ಈಚೆಗೆ 77 ವರ್ಷದ ಮಹಿಳೆಯೊಬ್ಬರಿಗೆ ₹1.2 ಕೋಟಿ ಸೈಬರ್ ವಂಚನೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. 35 ವರ್ಷದ ಮಹಿಳೆಯೊಬ್ಬರು ಹಂತ ಹಂತವಾಗಿ ₹ 20 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಡೇಟಿಂಗ್ ಆ್ಯಪ್‌ವೊಂದರಲ್ಲಿ ಪರಿಚಯಗೊಂಡ 24 ವರ್ಷದ ಹುಡುಗನೊಬ್ಬನಿಂದ 45ರ ಮಹಿಳೆಯ ಬ್ಯಾಂಕ್ ಅಕೌಂಟ್ ಬರಿದಾಯಿತು ಎನ್ನುತ್ತದೆ ಮತ್ತೊಂದು ಪ್ರಕರಣ.
ಇಂಥ ಬೆಳಕಿಗೆ ಬರುವ ಹಾಗೂ ಬಾರದೇ ಉಳಿಯುವ ಹಲವು ಪ್ರಕರಣಗಳು ಕಣ್ಮುಂದಿವೆ. ಪ್ರೀತಿ ಜಾಲಕ್ಕೆ ಬಿದ್ದು, ಮರುಳಾಗಿ ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡವರು, ಹಣ ದುಪ್ಪಟ್ಟಾಗುತ್ತದೆ ಎಂದು ಅತೀವ ಆಸೆಯಲ್ಲಿ ಹಣದ ಥೈಲಿಯನ್ನು ಅಪರಿಚಿತರಿಗೆ ಕೊಟ್ಟವರು, ‘ಅದೇನೋ ಹೊಸ ಆಫರ್ ಬಂದಿದೆ, ಎಲ್ಲ ಉಚಿತ ಅಂತೆ’! ಅಂತ ಹೇಳಿ ಏನಂತನೂ ಯೋಚಿಸದೇ ಎಟಿಎಂ ಪಿನ್, ಒಟಿಪಿಗಳನ್ನು ಆಗಂತುಕರಿಗೆ ತಿಳಿಸಿ ಹಣ ಕಳೆದುಕೊಂಡವರು. ಹೀಗೆ ಹಣದ ಜತೆಗೆ ಬದುಕಿಗೆ ಅಗತ್ಯವಿರುವ ನಂಬಿಕೆ, ಆತ್ಮವಿಶ್ವಾಸ ಕಳೆದುಕೊಂಡು ಖಿನ್ನತೆಗೆ ಜಾರಿದವರ ಕಥೆಗಳು ಹಲವಷ್ಟಿವೆ.
ಸೈಬರ್ ವಂಚನೆಯ ರೂಪ ಹಲವು ವಿಧಗಳಲ್ಲಿವೆ. ಅವುಗಳ ಅಂತಿಮ ಉದ್ದೇಶ ವಂಚನೆಯಾದರೂ, ಅದರ ಜಾಲದೊಳಗೆ ಸುಲಭವಾಗಿ ಹೊಕ್ಕು, ಹೊರಬರಲಾರದವರ ವೈಯಕ್ತಿಕ ಬದುಕನ್ನು ಬುಡಮೇಲಾಗಿಸಬಹುದು. ಆರ್ಥಿಕವಾಗಿ ಬರಿದು ಮಾಡಿ, ಸಾಮಾಜಿಕವಾಗಿ ತಲೆ ಎತ್ತದಂತೆ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಮಹಿಳೆಯರ ವಿರುದ್ಧ ಅತಿ ಸಾಮಾನ್ಯವಾಗಿ ನಡೆಯುವ ಸೈಬರ್ ವಂಚನೆಗಳು ಹೀಗಿವೆ.
