ADVERTISEMENT

ತಂತ್ರಜ್ಞಾನ: ಕಂಪ್ಯೂಟರ್‌ಗಳಿಗೂ ಲಿಕ್ವಿಡ್ ಕೂಲಿಂಗ್‌

ಮೂರ್‌ ಸಿದ್ಧಾಂತವನ್ನು ಆಧರಿಸಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು ಹೊಸ ಹಾದಿಯತ್ತ ಕರೆದೊಯ್ಯುತ್ತಿದೆ.

ಇ.ಎಸ್.ಸುಧೀಂದ್ರ ಪ್ರಸಾದ್
Published 19 ನವೆಂಬರ್ 2024, 22:01 IST
Last Updated 19 ನವೆಂಬರ್ 2024, 22:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರತಿ ಎರಡು ವರ್ಷಗಳಿಗೊಮ್ಮೆ ಕಂಪ್ಯೂಟರ್‌ಗಳ ಸಾಮರ್ಥ್ಯ ದ್ವಿಗುಣವಾಗುತ್ತಾ ಸಾಗುತ್ತದೆ ಎಂಬ ಮಾತನ್ನು 60 ವರ್ಷಗಳ ಹಿಂದೆ ಗೊರ್ಡನ್ ಮೂರ್ ಎಂಬ ತಂತ್ರಜ್ಞ ಹೇಳಿದ್ದರು. ಇದೀಗ ಮಾಹಿತಿ ತಂತ್ರಜ್ಞಾನ ಜಗತ್ತು ಕೃತಕ ಬುದ್ಧಿಮತ್ತೆಯವರೆಗೂ ಬಂದು ನಿಂತಿರುವಾಗ, ಮೂರ್‌ ಸಿದ್ಧಾಂತವನ್ನು ಆಧರಿಸಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು ಹೊಸ ಹಾದಿಯತ್ತ ಕರೆದೊಯ್ಯುತ್ತಿದೆ.

ಕೇಳಿದ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ನೀಡುವಂಥ ಕೃತಕ ಬುದ್ಧಿಮತ್ತೆಗಳಿರುವ ಕಾಲದಲ್ಲಿ ನಾವಿದ್ದೇವೆ. ಬೃಹತ್‌ ದಾಖಲೆಗಳ ಪರಿಶೀಲನೆ, ಆಗಾಗ ಬದಲಾಗುವ ಹವಾಮಾನದ ನಿಖರ ಮಾಹಿತಿ, ಉಪಗ್ರಹಗಳು ಕಳುಹಿಸುವ ಭೂಮಿಯ ಚಿತ್ರಗಳನ್ನು ಜೋಡಿಸಿ, ಸಂಯೋಜಿಸಿ, ವಿಶ್ಲೇಷಿಸಿ ಮಾಹಿತಿ ನೀಡುವ ಬಿಗ್‌ ಡಾಟಾ ತಂತ್ರಜ್ಞಾ – ಹೀಗೆ ಯಾವುದೇ ಮಾಹಿತಿ ಇರಲಿ, ತಡಮಾಡದೆ ಸಿದ್ಧಪಡಿಸುವ ವೇಗದ ತಂತ್ರಜ್ಞಾನ ಕಾಲದಲ್ಲಿ, ಅದಕ್ಕೆ ತಕ್ಕ ಸಾಧನಗಳು ಇರಬೇಕಾದ್ದೂ ಜರೂರು.

