ಕಡಿಮೆ ಬೆಲೆಗೆ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಶಿಯೋಮಿ ಕಂಪನಿಯು ರೆಡ್‌ಮಿ ನೋಟ್ ಸರಣಿಯಲ್ಲಿ 9 ಪ್ರೊ ಮತ್ತು 9 ಪ್ರೊ ಮ್ಯಾಕ್ಸ್ ಎಂಬ ಎರಡು ಹೊಸ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಿದೆ. ಕೊರೊನಾದಿಂದಾಗಿ ಡಿಜಿಟಲ್ ಮಾಧ್ಯಮದ ಮೂಲಕ ಬಿಡುಗಡೆ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತಾದರೂ ಮಿ ಕಮ್ಯುನಿಟಿ ಮತ್ತು ಗ್ರಾಹಕರ ಸ್ಪಂದನೆಯಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ.
ರೆಡ್‌ಮಿ ನೋಟ್ 9 ಪ್ರೊ ರಿವ್ಯೂ ಮಾಡಿದಾಗ ಗುರುತಿಸಬಹುದಾದ ಕೆಲವು ಬದಲಾವಣೆಗಳು ಗಮನಕ್ಕೆ ಬಂದಿತು. ಡಾಟ್ ನಾಚ್ ಡಿಸ್‌ಪ್ಲೇ ಇದ್ದರೂ ಅಂಚಿಗೆ ತಾಕಿಸದೇ ಸ್ವಲ್ಪ ಅಂತರದಲ್ಲಿ ಕೂರಿಸಿರುವುದು ಫೋನ್‌ಗೆ ಹೊಸ ಲುಕ್ ನೀಡುತ್ತದೆ. ಅದರಲ್ಲಿಯೂ ಡಾರ್ಕ್ ಥೀಮ್ ಅಥವಾ ಡಾರ್ಕ್ ವಾಲ್‌ಪೇಪರ್ ಬಳಸಿದರೆ ಡಾಟ್ ನಾಚ್ ಡಿಸ್‌ಪ್ಲೇ ಅಂದ ಇನ್ನಷ್ಟು ಹೆಚ್ಚಾಗುತ್ತದೆ. 3ಡಿ ಕರ್ವ್ಡ್ ಗ್ಲಾಸ್ ಪ್ಯಾನಲ್ ಇರುವುದರಿಂದ ದೊಡ್ಡ ಸ್ಕ್ರೀನ್ ಆದರೂ ಹಿಡಿದುಕೊಳ್ಳಲು ಕಷ್ಟವಾಗುವುದಿಲ್ಲ. 6.66 ಇಂಚಿನ ಪರದೆ ಇದ್ದರೂ ಇದೇ ಪರದೆಯ ಗಾತ್ರದ ಬೇರೆ ಫೋನ್‌ಗಳಂತೆ ಒಂದು ಕೈಯಲ್ಲಿ ಟೈಪಿಸಲು ಕಷ್ಟ ಆಗುವುದಿಲ್ಲ.
ಗೊರಿಲ್ಲಾ ಗ್ಲಾಸ್ 5 ಬಳಸಿರುವುದರಿಂದ ಕೈಯಿಂದ ಜಾರಿ ಹೋಗುವ ಅಪಾಯ ಕಡಿಮೆ. 3.5ಎಂಎಂ ಹೆಡ್‌ಫೋನ್ ಜಾಕ್ ನೀಡಿರುವುದರಿಂದ ಸಿ–ಟೈಪ್ ಜಾಕ್‌ಗೆ ಕನೆಕ್ಟರ್ ಬಳಸುವ ರಗಳೆ ತಪ್ಪಿದೆ.
ಸಮಸ್ಯೆ
ಇದರಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪವರ್ ಬಟನ್‌ನಲ್ಲಿಯೇ ಇರಿಸಲಾಗಿದೆ. ತಕ್ಷಣಕ್ಕೆ ಅನ್‌ಲಾಕ್ ಆಗುತ್ತದೆಯಾದರೂ, ಈ ಆಯ್ಕೆ ಕಿರಿಕಿರಿ ಎನಿಸುತ್ತದೆ. ಬಲಗೈಯಲ್ಲಿ ಫೋನ್ ಹಿಡಿದುಕೊಂಡರೆ ನಮ್ಮ ಹೆಬ್ಬೆರಳು ಫೋನ್‌ನ ಪವರ್ ಬಟನ್ ಇರುವ ಜಾಗಕ್ಕೆ ಬರುತ್ತದೆ. ಫಿಂಗರ್‌ಪ್ರಿಂಟ್ ಅನ್‌ಲಾಕ್ ಅದರಲ್ಲಿಯೇ ಇರುವುದರಿಂದ ಫೋನ್ ಅನ್ನು ಸುಮ್ಮನೆ ಕೈಯಲ್ಲಿ ಹಿಡಿದುಕೊಂಡಿದ್ದಾಗಲೂ ಫೋನ್ ಅನ್‌ಲಾಕ್ ಅಗಿಬಿಡುತ್ತದೆ. ಬೇರೆ ಬೆರಳು ತಾಕಿದರೂ ವೈಬ್ರೇಟ್ ಆಗುತ್ತದೆ.
