ADVERTISEMENT

Technology | ಲಗ್ಗೆ ಇಡಲಿದೆ ದೇಸಿ ಎಐ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 22:30 IST
Last Updated 15 ಅಕ್ಟೋಬರ್ 2024, 22:30 IST
   

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಇತರ ರಾಷ್ಟ್ರಗಳಿಗೆ ಸದಾ ಪೈಪೋಟಿ ನೀಡುತ್ತಿದೆ. ಇದೀಗ ಜಾಗತಿಕವಾಗಿ ಪ್ರಾಮುಖ್ಯತೆ ಹೊಂದಿರುವ ಎಐ ಅನ್ನು ದೇಸಿ ರೂಪದಲ್ಲಿ  ಸ್ಥಳೀಯ ಭಾಷೆಗಳಲ್ಲಿ ರೂಪಿಸುವ ಮಹತ್ತರ ಯೋಜನೆಗೆ ಭಾರತ ಮುಂದಡಿ ಇಟ್ಟಿದೆ.

ಹೌದು, 'ಭಾರತ್ ಜೆನ್' ಎಂಬ  ಹೊಸ ಯೋಜನೆಯೊಂದು ಇತ್ತಿಚ್ಚೆಗಷ್ಟೇ ಚಾಲನೆಗೊಂಡಿದ್ದು, ಇದು ಭಾರತದ ಸಂಸ್ಕೃತಿ, ಜೀವನ ಕ್ರಮ, ವ್ಯವಸ್ಥೆಗಳನುಗುಣವಾಗಿ ದೇಸಿ ಭಾಷೆಗಳಲ್ಲಿ ಪ್ರತಿಕ್ರಿಯೆ ನೀಡಬಲ್ಲ ಎಐ ಮಾದರಿಗಳನ್ನು ರೂಪಿಸುವ ಯೋಜನೆ. ಇಂಟರ್ ಡಿಸಿಪ್ಲಿನರಿ ಸೈಬರ್ ಫಿಸಿಕಲ್ ಸಿಸ್ಟೆಮ್   ಎಂಬ ರಾಷ್ಟ್ರೀಯ ಅಭಿಯಾನದಡಿಯಲ್ಲಿ ಐಐಟಿ ಬಾಂಬೆಯು ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಎರಡು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಬಳಿಕ ದೇಶದ ಸರ್ಕಾರಿ, ಖಾಸಗಿ, ಶಿಕ್ಷಣ ಮತ್ತು ಸಂಶೋಧನಾ ವಲಯಗಳು ಎಐ ಅನ್ನು ಪರಿಣಾಮಕಾರಿಯಾಗಿ ಬಳಸಬಹುದು.

ಪ್ರಸ್ತುತ ಇರುವ ಎಐ ಮಾದರಿಗಳು ಜಾಗತಿಕ ವಿಚಾರಗಳನ್ನು ಕೇಂದ್ರೀಕರಿಸಿಕೊಂಡು ರಚನೆಯಾಗಿರುವಂತದ್ದು, ಇದು ಭಾರತದ ವಿಷಯಗಳನ್ನು ಅಷ್ಟು ನಿಖರವಾಗಿ ಹೇಳುವುದಿಲ್ಲ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ನಿಖರ  ಪ್ರತಿಕ್ರಿಯೆ ನೀಡುತ್ತವೆ. ಆದರೆ ಭಾರತ್ ಜೆನ್ ಅಡಿಯಲ್ಲಿ ತಯಾರಾಗುವ ಎಐ ಮಾದರಿಗಳು ಭಾರತ ಸಾಮಾಜಿಕ, ಸಾಂಸ್ಕೃತಿಕ, ಭೌಗೊಳಿಕ ಸೇರಿದಂತೆ ಎಲ್ಲ ವಿಷಯಗಳನ್ನು ಸ್ಥಳೀಯ ಭಾಷೆಗಳಲ್ಲಿ  ಹೇಳಬಲ್ಲದು. 

