ADVERTISEMENT

ಕಂಪ್ಯೂಟರಿನಲ್ಲಿರುವ ‘ಕೋಪೈಲಟ್’ AI ವೈಶಿಷ್ಟ್ಯ: ಬಳಸುವುದೂ ಸುಲಭ

ನಮ್ಮದೇ ಕಂಪ್ಯೂಟರಿನಲ್ಲಿರುವ 'ಕೋಪೈಲಟ್' AI ವೈಶಿಷ್ಟ್ಯ ಬಳಸುವುದು ಸುಲಭ

ಅವಿನಾಶ್ ಬಿ.
Published 31 ಜುಲೈ 2024, 0:40 IST
Last Updated 31 ಜುಲೈ 2024, 0:40 IST
<div class="paragraphs"><p>ಕೋಪೈಲಟ್‌ಗೆ ಒಂದು 'ಪ್ರಾಂಪ್ಟ್' ನೀಡಿದರೆ ವೈವಿಧ್ಯಮಯ ಚಿತ್ರಗಳನ್ನು ರಚಿಸುತ್ತದೆ.</p></div>

ಕೋಪೈಲಟ್‌ಗೆ ಒಂದು 'ಪ್ರಾಂಪ್ಟ್' ನೀಡಿದರೆ ವೈವಿಧ್ಯಮಯ ಚಿತ್ರಗಳನ್ನು ರಚಿಸುತ್ತದೆ.

   

ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಎಂಬ ಅತ್ಯಾಧುನಿಕ ತಂತ್ರಜ್ಞಾನವು ದೂರದಲ್ಲೆಲ್ಲೋ ಇಲ್ಲ. ಈಗಾಗಲೇ ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳಿಗೆ ಮತ್ತು ಕಂಪ್ಯೂಟರುಗಳಿಗೆ ಬಂದುಬಿಟ್ಟಿದೆ. ಆದರೆ, ವೇಗವಾಗಿ ಬೆಳೆಯುತ್ತಲೇ ಇರುವ ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾ, ಹೊಸ ಹೊಸ ವೈಶಿಷ್ಟ್ಯಗಳ ಲಾಭ ಪಡೆಯುತ್ತಾ ನಾವು ಕೂಡ ನಮ್ಮ ಕೌಶಲ್ಯವರ್ಧನೆ ಮಾಡಿಕೊಳ್ಳಲು ಈಗಿಂದಲೇ ಆರಂಭಿಸಬೇಕಾಗಿದೆ.

ಈಗಾಗಲೇ ಅರಿತೋ ಅರಿಯದೆಯೋ ಎಐ ಅನ್ನು ದೈನಂದಿನ ಕೆಲಸ ಕಾರ್ಯಗಳಲ್ಲಿ ಬಳಸಲಾರಂಭಿಸಿದ್ದೇವೆ. ಈ ತಂತ್ರಜ್ಞಾನದ ಧಾವಂತವನ್ನು ಮನಗಂಡ ಮೈಕ್ರೋಸಾಫ್ಟ್ ಕಂಪನಿಯು ತನ್ನ ವಿಂಡೋಸ್ 11 ಕಾರ್ಯಾಚರಣಾ ವ್ಯವಸ್ಥೆಯ ಕಂಪ್ಯೂಟರುಗಳಲ್ಲಿ ಕೋಪೈಲಟ್ ಎಂಬ ಎಐ ತಂತ್ರಜ್ಞಾನವನ್ನು ಅಳವಡಿಸಿಯೇ ಜನರಿಗೆ ನೀಡಲಾರಂಭಿಸಿದೆ.

