ADVERTISEMENT

EXPLAINER: Microsoft ತಾಂತ್ರಿಕ ಅಡಚಣೆ ಕ್ರೌಡ್‌ಸ್ಟ್ರೈಕ್‌ನಿಂದ ಆಗಿದ್ದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2024, 14:20 IST
Last Updated 19 ಜುಲೈ 2024, 14:20 IST
<div class="paragraphs"><p>ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಉಂಟಾದ ಜನದಟ್ಟಣೆ</p></div>

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಉಂಟಾದ ಜನದಟ್ಟಣೆ

   

ಪಿಟಿಐ ಚಿತ್ರ

ಬೆಂಗಳೂರು: ಜಗತ್ತಿನ ಬಹುತೇಕ ಡಿಜಿಟಲ್‌ ಪ್ರಪಂಚದಲ್ಲಿರುವ ಕಂಪ್ಯೂಟರ್ ಪರದೆ ಮೇಲೆ ಶುಕ್ರವಾರ ಮೂಡಿದ ‘ಬ್ಲೂ ಸ್ಕ್ರೀನ್ ಆಫ್ ಡೆತ್’ (BSOD) ಎರರ್‌ಗೆ ಹಲವು ಉದ್ಯಮಗಳೇ ಬೆಚ್ಚಿವೆ. 

ADVERTISEMENT

ವಿಮಾನಗಳು ಹಾರಾಟ ನಿಲ್ಲಿಸಿವೆ, ಟಿಕೆಟ್‌ ಬುಕ್ಕಿಂಗ್ ವ್ಯವಸ್ಥೆ ಸ್ಥಗಿತಗೊಂಡಿದೆ. ಕೆಲ ಬ್ಯಾಂಕ್‌ಗಳ ವ್ಯವಹಾರ ನಿಂತಿದೆ, ಸೂಪರ್‌ಸ್ಟೋರ್‌ಗಳಲ್ಲಿ ಬಿಲ್‌ಗಳಾಗದೆ ಜನರು ಸರತಿಸಾಲಿನಲ್ಲೇ ನಿಲ್ಲುವಂತಾಗಿದ್ದು ಈ ಒಂದು ಎರರ್‌ನಿಂದಲೇ. ಅಷ್ಟಕ್ಕೂ ಈ ಎಲ್ಲಾ ಸಮಸ್ಯೆಯ ಮೂಲ ಕಾರಣ ಪತ್ತೆ ಮಾಡಿರುವ ಮೈಕ್ರೊಸಾಫ್ಟ್‌, ಕ್ರೌಡ್‌ಸ್ಟ್ರೈಕ್‌ನಲ್ಲಿ ಇತ್ತೀಚೆಗೆ ನಡೆದ ಅಪ್‌ಡೇಟ್‌ ಕಾರಣ ಎಂದಿದೆ.

ಕ್ರೌಡ್‌ಸ್ಟ್ರೈಕ್

ಕ್ರೌಡ್‌ಸ್ಟ್ರೈಕ್‌ ಎಂದರೇನು?

