ನವದೆಹಲಿ: ಇತ್ತೀಚೆಗೆ ಹೆಚ್ಚಾಗುತ್ತಿರುವ ಸೈಬರ್ ದಾಳಿಗಳಿಂದಾಗಿ ಜಗತ್ತಿನ ಮೂರನೇ ಒಂದರಷ್ಟು ಜನರು ತಮ್ಮ ವೈಯಕ್ತಿಕ ದತ್ತಾಂಶವನ್ನು ಕಳೆದುಕೊಂಡಿದ್ದಾರೆ. ಅಚ್ಚರಿಯೆಂದರೆ, ಅದು ಅವರ ಗಮನಕ್ಕೆ ಬಂದೇ ಇಲ್ಲ! ಇವರೆಲ್ಲರೂ ಸುಶಿಕ್ಷಿತರು ಎಂಬುದು ಮತ್ತೊಂದು ವಿಶೇಷ.
ಜಗತ್ತಿನಾದ್ಯಂತ ಸುಮಾರು 1,600 ಮಾಹಿತಿ ತಂತ್ರಜ್ಞಾನ ಆಧಾರಿತ ಕಂಪನಿಗಳ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶಗಳು ಬಯಲಾಗಿವೆ.
ಸೈಬರ್ ಸುರಕ್ಷತಾ ಸಂಸ್ಥೆ ರುಬ್ರಿಕ್ ಝೀರೊ ಲ್ಯಾಬ್ಸ್ ಪರವಾಗಿ 'ವೇಕ್‌ಫೀಲ್ಡ್ ರಿಸರ್ಚ್' ಕಂಪನಿಯು 500 ಅಥವಾ ಹೆಚ್ಚು ಉದ್ಯೋಗಿಗಳಿರುವ ಕಂಪನಿಗಳಲ್ಲಿ ಈ ಸಮೀಕ್ಷೆ ಕೈಗೊಂಡಿತ್ತು. ಐಟಿ ಮತ್ತು ಸುರಕ್ಷತೆಗೆ ಸಂಬಂಧಿಸಿದ ಅಧಿಕಾರಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಈ ವರದಿ ತಯಾರಿಸಲಾಗಿತ್ತು.
ಕಳೆದ 30 ವರ್ಷಗಳಲ್ಲಿ ಉದ್ಯಮಗಳು ಸೈಬರ್ ದಾಳಿಯ ತಡೆಗೆ ಹೆಚ್ಚಿನ ಗಮನ ನೀಡಿವೆ. ಆದರೆ, ಸಾಂಸ್ಥಿಕ ವ್ಯವಸ್ಥೆಯ ಮೇಲೆಯೇ ಸೈಬರ್ ದಾಳಿ ನಡೆಯುವ ಸಾಧ್ಯತೆಗಳಿದ್ದು, ಈ ಬಗ್ಗೆ ಮುಂದಾಲೋಚಿಸಿ ಕಾರ್ಯತಂತ್ರ ರೂಪಿಸಬೇಕಾಗಿದೆ ಎಂದು ಕ್ಯಾಲಿಫೋರ್ನಿಯದ ಪಾಲೊ ಅಲ್ಟೋ ಮೂಲದ ಕಂಪನಿ ರುಬ್ರಿಕ್ ಝೀರೊ ಲ್ಯಾಬ್ಸ್ ಸಿಇಒ ಹಾಗೂ ಸಹಸಂಸ್ಥಾಪಕ ಬಿಪುಲ್ ಸಿನ್ಹಾ ಹೇಳಿದ್ದಾರೆ.
ಜಗತ್ತಿನಾದ್ಯಂತ ಸೈಬರ್ ಉದ್ಯಮವು ವರ್ಷಕ್ಕೆ 200 ಶತಕೋಟಿ ಡಾಲರ್ ಗಳಿಕೆ ಮಾಡುತ್ತಿದೆ. ಆದರೆ ವಿಷಾದದ ವಿಷಯವೆಂದರೆ, ಮೂವರಲ್ಲಿ ಒಬ್ಬರು ಸೈಬರ್ ದಾಳಿಯಲ್ಲಿ ತಮ್ಮ ವೈಯಕ್ತಿಕ ದತ್ತಾಂಶವನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಗಮನಕ್ಕೂ ಇದು ಬಂದಿಲ್ಲ ಎಂದು ಸಿನ್ಹಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಅಮೆರಿಕ, ಯುಕೆ ಹಾಗೂ ಭಾರತ ಸೇರಿದಂತೆ 10 ದೇಶಗಳಲ್ಲಿ ಇದೇ ವರ್ಷದ ಜೂನ್ 30 ಹಾಗೂ ಜುಲೈ 11ರ ನಡುವೆ ವೇಕ್‌ಫೀಲ್ಡ್ ರಿಸರ್ಚ್ ಸಂಸ್ಥೆಯು ಈ ಸಮೀಕ್ಷೆಯನ್ನು ಕೈಗೊಂಡಿತ್ತು.
ಕಳೆದೊಂದು ವರ್ಷದಲ್ಲಿ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು (ಖಾಸಗಿ) ಕಳೆದುಕೊಂಡವರ ಸಂಖ್ಯೆ ಅರ್ಧಕ್ಕೂ ಹೆಚ್ಚು (ಶೇ.53). 2022ರಲ್ಲಿ ಒಂದಲ್ಲ ಒಂದು ಮಾಹಿತಿ ನಷ್ಟ ಮಾಡಿಕೊಂಡಿರುವ ಕಂಪನಿಗಳ ಪ್ರಮಾಣ ಆರರಲ್ಲಿ ಒಂದು (ಶೇ.16).
