ಇತ್ತೀಚೆಗಷ್ಟೇ ಸುಶಿಕ್ಷಿತ ಸ್ನೇಹಿತರೊಬ್ಬರು ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲ ಹಣವನ್ನೂ ಕಳೆದುಕೊಂಡರು. ಇದಕ್ಕೆ ಕಾರಣವೆಂದರೆ, ನಮ್ಮ-ನಿಮ್ಮೆಲ್ಲರಲ್ಲೂ ಇರುವ ಅತಿಯಾಸೆ.
ಹೌದು, ಈಗ ತಂತ್ರಜ್ಞಾನ ಮುಂದುವರಿದಂತೆ ಸೈಬರ್ ವಂಚಕರು ಕೂಡ ಅತ್ಯಾಧುನಿಕತೆಗೆ ತಮ್ಮನ್ನು ಒಗ್ಗಿಸಿಕೊಂಡು, ಪ್ರತಿಯೊಂದರಲ್ಲಿಯೂ ಅವಸರ ತೋರಿಸಲೇಬೇಕಾದ ಅನಿವಾರ್ಯತೆ ಇರುವ ಈ ಕಾಲವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಇಮೇಲ್, ಎಸ್ಸೆಮ್ಮೆಸ್ ಹಾಗೂ ವಾಟ್ಸ್ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ವಂಚಕರು ತಮ್ಮ ಬೇಳೆ ಬೇಯಿಸಿಕೊಂಡುಬಿಡುತ್ತಾರೆ. ಒಂದು ಸಣ್ಣ ಕ್ಲಿಕ್‌ನಿಂದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೆಲ್ಲ ಕಳೆದುಕೊಳ್ಳದಂತೆ ಸುರಕ್ಷಿತವಾಗಿರುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ವಂಚನಾ ವಿಧಾನಗಳಲ್ಲಿ ಮಾಲ್‌ವೇರ್, ವೈರಸ್, ಆ್ಯಡ್‌ವೇರ್, ಸ್ಕಿಮ್ಮಿಂಗ್ ಮುಂತಾದವುಗಳೊಂದಿಗೆ ಫೀಶಿಂಗ್ (Phishing) ಕೂಡ ಒಂದು. ಅಂದರೆ, ಗಾಳದಲ್ಲಿ ಆಹಾರ ಇರಿಸಿ ಮೀನು ಹಿಡಿಯುವಂತೆಯೇ, ನಂಬಿಕೆ ಹುಟ್ಟಿಸಿ ಮಾಹಿತಿ ಕದಿಯುವ ಬಗೆಯಿದು.
ಹೇಗೆ?
ನಿಮ್ಮ ಸ್ನೇಹಿತರ ಹೆಸರಿನಲ್ಲಿ ಬರುವ ಇಮೇಲ್‌ನಲ್ಲಿ, ‘ನಾನು ವಿದೇಶದಲ್ಲಿದ್ದೇನೆ, ಪರ್ಸ್ ಕಳವಾಗಿದೆ. ನನ್ನ ಈ ಖಾತೆಗೆ ಆದಷ್ಟು ಬೇಗ ಹಣ ತುಂಬಿಸಿ, ಬಂದ ಕೂಡಲೇ ವಾಪಸ್ ಕೊಡುತ್ತೇನೆ' ಎಂಬ ಒಕ್ಕಣೆ. ನೀವು ನಂಬಿ, ಅವರು ಹೇಳಿದ ಖಾತೆಗೆ ಹಣ ಕಳಿಸುತ್ತೀರಿ. ಅದು ವಂಚಕರ ಬ್ಯಾಂಕ್ ಖಾತೆ ಆಗಿರುತ್ತದೆ. ಸ್ನೇಹಿತರ ಮೇಲ್ ಹ್ಯಾಕ್ ಮಾಡಿಯೋ ಅಥವಾ ಸ್ನೇಹಿತರನ್ನೇ ಹೋಲುವಂತೆ ಸೃಷ್ಟಿಸಿದ ಇಮೇಲ್ ಖಾತೆಯಿಂದಲೋ ಈ ರೀತಿ ಕೋರಿಕೆ ಬಂದಿರಬಹುದು. ಎಚ್ಚರಿಕೆಯಿಂದಿರಿ.
ಲಿಂಕ್‌ಗಳ ಬಗ್ಗೆ ಎಚ್ಚರೆಚ್ಚರ!
ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆದಾಯ ತೆರಿಗೆ ಇಲಾಖೆಯಹೆಸರಿನಲ್ಲಿ ಇಮೇಲ್ ಬರಬಹುದು. 'ಕಳೆದ ಹಣಕಾಸು ವರ್ಷದಲ್ಲಿ ಪಾವತಿಸಿದ ಆದಾಯ ತೆರಿಗೆ ಹಣವನ್ನು ನಿಮಗೆ ವಾಪಸ್ ಮಾಡಲಾಗುತ್ತದೆ, ನಿಮ್ಮ ಖಾತೆಯ ವಿವರಗಳನ್ನು ಇಲ್ಲಿ ತುಂಬಿರಿ' ಎಂಬ ಒಕ್ಕಣೆಯೊಂದಿಗೆ ಒಂದು ಲಿಂಕ್ ಇರುತ್ತದೆ. ಅದರಲ್ಲಿ ಹೆಸರು, ಖಾತೆ ಹೆಸರು, ಫೋನ್ ಸಂಖ್ಯೆ, ಆಧಾರ್... ಹೀಗೆ ಏನೇನೋ ವೈಯಕ್ತಿಕ ವಿವರಗಳನ್ನು ದಾಖಲಿಸಲು ಆಯ್ಕೆಗಳಿರುತ್ತವೆ. ನೀವು ಎಲ್ಲ ವಿವರ ಭರ್ತಿ ಮಾಡುತ್ತೀರಿ. ಕೆಲವೇ ಕ್ಷಣಗಳಲ್ಲಿ ಆ ಬ್ಯಾಂಕ್ ಖಾತೆಯಲ್ಲಿ ಇರುವ ಹಣವೂ ಮಾಯವಾಗಿರುತ್ತದೆ.
ಇದು ಹೇಗೆ ಸಾಧ್ಯ?
ನಮಗೆ ಬಂದಿರುವ ಇಮೇಲ್ ಎಲ್ಲಿಂದ ಬಂದಿದೆ ಮತ್ತು ಅದರಲ್ಲಿರುವ ಲಿಂಕ್ ಎಲ್ಲಿಯದು ಎಂದು ತಿಳಿದುಕೊಳ್ಳಬೇಕಾದುದು ಅತ್ಯಂತ ಮುಖ್ಯ. ಏನೇನೋ ಹೆಸರುಗಳಲ್ಲಿ, ಯಾವ್ಯಾವುದೋ ಡೊಮೇನ್ ಹೆಸರುಗಳ ಮೂಲಕ ಇಂತಹ ಇಮೇಲ್ ಬಂದಿರಬಹುದು ಅಥವಾ ನಿಮ್ಮ ಬ್ಯಾಂಕಿನ ಡೊಮೇನ್ (URL) ಹೋಲುವ, ತಕ್ಷಣಕ್ಕೆ ಕಣ್ಣಿಗೆ ಕಾಣಿದಂತಹ ಸಣ್ಣಪುಟ್ಟ ಅಕ್ಷರ ತಪ್ಪು ಇರುವ, ಉದಾಹರಣೆಗೆ, rbi.org ಅಥವಾ rbi.in ಅಥವಾ reservebankofindia.org, indianreserveban.org ಎಂಬಿತ್ಯಾದಿ ಹೆಸರಿನಲ್ಲಿ ಇಮೇಲ್ ಬರಬಹುದು ಅಥವಾ ಲಿಂಕ್ ಕೂಡ ಇರಬಹುದು. ಆದರೆ, ಭಾರತೀಯ ರಿಸರ್ವ್ ಬ್ಯಾಂಕಿನ ದೃಢೀಕೃತ ವೆಬ್ ತಾಣ rbi.org.in ಎಂಬುದಾಗಿದೆ.
ಅದೇ ರೀತಿ, ತೆರಿಗೆ ಇಲಾಖೆ ಹೆಸರಿನಲ್ಲಿಯೂ ಇಮೇಲ್ ಬರಬಹುದು. ತೆರಿಗೆ ಹಣ ಮರುಪಾವತಿಸುತ್ತೇವೆ ಎಂಬ ಒಕ್ಕಣೆಯ ಆಮಿಷವಿರುತ್ತದೆ. ಬ್ಯಾಂಕಿನದ್ದೇ ಅಥವಾ ಆದಾಯ ತೆರಿಗೆ ಇಲಾಖೆಯದ್ದೇ ಯುಆರ್‌ಎಲ್ ಕಾಣಿಸುವಂತಾಗಲು Punycode ಎಂಬ ವಂಚನಾ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆದರೆ ನೆನಪಿಡಿ, ಸರಿಯಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸಿದ ಬಳಿಕ ತೆರಿಗೆ ಹಣವು ನೇರವಾಗಿ, ಈ ಮೊದಲೇ ಸಂಯೋಜಿಸಿದ ನಮ್ಮ ಬ್ಯಾಂಕ್ ಖಾತೆಗೆ ಮರುಪಾವತಿಯಾಗುತ್ತದೆ.