ಫೇರ್‌ಚೈಲ್ಡ್‌ ಸೆಮಿಕಂಡಕ್ಟರ್‌ ಹಾಗೂ ಇಂಟೆಲ್‌ನ ಸಂಸ್ಥಾಪಕರೂ ಆಗಿದ್ದ ಮೂರ್‌ ಅವರ ಪ್ರಕಾರ, ಪ್ರತಿ ಎರಡು ವರ್ಷಗಳಿಗೊಮ್ಮೆ ಕಂಪ್ಯೂಟರ್‌ ಒಳಗಿನ ಟ್ರಾನ್ಸ್‌ಸಿಸ್ಟರ್‌ಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಸಾಗುತ್ತದೆ. ಅದರ ಆಧಾರದ ಮೇಲೆ ಕಂಪ್ಯೂಟರ್‌ಗಳೂ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಆದರೆ, ಹೀಗೆ ಗ್ರಾಹಕರ ಅತಿಯಾದ ನಿರೀಕ್ಷೆಯನ್ನು ಪೂರೈಸುವ ಹೊಣೆಯನ್ನು ಹೊತ್ತಿರುವ ಸೂಪರ್ ಕಂಪ್ಯೂಟರ್‌ಗಳಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅತಿಯಾದ ತಾಪಮಾನದಿಂದ ರಕ್ಷಿಸಲು ವಿಶೇಷ ತಂತ್ರಜ್ಞಾನದ ಹುಡುಕಾಟವೂ ದಶಕದಿಂದ ನಡೆಯುತ್ತಲೇ ಇದೆ. ಅದಕ್ಕೆ ಉತ್ತರ ಎಂಬಂತೆ ದ್ರವರೂಪದಲ್ಲಿ ಕಂಪ್ಯೂಟರ್‌ ಒಳಗಿನ ತಾಪಮಾನ ಕಾಪಾಡುವ ತಂತ್ರಜ್ಞಾನ ಈಗ ಸುದ್ದಿಯಲ್ಲಿದೆ.

ADVERTISEMENT

ವಿದ್ಯುತ್ ಉತ್ಪಾದನೆಯ ಶೇ 1.3ರಷ್ಟು ಡಾಟಾ ಸೆಂಟರ್‌ಗಳಿಗೆ 

ಕಾರು ಹಾಗೂ ಬೈಕ್‌ಗಳಲ್ಲಿ ಲಿಕ್ವಿಡ್ ಕೂಲ್ಡ್‌ ಎಂಜಿನ್‌ಗಳು ಸಾಮಾನ್ಯ ಸಂಗತಿ. ಆದರೆ ದ್ರವವೆಂದರೇ ಹೌಹಾರುವ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳುಳ್ಳ ಕಂಪ್ಯೂಟರ್‌ ಹಾಗೂ ಸರ್ವರ್‌ಗಳ ಕ್ಷೇತ್ರಕ್ಕೂ ಫ್ಯಾನ್‌ ರಹಿತ ಲಿಕ್ವಿಡ್ ಕೂಲ್ಡ್‌ ಸಾಧನಗಳು ಇದೀಗ ಕಾಲಿಟ್ಟಿದೆ. ಇದು ಪರಿಸರಕ್ಕೆ ಪೂರಕವಾಗುವುದರ ಜತೆಗೆ, ಇಂಧನ ಉಳಿತಾಯದ ಮೂಲಕ ಕೈಗಾರಿಕೆಗಳಿಗೂ ಹೆಚ್ಚಿನ ಲಾಭವನ್ನು ತಂದುಕೊಡಬಲ್ಲದು. ಏಕೆಂದರೆ, ಅಂತರರಾಷ್ಟ್ರೀಯ ವಿದ್ಯುತ್ ಏಜೆನ್ಸಿಯು 2022ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿರುವ ಡಾಟಾ ಸೆಂಟರ್‌ಗಳ ವಿದ್ಯುತ್ ಬಳಕೆ 220ರಿಂದ 320 ಟೆರಾವ್ಯಾಟ್ ಗಂಟೆಗಳಷ್ಟಿದೆ. ಎಂದರೆ ಜಗತ್ತಿನ ಒಟ್ಟು ವಿದ್ಯುತ್ ಬೇಡಿಕೆಯ ಶೇ 0.9ರಿಂದ ಶೇ 1.3ರಷ್ಟು ವಿದ್ಯುತ್‌ ಕೇವಲ ಡಾಟಾ ಸೆಂಟರ್‌ಗಳಿಗೆ ಮಾತ್ರವೇ ಬೇಕಿದೆ.

ಇಂಥದ್ದೊಂದು ಲಿಕ್ವಿಡ್ ಕೂಲ್ಡ್‌ ಸರ್ವರ್‌ ಅನ್ನು ಅಭಿವೃದ್ಧಿಪಡಿಸಿರುವುದಾಗಿ ‘ಹ್ಯೂಲೆಟ್ ಪ್ಯಾಕರ್ಡ್’ ಇತ್ತೀಚೆಗೆ ಹೇಳಿದೆ. ಇದು ಕಂಪ್ಯೂಟರ್‌ ಕ್ಷೇತ್ರದಲ್ಲೇ ಶೇ 100ರಷ್ಟು ಫ್ಯಾನ್‌ಲೆಸ್‌ ಮತ್ತು ನೇರ ಲಿಕ್ವಿಡ್ ಕೂಲಿಂಗ್ ಸಿಸ್ಟಂ ಎಂದು ಹೇಳಿಕೊಂಡಿದೆ. ಇಂಟೆಲ್‌ ಕಂಪನಿ ಕೂಡ ಇಂಥದ್ದೇ ತಂತ್ರಜ್ಞಾನ ತನ್ನ ಬಳಿಯೂ ಇದೆ ಎಂದಿದೆ.