ಕ್ರೌಡ್‌ಸ್ಟ್ರೈಕ್ ಎನ್ನುವುದು ಅಮೆರಿಕ ಮೂಲಕ ಒಂದು ಸೈಬರ್‌ ಸೆಕ್ಯುರಿಟಿ ಕಂಪನಿ. ಇದನ್ನು ಆರಂಭದಲ್ಲಿ ಬೃಹತ್ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ವಿಮಾನ ನಿಲ್ದಾಣ, ಬ್ಯಾಂಕ್‌ಗಳು ಬಳಸುತ್ತಿದ್ದವು. ಹೆಚ್ಚುಕಡಿಮೆ, ಕಂಪ್ಯೂಟರ್‌ಗಳಿಗೆ ಬಳಸುವ ನಾರ್ಟನ್‌, ಕ್ಯಾಸ್ಪಸ್ಕೈನಂತೆಯೇ ಕ್ರೌಡ್‌ಸ್ಟ್ರೈಕ್‌ ಆದರೂ, ಒಂದೆರೆಡು ಪರ್ಸನಲ್ ಕಂಪ್ಯೂಟರ್‌ ಹೊಂದಿರುವವರು ಇದನ್ನು ಬಳಸಿರುವ ಉದಾಹರಣೆ ತೀರಾ ಕಡಿಮೆ. 2011ರಲ್ಲಿ ಕಾರ್ಯಾರಂಭ ಮಾಡಿದ ಕ್ರೌಡ್‌ಸ್ಟ್ರೈಕ್‌, ಪ್ರಮುಖವಾಗಿ ಚೀನಾ, ರಷ್ಯಾ ಹಾಗೂ ಉತ್ತರ ಕೊರಿಯಾದ ಸೈಬರ್ ದಾಳಿ ಎದುರಿಸುವ ನಿಟ್ಟಿನಲ್ಲಿ ಅಮೆರಿಕ ಸರ್ಕಾರಕ್ಕೆ ನೆರವಾಗುತ್ತಿತ್ತು.

ಈ ಅವಕಾಶದಿಂದಲೇ ಅದರ ಸ್ಥಾನಮಾನವೂ ಹೆಚ್ಚಾಗಿತ್ತು. ಕ್ಲಿಷ್ಟಕರ ಸೈಬರ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹಾಗೂ ಸರ್ಕಾರದಿಂದ ದೊರೆತ ಬೃಹತ್ ಬೆಂಬಲದಿಂದಾಗಿ ಇದರ ಪ್ರತಿಷ್ಠೆಯೂ ಹೆಚ್ಚಿತು.

ಆದರೆ ಸದ್ಯ ಎದುರಾಗಿರುವ BSOD ಸಮಸ್ಯೆಯು 2024ರಲ್ಲಿ ಸಂಭವಿಸಿದ ಒಂದು ಭಿನ್ನ ಬಗೆಯ ಒಗಟನ್ನು ಸೃಷ್ಟಿಸಿದೆ. ಕ್ರೌಡ್‌ಸ್ಟ್ರೈಕ್‌ನ ಇಡಿಆರ್‌ ಉತ್ಪನ್ನದಲ್ಲಿನ ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸುವ ಹಂತದಲ್ಲಿ ಉಂಟಾಗಿರುವ ಈ ಸಮಸ್ಯೆಯನ್ನು, ಮ್ಯಾನುಯಲ್ ಆಗಿಯೇ ಸರಿಪಡಿಸಬೇಕಿದೆ. ಫಾಲ್ಕನ್‌ ಸೆನ್ಸರ್‌ ಸಾಫ್ಟ್‌ವೇರ್ ಸೂಟ್‌ನಲ್ಲಿ ಅಪ್‌ಡೇಟ್‌ನಿಂದಾಗಿ ಇದು ಎದುರಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇದರ ಪರಿಹಾರಕ್ಕೆ ಕೆಲವು ದಿನಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಎಂಜಿನಿಯರ್‌ಗಳು ಈ ಕೆಲಸದಲ್ಲಿ ನಿರತರಾಗಿದ್ದು, ಶೀಘ್ರದಲ್ಲಿ ಪರಿಹಾರವಾಗುವ ಸಾಧ್ಯತೆ ಇದೆ ಎಂದು ಕ್ರೌಡ್‌ಸ್ಟ್ರೈಕ್‌ ಭರವಸೆ ನೀಡಿದೆ.

ಇದಕ್ಕೊಂದಿಷ್ಟು ತಾತ್ಕಾಲಿಕ ಪರಿಹಾರವನ್ನು ನೀಡಲಾಗಿದೆ. ಅದರಲ್ಲಿ ವಿಂಡೋಸ್‌ ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್‌ಗಳನ್ನು ಸೇಫ್ ಮೋಡ್‌ನಲ್ಲಿ ಬೂಟ್‌ ಮಾಡಬೇಕು.

