹಾಗೂ 1ರ ನಡುವಿನ ಸಂಖ್ಯೆಗಳನ್ನೂ ಅರಿಯುವಂತೆ ಮಾಡುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಹೀಗಾಗಿ ಬೆಳಕು ಮತ್ತು ಉಷ್ಣವನ್ನು ಅರಿಯುವ ಸಾಮರ್ಥ್ಯವನ್ನು ಕಲಿಸಿರುವ ತಂತ್ರಜ್ಞರು, ಅದರ ಮೂಲಕ ನಿರ್ಜೀವವಾದ ಗೃಹೋಪಯೋಗಿ ಸಾಧನಗಳಿಗೆ, ಮನುಷ್ಯರ ಅಗತ್ಯಗಳನ್ನು ಅರಿತು, ಅದಕ್ಕೆ ತಕ್ಕಂತೆ ವರ್ತಿಸುವುದನ್ನು ಕಲಿಸಿದ್ದಾರೆ.
ಧ್ವನಿಯೇ ಈ ಸಾಧನಗಳಿಗೆ ಆದೇಶ
ಇವೆಲ್ಲದಕ್ಕೂ ಮೂಲ, ನಾವು ಈ ಸಾಧನಗಳಿಗೆ ನೀಡುವ ಆದೇಶಗಳು. ಅವುಗಳಿಗೆ ಈಗಾಗಲೇ ಅಮೆಜಾನ್‌ನ ಅಲೆಕ್ಸಾ, ಗೂಗಲ್ ಅಸಿಸ್ಟಂಟ್, ಆ್ಯಪಲ್‌ನ ಸಿರಿ ಇದ್ದೇ ಇದ್ದಾರೆ. ಇವುಗಳ ಮೂಲಕ ದಿನದ ಶಾಪಿಂಗ್ ಪಟ್ಟಿ ಸಿದ್ಧಪಡಿಸುವುದು, ಬೇಕಾದ ಗೀತೆಗಳನ್ನು ಪ್ರಸಾರ ಮಾಡುವುದು, ಮನೆಯ ದೀಪ ಬೆಳಗಿಸುವುದು ಇಲ್ಲವೇ ಬಂದ್ ಮಾಡುವುದು ಇತ್ಯಾದಿ ಕ್ರಿಯೆಗಳನ್ನು ಮಾಡುವ ಸಾಧನಗಳು ಈಗಾಗಲೇ ಬಹುತೇಕರ ಮನೆ ಸೇರಿವೆ. ಇದೀಗ, ಇದನ್ನೇ ಆಧರಿಸಿ, ಮನೆಯಲ್ಲಿನ ಇನ್ನಿತರ ಸಾಧನಗಳ ಬಳಕೆಯನ್ನು ಸರಳವಾಗಿಸುವ ಪ್ರಯತ್ನಗಳು ನಡೆದಿದ್ದು, ಬಹಳಷ್ಟು ಕಂಪನಿಗಳು ಅವುಗಳನ್ನು ಮಾರುಕಟ್ಟೆಗೆ ತಂದಿವೆ.
ಸ್ಯಾಮ್ಸಂಗ್, ಎಲ್‌ಜಿ, ವರ್ಲ್‌ಪೂಲ್, ಸೀಮನ್ಸ್, ಬಾಷ್ ಸೇರಿದಂತೆ ಕೆಲ ಮುಂಚೂಣಿಯ ಕಂಪನಿಗಳು ಸ್ಮಾರ್ಟ್ ಅವನ್, ರೆಫ್ರಿಜರೇಟರ್, ವಾಷಿಂಗ್ ಮಷಿನ್, ಡಿಶ್ ವಾಷರ್, ಸ್ಮಾರ್ಟ್ ಕಾಫಿ, ಸ್ಮಾರ್ಟ್ ಕುಕ್ಕರ್, ವ್ಯಾಕ್ಯೂಂ ಕ್ಲೀನರ್ ಹೀಗೆ ಕೃತಕ ಬುದ್ಧಿಮತ್ತೆ ಆಧರಿಸಿದ ಹಲವು ಸಾಧನಗಳನ್ನು ಮಾರುಕಟ್ಟೆಗೆ ತಂದಿವೆ. ಇವುಗಳ ಬೆಳವಣಿಗೆಯ ಹಾದಿಯು 2030ರ ಹೊತ್ತಿಗೆ 58.5 ಶತಕೋಟಿ ಅಮೆರಿಕನ್ ಡಾಲರ್‌ನಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.
ಇವುಗಳ ಬಳಕೆಯಿಂದ ಗ್ರಾಹಕರಿಗೆ ಹಣ ಉಳಿತಾಯವೇ ಹೆಚ್ಚು. ಇಂಧನ, ನೀರು ಉಳಿತಾಯ, ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾ ಹಾಗೂ ಸ್ಮಾರ್ಟ್ ವ್ಯಾಕ್ಯೂಮ್ ಕ್ಲೀನರ್ ಮೂಲಕ ನೌಕರರನ್ನು ನಿಯೋಜಿಸುವ ಹಣವೂ ಉಳಿತಾಯವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಇಷ್ಟು ಮಾತ್ರವಲ್ಲ, ಬಳಕೆದಾರರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ಸಿದ್ಧಪಡಿಸುವ ಸಾಧನಗಳು ಇವೆ. ಇವುಗಳು ಆರೋಗ್ಯ ಕಾಳಜಿ ನೀಡುವ ಮೂಲಕ ಅಧಿಕ ವೈದ್ಯಕೀಯ ವೆಚ್ಚವನ್ನೂ ತಗ್ಗಿಸಲಿವೆ.
