ADVERTISEMENT

BTS–2023 | ವಿಕಿರಣ ಪ್ರಬಲವಾಗಿದ್ದರೂ ವಿಮಾನ ನಿಲ್ದಾಣದಲ್ಲಿ ಗುಬ್ಬಚ್ಚಿಗಳೇಕಿವೆ?

ಅವಿನಾಶ್ ಬಿ.
Published 30 ನವೆಂಬರ್ 2023, 19:30 IST
Last Updated 30 ನವೆಂಬರ್ 2023, 19:30 IST
<div class="paragraphs"><p>ಬೆಂಗಳೂರು ಟೆಕ್‌ ಸಮಿಟ್‌ನ 2ನೇ ದಿನವಾದ ಗುರುವಾರ ನಡೆದ ಅಡಾಪ್ಷನ್ ಆ್ಯಂಡ್‌ ಫ್ಯೂಚರ್‌ ವೈರ್‌ಲೆಸ್‌ ಟೆಕ್ನಾಲಜಿ ಗೋಷ್ಠಿಯಲ್ಲಿ ಸತೀಶ್ ಜಮದಗ್ನಿ ಮಾತನಾಡಿದರು. ಎಡ್ಜ್ ಕ್ಯೂ ಸಿಇಓ ವಿನಯ್ ರಾವುರಿ ಮತ್ತು ತೇಜಸ್ ನೆಟ್ವರ್ಕ್ಸ್ ಸಿಟಿಒ ಕುಮಾರ್ ಎನ್ ಶಿವರಾಜನ್ ಉಪಸ್ಥಿತರಿದ್ದರು.</p></div>

ಬೆಂಗಳೂರು ಟೆಕ್‌ ಸಮಿಟ್‌ನ 2ನೇ ದಿನವಾದ ಗುರುವಾರ ನಡೆದ ಅಡಾಪ್ಷನ್ ಆ್ಯಂಡ್‌ ಫ್ಯೂಚರ್‌ ವೈರ್‌ಲೆಸ್‌ ಟೆಕ್ನಾಲಜಿ ಗೋಷ್ಠಿಯಲ್ಲಿ ಸತೀಶ್ ಜಮದಗ್ನಿ ಮಾತನಾಡಿದರು. ಎಡ್ಜ್ ಕ್ಯೂ ಸಿಇಓ ವಿನಯ್ ರಾವುರಿ ಮತ್ತು ತೇಜಸ್ ನೆಟ್ವರ್ಕ್ಸ್ ಸಿಟಿಒ ಕುಮಾರ್ ಎನ್ ಶಿವರಾಜನ್ ಉಪಸ್ಥಿತರಿದ್ದರು.

   

ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ

ಬೆಂಗಳೂರು: '4ಜಿ, 5ಜಿ ಬಳಕೆ ಹೆಚ್ಚಾಗಿರುವುದರಿಂದ ಪ್ರಾಣಿ– ಪಕ್ಷಿಗಳಿಗೆ ಅಪಾಯವಿದೆ ಎನ್ನುತ್ತಾ ಹೊಸ ನೆಟ್‌ವರ್ಕ್ ತಂತ್ರಜ್ಞಾನವನ್ನು ಪ್ರಶ್ನಿಸಲಾಗುತ್ತಿದೆ. ಆದರೆ, ಇಡೀ ಬೆಂಗಳೂರಿನಲ್ಲೆಲ್ಲೂ ಕಂಡು ಬರದ ಗುಬ್ಬಚ್ಚಿಗಳು, ಗರಿಷ್ಠ ನೆಟ್‌ವರ್ಕ್ ಸಾಮರ್ಥ್ಯವಿರುವ, ಹೆಚ್ಚು ಶಕ್ತಿಶಾಲಿ ವಿಕಿರಣಗಳಿರುವ ಮತ್ತು ರೆಡಾರ್‌ಗಳು ಹೆಚ್ಚಾಗಿ ಬಳಕೆಯಾಗುತ್ತಿರುವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಸಿಗುತ್ತಿವೆ ಎಂಬುದೇ ಈ ಪ್ರಶ್ನೆಗೆ ಉತ್ತರ!'

ADVERTISEMENT

– ಹೀಗೆಂದವರು, ರಿಲಯನ್ಸ್ ಜಿಯೋ ಜಾಗತಿಕ ಗುಣಮಟ್ಟ ತಂತ್ರಜ್ಞಾನ ಅಭಿವೃದ್ಧಿ ವಿಭಾಗದ ಹಿರಿಯ ಉಪಾಧ್ಯಕ್ಷ ಸತೀಶ್ ಜಮದಗ್ನಿ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಗುರುವಾರ ‘5 ಜಿ ಅಳವಡಿಕೆ ಮತ್ತು ಭವಿಷ್ಯದ ವಯರ್‌ಲೆಸ್ ತಂತ್ರಜ್ಞಾನಗಳು’ ಕುರಿತ ಗೋಷ್ಠಿಯ ಬಳಿಕದ ಸಂವಾದದಲ್ಲಿ ಈ ವಿಷಯ ತಿಳಿಸಿದರು.