ADVERTISEMENT

ಸರ್ಕಾರದ ಸಹಯೋಗದಲ್ಲಿ ಇಂತಹ ಯೋಜನೆ ರೂಪುಗೊಳ್ಳುತ್ತಿರುವುದು ವಿಶ್ವದಲ್ಲಿ ಇದೆ ಮೊದಲು.

ಮೂವಿ ಜೆನ್ ಎಂಬ ಹೊಸ ಮಾದರಿ

ಜಗತ್ತಿನ ತಂತ್ರಜ್ಞಾನ ವಲಯದಲ್ಲಿ ಸಂಚಲನ ಸೃಷ್ಟಿಸಿರುವ ಎಐ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಟೆಕ್ ದಿಗ್ಗಜರು ಎಐನ ಹೊಸಸಾಧ್ಯತೆಗಳನ್ನು ಹುಡುಕುತ್ತ ಯಶಸ್ಸು ಕಾಣುತ್ತಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನ ಮಾತೃ ಸಂಸ್ಥೆ ಮೆಟಾವು ಮೂವಿ ಜೆನ್ ಎಂಬ ಹೊಸ ಎಐ ಮಾದರಿಯನ್ನು ನಿರ್ಮಿಸಿದೆ. ಈ ಹೊಸ ಮಾದರಿಯು ಬಳಕೆದಾರರ ಬೇಡಿಕೆಗಳಿಗೆ ಪ್ರತಿಯಾಗಿ ನೈಜವಾಗಿ ಕಾಣುವ ವೀಡಿಯೊ ಮತ್ತು ಆಡಿಯೊ ಕ್ಲಿಪ್‌ಗಳನ್ನು ಸೃಷ್ಟಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಇದು ಓಪನ್‌ ಎಐ ಮತ್ತು ಇಲೆವೆನ್‌ಲ್ಯಾಬ್‌ಗಳಂತಹ ಪ್ರಮುಖ ಎಐ ಮಾದರಿಗಳಿಗೆ  ಪ್ರತಿಸ್ಪರ್ಧಿಯಾಗಬಹುದು ಎಂದು ತಂತಜ್ಞಾನ ಕ್ಷೇತ್ರದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ಉದಾಹರಣೆಗೆ ಮೆಟಾದ ಮೂವಿ ಜೆನ್‌ ಅನ್ನು ಬಳಸಿಕೊಂಡು  ಪ್ರಾಣಿಗಳು ಈಜು ಹೊಡೆಯುತ್ತಿರುವ  ಮತ್ತು ಸರ್ಫಿಂಗ್‌ ಮಾಡುತ್ತಿರುವ ವೀಡಿಯೊಗಳನ್ನು ಸೃಷ್ಟಿಸಬಹುದು,  ನೈಜ್ಯ ಫೋಟೋಗಳನ್ನು ಬಳಸಿಕೊಂಡು ಕ್ಯಾನ್ವಾಸ್‌ನಲ್ಲಿ ಪೇಂಟಿಂಗ್‌ ಮಾಡುತ್ತಿರುವಂತ  ವೀಡಿಯೊಗಳನ್ನು ನಿರ್ಮಿಸಬಹುದು.

ಮೂವಿ ಜೆನ್ ವಿಡಿಯೊದಲ್ಲಿನ ವಿಷಯಕ್ಕೆ ಹೊಂದುವ  ಹಿನ್ನೆಲೆ ಸಂಗೀತ ಮತ್ತು ಧ್ವನಿಗಳನ್ನು ಅಳವಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮೆಟಾ ತಿಳಿಸಿದೆ.