ಕೃತಕ ಬುದ್ಧಿಮತ್ತೆಯ ಸಾಧನ ಕೈಗೆಟಕುವುದೇ..?
ಪ್ರತಿಕ್ಷಣವೂ ಬಳಕೆದಾರರ ಆದೇಶಗಳಿಗೆ ಕಾಯುವ ಈ ಸಾಧನಗಳು ಅತ್ಯಾಧುನಿಕ ಆಲ್ಗಾರಿದಮ್, ಆಗಾಗ ನಡೆಸಬೇಕಾದ ಟೆಸ್ಟಿಂಗ್, ಮಾಹಿತಿ ಸಂಗ್ರಹ ಹಾಗೂ ಶೇಖರಣೆ ಹೀಗೆ ಹಲವು ಕ್ರಿಯೆಗಳು ಸಾಕಷ್ಟು ಹಣ ಬೇಡುತ್ತವೆ. ಇವೆಲ್ಲವೂ ಅತ್ಯಾಧುನಿಕ ತಂತ್ರಜ್ಞಾನ ಬೇಡುವುದರಿಂದ ಆರಂಭಿಕ ವೆಚ್ಚ ತುಸು ದುಬಾರಿಯೇ ಆಗಿರಲಿದೆ. ಎಷ್ಟು ದುಬಾರಿ ಎಂದರೆ, ಸ್ಯಾಮ್ಸಂಗ್ ಫ್ಯಾಮಿಲಿ ಹಬ್ ವಿಭಾಗದ ಎಐ ಪ್ರಿಡ್ಜ್‌ನ ಬೆಲೆ ₹4.19 ಲಕ್ಷದಷ್ಟಿದೆ. ಇವುಗಳ ನಿರ್ವಹಣೆಗೂ ಹಣ ನೀಡಬೇಕಾಗಬಹುದು.
ಇಲ್ಲಿ ಗೋಡೆಗಳಿಗೆ ಮಾತ್ರ ಕಿವಿ ಇಲ್ಲ
ಕೃತಕ ಬುದ್ಧಿಮತ್ತೆ ಸಾಧನಗಳಿಗೆ ಮೂಲ ಮಾಹಿತಿಯೇ ಧ್ವನಿ, ಬೆರಳಚ್ಚು, ಸ್ಥಳ, ಮುಖ ಚಹರೆ, ಬಳಕೆದಾರರ ಆಯ್ಕೆಗಳು ಹಾಗೂ ಹವ್ಯಾಸ ಇತ್ಯಾದಿಗಳು. ಇವುಗಳು ಮೂರನೇ ವ್ಯಕ್ತಿಗೆ ಸೋರಿಕೆಯಾಗುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ ಎಂಬ ಖಾತ್ರಿ ಇಲ್ಲ. ಬಳಕೆದಾರರಿಂದ ಸಂಗ್ರಹಿಸಲಾದ ಮಾಹಿತಿಯನ್ನು ಹೀಗೆ ಮೂರನೇ ವ್ಯಕ್ತಿಗೆ ಸೋರಿಕೆಯಾದಲ್ಲಿ ಅನಗತ್ಯ ಜಾಹೀರಾತುಗಳ ಕಾಟ, ಮಾರ್ಕೆಟಿಂಗ್‌ನವರ ಅನಪೇಕ್ಷಿತ ಕರೆಗಳು ಗ್ರಾಹಕರ ನೆಮ್ಮದಿಯನ್ನೇ ಹಾಳುಗೆಡವಬಲ್ಲವು.
ಆದರೆ, ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಮನೆಯಲ್ಲಿ ಆಡುವ ಮಾತುಗಳು ಸೋರಿಕೆಯಾಗಿ ಖಾಸಗಿತನಕ್ಕೆ ಧಕ್ಕೆಯಾಗಬಹುದು. ಮನೆಯಲ್ಲಿನ ಇಂಚಿಂಚೂ ಮಾಹಿತಿಯನ್ನು ರವಾನಿಸುವ ಮೂಲಕ ಭದ್ರತೆಗೂ ಸಂಚಕಾರ ಎದುರಾಗುವ ಎಲ್ಲಾ ಸಾಧ್ಯತೆಗಳೂ ಇವೆ.
ದಿನನಿತ್ಯದ ಕೆಲಸಗಳನ್ನು ಸುಲಭಗೊಳಿಸಿ, ಕೇವಲ ಆದೇಶವನ್ನಷ್ಟೇ ನಮ್ಮಿಂದ ಬೇಡುವ ಇಂಥ ಕೃತಕ ಬುದ್ಧಿಮತ್ತೆ ಆಧಾರಿತ ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಹಾಗೂ ಅಳವಡಿಕೆಯಲ್ಲಿ ಸಾಕಷ್ಟು ಸವಾಲುಗಳು ಇವೆ. ಸೈಬರ್ ಅಪರಾಧ ಎಂಬುದು ದಿನನಿತ್ಯ ಕೇಳುವ ಸಂಗತಿ ಎಂಬಂತಾಗಿರುವ ದಿನಮಾನಗಳಲ್ಲಿ ಗ್ರಾಹಕರ ಮಾಹಿತಿ ಸೋರಿಕೆಯ ಅಪಾಯವೂ ಇದೆ. ಆದರೆ, ಉತ್ತಮ ನಾಳೆಗಳ ಭರವಸೆಯೊಂದಿಗೆ ಹಲವು ಕಂಪನಿಗಳ ಸಂಶೋಧನೆ ಮತ್ತು ಅಭಿವೃದ್ಧಿಗಳು ಮುಂದುವರಿದಿದೆ. ⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.