ADVERTISEMENT

ಈ ತಂತ್ರಜ್ಞಾನವನ್ನು ನಾವು ಬಳಸುತ್ತಾ ಹೋದಂತೆ, ಅದು ಹೆಚ್ಚು ಹೆಚ್ಚು ಬಲಗೊಳ್ಳುತ್ತಾ ಹೋಗುತ್ತದೆ. ಇದು ಯಂತ್ರ-ಕಲಿಕೆಯ (ಮೆಶಿನ್ ಲರ್ನಿಂಗ್) ಸಾರ. ಅದಕ್ಕೆ ಊಡಿಸುವ ದತ್ತಾಂಶದ ಆಧಾರದಲ್ಲಿ ನಮಗೆ ಬೇಕಾದಂತೆ ಫಲಿತಾಂಶ ನೀಡಬಲ್ಲ ಈ ತಂತ್ರಜ್ಞಾನವು, ಅಲ್ಲೇ ನಾವು ಅಲ್ಪ ಸ್ವಲ್ಪ ತಿದ್ದುಪಡಿ ಮಾಡಿದರೆ, ಅದನ್ನು ಸ್ವೀಕರಿಸುವ ಅದು ಮುಂದಿನ ಬಾರಿ ಈ ಪರಿಷ್ಕೃತ ಫಲಿತಾಂಶವನ್ನೇ ನೀಡುತ್ತದೆ. ಅಂದರೆ ಯಂತ್ರವೇ ಕಲಿತುಕೊಳ್ಳುತ್ತಾ ಹೋಗುತ್ತದೆ ಮತ್ತು ತನ್ನ 'ಬುದ್ಧಿಮತ್ತೆ'ಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ.

ನಮ್ಮ ಕಂಪ್ಯೂಟರುಗಳಲ್ಲಿರುವ ಕೋಪೈಲಟ್ ವೈಶಿಷ್ಟ್ಯವನ್ನು ಜನಸಾಮಾನ್ಯರು ಹೇಗೆ ಬಳಸಬಹುದು, ಅನುಕೂಲಗಳೇನು ಎಂಬ ಬಗ್ಗೆ ಕೆಲವೊಂದಿಷ್ಟು ಸುಳಿವುಗಳು ಇಲ್ಲಿವೆ. ಪಠ್ಯ ಆಧಾರಿತ ಈ ಜನರೇಟಿವ್ ಎಐ ಸೌಕರ್ಯವನ್ನು ಕನ್ನಡದಲ್ಲಿ ಕೂಡ ಬಳಸಬಹುದು ಎಂಬುದು ದಿಟವಾದರೂ, ಇಂಗ್ಲಿಷ್ ಭಾಷೆಯ ಪಠ್ಯಗಳ ಮೂಲಕ ವ್ಯವಹಾರ ಮಾಡಿದರೆ ನಮಗೆ ದೊರೆಯುವ ಪರಿಹಾರಗಳು ಅಥವಾ ಫಲಿತಾಂಶಗಳು ನಿಖರತೆಗೆ ಹೆಚ್ಚು ಹತ್ತಿರ ಇರಬಲ್ಲವು. ಇದಕ್ಕೆ ಪ್ರಧಾನ ಕಾರಣ, ಇಂಗ್ಲಿಷಿಗೆ ಹೋಲಿಸಿದರೆ ಅಂತರ್ಜಾಲದಲ್ಲಿ ಕನ್ನಡದ ಬಳಕೆ ಕಡಿಮೆ.