ಸಾಮಾನ್ಯವಾಗಿ ಹೆಚ್ಚಿನ ಕಾರ್ಯವನ್ನು ಕಂಪ್ಯೂಟರ್‌ಗಳಿಗೆ ನೀಡಿದಾಗ ಅದನ್ನು ಒದಗಿಸುವ ಒತ್ತಡದಲ್ಲಿ ಒಳಗಿನ ಎಲೆಕ್ಟ್ರಾನಿಕ್ ಉಪಕರಣಗಳ ಶಾಖ ಏರುವುದು ಸಾಮಾನ್ಯ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಫ್ಯಾನ್‌ಗಳನ್ನು ಅಳವಡಿಸಿ, ಹೊರಗಿನ ಗಾಳಿಯನ್ನು ತಂಪಾಗಿಸಿ ಒಳಗಿನ ತಾಪಮಾನವನ್ನು ಸಮತೋಲನದಲ್ಲಿಡುವ ತಂತ್ರಜ್ಞಾನ ಸದ್ಯದ ಅಗತ್ಯ. ಆದರೆ ಡೈರೆಕ್ಟ್ ಲಿಕ್ವಿಡ್‌ ಕೂಲಿಂಗ್ ತಂತ್ರಜ್ಞಾನದಲ್ಲಿ ಇಂಥ ಫ್ಯಾನ್‌ಗಳ ಅಗತ್ಯವಿಲ್ಲ. ಬದಲಿಗೆ ದ್ರವವನ್ನು ನೇರವಾಗಿ ಕಂಪ್ಯೂಟರ್‌ ತಂಪಾಗಿಸಲು ಬಳಸುವುದರಿಂದ ಫ್ಯಾನ್‌ಗಳ ಅಗತ್ಯವಿಲ್ಲ. ಇದರಿಂದ ಶೇ 90ರಷ್ಟು ಇಂಧನ ಉಳಿತಾಯವಾಗಲಿದೆ ಎನ್ನುವುದು ಎಚ್‌ಪಿಇ ಸಿಇಒ ಆ್ಯಂಟೊನಿ ನೆರಿ ಅವರ ಮಾತು.

ಲಿಕ್ವಿಡ್‌ ಕೂಲ್ಡ್‌ ತಂತ್ರಜ್ಞಾನವನ್ನು ಜಿಪಿಯು, ಸಿಪಿಯು, ಸಂಪೂರ್ಣ ಸರ್ವರ್‌ ಬ್ಲೇಡ್‌, ಸ್ಥಳೀಯ ಸ್ಟೋರೇಜ್, ನೆಟ್‌ವರ್ಕ್ ಫ್ಯಾಬ್ರಿಕ್‌, ಕ್ಯಾಬಿನೆಟ್‌, ಕ್ಲಸ್ಟರ್‌ ಮತ್ತು ಕೂಲೆಂಟ್ ಡಿಸ್ಟ್ರಿಬ್ಯೂಷನ್‌ ಯೂನಿಟ್‌ ಸೇರಿದಂತೆ ಎಂಟು ಸ್ತರಗಳಲ್ಲಿ ಬಳಸಲಾಗಿದೆ. ಪ್ರತಿ ಸರ್ವರ್‌ ಬ್ಲೇಡ್‌ಗಳನ್ನು ತಣ್ಣಗಾಗಿಸುವ ಪ್ರಕ್ರಿಯೆಯಲ್ಲಿ ಶೇ 37ರಷ್ಟು ಇಂಧನ ಉಳಿತಾಯವಾಗಲಿದೆ. ಇದರಿಂದ ನಿರ್ವಹಣೆ ವೆಚ್ಚ ಉಳಿಯುವುದರ ಜತೆಗೆ, ಇಂಗಾಲ ಉತ್ಪಾದನೆಯೂ ಗಣನೀಯವಾಗಿ ತಗ್ಗಲಿದೆ. ಜತೆಗೆ ಡಾಟಾ ಸೆಂಟರ್‌ಗಳಲ್ಲಿನ ಶಬ್ದಮಾಲಿನ್ಯವೂ ಕಡಿಮೆಯಾಗಲಿದೆ. ಅನಗತ್ಯ ಕೂಲಿಂಗ್ ಉಪಕರಣಗಳನ್ನು ಈ ತಂತ್ರಜ್ಞಾನ ತಗ್ಗಿಸುವುದರಿಂದ, ಸರ್ವರ್‌ಗಳ ಗಾತ್ರವೂ ಕಿರಿದಾಗಲಿದೆ. ಇದರಿಂದ ಹೆಚ್ಚಿನ ಸ್ಥಳಾವಕಾಶ ದೊರಕಲಿದೆ ಎನ್ನುವುದು ತಜ್ಞರ ಲೆಕ್ಕಾಚಾರ.