ಸೈಬರ್ ಗ್ರೂಮಿಂಗ್: ಸೈಬರ್‌ನಲ್ಲಿ ಸದಾ ಲಭ್ಯವಿರುವಂತೆ ಕಾಣುವ ಮಾಯ್ಕಾರರು ಚಂದದ ಮಾತುಗಳನ್ನಾಡಿ ಸಂಬಂಧವನ್ನು ಬೆಳೆಸಲು ನೋಡುತ್ತಾರೆ. ಇಡೀ ಜಗತ್ತು ಪ್ರೀತಿಯಿಂದ ತುಂಬಿದೆ ಮತ್ತು ಚೆಲುವೆಲ್ಲವನ್ನೂ ತುಂಬಿಕೊಂಡು ತೂಗುತ್ತಿದೆ ಎಂಬ ಮಾತುಗಳನ್ನು ಆಡುತ್ತಲೇ ಮಾಯಾಜಾಲವನ್ನು ಬೀಸುತ್ತಾರೆ. ಭಾವಾನಾತ್ಮಕ ಪ್ರಪಂಚವೊಂದನ್ನು ಸೃಷ್ಟಿಸಿ, ನಂಬಿಕೆ, ವಿಶ್ವಾಸವನ್ನು ಗಳಿಸುತ್ತಾರೆ. ಕ್ರಮೇಣ ಅದರ ಲಾಭ ಪಡೆಯಲು ಹವಣಿಸುತ್ತಾರೆ. ಲೈಂಗಿಕವಾಗಿ ದೌರ್ಜನ್ಯ ಮಾಡುವುದು ಈ ಸ್ವರೂಪದ ಅಪರಾಧದ ಮುಖ್ಯ ಉದ್ದೇಶವಾಗಿರುತ್ತದೆ.
ಸೈಬರ್ ಹ್ಯಾಕಿಂಗ್: ತಂತ್ರಜ್ಞಾನ, ಆರ್ಥಿಕ ಜ್ಞಾನ ಅಷ್ಟಾಗಿ ಇರದ ಹೆಣ್ಣುಮಕ್ಕಳೇ ಈ ಬಗೆಯ ಅಪರಾಧಗಳಲ್ಲಿ ಬಲಿಪಶುಗಳಾಗುತ್ತಾರೆ. ಹಣಕಾಸು, ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಹೆಣ್ಣುಮಕ್ಕಳಿಂದಲೇ ಪಡೆದುಕೊಂಡು, ದಾಖಲಾತಿಗಳನ್ನು ತಿದ್ದಿ ಖಾತೆಗೆ ಕನ್ನ ಹಾಕುತ್ತಾರೆ. ಒಟಿಪಿ, ಎಪಿಕೆ ಫೈಲ್‌ಗಳನ್ನು ಬ್ಯಾಂಕ್ ಹೆಸರಿನಲ್ಲಿ ಕಳುಹಿಸಿ, ನಕಲಿ ಅಧಿಕಾರಿಗಳೆಂದು ಹೇಳಿಕೊಂಡು ಹಣ ದೋಚಲಾಗುತ್ತದೆ.
ಸೈಬರ್ ಬ್ಲ್ಯಾಕ್‌ಮೇಲ್: ಇಂಟರ್‌ನೆಟ್ ಮೂಲಕವೇ ಒಬ್ಬರಿಗೊಬ್ಬರ ನಡುವೆ ಬೆಸೆದ ಬಂಧವನ್ನು ಸಾಮಾಜಿಕವಾಗಿ ಹರಾಜು ಹಾಕುತ್ತೇನೆ ಎಂಬ ಧಾಟಿಯಲ್ಲಿ ನಡೆಸುವ ಬ್ಲ್ಯಾಕ್‌ಮೇಲ್ ಬಗೆಯ ಅಪರಾಧವಿದು. ಅದರಲ್ಲಿಯೂ ಬೇಡಿಕೆ ಇಟ್ಟು, ಅದನ್ನು ಈಡೇರಿಸದೇ ಇದ್ದರೆ ‘ಆಡಿಯೊ’ ‘ವಿಡಿಯೊ’, ಫೋಟೊಗಳನ್ನು ಸಾಮಾಜಿಕವಾಗಿ ಪೋಸ್ಟ್ ಮಾಡಲಾಗುತ್ತದೆ ಎಂಬ ಬೆದರಿಕೆಯೊಡ್ಡಿ ನಡೆಸುವ ಅಪರಾಧವಿದು. ಖಾಸಗಿ ಚಿತ್ರಗಳು, ವಿಡಿಯೊಗಳನ್ನು ಮುಂದಿಟ್ಟುಕೊಂಡು ಬೆದರಿಕೆ ಹಾಕುವ ಮೂಲಕ ಭಯದ ವಾತಾವರಣವನ್ನು ನಿರ್ಮಿಸಲಾಗುತ್ತದೆ.
