ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಆ್ಯಪಲ್ ಭಾರತದಲ್ಲಿ ಐಫೋನ್11 ಹೈಎಂಡ್ ಸ್ಮಾರ್ಟ್‌ಪೋನ್ ತಯಾರಿಸಲು ಮುಂದಾಗಿದೆ.
ಚೆನ್ನೈನ ಫಾಕ್ಸ್‌ಕಾನ್ ಘಟಕದಲ್ಲಿ ಐಫೋನ್ 11 ಸ್ಮಾರ್ಟ್‌ಫೋನ್ ತಯಾರಿಸುವ (ಅಸೆಂಬ್ಲಿಂಗ್) ಕೆಲಸಕ್ಕೆ ಚಾಲನೆ ನೀಡಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಯೋಜನೆ ಅಡಿ ತಯಾರಿಸಲಾದ ಮೊದಲ ಐಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಚೆನ್ನೈ ಘಟಕದ ಉತ್ಪಾದನಾ ಸಾಮರ್ಥ್ಯವನ್ನುಹಂತ, ಹಂತವಾಗಿ ಹೆಚ್ಚಿಸಿಕೊಂಡು ಅಲ್ಲಿಂದಲೇ ಭಾರತದ ಮಾರುಕಟ್ಟೆಗೆ ಐಫೋನ್‌ಗಳನ್ನು ಸರಬರಾಜು ಮಾಡುವ ಯೋಜನೆಯನ್ನು ಆ್ಯಪಲ್ ಕಂಪನಿ ರೂಪಿಸಿದೆ ಎಂದು ರಾಷ್ಟ್ರೀಯ ದೈನಿಕವೊಂದು ವರದಿ ಮಾಡಿದೆ.
ಇದರೊಂದಿಗೆ ಆ್ಯಪಲ್ ಕಂಪನಿ ಬೆಂಗಳೂರಿನ ವಿಸ್ಟ್ರಾನ್ ಘಟಕದಲ್ಲಿ ‘ಐಫೋನ್ ಎಸ್‌ಇ2020’ ತಯಾರಿಕೆ (ಅಸೆಂಬ್ಲಿಂಗ್) ಕೆಲಸ ಆರಂಭಿಸಲಿದೆ ಎಂಬ ಸುದ್ದಿಗಳಿವೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಮೊದಲ ಬಾರಿಗೆ ಆ್ಯಪಲ್ ಕಂಪನಿ ತನ್ನ ಹೈಎಂಡ್ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುವ ಕೆಲಸಕ್ಕೆ ಚಾಲನೆ ನೀಡಿದಂತಾಗುತ್ತದೆ.
ಭಾರತದಲ್ಲಿ ಐಫೋನ್ ತಯಾರಿಸುವ ಆ್ಯಪಲ್ ಕಂನಿಯ ನಿರ್ಧಾರವನ್ನು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಸ್ವಾಗತಿಸಿದ್ದಾರೆ. ಆ್ಯಪಲ್ ಕಂಪನಿಯ ಈ ನಿರ್ಧಾರವು ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಶಕ್ತಿ ತುಂಬಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಆ್ಯಪಲ್ ಕಂಪನಿ ಐಫೋನ್ 6ಎಸ್, ಐಫೋನ್7 ಮತ್ತು ಐಫೋನ್ ಎಕ್ಸ್‌ಆರ್ ಸ್ಮಾರ್ಟ್‌ಫೋ ನ್‌ಗಳನ್ನು ಭಾರತದಲ್ಲಿಯೇ ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
‘ಭಾರತದ ಮಾರುಕಟ್ಟೆ ಆ್ಯಪಲ್ ಕಂಪನಿಗೆ ಅತ್ಯಂತ ನಿರ್ಣಾಯಕವಾಗಿದೆ. ಭಾರತದಲ್ಲಿ ಐಫೋನ್‌ಗಳ ತಯಾರಿಕೆ ಕಂಪನಿಯ ಆದ್ಯತೆಗಳಲ್ಲಿ ಒಂದಾಗಿದೆ’ ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ಈ ಮೊದಲು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.