ಹೇಗೆ ಸುರಕ್ಷಿತವಾಗುವುದು?
* ಆರ್‌ಬಿಐ ಆಗಲೀ, ಯಾವುದೇ ಬ್ಯಾಂಕುಗಳಾಗಲೀ ಅದರ ಅಧಿಕಾರಿಗಳಾಗಲೀ, ಸಿಬ್ಬಂದಿಯಾಗಲೀ ನಿಮ್ಮ ವೈಯಕ್ತಿಕ ವಿವರಗಳನ್ನು ಆನ್‌ಲೈನ್‌ನಲ್ಲಿ ಅಥವಾ ಫೋನ್ ಮೂಲಕ ಕೇಳುವುದಿಲ್ಲ. ಏನಿದ್ದರೂ ನೇರವಾಗಿ ಬ್ಯಾಂಕಿಗೆ ಹೋಗಿ ಒಪ್ಪಿಸಿಬಿಡಿ.
* ಬ್ರೌಸರ್‌ಗೆ ಸುರಕ್ಷತೆಯ ತಂತ್ರಾಂಶಗಳನ್ನು ಪರಿಷ್ಕರಿಸುವ ‘ಅಪ್‌ಡೇಟ್ಸ್’ ಬಂದರೆ ನಿರ್ಲಕ್ಷಿಸಬೇಡಿ, ಅಳವಡಿಸಿಕೊಳ್ಳಿ. ಬ್ಯಾಂಕ್ ಮತ್ತು ಇಮೇಲ್ ಪಾಸ್‌ವರ್ಡ್ ಆಗಾಗ್ಗೆ ಬದಲಿಸುತ್ತಾ ಇರಿ.
* ಸೈಬರ್ ಕೆಫೆ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ, ಮತ್ತು ಸಾರ್ವಜನಿಕ, ಉಚಿತ ವೈಫೈ ಸೌಕರ್ಯ ಇರುವಲ್ಲಿಯಂತೂ ಬ್ಯಾಂಕಿಂಗ್ ವೆಬ್‌ಸೈಟ್ ಬಳಸಲೇಬೇಡಿ.
* ದೊಡ್ಡ ಕಂಪನಿಗಳ ಹೆಸರಿನಲ್ಲಿ, ಸುಲಭ ಪ್ರಶ್ನೆಗಳಿಗೆ ಉತ್ತರಿಸಿ, ಮೊಬೈಲ್ ಫೋನ್ ಪಡೆಯಿರಿ ಎಂದೋ, ಲೈಫ್‌ಟೈಮ್ ಉಚಿತ ಕರೆಗಳನ್ನು ಮಾಡಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ ಅಂತಲೋ, ಏನೇನೋ ಆಮಿಷವೊಡ್ಡಿ ಬರುವ ಎಲ್ಲ ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್ ಸಂದೇಶಗಳನ್ನು ನಿರ್ಲಕ್ಷಿಸಿಬಿಡಿ. ಇಂಥಹ ಲಿಂಕ್ ಕ್ಲಿಕ್ ಮಾಡಿದಿರೋ, ನಿಮ್ಮ ಮಾಹಿತಿಯೆಲ್ಲವೂ ಸೋರಿಹೋಗಬಹುದು, ಅಥವಾ ಮಾಲ್‌ವೇರ್ ತನ್ನಿಂತಾನಾಗಿ ಇನ್‌ಸ್ಟಾಲ್ ಆಗಿ ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು, ತತ್ಪರಿಣಾಮವಾಗಿ ಬ್ಯಾಂಕ್ ಖಾತೆ ಖಾಲಿಯಾಗಬಹುದು.
ಒಂದೇ ಪರಿಹಾರವೆಂದರೆ, ಅನಗತ್ಯವಾಗಿ, ಅದು ನಿಮ್ಮ ಆಪ್ತ ಸ್ನೇಹಿತರಿಂದಲೇ ಬಂದಿದ್ದರೂ ಕೂಡ ಯಾವುದೇಲಿಂಕ್ ಕ್ಲಿಕ್ ಮಾಡುವ ಮುನ್ನ ಎರಡನೇ ಬಾರಿ ಯೋಚಿಸಿ ಮತ್ತು ಒಟಿಪಿ ಹಾಗೂ ವೈಯಕ್ತಿಕ ಮಾಹಿತಿ ಯಾರೊಂದಿಗೂ ಹಂಚಿಕೊಳ್ಳಬೇಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.