ಸೈಬರ್ ಸ್ಟಾಕಿಂಗ್: ಹೆಣ್ಣುಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗಳನ್ನು ಪದೇ ಪದೇ ತಡಕಾಡುವುದು. ಅದರಿಂದ ಮಾಹಿತಿ ಪಡೆದು, ಆ ಮಾಹಿತಿಯನ್ನು ತಮಗೆ ಬೇಕಾದ ರೀತಿಯಲ್ಲಿ ತಿದ್ದಿ, ಸುಳ್ಳಿನ ಕಂತೆಯನ್ನು ಹರಡುವುದು. ಹೆಚ್ಚಾಗಿ ಖ್ಯಾತನಾಮ ಹೆಣ್ಣಮಕ್ಕಳ ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ಹೀಗೆ ಸ್ಟಾಕರ್‌ಗಳ ಕಣ್ಣು ನೆಟ್ಟಿರುತ್ತದೆ.
ಸೈಬರ್ ಬುಲ್ಲಿಂಗ್: ಯಾರದ್ದೇ ತಪ್ಪಿರಲಿ ಅದಕ್ಕೆ ಹೆಣ್ಣುಮಕ್ಕಳನ್ನೇ ಗುರಿಯಾಗಿಸಿ, ಅವರ ಉಡುಗೆ, ತೊಡುಗೆ, ವೈಯಕ್ತಿಕ ಬದುಕಿನ ಮೇಲೆ ತೀವ್ರತರದಲ್ಲಿ ದಾಳಿ ನಡೆಸುವುದನ್ನು ಇಂಥ ಪ್ರಕರಣಗಳಲ್ಲಿ ನೋಡಬಹುದು. ಬೇರೆಯವರ ಮನೆಯ ಹೆಣ್ಣುಮಕ್ಕಳ ಬಗ್ಗೆ ವೃಥಾ ಅಭಿಪ್ರಾಯಗಳನ್ನು ಹೊಲಸು ಭಾಷೆಯಲ್ಲಿ ನೀಡುತ್ತಾ, ನಾವು ಸುಭಗರಂತೆ ನಟಿಸುವ ಚಾಳಿ ಈ ಬಗೆಯ ಅಪರಾಧದಲ್ಲಿ ಕಂಡುಬರುತ್ತದೆ. ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರನ್ನು, ಖ್ಯಾತನಾಮ ಹೆಣ್ಣುಮಕ್ಕಳನ್ನೇ ಗುರಿಯಾಗಿಸಲಾಗುತ್ತದೆ.
