ADVERTISEMENT

OnePlus Summer Launch: ಹೊಸ ನಾರ್ಡ್‌4, ಪ್ಯಾಡ್‌2, ವಾಚ್‌3R, ಬಡ್ಸ್‌ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2024, 14:51 IST
Last Updated 16 ಜುಲೈ 2024, 14:51 IST
   

ಮಿಲಾನೊ: ಸ್ಮಾರ್ಟ್‌ ಗ್ಯಾಜೆಟ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿ ಕಂಪನಿ ಒನ್‌ಪ್ಲಸ್‌ ಈ ಋತುವಿನ ಹೊಸ ಗ್ಯಾಜೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಡಿಜಿಟಲ್ ಯುಗದಲ್ಲಿ ದಿನನಿತ್ಯದ ಅಗತ್ಯಗಳಿಗೆ ಪೂರಕವಾಗುವ ಸಾಧನಗಳನ್ನು ಪರಿಚಯಿಸಿದೆ.

ಜಾಗತಿಕ ಮಟ್ಟದ ಫ್ಯಾಷನ್ ಲೋಕದ ನಗರಿ ಇಟಲಿಯ ಮಿಲಾನ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಒನ್‌ಪ್ಲಸ್‌ನ ವ್ಯಾವಹಾರಿಕ ವಿಭಾಗದ ಮುಖ್ಯಸ್ಥ ಟುಮಸ್ ಲಿಂಪಿನ್‌ ಅವರು ನೂತನ ಗ್ಯಾಜೆಟ್‌ಗಳನ್ನು ಅನಾವರಣಗೊಳಿಸಿದರು.

ಇದರಲ್ಲಿ ಒನ್‌ಪ್ಲಸ್‌ ನಾರ್ಡ್‌ 4, ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 3 ಪ್ರೊ, ಒನ್‌ಪ್ಲಸ್‌ ವಾಚ್‌ 2ಆರ್ ಹಾಗೂ ಒನ್‌ಪ್ಲಸ್‌ ಪ್ಯಾಡ್ 2 ಅನ್ನು ಪರಿಚಯಿಸಿದರು.

ADVERTISEMENT

ಮೆಟಲ್‌ ಯೂನಿಬಾಡಿಯ ಒನ್‌ಪ್ಲಸ್‌ ನಾರ್ಡ್‌ 4

ನಾರ್ಡ್ 4 ಎಂಬ ನೂತನ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿರುವ ಒನ್‌ಪ್ಲಸ್‌ ವಿನ್ಯಾಸದಲ್ಲಿ ಹೊಸತನವನ್ನು ತಂದಿದೆ. ಮೆಟಲ್ ಯೂನಿಬಾಡಿ ವಿನ್ಯಾಸ ಹೊಂದಿದೆ. 5ಜಿ ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಇಂಥ ಪ್ರಯೋಗ ಮೊದಲನೆಯದು ಎಂದು ಕಂಪನಿ ಹೇಳಿಕೊಂಡಿದೆ.

ಒನ್‌ಪ್ಲಾಸ್ ಬ್ಯಾಟರಿ ಹೆಲ್ತ್‌ ಎಂಜಿನ್ ಟೆಕ್ನಾಲಜಿ ಈ ಫೋನ್‌ನಲ್ಲಿದ್ದು, 1,600 ಬಾರಿ ಸಂಪೂರ್ಣ ಚಾರ್ಜಿಂಗ್ ಸೈಕಲ್‌ ಅನ್ನು ಹೊಂದಿದೆ. 7.99 ಮಿ.ಮೀ. ಸಪೂರದ ದೇಹ ಇದರದ್ದು. ಇಂಗ್ಲಿಷ್‌ನ ‘ಯು’ ಮಾದರಿಯ ಆ್ಯಂಟೆನಾ ನೀಡಲಾಗಿದ್ದು, ಇದರಿಂದ ನೆಟ್‌ವರ್ಕ್‌ ಸಂಪರ್ಕ ಉತ್ತಮವಾಗಿರಲಿದೆ. 

