ADVERTISEMENT

ಆಮ್ಲಜನಕ ಹೇಗೆ ‘ಕೃತಕ’ ಆಗುತ್ತದೆ?

ಚೈತನ್ಯ ಮಜಲುಕೋಡಿ
Published 8 ಜೂನ್ 2021, 19:30 IST
Last Updated 8 ಜೂನ್ 2021, 19:30 IST
ಆಕ್ಸಿಜನ್ ಕಾನ್‌ಸನ್‌ಟ್ರೇಟರ್‌
ಆಕ್ಸಿಜನ್ ಕಾನ್‌ಸನ್‌ಟ್ರೇಟರ್‌   

ನಮ್ಮ ಪ್ರಾಣವಾಯುವಾಗಿರುವ ಆಮ್ಲಜನಕವು ವಾತಾವರಣದಲ್ಲಿ ಎಲ್ಲೆಡೆಯಲ್ಲಿಯೂ ಯಥಾಪ್ರಮಾಣದಲ್ಲಿ ಸಮಾನವಾಗಿ ಇದೆ. ಕೊರೊನಾ ಸೋಂಕಿನ ಎರಡನೆಯ ಅಲೆಯ ಸಮಯದಲ್ಲಿ ಆಮ್ಲಜನಕದ ಕುರಿತು ಎದ್ದಿರುವ ಹಲವು ಕುತೂಹಲ, ಸಂದೇಹಗಳ ನಿವಾರಣೆ ಮತ್ತು ಮಾಹಿತಿ ಇಲ್ಲಿದೆ...

ವಾತಾವರಣದಲ್ಲಿರುವ ಗಾಳಿಯನ್ನು ಒಂದು ಹಿಡಿ ಸಂಗ್ರಹಿಸಿ ಅದರಲ್ಲಿ ಯಾವೆಲ್ಲ ಅನಿಲಗಳಿವೆ/ ಎಷ್ಟು ಪ್ರತಿಶತ ಇವೆ ಎಂದು ಪರೀಕ್ಷೆ ಮಾಡಿದರೆ ಅದರಲ್ಲಿ ಶೇ. 78 ಸಾರಜನಕವೂ, ಶೇ. 20.9 ಆಮ್ಲಜನಕವೂ ಮತ್ತು ಉಳಿದ ಒಂದು ಶೇಕಡದಲ್ಲಿ ಇಂಗಾಲದ ಡೈ ಆಕ್ಸೈಡ್ ಮತ್ತು ಆರ್ಗಾನ್ ಅನಿಲ ಇದೆ ಎಂಬ ಫಲಿತಾಂಶ ದೊರೆಯುತ್ತದೆ. ಹಾಗಾದರೆ ಇದಕ್ಕೂ ವೈದ್ಯಕೀಯ ಆಮ್ಲಜನಕಕ್ಕೂ ಇರುವ ವ್ಯತ್ಯಾಸವೇನು ನೋಡೋಣ.

ಆರೋಗ್ಯವಂತ ಮನುಷ್ಯನ ಒಂದು ಬಾರಿಯ ಉಸಿರಾಟದಲ್ಲಿ ಬಳಕೆಯಾಗುವ ಆಮ್ಲಜನಕವು ನಾವು ಶ್ವಾಸಕೋಶಕ್ಕೆ ಒಳಗೆಳೆದುಕೊಂಡ ಗಾಳಿಯಲ್ಲಿನ ಆಮ್ಲಜನಕದ ಕಾಲು ಭಾಗ ಅಷ್ಟೇ. ಪ್ರಜ್ಞೆ ತಪ್ಪಿದ ವ್ಯಕ್ತಿಯೊಬ್ಬನಿಗೆ ಬಾಯಿಂದ ಬಾಯಿಗೆ ಉಸಿರು ನೀಡುವುದರಲ್ಲಿ ಏನೂ ತೊಂದರೆ ಇರದಿರುವುದೂ ಇದೇ ಕಾರಣಕ್ಕೆ. ದೀರ್ಘವಾದ ಮತ್ತು ಆಳವಾಗಿ ಉಸಿರೆಳೆದುಕೊಳ್ಳುವ ಆಭ್ಯಾಸ ಹೊಂದಿರುವವರಲ್ಲಿ ಮಾತ್ರ ಆಮ್ಲಜನಕ ಹೆಚ್ಚಾಗಿ ಉಪಯೋಗ ಹೊಂದುತ್ತದೆ ಎನ್ನಬಹುದು.