ಎಐ ಪಾಠ ಹೇಳಲಿದ್ದಾನೆ ಸಮರ್ಥ

ದಿನಕಳೆದಂತೆ ಎಐ ತಂತ್ರಜ್ಞಾನವು ಎಲ್ಲ ವಲಯಗಳನ್ನು ಆಕ್ರಮಿಸಿಕೊಳ್ಳುತ್ತದೆ. ಎಲ್ಲರೂ ಎಐ ಅನ್ನು ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್ (ಸಿಎಸ್ಎಫ್)  ಗೂಗಲ್ ಸಹಯೋಗದೊಂದಿಗೆ ಎಐ ಪಾಠ ಹೇಳುವ  ಯೋಜನೆಯೊಂದನ್ನು ರೂಪಿಸಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಎಐ ನ  ಬಗ್ಗೆ  ಶಿಕ್ಷಣ ನೀಡುವ ಉದ್ದೇಶದಿಂದ ಸೇವಾ ಸಂಸ್ಥೆ (ಸಿಎಸ್ಎಫ್) ಗೂಗಲ್ ಸಹಯೋಗದೊಂದಿಗೆ  'ಎಐ ಸಮರ್ಥ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.   'ಮುಂದಿನ ನಾಲ್ಕು ವರ್ಷಗಳಲ್ಲಿ  ಐದು ಮಿಲಿಯನ್ ವ್ಯಕ್ತಿಗಳಿಗೆ ಎಐ ಬಗ್ಗೆ ಅರಿವು ಮೂಡಿಸುವುದು ಮತ್ತು ಸಮರ್ಪಕ ಬಳಕೆಯ ಬಗ್ಗೆ ಕಲಿಸುವುದು 'ಎಐ ಸಮರ್ಥ್' ನ ಪ್ರಮುಖ ಗುರಿಯಾಗಿದೆ' ಎಂದು ಸಿಎಸ್ಎಫ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ವೇತ ಶರ್ಮ ಕುಕ್ರೇಜಾ ಹೇಳುತ್ತಾರೆ 

ಎಐ ವ್ಯಾಪ್ತಿ ವಿಸ್ತಾರ

ಇತ್ತೀಚಿಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ ಭಾರತದ ಶೇ  81ರಷ್ಟು ಕಂಪನಿಗಳು  ಜನರೇಟಿವ್ ಎಐ ಅನ್ನು ಬಳಸುತ್ತಿದ್ದಾವೆ. ಎಐ ತಂತ್ರಜ್ಞಾನ ಬಳಕೆಯಲ್ಲಿ ಭಾರತವು  ಅಗ್ರಸ್ಥಾನಕ್ಕೆ ಏರುತ್ತಿದೆ. ವರದಿಯ ಪ್ರಕಾರ, ಮಾಹಿತಿ ತಂತ್ರಜ್ಞಾನ (ಐಟಿ) ಸೇವಾ ಪೂರೈಕೆದಾರರು ತಮ್ಮ ಪ್ರಮುಖ ಪ್ರಕ್ರಿಯೆಗಳಲ್ಲಿ GenAI ಅನ್ನು ಹೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ.  ಈ ತಂತ್ರಜ್ಞಾನವು ಡೆವಲಪರ್‌ಗಳಿಗೆ ಹೆಚ್ಚು ಪರಿಣಾಮಕಾರಿಯಾದ ಕೋಡ್ ಅನ್ನು ತಯಾರಿಸಲು, ವಿವಿಧ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  

ತಂತ್ರಜ್ಞಾನ ಲೋಕದಲ್ಲಿ ಎಐ ಬಗ್ಗೆ ನಿತ್ಯ ಸಂಶೋಧನೆ ನಡೆಯುತ್ತಿದ್ದು, ಎಲ್ಲ ವ್ಯವಸ್ಥೆಗಳನ್ನು ಮತ್ತಷ್ಟು ಸರಳೀಕರಿಸುವ ನಿಟ್ಟಿನಲ್ಲಿ ಎಐ ಅನ್ನು ರೂಪಿಸುವ ಪ್ರಯತ್ನ ನಡೆಯುತ್ತಿದೆ

ಮುಂಬರುವ ವರ್ಷಗಳಲ್ಲಿ ಎಐ  ಉಪಕ್ರಮಗಳಿಗಾಗಿ ಹೂಡಿಕೆಗಳು ಮತ್ತು ಬಜೆಟ್ ಹಂಚಿಕೆಯು  ಹೆಚ್ಚಳವಾಗವ ಸಾಧ್ಯತೆಗಳಿವೆ ಎಂದು  ಅಧ್ಯಯನವು ತಿಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.