ಸ್ನಾಪ್‌ಡ್ರಾಗನ್‌ 7+ 3ನೇ ತಲೆಮಾರಿನ ಚಿಪ್‌ಸೆಟ್ ಅನ್ನು ಇದು ಹೊಂದಿದೆ. 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಇದರದ್ದು. 1.5ಕೆ ರೆಸಲೂಷನ್‌, 120 ಹರ್ಟ್ಜ್‌ ನಷ್ಟು ರಿಫ್ರೆಷ್ ರೇಟ್‌ ಹೊಂದಿದೆ. 2150 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಇದರದ್ದು. 5,500 ಎಂಎಎಚ್‌ ಬ್ಯಾಟರಿ ಇದರಲ್ಲಿದ್ದು, 100 ವಾಟ್‌ನ ಚಾರ್ಜಿಂಗ್‌ ವ್ಯವಸ್ಥೆ ಹೊಂದಿದೆ. 5 ನಿಮಿಷಗಳ ಚಾರ್ಜ್‌ನಿಂದ 5 ಗಂಟೆಯ ಸಿನಿಮಾ ನೋಡಬಹುದಾಗಿದೆ ಎಂದು ಕಂಪನಿ ಹೇಳಿದೆ.

ಫೋನ್‌ನ ಹಿಂಬದಿಯಲ್ಲಿರುವ ಪ್ರಮುಖ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ನದ್ದಾಗಿದೆ. ಇದರೊಂದಿಗೆ 8 ಮೆಗಾ ಪಿಕ್ಸೆಲ್‌ ಅಲ್ಟ್ರಾವೈಡ್‌ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಸೆಲ್ಫಿ ಶೂಟರ್ ಅನ್ನು ನಾರ್ಡ್‌ 4 ಫೋನ್ ಹೊಂದಿದೆ. ಓಯಸಿಸ್ ಗ್ರೀನ್‌ ಎಂಬ ಹೊಸ ಬಣ್ಣವನ್ನು ಈ ಬಾರಿ ಪರಿಚಯಿಸಲಾಗಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

8 ಜಿ.ಬಿ ರ‍್ಯಾಮ್‌ ಹಾಗೂ 128 ಜಿ.ಬಿ. ರಾಮ್‌ನ ಬೆಲೆ ₹29,999, 8 ಜಿ.ಬಿ ರ‍್ಯಾಮ್‌ ಹಾಗೂ 256 ಜಿ.ಬಿ. ರಾಮ್‌ನ ಬೆಲೆ ₹32,999 ಹಾಗೂ 12 ಜಿ.ಬಿ ರ‍್ಯಾಮ್‌ ಹಾಗೂ 256 ಜಿ.ಬಿ. ರಾಮ್‌ನ ಬೆಲೆ ₹35,999ಕ್ಕೆ ಕಂಪನಿ ನಿಗದಿಪಡಿಸಿದೆ. ಜುಲೈ 20ರಿಂದ 30ರವರೆಗೆ ಪ್ರಿ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿದೆ.

ಒನ್‌ಪ್ಲಸ್‌ ಪ್ಯಾಡ್‌ 2

ಒನ್‌ಪ್ಲಸ್‌ ಪ್ಯಾಡ್‌ 2 ಗ್ಯಾಜೆಟ್‌ 12.1 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. 144 ಹರ್ಟ್ಜ್‌ನಷ್ಟು ರಿಫ್ರೆಶ್‌ ರೇಟ್ ಹಾಗೂ ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್‌ ಅನ್ನು ಹೊಂದಿದೆ. ಈ ಟ್ಯಾಬ್ಲೆಟ್‌ನಲ್ಲಿ ವೃತ್ತಾಕಾರದ ಮಾದರಿಯೊಳಗೆ ಕ್ಯಾಮೆರಾ ಹಾಗೂ 13 ಮೆಗಾ ಪಿಕ್ಸೆಲ್‌ನ ಸೆನ್ಸರ್ ಅನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.

ಪ್ಯಾಡ್ 2ನಲ್ಲಿ 8+128 ಹಾಗೂ 12+256 ಕ್ರಮವಾಗಿ ರ‍್ಯಾಮ್‌ ಹಾಗೂ ಸ್ಮೃತಿಕೋಶದ ಆಯ್ಕೆಗಳು ಲಭ್ಯ.  9,510 ಎಂಎಎಚ್‌ ಬ್ಯಾಟರಿ ಸಾಮರ್ಥ್ಯ ಹಾಗೂ ಇದರ ಚಾರ್ಜ್‌ಗೆ 67 ವ್ಯಾಟ್‌ನ ಸೂಪರ್‌ವೂಕ್ ಚಾರ್ಜಿಂಗ್ ಸೌಲಭ್ಯವಿದೆ. ಇದು ಕೃತಕ ಬುದ್ಧಿಮತ್ತೆಯನ್ನೂ ಹೊಂದಿದೆ ಎಂದು ಕಂಪನಿ ಹೇಳಿದೆ.