ಕೋಪೈಲಟ್: ಎಲ್ಲಿದೆ, ಹೇಗೆ ಆರಂಭಿಸುವುದು?
ವಿಂಡೋಸ್ 11 ಕಾರ್ಯಾಚರಣಾ ವ್ಯವಸ್ಥೆಯಲ್ಲಿ (ವಿಂಡೋಸ್ 10ರಿಂದ 11ಕ್ಕೆ ಅಪ್‌ಗ್ರೇಡ್ ಮಾಡಲಾದ ಸಿಸ್ಟಂಗಳೂ ಸೇರಿದಂತೆ) ಕೆಲಸ ನಿರ್ವಹಿಸುವ ಕಂಪ್ಯೂಟರುಗಳಲ್ಲಿ, ಟಾಸ್ಕ್ ಬಾರ್‌ನಲ್ಲಿ (ಕೆಳಭಾಗದ ಬಲ ಮೂಲೆಯಲ್ಲಿ) ವರ್ಣರಂಜಿತವಾದ ಐಕಾನ್ ಕೆಳಗೆ PRE ಎಂದು ಬರೆದಿರುತ್ತದೆ. ಅದನ್ನು ಕ್ಲಿಕ್ ಮಾಡಿದರಾಯಿತು. ಹೊಸ ಕೀಲಿಮಣೆಗಳಲ್ಲಿ ಕೋಪೈಲಟ್ ಕೀಲಿಯೇ ಪ್ರತ್ಯೇಕವಾಗಿರುತ್ತದೆ. ಅದನ್ನು ಕ್ಲಿಕ್ ಮಾಡಿದರೂ ಸಾಕು. ಆಗ ಪಾಪ್-ಅಪ್ ವಿಂಡೋ ಕಾಣಿಸಿಕೊಂಡು, ಅಲ್ಲಿ 'Ask me Anything' ಎಂದು ಕಾಣಿಸುವ ಬಾಕ್ಸ್‌ನಲ್ಲಿ ನಮಗೆ ಬೇಕಾದ ವಿಷಯಗಳ ಕುರಿತಾಗಿ ಮಾಹಿತಿ ಕೇಳಬಹುದು. ಅಲ್ಲಿ ನಾವು ಟೈಪ್ ಮಾಡಿದ ವಿಷಯದ ಆಧಾರದಲ್ಲಿ ಕೋಪೈಲಟ್ ನಿಮಗೆ ಇಡೀ ಜಾಲತಾಣಗಳ ಪ್ರಪಂಚವನ್ನು ಜಾಲಾಡಿ, ನಮಗೆ ಬೇಕಾದ ಮಾಹಿತಿಯನ್ನು 'ವ್ಯವಸ್ಥಿತವಾಗಿ' ತಂದು ನಮ್ಮ ಮುಂದಿಡುತ್ತದೆ. ಉದಾಹರಣೆಗೆ, "ಜಗತ್ತಿನ ಪ್ರಮುಖ ದೇಶಗಳ ಸ್ವಾತಂತ್ರ್ಯ ದಿನಗಳ ಪಟ್ಟಿ ಕೊಡು" ಅಂತ ಬರೆದರೆ, ಜಾಲತಾಣಗಳನ್ನೆಲ್ಲ ಜಾಲಾಡಿ, ತನಗೆ ಸಿಗುವ ಮಾಹಿತಿಯನ್ನು ಮುಂದಿಡುತ್ತದೆ. ಕನ್ನಡದಲ್ಲಿ ಕೇಳುವುದಕ್ಕಿಂತಲೂ ಇಂಗ್ಲಿಷಿನಲ್ಲಿ ಕೇಳಿದರೆ ನಿಮಗೆ ಹೆಚ್ಚು ನಿಖರವಾದ ಮಾಹಿತಿ ದೊರೆಯುತ್ತದೆ (ಇದು ಸದ್ಯದ ಮಟ್ಟಿಗೆ).

ಇಷ್ಟೇ ಅಲ್ಲ, ನಿರ್ದಿಷ್ಟ ವಿಷಯದ ಕುರಿತು 'ಪ್ರಬಂಧ ಬರೆದುಕೊಡು' ಅಂತ ಕೇಳಿದರೂ ಅದು ಒಳ್ಳೆಯ ಲೇಖನವನ್ನು ನಿಮ್ಮ ಮುಂದಿಡುತ್ತದೆ. ನಿಮಗೆ ಯಾವುದೇ ವಾಕ್ಯದ ಸಂರಚನೆ ಇಷ್ಟವಾಗಲಿಲ್ಲವೋ? ಅದನ್ನು ಬದಲಾಯಿಸಿಕೊಡು (Re-phrase/Rewrite) ಅಂತ ಕೇಳಿದರೆ, ಅದನ್ನು ಮತ್ತೊಂದು ರೂಪದಲ್ಲಿ ಬರೆಯುತ್ತದೆ.

ಈ ರೀತಿಯಾಗಿ ಕೇಳುವ (ಟೈಪ್ ಮಾಡುವ) ಪ್ರಶ್ನೆಗಳನ್ನು 'ಪ್ರಾಂಪ್ಟ್ (Prompt)' ಎನ್ನಲಾಗುತ್ತದೆ. ಈ ಪ್ರಾಂಪ್ಟ್‌ನಲ್ಲಿ ಸರಿಯಾದ ಕೀವರ್ಡ್‌ಗಳು (ಅಂದರೆ ಪ್ರಮುಖವಾದ ಪದಗಳು) ಇದ್ದರೆ, ನಮಗೆ ದೊರೆಯುವ ಮಾಹಿತಿ ಹೆಚ್ಚು ನಿಖರವಾಗಿರುತ್ತದೆ. ಹಲವು ವಾಕ್ಯಗಳಲ್ಲಿಯೂ ನಾವು ಪ್ರಶ್ನೆಗಳನ್ನು ಕೇಳಿ, ನಮ್ಮ ಪ್ರಾಂಪ್ಟ್‌ಗಳನ್ನು ರೂಪಿಸಿ, ನಿಖರ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಅನುವಾದ: ಯಾವುದೇ ಭಾಷೆಯ ವಿಷಯವನ್ನು ಅಲ್ಲಿ ಪೇಸ್ಟ್ ಮಾಡಿ, ಇದನ್ನು ಯಾವುದೇ ಭಾಷೆಗೆ ಅನುವಾದಿಸಿಕೊಡು ಅಂತ ಹೇಳಿದರೆ, ಅದನ್ನೂ ಮಾಡಿ ನಮ್ಮ ಮುಂದಿಡುತ್ತದೆ. ಆದರೆ, ಕನ್ನಡದ ಅನುವಾದ ತೀರಾ ಆರಂಭಿಕ ಹಂತದಲ್ಲಿದೆ.