3ಡಿ ಆವಿ ಘಟಕ, ಕೂಲಿಂಗ್ ಜೆಟ್‌ಗಳ ಬಳಕೆ

ಪ್ರಾಸೆಸರ್‌ಗಳ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಇಂಟೆಲ್‌ ಕೂಡ ಇಂಥ ಲಿಕ್ವಿಡ್‌ ಕೂಲ್ಡ್ ತಂತ್ರಜ್ಞಾನ ಕ್ಷೇತ್ರದಲ್ಲಿ ಕಳೆದ ಒಂದು ದಶಕಗಳಿಂದ ಕೆಲಸ ಮಾಡುತ್ತಿದ್ದು, ಸುಮಾರು ಒಂದು ಸಾವಿರ ಟೆರಾವ್ಯಾಟ್‌ ಗಂಟೆಗಳಷ್ಟು ವಿದ್ಯುತ್‌ ಉಳಿತಾಯ ಮಾಡಿರುವುದಾಗಿ ಹೇಳಿದೆ.

ಥರ್ಮಲ್ ಪ್ರಯೋಗಾಲಯದಲ್ಲಿ ನಡೆಸಿದ ಬಹಳಷ್ಟು ಪ್ರಯೋಗಗಳ ಮೂಲಕ 3ಡಿ ಆವಿಯ ಘಟಕಗಳನ್ನು ನಿರ್ಮಿಸಿ, ಅವುಗಳು ಹೆಚ್ಚು ಬಿಸಿಯಾಗುವ ಚಿಪ್‌ಗಳಿಗೆ ತಣ್ಣನೆಯ ದ್ರವವನ್ನು ಹದವಾಗಿ ಸಿಂಪಡಿಸುವುದರ ಜತೆಗೆ, ಉಪಕರಣಗಳಿಗೂ ಹಾನಿಯಾಗದಂತೆ ತಡೆಯುವ ಸಾಮರ್ಥ್ಯವನ್ನು ಹೊಂದಿವೆ.

ಇಂಟೆಲ್ ಕಂಪನಿಯು ತನ್ನ ಕ್ಸೆನಾನ್‌ ಪ್ರಾಸೆಸರ್‌ ಮೂಲಕ ಹೊಸ ಬಗೆಯ ಕೂಲಿಂಗ್‌ ತಂತ್ರಜ್ಞಾನ ಆಧಾರಿತ ಸಾಧನವನ್ನು ಪರಿಚಯಿಸಿತು. ಇದಕ್ಕಾಗಿ ಸಬ್ಮೆರ್‌ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಗ್ರೀನ್ ರೆವಲೂಷನ್ ಕೂಲಿಂಗ್‌ ಜತೆಗೆ ವಿನ್ಯಾಸಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿತು. ಇಂಥ ತಂತ್ರಜ್ಞಾನವನ್ನು ಪರಿಚಯಿಸಲು ಮೈಕ್ರೊಸಾಫ್ಟ್‌ ಮತ್ತು ಅಲಿಬಾಬಾದಂತ ಬೃಹತ್ ಕಂಪನಿಗಳ ನೆರವು ಪಡೆದು ಗ್ರಾಹಕರನ್ನು ತಲುಪುವ ಪ್ರಯತ್ನ ನಡೆಸಿತು.