ಇದರೊಂದಿಗೆ ಒನ್‌ಪ್ಲಸ್‌ ಸ್ಟೈಲೊ 2 ಎಂಬ ಸ್ಟೈಲಸ್ ಅನ್ನೂ ಹಾಗೂ ಸ್ಮಾರ್ಟ್ ಕೀಬೋರ್ಡ್‌ ಹಾಗೂ ಫೋಲಿಯೊ ಕೇಸ್‌ ಅನ್ನೂ ನೀಡುತ್ತಿರುವು ಈ ಮಾದರಿಯ ವಿಶೇಷ. ಇದರ ಬೆಲೆ ₹39,999ರಿಂದ ಆರಂಭ.

ಒನ್‌ಪ್ಲಸ್ ವಾಚ್‌ 2ಆರ್‌

ಒನ್‌ಪ್ಲಸ್‌ ವಾಚ್‌ 2ಆರ್‌ ಕೂಡಾ ಇದೇ ವೇದಿಕೆಯಲ್ಲಿ ಬಿಡುಗಡೆಗೊಂಡಿತು. ಸ್ನಾಪ್‌ಡ್ರ್ಯಾಗನ್ ವೇರ್ ಡಬ್ಲೂ5ನೊಂದಿಗೆ ಬಿಇಎಸ್‌2700 ಹೆಚ್ಚುವರಿ ಲೋ ಪವರ್ ಚಿಪ್‌ ಅನ್ನು ಇದು ಹೊಂದಿದೆ. 1.43 ಇಂಚಿನ ಅಮೋಲೆಡ್‌ ಟಚ್‌ಸ್ಕ್ರೀನ್‌ ಇದರದ್ದಾಗಿದ್ದು, ಒಂದು ಸಾವಿರ ನಿಟ್ಸ್‌ನ ಪೀಕ್ ಬ್ರೈಟ್‌ನೆಸ್‌ ಅನ್ನು ಇದು ಹೊಂದಿದೆ.

ಸ್ಮಾರ್ಟ್‌ವಾಚ್‌ನಲ್ಲಿ 2ಜಿಬಿ ರ‍್ಯಾಮ್‌ ಹಾಗೂ 32ಜಿಬಿ ಆಂತರಿಕೆ ಸ್ಮೃತಿಕೋಶವನ್ನು ಇದು ಹೊಂದಿದೆ. ಇದು 100 ಗಂಟೆಗಳ ಬ್ಯಾಟರಿ ಲೈಫ್‌ ಹೊಂದಿದೆ. ಇದರ ಬೆಲೆಯನ್ನು ₹17,999 ಎಂದು ಕಂಪನಿ ಹೇಳಿದೆ.

ಒನ್‌ಪ್ಲಸ್ ನಾರ್ಡ್ ಬಡ್ಸ್ 3ಪ್ರೊ

ಒನ್‌ ಪ್ಲಸ್ ನಾರ್ಡ್‌ 3 ಪ್ರೊ ಬಡ್ಸ್‌ ಅನ್ನು ಇದೇ ವೇದಿಕೆಯಲ್ಲಿ ಪರಿಚಯಿಸಲಾಗಿದೆ. 49 ಡೆಸಿಬಲ್‌ ಸಕ್ರೀಯ ಧ್ವನಿಯನ್ನು ಇದು ರದ್ದುಪಡಿಸುವ (ಎಎನ್‌ಸಿ) ಸಾಮರ್ಥ್ಯ ಹೊಂದಿದೆ. 44 ಗಂಟೆಗಳ ಬ್ಯಾಟರಿ ಲೈಫ್ ಹೊಂದಿದ್ದು, ಸಾಫ್ಟ್ ಜೇಡ್ ಮತ್ತು ಸ್ಟಾರಿ ಬ್ಲಾಕ್ ಬಣ್ಣದಲ್ಲಿ ಲಭ್ಯ. ಇದರ ಬೆಲೆ ₹3,299 ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.