ಕ್ಯಾಮೆರಾ
ಕ್ಯಾಮೆರಾ ಕ್ಲಾರಿಟಿಯ ವಿಷಯದಲ್ಲಿ ಕಂಪನಿ ಸ್ವಲ್ಪವೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಗುಣಮಟ್ಟದಲ್ಲಿ ಸುಧಾರಣೆ ಮಾಡುತ್ತಲೇ ಇದೆ. ಬ್ಯೂಟಿಫೈಗಿಂತಲೂ ನ್ಯಾಚುರಲ್ ಟೋನ್‌ಗೆ ಆದ್ಯತೆ ನೀಡುತ್ತಿದೆ. ಲ್ಯಾಂಡ್‌ಸ್ಕೇಪ್ ಫೋಟೊಗಳು ಅಧ್ಭುತವಾಗಿ ಸೆರೆಯಾಗುತ್ತದೆ. ಮ್ಯಾಕ್ರೊ ಲೆಕ್ಸ್ ಆಯ್ಕೆಯು 30 ಸಾವಿರದಿಂದ 50 ಸಾವಿರದ ಒಳಗಿನ ಬೆಲೆಯ ಫೋನ್‌ಗಳ ಗುಣಮಟ್ಟಕ್ಕೆ ಸರಿಸಮನಾಗಿದೆ.
ಗೇಮಿಂಗ್ ವಿಷಯದಲ್ಲಿ ಪ್ರೀಮಿಯಂ ಫೋನ್‌ಗೆ ಹೋಲಿಸಲು ಸಾಧ್ಯವಾಗದೇ ಇದ್ದರೂ ದೊಡ್ಡ ಪರದೆ ಮತ್ತು ಸ್ನ್ಯಾಪ್‌ಡ್ರ್ಯಾಗನ್ 720ಜಿ ಇರುವುದರಿಂದ ಉತ್ತಮ ಅನುಭವಕ್ಕೇನೂ ಕೊರತೆ ಬೀಳದು.
ಬ್ಯಾಟರಿ
5020ಎಂಎಎಚ್ ಬ್ಯಾಟರಿ ಇದೆ. ಕರೆ, ವಾಟ್ಸ್‌ಆ್ಯಪ್ ಜತಗೆ ಆನ್‌ಲೈನ್ ಸರ್ಚ್ ಮಾಡಿದರೆ ಮೂರು ದಿನಗಳವರೆಗೆ ಬ್ಯಾಟರಿ ಬಾಳಿಕೆ ಬರಲಿದೆ. ವಿಡಿಯೊ, ಯುಟ್ಯೂಬ್, ಬಳಸಿದರೆ ಒಂದೂವರೆ ದಿನಕ್ಕಂತೂ ಯಾವುದೇ ಸಮಸ್ಯೆ ಆಗುವುದಿಲ್ಲ. ಡಾರ್ಕ್ ಮೋಡ್, ಬ್ಯಾಟರಿ ಸೇರವ್ ಆಯ್ಕೆಗಳನ್ನು ಸಕ್ರಿಯಗೊಳಿಸಿದರೆ ಬ್ಯಾಟರಿ ಬಾಳಿಕೆ ಅವಧಿ ಇನ್ನಷ್ಟು ಹೆಚ್ಚಾಗುತ್ತದೆ.
ಚಾರ್ಜಿಂಗ್
18w ಫಾಸ್ಟ್ ಚಾರ್ಜರ್ ನೀಡಲಾಗಿದೆ. ಬ್ಯಾಟರಿ ಪೂರ್ತಿ ಚಾರ್ಜ್ ಆಗಲು 1 ಗಂಟೆ 45 ನಿಮಿಷ ಬೇಕು. 5020 ಎಂಎಎಚ್ ಬ್ಯಾಟರಿಗೆ 33w ಫಾಸ್ಟ್ ಚಾರ್ಜರ್ ನೀಡಿದ್ದರೆ ಸೂಕ್ತವಾಗುತ್ತಿತ್ತು.
ಅನಗತ್ಯ ಆ್ಯಪ್‌ಗಳು
ಹ್ಯಾಂಡ್‌ಸೆಟ್‌ನಲ್ಲಿ ಅನಗತ್ಯವಾದ ಹಲವು ಆ್ಯಪ್‌ಗಳು ಪ್ರಿ–ಇನ್‌ಸ್ಟಾಲ್ ಆಗಿವೆ. ಗೆಟ್ ಆ್ಯಪ್ಸ್, ಮಿ ಬ್ರೌಸರ್, ಮಿ ಕ್ರೆಡಿಟ್ ಹೀಗೆ ಇನ್ನೂ ಕೆಲವು. ಇವುಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಸಮಯ ವ್ಯರ್ಥವಾಗುತ್ತದೆ.
9ಪ್ರೊ ಡಿಸ್‌ಪ್ಲೇ;6.67 ಎಫ್‌ಎಚ್‌ಡಿ+ ಡಾಟ್ ಡಿಸ್‌ಪ್ಲೇ
ಪ್ರೊಸೆಸರ್; ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 720ಜಿ
ಒಎಸ್: ಆಂಡ್ರಾಯ್ಡ್ 10 ಆಧಾರಿತ MIUI 11
ಸಂಗ್ರಹಣಾ ಸಾಮರ್ಥ್ಯ;4/64, 6ಜಿಬಿ/128ಜಿಬಿ. 512 ಜಿಬಿವರೆಗೆ ವಿಸ್ತರಣೆ ಸಾಧ್ಯ
ಕ್ಯಾಮೆರಾ; 48ಎಂಪಿ ಕ್ವಾಡ್ ಕ್ಯಾಮೆರಾ
ಸೆಲ್ಫಿ;16ಎಂಪಿ ಇನ್ ಡಿಸ್‌ಪ್ಲೇ
ಬ್ಯಾಟರಿ;5020ಎಂಎಎಚ್. ಟೈಪ್ ಸಿ ಚಾರ್ಜರ್
4GB + 64GB–₹13,999
6GB + 128GB –₹16,999
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.