ಇದಲ್ಲದೆ, ಒಂದು ಸುದೀರ್ಘ ಲೇಖನವನ್ನು ನೀಡಿ, ಅದರ ಸಾರಾಂಶ (Summary) ಮಾಡಿಕೊಡು ಎಂದರೆ, ಅದನ್ನೂ ತಕ್ಷಣ ತಯಾರಿಸಿಕೊಡುತ್ತದೆ ಕೋಪೈಲಟ್. ಇದರ ಮುಂದುವರಿದ ಭಾಗವಾಗಿ (ಪ್ರೊ ಆವೃತ್ತಿ), ಮಾಹಿತಿ ತುಂಬಿರುವ ಫೈಲುಗಳನ್ನು (ಪಿಡಿಎಫ್, ಎಕ್ಸೆಲ್, ವರ್ಡ್ ಮುಂತಾದವು) ಅಪ್‌ಲೋಡ್ ಮಾಡಿ, ಇದರ ಸಾರಾಂಶ ಕೊಡು ಅಂತ ಕೇಳಿದರೂ ಈ ಕೃತಕ ಬುದ್ಧಿಮತ್ತೆಯು ಮಾಡಿಕೊಡುತ್ತದೆ. ಇಷ್ಟಲ್ಲದೆ, ಎಕ್ಸೆಲ್ ಎಂಬ ಪದಪರಿಷ್ಕಾರಕ ತಂತ್ರಾಂಶದ ಕೆಲವೊಂದು ಸೂತ್ರಗಳನ್ನು ಕೇಳಿದರೂ ಕೊಡುತ್ತದೆ, ತಂತ್ರಜ್ಞರಿಗೆ ಅಗತ್ಯವಾದ ನಿರ್ದಿಷ್ಟವಾದ ಕೋಡ್‌ಗಳನ್ನು ಅದು ತಿಳಿಸಿಕೊಡುತ್ತದೆ ಎಂದರೆ ಈ ಜನರೇಟಿವ್ ಎಐ ತಂತ್ರಜ್ಞಾನದ ಅಗಾಧ ಸಾಮರ್ಥ್ಯದ ಅರಿವಾಗುತ್ತದೆ.

ಇದು ಪಠ್ಯದ (ಟೆಕ್ಸ್ಟ್) ವಿಷಯವಾಯಿತು. ಇನ್ನು, 'ಒಂದು ಚಿತ್ರ ಮಾಡಿಕೊಡು. ಅದರಲ್ಲಿ ಇಂತಿಂಥ ವಿಷಯಗಳಿರಬೇಕಾಗುತ್ತದೆ' ಅಂತ ಹೇಳಿದರೆ, ಈ 'ಪ್ರಾಂಪ್ಟ್'ಗಳಿಂದ ಚಿತ್ರವನ್ನೂ ನಮಗಾಗಿ ತಯಾರಿಸಿಕೊಡುತ್ತದೆ ಕೋಪೈಲಟ್. ಇದು ಬಿಂಗ್ ಸರ್ಚ್ ಎಂಜಿನ್‌ನ ಇಮೇಜಸ್ (https://www.bing.com/images/create/) ಮೂಲಕ ಕೆಲಸ ಮಾಡುತ್ತದೆ.

