ADVERTISEMENT

Tech Summit: ತಂತ್ರಜ್ಞಾನದ ಕುತೂಹಲಕ್ಕೆ ಒಂದೇ ಸೂರಿನಡಿ ಉತ್ತರ

ಮಳಿಗೆಗಳಲ್ಲಿ ವಿದ್ಯಾರ್ಥಿಗಳ ದಂಡು: ಎಐ ಕುರಿತು ಅರಿಯುವ ಹಂಬಲ

ಖಲೀಲಅಹ್ಮದ ಶೇಖ
Published 19 ನವೆಂಬರ್ 2024, 20:32 IST
Last Updated 19 ನವೆಂಬರ್ 2024, 20:32 IST
ಬೆಂಗಳೂರು ಟೆಕ್ ಶೃಂಗದ ನವೋದ್ಯಮಗಳ ಮಳಿಗೆಗಳಲ್ಲಿ ಕಂಡ ಜನಸಂದಣಿ
ಪ್ರಜಾವಾಣಿ ಚಿತ್ರ: ರಂಜು ಪಿ.
ಬೆಂಗಳೂರು ಟೆಕ್ ಶೃಂಗದ ನವೋದ್ಯಮಗಳ ಮಳಿಗೆಗಳಲ್ಲಿ ಕಂಡ ಜನಸಂದಣಿ ಪ್ರಜಾವಾಣಿ ಚಿತ್ರ: ರಂಜು ಪಿ.   

ಬೆಂಗಳೂರು: ಜಗತ್ತಿನ ಉದ್ದಗಲಕ್ಕೆ ಆವಿಷ್ಕಾರಗೊಂಡಿರುವ ಹೊಸ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ (ಎಐ) ಆಧರಿಸಿದ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಹೊಸ ಶೋಧನೆಗಳು ‘ಬೆಂಗಳೂರು ಟೆಕ್‌ ಶೃಂಗ’ದಲ್ಲಿ ಒಂದೇ ಸೂರಿನಡಿ ಇವೆ. ವಿವಿಧ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಜನರ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಒದಗಿಸುವ ವೇದಿಕೆಯಾಗಿ ಹೊರಹೊಮ್ಮಿದೆ.

ಅರಮನೆ ಆವರಣದಲ್ಲಿ ತಂತ್ರಜ್ಞಾನ ಆಧಾರಿತ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದ್ದು, ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಇ ತ್ಯಾಜ್ಯವನ್ನು (ಹಳೆಯ ಎಲೆಕ್ಟ್ರಿಕ್‌ ಉಪಕರಣಗಳು, ಸಾಕೆಟ್‌ಗಳು) ಬಳಸಿಕೊಂಡು ರೂಪಿಸಿರುವ ‘ಬೆಂಗಳೂರು ಟೆಕ್‌ ಶೃಂಗ’ದ ಲಾಂಛನ ಹೋಲುವ ರೋಬೊ ಮಾದರಿಯ ಕಲಾಕೃತಿಗಳ ಮುಂಭಾಗದಲ್ಲೂ ಜನ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಇಲ್ಲಿ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ), ಹಿಂದೂಸ್ತಾನ್‌ ಏರೋನಾಟಿಕಲ್ ಲಿಮಿಟೆಡ್‌ (ಎಚ್‌ಎಎಲ್), ಅಮೆರಿಕ, ರಷ್ಯಾ, ಕೊರಿಯಾ, ಜಪಾನ್, ಇಸ್ರೇಲ್ ಸೇರಿದಂತೆ ಹಲವು ದೇಶಗಳ ತಂತ್ರಜ್ಞಾನ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿವೆ. ಎಐ ಆಧಾರಿತ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ನಗರದ ಎಂಜಿನಿಯರಿಂಗ್‌ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಮಾಹಿತಿಯ ಜೊತೆಗೆ ಉದ್ಯೋಗದ ಅವಕಾಶಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದುದು ಕಂಡುಬಂತು.

ADVERTISEMENT

ಅಂತರ್ಜಾಲದಲ್ಲಿ ವಿಷಯ ಹುಡುಕಾಟವನ್ನು ಸರಳಗೊಳಿಸುವ ಸರ್ಚ್ ಎಂಜಿನ್ ಆಪ್ಟಿಮೈಝೇಷನ್ (ಎಸ್‌ಇಒ) ಮಳಿಗೆಗಳಲ್ಲಿ ಆಸಕ್ತರ ದಂಡು ಸುತ್ತುವರಿದಿತ್ತು. ಈ ಕ್ಷೇತ್ರದ ನವೀನ ಮಾದರಿಗಳ ಕುರಿತು ಯುವ ತಂತ್ರಜ್ಞರು ಮಾಹಿತಿ ಕೇಳಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಎಐ ಆಧಾರಿತ ಫ್ಲೋ ಹೌಲರ್‌: ಫ್ಲೋ ಮೊಬಿಲಿಟಿ ಎಂಬ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಫ್ಲೋ ಹೌಲರ್‌’ ಎಂಬ ಎಲೆಕ್ಟ್ರಿಕ್‌ ಯಂತ್ರ ಸಾರ್ವಜನಿಕರ ಗಮನ ಸೆಳೆಯಿತು. ಇದು ನಿರ್ಮಾಣ, ಕೃಷಿ, ಗಣಿಗಾರಿಕೆ ಮತ್ತು ಉಗ್ರಾಣಗಳಲ್ಲಿರುವ ವಸ್ತುಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಲು ಸಹಾಯಕವಾಗಲಿದೆ. ಇದು ಕಾರ್ಮಿಕರ ವೆಚ್ಚ ತಪ್ಪಿಸಲಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ ಆರರಿಂದ–ಎಂಟು ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಈ ಯಂತ್ರದ ಬೆಲೆ ಹಾಗೂ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಕುರಿತು ಉದ್ಯಮಿಗಳು ಸಂಸ್ಥೆಯ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು.