ADVERTISEMENT

ವೈದ್ಯಕೀಯ ಆಮ್ಲಜನಕ (medical oxygen)ದಲ್ಲಿ ಶೇ. 99.5ದಷ್ಟು ಅಥವಾ ಅದಕ್ಕಿಂತ ಹೆಚ್ಚು ಶುದ್ಧ ಆಮ್ಲಜನಕ ಅನಿಲವೇ ಇರುತ್ತದೆ. ಇಂಗಾಲದ ಡೈ ಆಕ್ಸೈಡ್ (300 ppm), ಮಾನಾಕ್ಸೈಡ್ (05 ppm), ತೇವ (67 ppm) ಇಷ್ಟಕ್ಕಿಂತ ಕಡಿಮೆ ಇರಬೇಕೆಂಬ ಅಧಿನಿಯಮವೂ ಇದೆ.

ವೈದ್ಯಕೀಯ ಅಗತ್ಯದ ಈ ಆಮ್ಲಜನಕವನ್ನು ಮುಖ್ಯವಾಗಿ ಮೂರು ವಿಧಗಳಿಂದ ಪೂರೈಸಬಹುದು:

ಆಮ್ಲಜನಕ ಉತ್ಪಾದಿಸುವ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ವಾತಾವರಣದ ಗಾಳಿಯನ್ನು ಸೆಳೆದು ಅದನ್ನು ಒತ್ತಡ ಹೆಚ್ಚಿಸುವ ಮತ್ತು ಶೀತಲಗೊಳಿಸುವ ಪ್ರಕ್ರಿಯೆಗಳಿಂದ ಅನ್ಯ ಅನಿಲಗಳನ್ನು ಬೇರ್ಪಡಿಸಿ ದ್ರವರೂಪದಲ್ಲಿ ಆಮ್ಲಜನಕವನ್ನು ಉತ್ಪಾದಿಸಲಾಗುತ್ತದೆ. ಇದರ ಉಷ್ಣತೆ ಮೈನಸ್ 183.1 ಡಿಗ್ರಿ ಸೆಲ್ಶಿಯಸ್. ನೀರು ಮಂಜುಗಡ್ಡೆಯಾಗಲು ಸೊನ್ನೆ ಡಿಗ್ರಿ ತಲುಪಿದರೆ ಸಾಕು ಎಂಬ ವಿಷಯ ಮನಗಂಡರೆ ಈ ದ್ರವ ಆಮ್ಲಜನಕದ ನಿರ್ವಹಣೆ ಎಷ್ಟು ತೊಡಕಿನದ್ದು ಎಂಬುದು ಅರಿವಾದೀತು. ಇದನ್ನು ದೊಡ್ಡ ಟ್ಯಾಂಕರುಗಳಲ್ಲಿ ತುಂಬಿಸಿ ರೈಲು/ರಸ್ತೆ/ವಿಮಾನ/ಹಡಗುಗಳ ಮೂಲಕ ಅಗತ್ಯವಿರುವ ಜಾಗಕ್ಕೆ ತಲುಪಿಸಲಾಗುತ್ತದೆ. ಅಲ್ಲಿ ಜಿಲ್ಲಾ/ತಾಲ್ಲೂಕು ಆಮ್ಲಜನಕ ಸಂಗ್ರಹಣ ಘಟಕಕ್ಕೋ ಅಥವಾ ದೊಡ್ಡ ಆಸ್ಪತ್ರೆಗಳಲ್ಲಿ ಇರುವ ಆ ರೀತಿಯ ಸಂಗ್ರಹಣ ಘಟಕಕ್ಕೋ ತಲುಪಿಸಲಾಗುತ್ತದೆ. ಅಲ್ಲಿಂದ ಪೈಪ್ಲೈನ್ ಮುಖಾಂತರ ಅಥವಾ ಸಣ್ಣ ಸಿಲಿಂಡರುಗಳಿಗೆ ತುಂಬಿಸಿ ಆಯಾ ನಿರ್ದಿಷ್ಟ ಸ್ಥಳಕ್ಕೆ ತಲುಪಿಸಲಾಗುತ್ತದೆ.