ಭಾರತಕ್ಕೆ ಸಂಬಂಧಿಸಿದಂತೆ, ತಮ್ಮ ಸಂಸ್ಥೆಯ ದತ್ತಾಂಶ ನೀತಿಯಲ್ಲಿ ಸುರಕ್ಷತೆ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದ ಐಟಿ (ಮಾಹಿತಿ&ತಂತ್ರಜ್ಞಾನ) ಅಧಿಕಾರಿಗಳ ಸಂಖ್ಯೆ ಶೇ.49. ಮುಂದಿನ ಒಂದು ವರ್ಷದಲ್ಲಿ ತಮ್ಮ ಕಂಪನಿಗಳಲ್ಲಿ ಸೂಕ್ಷ್ಮ ದತ್ತಾಂಶ ನಷ್ಟದಿಂದ ಹಾನಿ ಅನುಭವಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದವರು ಶೇ.30 ಮಂದಿ.
ಆದರೆ, ತಡೆಯಲಾಗದಿರುವುದನ್ನು ತಡೆಯುವುದು ಅಸಾಧ್ಯ ಎಂದು ಸಿನ್ಹಾ ಮಾರ್ಮಿಕವಾಗಿ ಹೇಳಿದ್ದಾರೆ. ಸೈಬರ್ ದಾಳಿಯನ್ನು ಶೇ.100ರಷ್ಟು ತಡೆಯುವುದು ಸಾಧ್ಯವಾಗದು. ದಾಳಿ ನಡೆಯುತ್ತದೆ ಎಂದು ಆಲೋಚಿಸಿ ಉದ್ಯಮಗಳು ಸೈಬರ್ ಅಪರಾಧ ಹೆಚ್ಚಳಕ್ಕೆ ತಡೆಯೊಡ್ಡಲು ನೂತನ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂದಿದ್ದಾರೆ ಅವರು.
ಕಾರಣ? ದತ್ತಾಂಶ (ಡೇಟಾ) ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಲೇ ಇದೆ. ಎಷ್ಟರ ಮಟ್ಟಿಗೆ ಎಂದರೆ ಸಂರಕ್ಷಿಸುವ ಸಾಮರ್ಥ್ಯವನ್ನೆಲ್ಲ ಮೀರಿ ಅದು ವೇಗವಾಗಿ ಬೆಳೆಯುತ್ತಿದೆ ಎಂದು ಜಗತ್ತಿನ ತಂತ್ರಜ್ಞಾನ ಕ್ಷೇತ್ರದ ಅಧಿಕಾರಿಗಳು ಹೇಳಿದ್ದಾರೆ.
ಸಂಸ್ಥೆಯೊಂದರ ದತ್ತಾಂಶವು ಕಳೆದ 18 ತಿಂಗಳಲ್ಲಿ ಸರಾಸರಿ ಶೇ.42ರಷ್ಟು ಹೆಚ್ಚಾಗಿದೆ. ಇದರಲ್ಲಿ ಸೇವೆಯಾಗಿ ತಂತ್ರಾಂಶ (SaaS)ದ ಪಾಲು ಶೇ.145ರ ಬೆಳವಣಿಗೆಯಾಗಿದ್ದರೆ, ಕ್ಲೌಡ್ ಸೇವೆಗಳ ಪ್ರಗತಿ ಶೇ.73.
ಮುಂದಿನ ವರ್ಷದಲ್ಲಿ ಸಂಸ್ಥೆಯೊಂದು ಸಂರಕ್ಷಿಸಬೇಕಾಗಿರುವ ಒಟ್ಟು ದತ್ತಾಂಶದ ಪ್ರಮಾಣವು ಸುಮಾರು 100 BETB (ಬ್ಯಾಕ್ ಎಂಡ್ ಟೆರಾಬೈಟ್). ಐದು ವರ್ಷದಲ್ಲಿ ಇದರ ಪ್ರಮಾಣ ಏಳು ಪಟ್ಟು ಹೆಚ್ಚಾಗಲಿದೆ.
ಹೆಚ್ಚುತ್ತಿರುವ ದತ್ತಾಂಶದ ಪ್ರಮಾಣವನ್ನು ರಕ್ಷಿಸಿಡುವುದು ಸಾಧ್ಯವಿಲ್ಲ ಎಂಬುದನ್ನು ಕೆಲವು ಸಂಸ್ಥೆಗಳು ಒಪ್ಪಿಕೊಳ್ಳುತ್ತವೆ. ಆದರೆ ಪರಿಸ್ಥಿತಿಯು ತೀರಾ ಆತಂಕಕಾರಿಯಾಗಿದ್ದು, ಕಂಪನಿಗಳು ತಮ್ಮ ಸೈಬರ್ ಸುರಕ್ಷತಾ ಕಾರ್ಯತಂತ್ರದಲ್ಲಿ ಸೈಬರ್ ಪುನಶ್ಚೇತನ (ಸೈಬರ್ ದಾಳಿಯನ್ನು ತಡೆದುಕೊಂಡು ಪುನಃ ಕಾರ್ಯಾಚರಣೆ ಆರಂಭಿಸುವ ಸಾಮರ್ಥ್ಯ) ವ್ಯವಸ್ಥೆಯೊಂದನ್ನು ಅಳವಡಿಸುವ ಅಗತ್ಯವಿದೆ ಎಂದಿದ್ದಾರೆ ಸಿನ್ಹಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.