ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ದೇಶದ ಟೆಕ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ.
ಆಕರ್ಷಕ ವಿನ್ಯಾಸ, ಬಜೆಟ್ ದರ ಮತ್ತು ಗರಿಷ್ಠ ಬ್ಯಾಟರಿ ಬಾಳಿಕೆ ಈ ಸ್ಮಾರ್ಟ್‌ಫೋನ್‌ನ ವಿಶೇಷತೆ ಎಂದು ನೋಕಿಯಾ ಹೇಳಿದೆ.
ನೋಕಿಯಾದ ಜನಪ್ರಿಯ ಸಿ ಸರಣಿಯಲ್ಲಿ ಹೊಸದಾಗಿ C21 ಪ್ಲಸ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, 5050mAh ಬ್ಯಾಟರಿ ಇರುವುದರಿಂದ ಸಾಮಾನ್ಯ ಬಳಕೆಯಲ್ಲಿ ಮೂರು ದಿನದವರೆಗೆ ಬಾಳಿಕೆ ಬರಲಿದೆ ಎಂದು ಕಂಪನಿ ತಿಳಿಸಿದೆ.
ನೋಕಿಯಾ C21 ಪ್ಲಸ್ ತಾಂತ್ರಿಕ ವೈಶಿಷ್ಟ್ಯ
ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ನಲ್ಲಿ 6.5 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಇದೆ.3/32 GB ಮತ್ತು 4/64 GB ಎಂಬ ಎರಡು ಮಾದರಿಗಳಲ್ಲಿ ದೊರೆಯಲಿದ್ದು, ಕ್ರಮವಾಗಿ ₹10,299 ಮತ್ತು ₹11,299 ದರ ಹೊಂದಿದೆ.
13 ಮೆಗಾಪಿಕ್ಸೆಲ್ ಸಹಿತ ಹಿಂಬದಿಯಲ್ಲಿ ಎರಡು ಕ್ಯಾಮೆರಾ ಇದರ ವಿಶೇಷತೆಯಾಗಿದ್ದು, ಫೇಸ್ ಅನ್‌ಲಾಕ್ ಮತ್ತು ಫಿಂಗರ್‌ಪ್ರಿಂಟ್ ವ್ಯವಸ್ಥೆ ಇದರಲ್ಲಿದೆ.
ಡಾರ್ಕ್ ಕ್ಯಾನ್ ಮತ್ತು ವಾರ್ಮ್ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಯಿದ್ದು, ನೋಕಿಯಾ.ಕಾಂ ಮೂಲಕ ಎಕ್ಸ್‌ಕ್ಲೂಸಿವ್ ಆಫರ್‌ನಲ್ಲಿ ಉಚಿತವಾಗಿ ನೋಕಿಯಾ ವೈರ್ ಬಡ್ಸ್ ಸಹಿತ ಲಭ್ಯವಾಗಲಿದೆ.
ನೋಕಿಯಾ ಸಿ21 ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ ಆ್ಯಂಡ್ರಾಯ್ಡ್ 11 (ಗೋ ಎಡಿಶನ್) ಇದ್ದು, ಎರಡು ವರ್ಷಗಳ ವರೆಗೆ ಭದ್ರತಾ ಅಪ್‌ಡೇಟ್ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.