ಬೆಂಗಳೂರು ಟೆಕ್ ಶೃಂಗದಲ್ಲಿ ಇ–ತ್ಯಾಜ್ಯಗಳಿಂದ ರಚಿಸಿದ ಕಲಾಕೃತಿಯನ್ನು ವಿದ್ಯಾರ್ಥಿನಿಯರು ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ರಂಜು ಪಿ.
ಇ–ತ್ಯಾಜ್ಯಗಳಿಂದ ರಚಿಸಿದ ಕಲಾಕೃತಿಯನ್ನು ಶಾಲಾ ಮಕ್ಕಳು ಕುತೂಹಲದಿಂದ ನೋಡಿದರು ಪ್ರಜಾವಾಣಿ ಚಿತ್ರ: ರಂಜು ಪಿ.
ಬೆಂಗಳೂರು ಟೆಕ್ ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ಜೆಟ್‌ ಸೂಟ್‌ ಧರಿಸಿದ ವ್ಯಕ್ತಿ ಗಾಳಿಯಲ್ಲಿ ಹಾರಿದ ಪರಿ ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.
ಹೆಣ್ಣು ಸೊಳ್ಳೆಗಳ ಸಂತಾನ ನಾಶಪಡಿಸುವ ಇಕೋ ಬಯೋಟ್ರ್ಯಾಪ್ ಕುರಿತು ಯುವತಿಯೊಬ್ಬರು ಮಾಹಿತಿ ಪಡೆದರು ಪ್ರಜಾವಾಣಿ ಚಿತ್ರ: ರಂಜು ಪಿ.

‘ಸೊಳ್ಳೆಗಳ ಸಂತಾನ ನಾಶಕ್ಕೆ ಬಯೋಟ್ರ್ಯಾಪ್ಸ್‌’

ಹೆಣ್ಣು ಸೊಳ್ಳೆಗಳನ್ನು ಆಕರ್ಷಿಸಿ ಅವುಗಳ ಸಂತಾನವನ್ನು ನಾಶಪಡಿಸುವ ಎಕೊ ಬಯೋಟ್ರ್ಯಾಪ್ಸ್‌ ಬೆಂಗಳೂರು ಟೆಕ್‌ ಶೃಂಗದಲ್ಲಿ ಗಮನ ಸೆಳೆಯಿತು. ಹೆಣ್ಣು ಸೊಳ್ಳೆಗಳನ್ನು ಈ ಟ್ರ್ಯಾಪ್‌ನಲ್ಲಿ ಮೊಟ್ಟೆ ಇಡುವಂತೆ ಪ್ರೇರೇಪಿಸಿ ನಂತರ ಅದನ್ನು ಲಾರ್ವಾ ಹಂತದಲ್ಲಿ ನಾಶಪಡಿಸಲಾಗುತ್ತದೆ. ‘ಇದು ಡೆಂಗಿ ಮಲೇರಿಯಾ ನಿಯಂತ್ರಣಕ್ಕಾಗಿ ಸೊಳ್ಳೆಗಳನ್ನು ಆಕರ್ಷಿಸಿ ನಾಶಪಡಿಸುವ ಟ್ರ್ಯಾಪ್‌ ಆಗಿದೆ. ಸೊಳ್ಳೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ಸಾಧನ ಅಳವಡಿಸುವ ಮೂಲಕ ಡೆಂಗಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಿವೆ. ಈಗಾಗಲೇ ಇದನ್ನು ಬೆಂಗಳೂರಿನ ಗೋಪಾಲಪುರದಲ್ಲಿ ಪ್ರಾಯೋಗಿಕವಾಗಿ 120 ಟ್ರ್ಯಾಪ್ ಸಾಧನಗಳನ್ನು ಮನೆಗಳ ಹೊರಗಡೆ ಅಳವಡಿಸಲಾಗಿದೆ’ ಎಂದು ಎಕೊ ಬಯೋಟ್ರ್ಯಾಪ್ಸ್‌ನ ಗುರುಪ್ರಸಾದ್ ಫಡ್ಕೆ ಮಾಹಿತಿ ನೀಡಿದರು. ಬಯೋ ಟ್ರ್ಯಾಪ್: ಇದೊಂದು ಮಡಿಕೆ ಆಕಾರದ ಸಾಧನ. ಕುಂಡದಲ್ಲಿ ನೀರು ತುಂಬಿ ರಾಸಾಯನಿಕ ಬೆರಸಲಾಗುತ್ತದೆ. ರಾಸಾಯನಿಕ ಮಿಶ್ರಣ ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಸೊಳ್ಳೆಗಳು ಹಾಗೂ ಅವುಗಳ ಮೊಟ್ಟೆಗಳನ್ನು ನಾಶಪಡಿಸುತ್ತದೆ. ಜೈವಿಕ ಟ್ರ್ಯಾಪ್ ಬಳಕೆಯಿಂದ ಶೇ 60ರಷ್ಟು ಸೊಳ್ಳೆಗಳ ನಿಯಂತ್ರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.