C:\Windows\System32\Drivers\CrowdStrike ಫೊಲ್ಡರ್‌ ಒಳಗೆ ಹೋಗಿ 'C-00000291*.sys ಫೈಲ್ ಹುಡುಕಿ ಅದನ್ನು ಡಿಲೀಟ್ ಮಾಡಿದ ನಂತರ ಮ್ಯಾನುಯಲ್ ಬೂಟ್‌ ಮಾಡಿದರೆ ಸದ್ಯಕ್ಕೆ ಸಮಸ್ಯೆ ಬಗೆಹರಿಯುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಈ ಸಮಸ್ಯೆಯನ್ನು ಮೈಕ್ರೊಸಾಫ್ಟ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮೈಕ್ರೊಸಾಫ್ಟ್ 365 ಅಪ್ಲಿಕೇಷನ್‌ಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇಂಥ ಸಮಸ್ಯೆ ಎದುರಾದಾಗ ಬೇರೊಂದು ಮಾರ್ಗದಲ್ಲಿ ತನ್ನ ಗ್ರಾಹಕರಿಗೆ ಅಪ್ಲಿಕೇಷನ್ ತಲುಪಿಸಲು ಮೈಕ್ರೊಸಾಫ್ಟ್ ಪರಿಹಾರೋಪಾಯ ಕಂಡುಕೊಳ್ಳುತ್ತಿತ್ತು. ಆದರೆ ಇದು ಸ್ವಯಂಚಾಲಿತವಾಗಿ ಆಗದ ಸಮಸ್ಯೆಯಾಗಿರುವುದರಿಂದ ಕ್ರೌಡ್‌ಸ್ಟ್ರೈಕ್ ಮತ್ತು ಮೈಕ್ರೊಸಾಫ್ಟ್ ಎರಡೂ ಕಂಪನಿಗಳು ಈ ಸಮಸ್ಯೆ ಪರಿಹರಿಸಲು ಜಂಟಿ ಹೋರಾಟ ನಡೆಸುತ್ತಿವೆ.

ಕ್ರೌಡ್‌ಸ್ಟ್ರೈಕ್‌ ಆರಂಭ ಹೇಗಿತ್ತು?

ಜಾರ್ಜ್ ಕುರ್ಟ್ಜ್‌ (ಸಿಇಒ) ಅವರು 2011ರಲ್ಲಿ ಕ್ರೌಡ್‌ಸ್ಟ್ರೈಕ್‌ ಆರಂಭಿಸಿದರು. 2012ರಲ್ಲಿ ಎಫ್‌ಬಿಐನ ಮಾಜಿ ಅಧಿಕಾರಿಯೊಬ್ಬರು ಈ ಕಂಪನಿಯನ್ನು ಸೇರಿಕೊಂಡರು. 2013ರ ಜೂನ್‌ನಲ್ಲಿ ಕಂಪನಿ ತನ್ನ ಮೊದಲ ತಂತ್ರಾಂಶ ಫಾಲ್ಕನ್ ಅನ್ನು ಬಿಡುಗಡೆ ಮಾಡಿತು. ಇದು ಗರಿಷ್ಠ ಸುರಕ್ಷತೆ ನೀಡುವುದರ ಜತೆಗೆ, ಆಪಾಯವನ್ನು ಬೇಗ ಪತ್ತೆ ಮಾಡುವ ಗುಣಲಕ್ಷಣವನ್ನು ಹೊಂದಿತ್ತು.

