ADVERTISEMENT

ರಾಜ್ಯದ ನವೋದ್ಯಮ ನೀತಿ ದೇಶಕ್ಕೆ ಮಾದರಿ: ಸಚಿವ ಪ್ರಿಯಾಂಕ್‌ ಖರ್ಗೆ

950 ಸ್ಟಾರ್ಟ್ಅಪ್‌ಗಳಿಗೆ ನೆರವು: ಸಚಿವ ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 20:13 IST
Last Updated 19 ನವೆಂಬರ್ 2024, 20:13 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ‘ನವೋದ್ಯಮಗಳಿಗೆ ಪ್ರೋತ್ಸಾಹ ಹಾಗೂ ಆರ್ಥಿಕ ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರೂಪಿಸಿರುವ ನೀತಿಯು ಇಡೀ ದೇಶಕ್ಕೆ ಮಾದರಿಯಾಗಿದೆ. ಅನ್ಯ ರಾಜ್ಯಗಳು ಈ ನೀತಿ ಅನುಸರಿಸುವಂತೆ ನೀತಿ ಆಯೋಗವೇ ಹೇಳಿದೆ’ ಎಂದು ಐ.ಟಿ–ಬಿ.ಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನಗರದಲ್ಲಿ ಮಂಗಳವಾರದಿಂದ ಆರಂಭವಾದ ಬೆಂಗಳೂರು ಟೆಕ್‌ ಶೃಂಗದಲ್ಲಿ ‘ಫ್ಯೂಚರ್‌ಸ್ಕೇಪ್’ ಶೀರ್ಷಿಕೆಯಡಿ ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು.

ಮಾರುಕಟ್ಟೆ ಪ್ರವೇಶಿಸುವ ನವೋದ್ಯಮಗಳು ಸ್ಥಿರತೆ ಕಾಯ್ದುಕೊಳ್ಳಲು (ಇನ್‍ಕ್ಯುಬೇಟರ್‌ ಹಂತ) ಸಮಯಬೇಕಿದೆ. ಇದಕ್ಕೆ ಸರ್ಕಾರವೇ ಆರ್ಥಿಕ ನೆರವು ನೀಡಲಿದೆ. ಇಲ್ಲಿಯವರೆಗೆ 950 ನವೋದ್ಯಮಗಳಿಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಸರ್ಕಾರವು ಬೆಂಗಳೂರಿಗಷ್ಟೇ ನವೋದ್ಯಮಗಳನ್ನು ಕೇಂದ್ರೀಕರಿಸಿಲ್ಲ. ಕಲ್ಯಾಣ ಕರ್ನಾಟಕ ಸೇರಿ ಮೈಸೂರು, ಹುಬ್ಬಳ್ಳಿ ಭಾಗದಲ್ಲಿ ನವೋದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಜೈವಿಕ ತಂತ್ರಜ್ಞಾನ ಕಂಪನಿ ಬಯೊಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ಮಾತನಾಡಿ, ‘ನವೋದ್ಯಮ ಸ್ಥಾಪಿಸುವ ಯುವಜನರಲ್ಲಿ ಅಗಾಧ ಜ್ಞಾನವಿದೆ. ಅವರ ಅನ್ವೇಷಣೆಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕಿದೆ’ ಎಂದು ಹೇಳಿದರು.

ಇನ್ಫೊಸಿಸ್‌ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣ ಮಾತನಾಡಿ, ‘ಪ್ರಸ್ತುತ ಭಾರತವು ಜಾಗತಿಕ ಮಟ್ಟದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಂತದಲ್ಲಿದೆ. ಆದರೆ, ಭಾರತದ ತಲಾ ಆದಾಯ ಕಡಿಮೆ ಇದೆ’ ಎಂದರು.

ಪ್ರತಿದಿನ ಹೊಸ ತಂತ್ರಜ್ಞಾನಗಳು ಬರುತ್ತಿವೆ. ಅವುಗಳ ಸದ್ಬಳಕೆ ಮೂಲಕ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ. ಸಾಕಷ್ಟು ಅವಕಾಶಗಳಿದ್ದು, ಯುವಜನರು ಅವುಗಳನ್ನು ಬಳಸಿಕೊಳ್ಳುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.

ನವೋದ್ಯಮಗಳಿಗೆ ಸಂಬಂಧಿಸಿದ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್‌ ಪ್ರಕಾಶ್‌ ಹಾಗೂ ಅರವಿಂದ್‌ ಪಾಲ್ಗೊಂಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.