ADVERTISEMENT

ಪ್ರಯೋಗ: ಬೆಂಕಿ ನಂದಿಸುವ ವಿಶಿಷ್ಟ ಡ್ರೋನ್‌

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 19:30 IST
Last Updated 28 ಜೂನ್ 2024, 19:30 IST
   

ಇತ್ತೀಚಿನ ದಿನಗಳಲ್ಲಿ ವಿಶ್ವದೆಲ್ಲೆಡೆ ಅಗ್ನಿ ಅವಘಡಗಳು ಘಟಿಸುತ್ತಲೇ ಇವೆ. ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಲಾಗದ ಅದೆಷ್ಟೋ ಸಂದರ್ಭಗಳಲ್ಲಿ ಪ್ರಾಣ ನಷ್ಟವು ಸಂಭವಿಸುತ್ತಿವೆ. ಹಲವು ಸಂದರ್ಭಗಳಲ್ಲಿ ಬೆಂಕಿ ನಂದಿಸುವ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ತಲುಪುವುದು ಕಷ್ಟವಾಗುತ್ತದೆ. ಹಾಗೆಯೇ ಅತಿ ಎತ್ತರದ ಕಟ್ಟಡಗಳಿಗೆ ಅಂಟಿಕೊಂಡ ಬೆಂಕಿಯನ್ನು ನಂದಿಸುವುದು ಸವಾಲಾಗಿಯೇ ಪರಿಣಮಿಸುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗೋಪಾಲನ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌‌ ಮತ್ತು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ವಿಶಿಷ್ಟ ಡ್ರೋನ್‌ ಆವಿಷ್ಕರಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಗ್ರೋಯಿಂಗ್ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಓರಿಯೆಂಟೆಡ್ ಕಾಂಗ್ರೆಗೇಷನ್ ಸ್ಟೇಜ್ (GETOCS 4.0)ದಲ್ಲಿ ವಿದ್ಯಾರ್ಥಿಗಳು ಬೆಂಕಿ ನಂದಿಸುವ ಬಾಲ್‌ಗಳನ್ನು ಹೊಂದಿದ ಡ್ರೋನ್‌ಗಳನ್ನು ಬಳಸಿ ಉತ್ತಮ ಮಾದರಿಯನ್ನು ಪ್ರದರ್ಶಿಸಿದರು.

ಈ ವಿನೂತನ ಮಾದರಿಯು ತೀವ್ರವಾದ ಬೆಂಕಿಯನ್ನು ತ್ವರಿತವಾಗಿ ನಂದಿಸುವಲ್ಲಿ ಸಫಲವಾಗುತ್ತದೆ. ಇದರಿಂದಾಗಿ ಜೀವಗಳನ್ನು ರಕ್ಷಿಸುವುದರ ಜೊತೆಗೆ ಕಟ್ಟಡಗಳಿಗೆ ಆಗುವ ಹಾನಿಯನ್ನು ಕೂಡಾ ತಡೆಯುತ್ತದೆ ಮತ್ತು ಪರಿಸರವನ್ನು ರಕ್ಷಿಸುತ್ತದೆ. ‌

ADVERTISEMENT

ಈ ಡ್ರೋನ್‌ಗಳ ಕ್ಷಿಪ್ರ ನಿಯೋಜನೆಯಿಂದ ಹತ್ತಿರದ ಪ್ರದೇಶಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮೂಲಕ ವಿಶಾಲ ಪ್ರದೇಶದಲ್ಲಿಯೂ ಬಳಸಬಹುದಾಗಿದೆ.

ಪ್ರದರ್ಶಿಸಲಾದ ಈ ಮಾದರಿಯನ್ನ ನೋಡಿದ ತಜ್ಞರು, ನಾವು ನೋಡಿದ ಅತ್ಯುತ್ತಮ ಪ್ರಾತ್ಯಕ್ಷಿಕೆ ಇದಾಗಿದೆ ಎಂದು ವಿದ್ಯಾರ್ಥಿಗಳ ಈ ಆವಿಷ್ಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಈ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಲ್‌ಆರ್‌ಡಿಇ, ಡಿಆರ್‌ಡಿಒ ಮತ್ತು ಬೆಂಗಳೂರು ಐಇಟಿಇ, ಮಾಜಿ ಅಧ್ಯಕ್ಷ ಪ್ರೊ. ಹರ್ಜಿಂದರ್ ಸಿಂಗ್ ಭಾಟಿಯಾ, ‘ವಿದ್ಯಾರ್ಥಿಗಳಿಗೆ ನೀಡುವ ಸಲಹೆಯೆಂದರೆ, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರ್‌ ಸಂಸ್ಥೆಯಲ್ಲಿ(IETE) ಸದಸ್ಯತ್ವ ಪಡೆಯುವುದರಿಂದ, ISRO, DRDO, LRDE ಮತ್ತು ಇತರ ಸಂಸ್ಥೆಗಳ ವಿವಿಧ ಉಚಿತ ಕೋರ್ಸ್‌ಗಳ ಪ್ರಯೋಜನ ಪಡೆಯಬಹುದಾಗಿದೆ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅದ್ಭುತ ಭವಿಷ್ಯ ಅಡಗಿದೆ’ ಎಂಬುದನ್ನ ಒತ್ತಿ ಹೇಳುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.

GETOCS 4.0, ಗೋಪಾಲನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ (EC) ವಿಭಾಗವು ನಡೆಸಿದ ಕಾರ್ಯಕ್ರಮವಾಗಿದ್ದು, ದಾಖಲಾತಿಗಳ ಪ್ರಸ್ತುತಿ, ರೊಬೊಟಿಕ್ ಸ್ಪರ್ಧೆಗಳು, ಸರ್ಕ್ಯೂಟ್ ಡೀಬಗ್ ಮಾಡುವುದು, ಪ್ರಾಜೆಕ್ಟ್ ಪ್ರದರ್ಶನಗಳು, ತಾಂತ್ರಿಕ ರಸಪ್ರಶ್ನೆ ಮತ್ತು ಚರ್ಚೆಗಳಂತಹ ವಿವಿಧ ಚಟುವಟಿಕೆಗಳ ಮೂಲಕ ಭಾಗವಹಿಸುವವರು ತಮ್ಮ ಕೌಶಲಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸಿತ್ತು.  ಗೋಪಾಲನ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಸಿ.ಪ್ರಭಾಕರ್ ಅವರು ಸೈದ್ಧಾಂತಿಕ ಶಿಕ್ಷಣದ ಜತೆಗೆ ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ತಿಳಿಸಿದರು. ಗೋಪಾಲನ್ ಇನ್‌ಸ್ಟಿಟ್ಯೂಷನ್ಸ್ ಸಿಇಒ ಡಾ. ಭಾಸ್ಕರ್ ರೆಡ್ಡಿ ಸಿ.ಎಂ, ಪ್ರಾಂಶುಪಾಲ ಡಾ. ಅರುಣ್ ವಿಕಾಸ್ ಸಿಂಗ್, ನಿರ್ದೇಶಕಿ ಸುನೀತಾ ಪ್ರಭಾಕರ್‌  ಎಂ, ಎಸ್.ಅನಂತ ಪದ್ಮನಾಭಂ, ಇಸಿಇ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಕುಮಾರ್, ಸಮಿತಿಯ ಮುಖ್ಯಸ್ಥ ಡಾ. ಕೆ.ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.