ಜಿಲ್ಲೆ–ತಾಲ್ಲೂಕು ಕೇಂದ್ರಗಳಲ್ಲಿಯೇ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೊಳ್ಳುತ್ತಿರುವ ಸುದ್ದಿಯನ್ನ ನಾವೀಗ ನೋಡುತ್ತಿದ್ದೇವೆ. ಇಲ್ಲಿಯೂ ವಾತಾವರಣದಿಂದ ಗಾಳಿಯನ್ನು ಸೆಳೆಯಲಾಗುತ್ತದೆ. ನಂತರ ಅದನ್ನು ಅತಿ ಒತ್ತಡಕ್ಕೇರಿಸಿ ವಿಶಿಷ್ಟವಾದ ಹರಳುಗಳ ಮೂಲಕ ಹಾಯಿಸಲಾಗುತ್ತದೆ. ಅದು ಗಾಳಿಯಲ್ಲಿನ ಅನ್ಯ ಅನಿಲಗಳನ್ನು ಸೆಳೆದು ಆಮ್ಲಜನಕವನ್ನು ಮಾತ್ರವೇ ಹೊರಬಿಡುತ್ತದೆ. ಆ ಹರಳುಗಳಲ್ಲಿ ಶೇಖರಗೊಳ್ಳುತ್ತ ಹೋಗುವ ಅನ್ಯ ಅನಿಲಗಳನ್ನು ನಂತರ ನಿರ್ವಾತ/ಶೂನ್ಯ ಒತ್ತಡದ ಮೂಲಕ ಹೊರಗೆಳೆದು ಮತ್ತೆ ಮರುಬಳಕೆಗೆ ಸಿದ್ಧಗೊಳಿಸಲಾಗುತ್ತದೆ. ಇಲ್ಲಿ ಸೀದಾ ಶೇ. 90-95 ಶುದ್ಧ ಆಮ್ಲಜನಕವು ಅನಿಲ ರೂಪದಲ್ಲೇ ದೊರೆತುಬಿಡುತ್ತದೆ. ಇದನ್ನು ಅಲ್ಲಿಯೇ ಸ್ಥಾಪಿತವಾಗಿರುವ ಟ್ಯಾಂಕುಗಳಲ್ಲಿ ಸಂಗ್ರಹಿಸಿ ಸರಬರಾಜು ಮಾಡುತ್ತಾರೆ. ಇದರ ನಿರ್ವಹಣೆಗೆ ನಿರಂತರ ವಿದ್ಯುತ್ ಪೂರೈಕೆ ಅಗತ್ಯ ಎಂಬುದನ್ನು ಗಮನದಲ್ಲಿಡಬೇಕು.