ಬೃಹತ್ ಕಂಪ್ಯೂಟರ್‌ಗಳು ಉತ್ಪಾದಿಸುವ ಶೇ 99ರಷ್ಟು ಶಾಖವನ್ನು ನೀರು ಅಥವಾ ದ್ರವರೂಪದ ಕೂಲಂಟ್‌ಗಳು ತಗ್ಗಿಸುತ್ತವೆ. ಈ ಕೂಲಂಟ್ ಮೂಲಕ ಸಾಗುವ ಶಾಖವು ನಂತರ ಇಂಧನವಾಗಿ ಪರಿವರ್ತನೆ ಹೊಂದುತ್ತದೆ. ಒಂದರ್ಥದಲ್ಲಿ ಹವಾನಿಯಂತ್ರಿತ ಸಾಧನದಂತೆಯೇ ಇದು ಕೆಲಸ ಮಾಡುತ್ತದೆ. ಹೀಗಾಗಿ ಈ ಶಾಖವನ್ನು ಮರುಬಳಕೆ ಮಾಡಬಹುದು. ಇದಕ್ಕಾಗಿ 3ಡಿ ಆವಿಕೋಣೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಲೋಹದ ಪೊಟ್ಟಣದೊಳಗೆ ಕೂರಿಸಿ, ಅದರಿಂದ ಆವಿ ಹೊರಹೋಗದಂತೆ ವ್ಯವಸ್ಥೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ, ಒಳಗಿನ ಶಾಖದಿಂದ ಪೊಟ್ಟಣದ ಮೇಲೆ ಆವಿಗುಳ್ಳೆಗಳು ಮೂಡದಂತೆಯೂ ಈ ಸಾಧನವನ್ನು ಸಿದ್ಧಪಡಿಸಲಾಗಿದೆ. ಇದರಿಂದ ಅತಿ ಹೆಚ್ಚು ಕಾರ್ಯಕ್ಷಮತೆಯ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಉಷ್ಣಾಂಶದ ಸಮತೋಲನವನ್ನು ಕಾಪಾಡಲು ನೆರವಾಗಲಿದೆ. 

ಸರ್ವರ್‌ಗಳಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಾಪಾಡಲು ಜೆಟ್‌ ಮಾದರಿಯಲ್ಲಿ ದ್ರವವನ್ನು ಸಿಂಪಡಿಸುವ ಸಾಧನಗಳ ಆವಿಷ್ಕಾರವೂ ಆಗಿದೆ. ಇದು ಉಪಕರಣಗಳ ಮೇಲೆ ದ್ರವವನ್ನು ಸಿಂಪಡಿಸಿ ತಾಪಮಾನ ಕಾಪಾಡುತ್ತದೆ. ಉಪಕರಣದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ಭಾಗವನ್ನು ಗುರುತಿಸಿ, ಅಲ್ಲಿಗೆ ಮಾತ್ರ ದ್ರವವನ್ನು ಸಿಂಪಡಿಸಲು ಈ ತಂತ್ರಜ್ಞಾನ ನೆರವಾಗಲಿದೆ. ಇದರಿಂದ ಪ್ರಾಸೆಸರ್‌ಗಳು ಕಡಿಮೆ ತಾಪಮಾನದಲ್ಲಿ ಕೆಲಸ ಮಾಡುವುದರ ಜತೆಗೆ, ಶೇ 5ರಿಂದ 7ರಷ್ಟು ಕಾರ್ಯಕ್ಷಮತೆ ಹೆಚ್ಚಿಸಿಕೊಂಡಿದ್ದೂ ದಾಖಲಾಗಿದೆ ಎಂದು ತಜ್ಞರು ಹೇಳುತ್ತಾರೆ.

ಕೃತಕ ಬುದ್ಧಿಮತ್ತೆ, ಬಿಗ್ ಡಾಟಾಗಳ ನಿರ್ವಹಣೆಯಲ್ಲಿರುವ ಸೂಪರ್ ಕಂಪ್ಯೂಟರ್‌ಗಳಿಗೆ ಬಂದಿರುವ ಈ ದ್ರವರೂಪದ ಕೂಲಿಂಗ್ ತಂತ್ರಜ್ಞಾನವು ಭವಿಷ್ಯದಲ್ಲಿ ಪರ್ಸನಲ್ ಕಂಪ್ಯೂಟರ್‌ಗಳಿಗೂ ಬರುವ ಸಾಧ್ಯತೆ ಕುರಿತು ಕೂಡ ತಜ್ಞರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಡಾಟಾ ಸೆಂಟರ್‌ನ ಸಾಂದರ್ಭಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.