ADVERTISEMENT

ಹ್ಯಾಕರ್‌ಗಳಿಂದ ದುರ್ಬಳಕೆ: ಆ್ಯಪಲ್ ಬಳಕೆದಾರರಿಗೆ ಸಿಇಆರ್‌ಟಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 16:30 IST
Last Updated 3 ಏಪ್ರಿಲ್ 2024, 16:30 IST
ಆ್ಯಪಲ್
ಆ್ಯಪಲ್   

ನವದೆಹಲಿ: ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡವು (ಸಿಇಆರ್‌ಟಿ–ಇನ್) ಆ್ಯಪಲ್‌ ಉತ್ಪನ್ನಗಳ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಹ್ಯಾಕರ್‌ಗಳು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ ಎಂದು ಹೇಳಿದೆ. 

‘ಮೊಬೈಲ್‌ನ ಆ್ಯಪ್‌ ಹಾಗೂ ವೆಬ್‌ ಬ್ರೌಸರ್‌ ನಡುವೆ ಸಂವಹನಕ್ಕೆ ನೆರವಾಗುವ ವೆಬ್‌ಆರ್‌ಟಿಸಿಯಲ್ಲಿ ಇರುವ ತಂತ್ರಾಂಶದಲ್ಲಿನ ಲೋಪವೊಂದರ ಕಾರಣದಿಂದಾಗಿ ಈ ದುರ್ಬಳಕೆಯ ಸಾಧ್ಯತೆ ಇದೆ. ಹ್ಯಾಕರ್‌ಗಳು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಯಶಸ್ಸು ಕಂಡಲ್ಲಿ, ಉದ್ದೇಶಿತ ಸ್ಮಾರ್ಟ್‌ ಸಾಧನಗಳಲ್ಲಿ ತಮ್ಮಿಚ್ಛೆಯ ಕೋಡ್‌ ಕೆಲಸ ಮಾಡುವಂತೆ ಅವರು ಮಾಡಬಲ್ಲರು’ ಎಂದು ಸಿಇಆರ್‌ಡಿ–ಇನ್ ಹೇಳಿದೆ. 

ಲೋಪವನ್ನು ಬಳಸಿಕೊಂಡು ಹ್ಯಾಕರ್‌ಗಳು, ಸ್ಮಾರ್ಟ್‌ ಸಾಧನದ ಬಳಕೆದಾರರು ನಿರ್ದಿಷ್ಟ ಲಿಂಕ್‌ ಮೇಲೆ ಕ್ಲಿಕ್‌ ಮಾಡುವಂತೆ ವಂಚಿಸಬಲ್ಲರು. ಆ ಮೂಲಕ ಅವರು ಸ್ಮಾರ್ಟ್‌ ಸಾಧನದ ಮೇಲೆ ದೂರದಿಂದಲೇ ನಿಯಂತ್ರಣ ಸಾಧಿಸಬಲ್ಲರು. ಐಫೋನ್‌ ಎಕ್ಸ್‌ಎಸ್‌, ಐಪ್ಯಾಡ್ ಪ್ರೊ (12.9 ಇಂಚು, 10.5 ಇಂಚು, 11 ಇಂಚು ಮಾದರಿಗಳು), ಐಪ್ಯಾಡ್ ಏರ್, ಐಪ್ಯಾಡ್ ಮತ್ತು ಐಪ್ಯಾಡ್ ಮಿನಿ ಸಾಧನಗಳು ಐಒಎಸ್‌ ಹಾಗೂ ಐಪ್ಯಾಡ್‌ಒಎಸ್ 17.4.1 ಕಾರ್ಯಾಚರಣೆ ಆವೃತ್ತಿ ಅಥವಾ ಅದಕ್ಕೂ ಹಿಂದಿನ ಆವೃತ್ತಿಗಳನ್ನು ಹೊಂದಿದ್ದರೆ ಅವು ಈ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. 

ADVERTISEMENT

ಬಳಕೆದಾರರು ಸಾರ್ವಜನಿಕ ವೈ–ಫೈ ಸೌಲಭ್ಯ ಬಳಸಬಾರದು, ಯಾವುದೇ ಆ್ಯಪ್ ಅಥವಾ ತಂತ್ರಾಂಶ ಡೌನ್‌ಲೋಡ್ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಕೂಡ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.