‘ಆಕ್ಸಿಜನ್ ಕಾನ್‌ಸನ್‌ಟ್ರೇಟರ್‌’ಗಳು (Oxygen Concentrator) ಎಂಬುದು ಪ್ರಚಲಿತ ಸುದ್ದಿಯಲ್ಲಿರುವ ಆಮ್ಲಜನಕ ಪೂರೈಕೆಯ ಯಂತ್ರಗಳಾಗಿವೆ. ಕೆಲವು ಸರಳ ನಿಯಮಗಳನ್ನು ಅನುಸರಿಸುವುದರ ಮೂಲಕ ಮನೆಯಲ್ಲೇ ಇದನ್ನು ಬಳಸುತ್ತ ಅಗತ್ಯ ಪ್ರಮಾಣದ ಆಮ್ಲಜನಕವನ್ನು ರೋಗಿಗೆ ಕೊಡಬಹುದೆಂದು ವೈದ್ಯರು ಹೇಳುತ್ತಾರೆ. ಇದರಲ್ಲೂ ವಾತಾವರಣದ ಗಾಳಿಯಿಂದ ಅನ್ಯ ಅನಿಲಗಳನ್ನು ಹರಳಿನ ಗಾತ್ರದ ಹೀರುಕಗಳಿಂದ ಸೆಳೆದು ಶೇ. 90-95 ಶುದ್ಧ ಆಮ್ಲಜನಕವನ್ನು ಉತ್ಪಾದಿಸಲಾಗುತ್ತದೆ. ಏಕಕಾಲಕ್ಕೆ ಒಂದು ರೋಗಿಗೆ ಮಾತ್ರವೇ ಇದನ್ನು ಬಳಸಲು ಸಾಧ್ಯವಿದ್ದು, ಈ ಸಾಧನಕ್ಕೂ ವಿದ್ಯುತ್ ಅತ್ಯವಶ್ಯವಾಗಿದೆ. ಎಲ್ಲಿಂದೆಲ್ಲಿಗೂ ಕೊಂಡೊಯ್ಯಬಲ್ಲದ್ದಾಗಿರುವುದರಿಂದ ಇದಕ್ಕೆ ದಿನೇ ದಿನೇ ಪ್ರಾಮುಖ್ಯ ಹೆಚ್ಚುತ್ತಿದೆ.

ಇವೆಲ್ಲದರಲ್ಲೂ ತೇವವು ಇಲ್ಲವಾದ ಕಾರಣ ಆಮ್ಲಜನಕವನ್ನು ಶುದ್ಧಜಲದಲ್ಲಿ ಹಾಯಿಸಿಯೇ (nebulizer) ರೋಗಿಯ ಶ್ವಾಸಕ್ಕೆ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಉಸಿರಾಟದಲ್ಲಿ ಉರಿಯುಂಟಾಗುತ್ತದೆ. ಪೂರ್ಣಶುದ್ಧ ಆಮ್ಲಜನಕವನ್ನು ರೋಗಿಗೆ ಯಾವಾಗಲೂ ನೀಡುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ಶೇ. 40-70 ಅನ್ನು ನಿಯಂತ್ರಕಗಳ ಮೂಲಕ ವೈದ್ಯರ ನಿರ್ದೇಶನದ ಮೇರೆಗೆ ನೀಡಲಾಗುತ್ತದೆ. ಗೊತ್ತಿಲ್ಲದವರು ನಿರ್ವಹಿಸಲು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ.

ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಕಾರ್ಖಾನೆಗಾಗಿ ಉತ್ಪಾದಿತವಾಗುವ ಆಮ್ಲಜನಕವು ರಾಸಾಯನಿಕ ಪ್ರಕ್ರಿಯೆಗಳಿಗೆ ಬಳಕೆಯಾಗುವ ಆಗುವ ಕಾರಣ, ಅಲ್ಲಿ ವೈದ್ಯಕೀಯ ಬಳಕೆಗೆ ಬೇಕಿರುವ ಹೆಚ್ಚಿನ ಶುದ್ಧಿಯ ಅಗತ್ಯವಿಲ್ಲ. ಆದ್ದರಿಂದ ಎರಡನ್ನೂ ಅದಲುಬದಲು ಮಾಡಬಾರದೆಂಬ ಎಚ್ಚರ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.