ಬೆಂಗಳೂರು: ನಾರ್ಡ್ ಸರಣಿಯ CE4 5ಜಿ ಸ್ಮಾರ್ಟ್‌ಫೋನ್ ಅನ್ನು ಒನ್‌ಪ್ಲಸ್ ಅಭಿವೃದ್ಧಿಪಡಿಸಿದ್ದು, ಏ. 1ರಂದು ಇದು ಮಾರುಕಟ್ಟೆಗೆ ಕಾಲಿಡುತ್ತಿದೆ. ಶೇ 100ರಷ್ಟು ಚಾರ್ಜ್ ಕೇವಲ 29 ನಿಮಿಷಗಳಲ್ಲಿ ಆಗಲಿದೆ. ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಯಂತಹ ಹಲವು ಸೌಕರ್ಯಗಳು ಇದರಲ್ಲಿವೆ ಎಂದು ಒನ್‌ಪ್ಲಸ್ ಹೇಳಿದೆ.
ಫೋನ್ ಬಿಡುಗಡೆಗೂ ಮೊದಲೇ, ಇದರಲ್ಲಿರುವ ಸೌಲಭ್ಯಗಳನ್ನು ಒನ್‌ಪ್ಲಸ್ ಮಾಧ್ಯಮಗಳಿಗೆ ಹಂಚಿಕೊಂಡಿದೆ. ಡಿಸ್‌ಪ್ಲೇ, ಪ್ರಾಸೆಸರ್, ಚಾರ್ಜಿಂಗ್ ಸಾಮರ್ಥ್ಯ, ಚಿಪ್‌ಸೆಟ್ ಇತ್ಯಾದಿ ಸೌಲಭ್ಯಗಳ ಕುರಿತ ಮಾಹಿತಿ ಇಲ್ಲಿದೆ.
ಇದರಲ್ಲಿ ಪ್ರಮುಖವಾಗಿ ಹೊಸ ನಾರ್ಡ್ CE4 ಫೋನ್ 100ವ್ಯಾಟ್‌ನ ಫಾಸ್ಟ್ ಚಾರ್ಜಿಂಗ್ ಸೌಕರ್ಯ ಹೊಂದಿದೆ.
ಸ್ಮಾರ್ಟ್‌ಫೋನ್‌ನ ಉತ್ತಮ ಕಾರ್ಯಕ್ಷಮತೆಗಾಗಿ ಸ್ನಾಪ್‌ಡ್ರಾಗನ್ 7ನೇ ತಲೆಮಾರಿನ 7 Gen 3 ಚಿಪ್‌ಸೆಟ್ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 782 ಚಿಪ್‌ಸೆಟ್‌ನ ಸುಧಾರಿತ ಮಾದರಿಯಾಗಿದೆ. ಈ ಮೊದಲು ನಾರ್ಡ್ ಸಿಇ3 ಸ್ಮಾರ್ಟ್‌ಫೋನ್‌ನಲ್ಲಿ 782 ಚಿಪ್‌ಸೆಟ್ ಇತ್ತು.
2.63 ಗಿಗಾ ಹರ್ಟ್ಜ್ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್‌ಫೋನ್ ಚಿಪ್‌ಸೆಟ್ ತಡೆರಹಿತ ಗೇಮಿಂಗ್, ವೇಗದ ಇಂಟರ್ನೆಟ್ ಪಡೆಯಲು ಹೆಚ್ಚು ಅನುಕೂಲ ಎಂದು ಕಂಪನಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಸ್ಮಾರ್ಟ್‌ಫೋನ್ 8 ಜಿ.ಬಿ. ಎಲ್‌ಪಿಡಿಡಿಆರ್4ಎಕ್ಸ್ ರ‍್ಯಾಮ್ ಹಾಗೂ 8 ಜಿ.ಬಿ.ಯಷ್ಟು ವರ್ಚುವಲ್ ರ‍್ಯಾಮ್ ಹೊಂದಿದೆ. 256 ಜಿ.ಬಿ. ಸ್ಮೃತಿಕೋಶ ಇದರದ್ದಾಗಿದ್ದು, ಇದನ್ನು ಮೈಕ್ರೊ ಎಸ್.ಡಿ. ಕಾರ್ಡ್ ಮೂಲಕ 1 ಟಿ.ಬಿ.ವರೆಗೂ ವಿಸ್ತರಿಸಲು ಅವಕಾಶವನ್ನು ಒನ್‌ಪ್ಲಸ್ ನೀಡಿದೆ.
ಆಕ್ಸಿಜೆನ್ ಆಪರೇಟಿಂಗ್ ಸಿಸ್ಟಂ ಹಾಗೂ ಯೂಸರ್ ಇಂಟರ್ಫೇಸ್ ಹೊಂದಿರುವ ನಾರ್ಡ್ ಸಿಇ4ನಲ್ಲಿ ಆ್ಯಂಡ್ರಾಯ್ಡ್ 14 ಒಎಸ್ ಇದೆ. 2 ವರ್ಷಗಳ ವರೆಗೆ ಅಪ್‌ಡೇಟ್ ಮತ್ತು 3 ವರ್ಷಗಳ ವರೆಗೆ ಭದ್ರತಾ ಅಪ್‌ಡೇಟ್ ನೀಡುವುದಾಗಿ ಕಂಪನಿ ಹೇಳಿದೆ.
‘ಸೋನಿ ಲೈಟ್ 600ನ 50 ಮೆಗಾ ಪಿಕ್ಸೆಲ್ ಸೆನ್ಸರ್ ಕ್ಯಾಮೆರಾ ಇದರಲ್ಲಿದ್ದು, ರಾ, ಎಚ್‌ಡಿಆರ್, ಸ್ಲೋಮೋಷನ್ ಮತ್ತು ಟೈಮ್‌ಲ್ಯಾಪ್ಸ್ ಚಿತ್ರ ಹಾಗೂ ವಿಡಿಯೊ ತೆಗೆಯಲು ಸಾಧ್ಯ. ಕೃತಕ ಬುದ್ಧಿಮತ್ತೆಯನ್ನು ಭಾಷಾನುವಾದ, ಕ್ಯಾಮೆರಾ ಬಳಕೆ, ಚಾರ್ಜರ್ ಆಪ್ಟಿಮೈಸೇಷನ್ ಜತೆಗೆ, ಚಿತ್ರ ಹಂಚಿಕೊಳ್ಳುವಾಗ ಮಹತ್ವದ ಮಾಹಿತಿಯನ್ನು ಮರೆಮಾಡುವ ಸೌಕರ್ಯವೂ ಇದರಲ್ಲಿದೆ’ ಎಂದು ಕಂಪನಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.