ADVERTISEMENT

Bengaluru Tech Summit | ನ.19ರಿಂದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

ಈ ವರ್ಷದ ಘೋಷವಾಕ್ಯ ‘ಬ್ರೇಕಿಂಗ್ ಬೌಂಡರೀಸ್’

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 0:03 IST
Last Updated 13 ಜುಲೈ 2024, 0:03 IST
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಸಂಬಂಧ ಆಯೋಜಿಸಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳ ಜತೆ ಕಿಯೋನಿಸ್ಕ್‌ ಅಧ್ಯಕ್ಷ ಶರತ್ ಬಚ್ಚೇಗೌಡ, ಸಚಿವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಸಂಬಂಧ ಆಯೋಜಿಸಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳ ಜತೆ ಕಿಯೋನಿಸ್ಕ್‌ ಅಧ್ಯಕ್ಷ ಶರತ್ ಬಚ್ಚೇಗೌಡ, ಸಚಿವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.   

ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–27ನೇ ಆವೃತ್ತಿ ನ.19ರಿಂದ 21ರವರೆಗೆ ನಡೆಯಲಿದೆ.

ತಂತ್ರಜ್ಞಾನ ಶೃಂಗಸಭೆಯ ಸಿದ್ಧತೆಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದ ನಂತರ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟೆಕ್‌ ಶೃಂಗಸಭೆಯ ಈ ವರ್ಷದ ಘೋಷವಾಕ್ಯ ‘ಬ್ರೇಕಿಂಗ್ ಬೌಂಡರೀಸ್’ ಆಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸತನವನ್ನು ಹೆಚ್ಚಿಸಲು ವೈವಿಧ್ಯಮಯ ವಲಯಗಳ ನಡುವಿನ ಸಹಯೋಗದ ಪ್ರಾಮುಖ್ಯತೆಯನ್ನು ಘೋಷವಾಕ್ಯ ಒಳಗೊಂಡಿದೆ ಎಂದರು.

ಶೃಂಗಸಭೆಯಲ್ಲಿ ಕೈಗಾರಿಕೆ ಮತ್ತು ವ್ಯವಹಾರಗಳನ್ನು ಮರುರೂಪಿಸುತ್ತಿರುವ ತಾಂತ್ರಿಕ ಪ್ರಗತಿಗಳು ಮತ್ತು ಪ್ರವೃತ್ತಿಗಳ ಕುರಿತು ಚರ್ಚಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳನ್ನು ಉದ್ಯಮಿ ಸ್ನೇಹಿಯಾಗಿ ಉಳಿಸಿಕೊಳ್ಳಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.

ADVERTISEMENT

ಉಪ ಮಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಹಲವು ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಬೆಂಗಳೂರು ಹೊರಗೂ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ವಲಯದ ವಿಸ್ತರಣೆಗೆ ಕ್ರಮವಹಿಸಲಾಗಿದೆ. ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಕ್ಕೆ ₹8 ಸಾವಿರ ಕೋಟಿ ಸಿಎಸ್‌ಆರ್ ನಿಧಿ ಬಳಕೆ ಮಾಡಲಾಗುತ್ತಿದೆ ಎಂದರು.

ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಉಪಸ್ಥಿತರಿದ್ದರು.

‘ಬೃಹತ್ ಶೃಂಗಸಭೆ’

ಈ ವರ್ಷ ನಡೆಯಲಿರುವುದು ಅತ್ಯಂತ ದೊಡ್ಡ ತಂತ್ರಜ್ಞಾನ ಶೃಂಗಸಭೆಯಾಗಿರಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. 40+ ದೇಶಗಳ ಕಂಪನಿಗಳು ಮತ್ತು ನವೋದ್ಯಮಗಳು 85 ವಿಚಾರ ಸಂಕಿರಣಗಳು 460 ಸಂಪನ್ಮೂಲ ವ್ಯಕ್ತಿಗಳು 500+ ನವೋದ್ಯಮಗಳು 700+ ಮಳಿಗೆಗಳು 50000+ ಮಂದಿ ಭಾಗಿಯಾಗುವ ನಿರೀಕ್ಷೆ

