ADVERTISEMENT

2030ರ ಹೊತ್ತಿಗೆ ಭಗ್ನಾವಶೇಷ ಮುಕ್ತ ಬಾಹ್ಯಾಕಾಶ ಯೋಜನೆಯೇ ISRO ಗುರಿ: ಸೋಮನಾಥ್

ಪಿಟಿಐ
Published 16 ಏಪ್ರಿಲ್ 2024, 16:02 IST
Last Updated 16 ಏಪ್ರಿಲ್ 2024, 16:02 IST
<div class="paragraphs"><p>ಎಸ್. ಸೋಮನಾಥ್</p></div>

ಎಸ್. ಸೋಮನಾಥ್

   

ಬೆಂಗಳೂರು: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು 2030ರ ಹೊತ್ತಿಗೆ ಭಗ್ನಾವಶೇಷ ಮುಕ್ತ ಬಾಹ್ಯಾಕಾಶ ಯೋಜನೆ ಹೊಂದಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ಎಸ್.ಸೋಮನಾಥ್ ಮಂಗಳವಾರ ಹೇಳಿದ್ದಾರೆ.

ಬಾಹ್ಯಾಕಾಶ ಭಗ್ನಾವಶೇಷಗಳ ಅಂತರ ಸಂಸ್ಥೆಗಳ ಸಮನ್ವಯ ಸಮಿತಿ (IADC)ಯ 42ನೇ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ADVERTISEMENT

‘ಬರಲಿರುವ ದಿನಗಳಲ್ಲಿ ಬಾಹ್ಯಾಕಾಶ ಅನ್ವೇಷಣೆ ಮತ್ತು ಬಾಹ್ಯಾಕಾಶ ಸದ್ಬಳಕೆ ಕುರಿತು ಇಸ್ರೊ ಸ್ಪಷ್ಟವಾದ ಯೋಜನೆ ಹೊಂದಿದೆ. ಸುಸ್ಥಿರ ಬಾಹ್ಯಾಕಾಶ ಯೋಜನೆಗಾಗಿ ಭಗ್ನಾವಶೇಷ ಮುಕ್ತ ಬಾಹ್ಯಾಕಾಶ ಹೊಂದುವುದು ಅತ್ಯಗತ್ಯ. ಇದರ ಸಾಕಾರದತ್ತ ಭಾರತ ಸಾಗುತ್ತಿದೆ. ಕಕ್ಷೆಯಲ್ಲಿ ಸದ್ಯ ಭಾರತದ 54 ಬಾಹ್ಯಾಕಾಶ ನೌಕೆಗಳಿವೆ. ಜತೆಗೆ ಯಾವುದೇ ಕಾರ್ಯನಿರ್ವಹಿಸದ ವಸ್ತುಗಳು ಅಲ್ಲಿಲ್ಲ’ ಎಂಬುದನ್ನು ಸೋಮನಾಥ್ ಸ್ಪಷ್ಟಪಡಿಸಿದರು. 

‘ಬಾಹ್ಯಾಕಾಶಕ್ಕೆ ಕಳುಹಿಸಿದ ನೌಕೆಯು ಒಂದು ಬಾರಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದ ನಂತರ ಅದನ್ನು ಅಲ್ಲಿಂದ ವಿಲೇವಾರಿ ಮಾಡುವ ಎಲ್ಲಾ ಸಾಧ್ಯತೆಗಳ ಕುರಿತು ಭಾರತವು ಅತ್ಯಂತ ಜಾಗರೂಕತೆಯ ಹೆಜ್ಜೆಗಳನ್ನಿಡುತ್ತಿದೆ. ಭವಿಷ್ಯದಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಿರುವ ಎಲ್ಲಾ ಯೋಜನೆಗಳೊಂದಿಗೆ, ಅಲ್ಲಿರುವ ಭಗ್ನಾವಶೇಷಗಳನ್ನು ಸುರಕ್ಷಿತ ಜಾಗಕ್ಕೆ ಹೇಗೆ ತರುವುದು ಎಂಬುದರ ಕುರಿತೂ ಕಾರ್ಯಯೋಜನೆ ರೂಪಿಸಲಾಗುತ್ತಿದೆ’ ಎಂದಿದ್ದಾರೆ.

‘ರಾಕೇಟ್ ಅಥವಾ ಬಾಹ್ಯಾಕಾಶ ನೌಕೆಯ ಮೇಲಿನ ಭಾಗಗಳೂ ಸಹ ನಮ್ಮ ಯೋಜನೆಯ ವ್ಯಾಪ್ತಿಯಲ್ಲೇ ಇರುವಂತೆ ಎಚ್ಚರ ವಹಿಸಲಾಗಿದೆ. ಹೀಗಾಗಿ ಹೆಚ್ಚುವರಿ ಭಗ್ನಾವಶೇಷ ಉತ್ಪತ್ತಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಭೂಮಿಯ ಕಕ್ಷೆಯನ್ನು ಹೊರತುಪಡಿಸಿ ಚಂದ್ರ, ಸೂರ್ಯನ ಅನ್ವೇಷಣೆಯತ್ತ ಗಮನ ಹರಿಸಿದಾಗ, ಅಲ್ಲಿಯೂ ಸ್ಥಳಾವಕಾಶದ ಕೊರತೆ ಎದುರಾಗಿದೆ. ಅದರಲ್ಲೂ ಚಂದ್ರನ ಕಕ್ಷೆಯಲ್ಲಿ ಇದು ಅಧಿಕ’ ಎಂದು ಸೋಮನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

2035ರ ಹೊತ್ತಿಗೆ ಭಾರತೀಯ ಅಂತರಿಕ್ಷ್ ಸ್ಟೇಷನ್ ಕುರಿತು ಮಾತನಾಡಿದ ಅವರು, ‘ಭವಿಷ್ಯದಲ್ಲಿ ಈ ಕಕ್ಷೆಯಲ್ಲಿ ಇನ್ನಷ್ಟು ಬಾಹ್ಯಾಕಾಶ ನಿಲ್ದಾಣಗಳು ಸ್ಥಾಪನೆಯಾಗಲಿವೆ. ಹೀಗಾಗಿ ಈ ಬಾಹ್ಯಾಕಾಶವನ್ನು ಮಾನವರ ಇರುವಿಕೆಯ ಸಲುವಾಗಿ ಸುಸ್ಥಿರವಾಗಿಡುವುದು ಮುಖ್ಯ’ ಎಂದು ಅಭಿಪ್ರಾಯಪಟ್ಟರು.

'ನಾವು ಮಾಡಿಕೊಂಡ ಒಪ್ಪಂದಗಳ ಕುರಿತು ಒಮ್ಮೆ ಮೆಲುಕು ಹಾಕುವುದು ಉತ್ತಮ. ಬರಲಿರುವ ದಿನಗಳಲ್ಲಿ ಬಾಹ್ಯಾಕಾಶದಲ್ಲಿ ಇನ್ನಷ್ಟು ಅನ್ವೇಷಣೆಗಳು ನಡೆಯಲಿವೆ. ರಚಿಸಿಕೊಂಡ ಮಾರ್ಗಸೂಚಿ ಆಧರಿಸಿ ಭಗ್ನಾವಶೇಷ ರಹಿತ ಬಾಹ್ಯಕಾಶವನ್ನು ಹೊಂದುವುದು ನಮ್ಮ ಉದ್ದೇಶವಾಗಿರಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.