ಸೈಬರ್ ಮಾರ್ಪಿಂಗ್ ಮತ್ತು ಡೀಪ್ ಫೇಕ್: ಆನ್‌ಲೈನ್‌ನಲ್ಲಿ ಲಭ್ಯವಿರುವ ಎಡಿಟಿಂಗ್ ಟೂಲ್‌ಗಳನ್ನು ಬಳಸಿ, ಅಶ್ಲೀಲಚಿತ್ರಗಳಿಗೆ ಹೆಣ್ಣುಮಕ್ಕಳ ಫೋಟೊಗಳನ್ನು ಎಡಿಟ್ ಮಾಡುವುದು, ಅಸಭ್ಯ ಎನಿಸುವ ಫೋಟೊಗಳನ್ನು ಪ್ರದರ್ಶಿಸಿ, ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸ ಮಾಡುವುದು. ಗಂಭೀರ ಸ್ವರೂಪದ ಎಡಿಟಿಂಗೇ ಈ ಡೀಪ್ ಫೇಕ್. ನಿಜವಾದ ವ್ಯಕ್ತಿಗೆ ಶಾಕ್ ಆಗುವಷ್ಟು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಅವರ ಫೋಟೊಗಳನ್ನು ಎಡಿಟಿಂಗ್ ಮಾಡಲಾಗುತ್ತದೆ. ಈ ಎಲ್ಲ ಬಗೆಯ ಸೈಬರ್ ಅಪರಾಧಗಳಲ್ಲಿ ಹೆಣ್ಣುಮಕ್ಕಳಿಗೆ ಬೆದರಿಕೆಯೊಡ್ಡಿ ಹಣ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಭಾವನಾತ್ಮಕತೆ ಬಿಡಿ
ಬಹುತೇಕ ಹೆಣ್ಣುಮಕ್ಕಳು ಭಾವನಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ವಿಚಾರವನ್ನೇ ಇಂಟರ್‌ನೆಟ್‌ನಲ್ಲಿರುವ ಅಪರಾಧ ಜಗತ್ತು ತನ್ನ ಬಂಡವಾಳವಾಗಿಸಿಕೊಂಡಿದೆ. ಭಾವನಾತ್ಮಕವಾಗಿ ದುರ್ಬಲವಾಗಿರುವವರನ್ನು, ಬಹುಬೇಗ ಮಾತಿನ ಮೋಡಿಗೆ ಮರಳಾಗುವವರನ್ನೇ ಇಂಥ ಅಪರಾಧಗಳಲ್ಲಿ ಬಲಿಪಶುವಾಗಿಸಲಾಗುತ್ತದೆ. ಹೀಗೆ ಮಾತಿನಲ್ಲಿಯೇ ಮೋಡಿ ಮಾಡಿ ಲೈಂಗಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶೋಷಿಸಲಾಗುತ್ತದೆ.
ಆರ್ಥಿಕ ಜ್ಞಾನ ಬೆಳೆಸಿಕೊಳ್ಳಿ
ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವಾತಂತ್ರ್ಯ ಪಡೆಯುವಷ್ಟೆ ಮುಖ್ಯವಾಗಿ ಆರ್ಥಿಕ ಹಾಗೂ ತಾಂತ್ರಿಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ನಿವೇಶನ, ಚಿನ್ನ, ಷೇರು ಹೀಗೆ ಯಾವುದರಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಸಮರ್ಪಕ ಜ್ಞಾನ ಬೆಳೆಸಿಕೊಳ್ಳಬೇಕು. ಹಣಕಾಸು ಇರಲಿ; ವೈಯಕ್ತಿಕ ಬದುಕಿನ ವಿವರಗಳೇ ಇರಲಿ ಯಾರಿಗೆ ಎಷ್ಟು ಮಾಹಿತಿ ನೀಡಬೇಕು ಎಂಬುದರ ಬಗ್ಗೆ ಸರಿಯಾಗಿ ತಿಳಿದಿರಲಿ. ಸೈಬರ್ ಕಳ್ಳರು ತಂತ್ರಜ್ಞಾನದ ಯಾವ ಹಾದಿ ಹಿಡಿದು ಖನ್ನ ಹಾಕುತ್ತಾರೆ ಎನ್ನುವ ಬಗ್ಗೆ ಕನಿಷ್ಠ ಜ್ಞಾನವನ್ನು ಬೆಳೆಸಿಕೊಳ್ಳೋಣ. ಗಂಡಾಗಲಿ, ಹೆಣ್ಣಾಗಲಿ ಮೋಸ ಹೋಗುವ ಮನಸ್ಥಿತಿ ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದನ್ನು ಮರೆಯದಿರೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.