ಇದೇ ರೀತಿಯಲ್ಲಿ, ನಮಗೇನಾದರೂ ವಿಷಯದ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ (ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶದ ಭಾಗ) ಮಾಡಬೇಕಿದ್ದರೆ, ನಿರ್ದಿಷ್ಟ ವಿಷಯವನ್ನು ಒಂದು ವಾಕ್ಯದಲ್ಲಿ ತಿಳಿಸಿದರೆ, ಸ್ಲೈಡ್‌ಗಳಿಗೆ ಬೇಕಾದ ಪಠ್ಯವನ್ನು ಈ ಜನರೇಟಿವ್ ಎಐ ತಂತ್ರಾಂಶವು ಸಿದ್ಧಪಡಿಸಿಕೊಡುತ್ತದೆ. ನಿರ್ದಿಷ್ಟ ವಿಷಯಗಳನ್ನು ನೀಡಿದರೆ, ವಿಡಿಯೊ ಮಾಡಲು ಸ್ಕ್ರಿಪ್ಟ್ ಕೂಡ ತಯಾರಿಸಿಕೊಡಬಲ್ಲುದು.

ಸರ್ಚ್ ಎಂಜಿನ್‌ಗಿಂತ ಹೇಗೆ ಭಿನ್ನ?
ಗೂಗಲ್, ಬಿಂಗ್, ಯಾಹೂ ಅಥವಾ ಯಾಂಡೆಕ್ಸ್ ಮುಂತಾದ ಸರ್ಚ್ ಎಂಜಿನ್‌ಗಳಲ್ಲಿ ನಾವು ಪ್ರಶ್ನೆ ಕೇಳಿದರೆ, ಅದಕ್ಕೆ ಸಂಬಂಧಿಸಿದ ಮಾಹಿತಿ ಇರುವ ಜಾಲತಾಣಗಳ ಎಲ್ಲ ಲಿಂಕ್‌ಗಳನ್ನು ಅವುಗಳು ನಮ್ಮ ಮುಂದೆ ತೋರಿಸುತ್ತವೆ. ಹೆಚ್ಚು ನಿಖರವಾದ ಮಾಹಿತಿ ಎಲ್ಲೋ ಇರಬಹುದು. ಆದರೆ, ಕೋಪೈಲಟ್‌ನಂತಹಾ ಜನರೇಟಿವ್ ಎಐ (ಚಾಟ್ ಜಿಪಿಟಿ, ಮೆಟಾ ಎಐ, ಜೆಮಿನಿ ಮುಂತಾದವು) ತಂತ್ರಜ್ಞಾನದಲ್ಲಿ ಹೀಗಲ್ಲ. ನಮಗೆ ಬೇಕಾದ ಮಾಹಿತಿಯು ವ್ಯವಸ್ಥಿತ ರೂಪದಲ್ಲಿ, ಒಂದು ಲೇಖನ ರೂಪದಲ್ಲಿ, ಪಟ್ಟಿ ರೂಪದಲ್ಲಿ ಲಭ್ಯ. ಅದಕ್ಕಾಗಿ ಯಾವ ಜಾಲತಾಣದ ಮೂಲವನ್ನು ಬಳಸಿಕೊಳ್ಳಲಾಯಿತು ಎಂಬ ಮಾಹಿತಿಯು ಹೈಪರ್-ಲಿಂಕ್ ಮೂಲಕ ನಮಗೆ ದೊರೆಯುತ್ತದೆ. ಹೀಗಾಗಿ, ಅದರಲ್ಲಿ ಲಭ್ಯವಾಗುವ ಮಾಹಿತಿಯು ವಿಶ್ವಾಸಾರ್ಹವೇ? ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬಹುದು.

ಇವುಗಳು ಕೋಪೈಲಟ್ ಅಥವಾ ಬೇರಾವುದೇ ಜನರೇಟಿವ್ ಎಐ ತಂತ್ರಜ್ಞಾನದಿಂದಾಗುವ ಲಾಭಗಳ ಒಂದು ಝಲಕ್ ಅಷ್ಟೇ. ಇದರ ಅಗಾಧ ಸಾಮರ್ಥ್ಯ ಬೆಳೆಯುತ್ತಲೇ ಇದೆ.

ಎಲ್ಲಕ್ಕೂ ಮುಖ್ಯವಾಗಿ ಗಮನಿಸಬೇಕಾದುದೆಂದರೆ, ಅಂತರ್ಜಾಲದಲ್ಲಿ ಲಭ್ಯವಾಗುವ ಯಾವುದೇ ವಿಷಯಗಳು ವಿಶ್ವಾಸಾರ್ಹವೇ ಆಗಿರಬೇಕೆಂದಿಲ್ಲ ಎಂಬ ನಿರ್ಣಯ ಎಐ ತಂತ್ರಜ್ಞಾನಕ್ಕೂ ಅನ್ವಯಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.