‘ಬೆಂಗಳೂರಿನಾಚೆಗೂ ಉದ್ಯಮ’

‘ಈ ಬಾರಿಯ ಶೃಂಗಸಭೆಯನ್ನು ‘ಅಪಾರ’ ಎಂಬ ಥೀಮ್‌ನೊಂದಿಗೆ ನಡೆಸಲಾಗುತ್ತಿದೆ. ಬೆಂಗಳೂರಿನ ಆಚೆಗೂ ಟೆಕ್‌ ಉದ್ಯಮಗಳು ತಯಾರಿಕಾ ಉದ್ಯಮಗಳನ್ನು ಕೊಂಡೊಯ್ಯುವುದಕ್ಕೆ ಗಮನ ನೀಡಲಾಗುತ್ತಿದೆ’ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. ಕಲಬುರ್ಗಿ ಹುಬ್ಬಳ್ಳಿ ಮಂಗಳೂರು ಬೆಳಗಾವಿಯಲ್ಲಿ ಉದ್ಯಮ ಸ್ನೇಹಿ ಪರಿಸರವಿದೆ. ಅಲ್ಲಿಯೂ ಉದ್ಯಮಗಳನ್ನು ಆರಂಭಿಸುವ ಸಾಧ್ಯತೆಗಳನ್ನು ಈ ಸಮ್ಮೇಳನದಲ್ಲಿ ಪರಿಶೀಲಿಸಲಾಗುತ್ತದೆ ಎಂದು  ‘ಸೆಮಿಕಂಡಕ್ಟರ್‌ ತಯಾರಿಕಾ ಉದ್ಯಮ ಆರಂಭಿಸಿದರೆ ಕೇಂದ್ರ ಸರ್ಕಾರವು ಶೇ 50ರಷ್ಟು ಆರ್ಥಿಕ ನೆರವು ಒದಗಿಸಲಿದೆ ಎಂದು ಮೋದಿ ಘೋಷಿಸಿದ್ದರು. ಶೇ 20ರಷ್ಟು ಸಹಾಯಧನ ಒದಗಿಸುತ್ತೇವೆ ಎಂದು ನಾವೂ ಹೇಳಿದ್ದೇವೆ. ಹೂಡಿಕೆಯ ಸ್ವರೂಪವನ್ನು ನೋಡಿಕೊಂಡು  ಸಹಾಯಧನದ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯನ್ನೂ ಪರಿಗಣಿಸುತ್ತೇವೆ’ ಎಂದು ಅವರು ಹೇಳಿದರು. ಕಿಯೋನಿಸ್ಕ್‌ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ ‘ರಾಜ್ಯದಲ್ಲಿ ಸೆಮಿಕಂಡಕ್ಟರ್‌ ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ 50‌ ರಿಂದ 100 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಾನ್‌–ಸೆಮಿಕಾನ್‌ ಪಾರ್ಕ್‌ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮೈಸೂರಿನಲ್ಲಿಯ ತಂತ್ರಜ್ಞಾನ ಕೇಂದ್ರದಂತೆಯೇ ರಾಜ್ಯದ ಬೇರೆಡೆಯೂ ತಂತ್ರಜ್ಞಾನ ಕೇಂದ್ರಗಳನ್ನು ಆರಂಭಿಸಲು ಯೋಜಿಸಲಾಗುತ್ತಿದೆ. ಮಂಗಳೂರಿನ ಬ್ಲೂಬೆರಿ ಹಿಲ್ಸ್‌ ಪ್ರದೇಶದಲ್ಲಿ ಕಿಯೋನಿಸ್ಕ್‌ಗೆ ಸೇರಿದ ನಿವೇಶನವಿದೆ. ಅಲ್ಲಿ ತಂತ್ರಜ್ಞಾನ ಕೇಂದ್ರ ಆರಂಭಿಸುವ ಸಂಬಂಧ ಈಗಾಗಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.