ಅಮೆರಿಕ ವಿರುದ್ಧ ಚೀನಾ ಮಿಲಿಟರಿ ಐದು ಬಾರಿ ನಡೆಸಿದ ದಾಳಿ ಕುರಿತು ಕ್ರೌಡ್‌ಸ್ಟ್ರೈಕ್‌ ಮುಂಚಿತವಾಗಿಯೇ ತಿಳಿಸಿತ್ತು. ರಷ್ಯಾದ ಎನರ್ಜೆಟಿಕ್ ಬಿಯರ್ ಎಂಬ ಸೈಬರ್ ದಾಳಿಕೋರರ ತಂಡವನ್ನು ಸಮರ್ಥವಾಗಿ ಎದುರಿಸಿತ್ತು. ಇಷ್ಟು ಮಾತ್ರವಲ್ಲದೇ, ಸೋನಿ ಪಿಕ್ಚರ್ಸ್‌ ಹ್ಯಾಕ್‌ನಲ್ಲಿ ಉತ್ತರ ಕೊರಿಯಾದ ದಾಳಿಯನ್ನು ಪತ್ತೆ ಮಾಡಿತ್ತು. 2014ರಲ್ಲಿ ಪುಟ್ಟರ್ ಪಾಂಡಾ ಎಂಬ ಚೀನಾದ ಸೈಬರ್ ದಾಳಿಯನ್ನೂ ಪತ್ತೆ ಮಾಡಿತ್ತು.

ಕ್ರೌಡ್‌ಸ್ಟ್ರೈಕ್‌ನ ಈ ಸಾಧನೆಗಳನ್ನು ಗಮನಿಸಿದ ಗೂಗಲ್‌, 2015ರಲ್ಲಿ ಇದರಲ್ಲಿ ಹೂಡಿಕೆ ಮಾಡಿತು. 2019ರಲ್ಲಿ ಕ್ರೌಡ್‌ಸ್ಟ್ರೈಕ್‌ನ ಒಟ್ಟು ಮೌಲ್ಯ ಒಂದು ಶತಕೋಟಿ ಅಮೆರಿಕನ್ ಡಾಲರ್‌ಗೆ ಹೆಚ್ಚಳವಾಯಿತು. ವಾರ್ಷಿಕ 100 ದಶಲಕ್ಷ ಅಮೆರಿಕನ್ ಡಾಲರ್‌ನ ವರಮಾನ ಪಡೆಯುವ ಹಂತಕ್ಕೆ ಬೆಳೆಯಿತು. 2018ರ ಹೊತ್ತಿಗೆ ಇದರ ಮೌಲ್ಯ 3 ಶತಕೋಟಿ ಅಮೆರಿಕನ್ ಡಾಲರ್‌ಗೆ ಜಿಗಿಯಿತು.

ಸದ್ಯ ಎದುರಾಗಿರುವ ಸಮಸ್ಯೆಯಿಂದ ಆಗಿರುವ ನಷ್ಟವೆಷ್ಟು?

ಶುಕ್ರವಾರ ಎದುರಾಗಿರುವ BSOD ಸಮಸ್ಯೆಯಿಂದ ವಿಮಾನ, ಆಸ್ಪತ್ರೆ, ಬ್ಯಾಂಕ್, ಮಾಧ್ಯಮ ಸಂಸ್ಥೆಗಳು ಹಾಗೂ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಕಾರ್ಯಾಚರಣೆಗೆ ತೊಡಕಾಗಿವೆ. ಈ ಕುರಿತ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ವಿಸಾ, ಎಡಿಟಿ ಸೆಕ್ಯುರಿಟಿ, ಅಮೆಜಾನ್‌ ಕೂಡಾ ಸಮಸ್ಯೆಯ ಸುಳಿಗೆ ಸಿಲುಕಿವೆ. ಫಾಲ್ಕನ್ ತಂತ್ರಾಂಶವು ವಿಂಡೋಸ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಕಂಪ್ಯೂಟರ್‌ಗಳನ್ನೂ ಆವರಿಸಿದೆ. ಇದರ ನಷ್ಟವನ್ನು ಇನ್ನಷ್ಟೇ ಅಂದಾಜು ಮಾಡಬೇಕಿದೆ. ಕ್ರೌಡ್‌ಸ್ಟ್ರೈಕ್‌ನ ಈ ಸಮಸ್ಯೆ ಉದ್ಯಮ ಕ್ಷೇತ್ರಕ್ಕೆ ಕರಾಳ ಶುಕ್ರವಾರವಾಗಿ ಪರಿಣಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.