‘5 ಜಿ ಬಳಕೆ ಹೆಚ್ಚಾಗಿ, ದೊಡ್ಡ ಪ್ರಮಾಣದ ನೆಟ್‌ವರ್ಕ್ ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಮಾನವನಿಗೆ ಜೈವಿಕವಾಗಿ ಅಪಾಯವಿದೆಯಲ್ಲ' ಎಂಬ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಮಾನ ನಿಲ್ದಾಣಗಳಲ್ಲಿ ಎಲ್ಲ ನೆಟ್‌ವರ್ಕ್ ಸೇವಾದಾರರು ತಮ್ಮ ಗ್ರಾಹಕರಿಗೆ ನೆಟ್‌ವರ್ಕ್ ಸಮಸ್ಯೆಯಾಗದಂತೆ ಗರಿಷ್ಠ ಶಕ್ತಿಯ ಟವರ್‌ಗಳನ್ನು ಸ್ಥಾಪಿಸಿರುತ್ತಾರೆ’ ಎಂದು ಗಮನ ಸೆಳೆದರು.

ವಾಸ್ತವವಾಗಿ 5 ಜಿ ನೆಟ್‌ವರ್ಕ್ ಬಳಕೆಯಿಂದ ಸಮಸ್ಯೆಯಾಗುವುದಿಲ್ಲ, ಆದರೆ ಮನೆಯೊಳಗಿನ ಎಲ್‌ಟಿಇ (ವೈಫೈ ವ್ಯವಸ್ಥೆ) ಹಾಗೂ ಬ್ಲೂಟೂತ್‌ನಲ್ಲಿ ಬಳಕೆಯಾಗುತ್ತಿರುವ ತರಂಗಗಳ ತೀಕ್ಷ್ಣತೆಯು ಹೆಚ್ಚು ಆತಂಕಕಾರಿ ಎಂದವರು ನುಡಿದರು.

ಸಂಪರ್ಕವೇ 5ಜಿಗೆ ಸವಾಲು

5ಜಿ ಅಳವಡಿಕೆಯಲ್ಲಿ ಅತಿದೊಡ್ಡ ಸವಾಲು ಎಂದರೆ ಸಂಪರ್ಕ ವ್ಯವಸ್ಥೆ. ಎಲ್ಲ ಪ್ರದೇಶಗಳಲ್ಲಿ ಇದಕ್ಕೆ ಪೂರಕವಾದ ಸಂಪರ್ಕದ ಮೂಲಸೌಕರ್ಯ ವ್ಯವಸ್ಥೆ ಇನ್ನೂ ಸಿದ್ಧವಾಗಿಲ್ಲ. ಹೀಗಾಗಿಯೇ ಜನರು 5 ಜಿ ವ್ಯವಸ್ಥೆಯನ್ನು ಆಫ್ ಮಾಡಿ 4 ಜಿ ಯನ್ನೇ (ಎಲ್‌ಟಿಇ) ಇನ್ನೂ ಬಳಸುತ್ತಿದ್ದಾರೆ. ಆದರೆ, ಈ ಸಮಸ್ಯೆ ನಿಧಾನವಾಗಿ ಪರಿಹಾರವಾಗುತ್ತದೆ ಎಂದವರು ಹೇಳಿದರು.

ಫೈಬರ್ ಸಂಪರ್ಕ ವ್ಯವಸ್ಥೆಯು ಇನ್ನೂ ನಗರಗಳಲ್ಲಷ್ಟೇ ಬೆಳೆಯುತ್ತಿದೆ. ಗ್ರಾಮೀಣ ಪ್ರದೇಶಕ್ಕೂ ಇದು ತಲುಪಬೇಕಿದೆ. ಯಾಕೆಂದರೆ ಸೆಟ್ ಟಾಪ್ ಬಾಕ್ಸ್ ಎಂಬುದೀಗ ಎಲ್ಲ ರೀತಿಯ ತಂತ್ರಜ್ಞಾನ ನಾವೀನ್ಯತೆಗಳ ಕೇಂದ್ರಬಿಂದುವಾಗಿಬಿಟ್ಟಿದೆ. ಲೈವ್ ಕ್ರಿಕೆಟ್ ಮ್ಯಾಚ್ ನೋಡುತ್ತಿರುವಾಗ, ತಮ್ಮ ನೆಚ್ಚಿನ ಆಟಗಾರ ಧರಿಸಿದ ಜರ್ಸಿಯನ್ನು ಅಲ್ಲಿಂದಲೇ ಆರ್ಡರ್ ಮಾಡಿ ತರಿಸಿಕೊಳ್ಳುವಂತಹ ಅತ್ಯಾಧುನಿಕ ತಂತ್ರಜ್ಞಾನವೂ ಅಭಿವೃದ್ಧಿಯಾಗಬೇಕಿದೆ ಎಂದು ಸತೀಶ್ ಜಮದಗ್ನಿ ಹೇಳಿದರು.

'ಎಡ್ಜ್‌ಕ್ಯೂ' ಸಿಇಒ ವಿನಯ್ ರಾವುರಿ ಅವರು ಮಾತನಾಡಿ, ಪ್ರಸ್ತುತ 4.9 ಜಿ ಮಾತ್ರ ಇದೆ. ಪೂರ್ಣ ಪ್ರಮಾಣದ 5ಜಿ ವ್ಯವಸ್ಥೆ ಜನರನ್ನು ತಲುಪುತ್ತಿಲ್ಲ. ಈ ಕುರಿತ ಸಂಪರ್ಕ ವ್ಯವಸ್ಥೆಯಲ್ಲಿನ ಲೋಪಗಳೆಲ್ಲವನ್ನೂ ಮುಂದೆ ಬರುವ 6ಜಿ ನೆಟ್‌ವರ್ಕ್ ವ್ಯವಸ್ಥೆಯ ವೇಳೆಗೆ ಸರಿಪಡಿಸಿಕೊಳ್ಳಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.