ADVERTISEMENT

ಬಾಹ್ಯಾಕಾಶಯಾನದಲ್ಲಿ ಹೊಸ ಶಕೆ: ಐದು ದಶಕಗಳಲ್ಲೇ ಅತಿ ದೂರಕ್ಕೆ ಪ್ರಯಾಣ

ಅಂತರಿಕ್ಷದಲ್ಲಿ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ

ಸೂರ್ಯನಾರಾಯಣ ವಿ.
Published 17 ಸೆಪ್ಟೆಂಬರ್ 2024, 23:30 IST
Last Updated 17 ಸೆಪ್ಟೆಂಬರ್ 2024, 23:30 IST
ಬಾಹ್ಯಾಕಾಶ ನಡಿಗೆಗಾಗಿ ಬಾಹ್ಯಾಕಾಶ ಕೋಶ‌ದಿಂದ ಜೇರ್ಡ್‌ ಐಸಾಕ್‌ಮನ್‌ ಹೊರ ಬಂದ ಸಂದರ್ಭದ ಚಿತ್ರ
ಬಾಹ್ಯಾಕಾಶ ನಡಿಗೆಗಾಗಿ ಬಾಹ್ಯಾಕಾಶ ಕೋಶ‌ದಿಂದ ಜೇರ್ಡ್‌ ಐಸಾಕ್‌ಮನ್‌ ಹೊರ ಬಂದ ಸಂದರ್ಭದ ಚಿತ್ರ   

ಬಾಹ್ಯಾಕಾಶ ಅಧ್ಯಯನ ಕ್ಷೇತ್ರದಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗಿದೆ. ಎಲಾನ್‌ ಮಸ್ಕ್‌ ಒಡೆತನದ  ಸ್ಪೇಸ್‌ಎಕ್ಸ್‌ ಕಂಪನಿಯ ‘ರೆಸಿಲನ್ಸ್‌’ ಎಂಬ ಹೆಸರಿನ ಡ್ರ್ಯಾಗನ್‌ ಬಾಹ್ಯಾಕಾಶನೌಕೆ (ಅಥವಾ ಬಾಹ್ಯಾಕಾಶಕೋಶ–dragon spacecraft/spacecapsule) ನಾಲ್ಕು ದಿನಗಳ ಹಿಂದೆ ಐದು ದಿನಗಳ ಬಾಹ್ಯಾಕಾಶಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭೂಮಿಗೆ ಮರಳಿದೆ. ‘ಪೊಲಾರಿಸ್‌ ಡಾನ್‌ ಮಿಷನ್‌’ ಹೆಸರಿನಲ್ಲಿ ನಡೆದ ಅಂತರಿಕ್ಷ ಪ್ರಯಾಣದಲ್ಲಿ ನಾಲ್ವರು ಗಗನಯಾತ್ರಿಗಳು ಭಾಗವಹಿಸಿದ್ದರು. ವಿಶೇಷ ಎಂದರೆ, ಇವರು ಯಾರೂ ವೃತ್ತಿಪರ ಗಗನಯಾನಿಗಳಲ್ಲ! ಅಂದರೆ, ಸರ್ಕಾರಿ ಸ್ವಾಮ್ಯದ ಅಥವಾ ಸರ್ಕಾರದ ಅನುದಾನದಲ್ಲಿ ಅಧ್ಯಯನ ನಡೆಸುವ (ಉದಾಹರಣೆಗೆ ನಾಸಾ) ಬಾಹ್ಯಾಕಾಶ ಸಂಸ್ಥೆಗಳಿಗೆ ಸೇರಿದ ಅಥವಾ ತರಬೇತಿ ‌ಪಡೆದ ಗಗನಯಾತ್ರಿಗಳಲ್ಲ. ನಾಲ್ವರಲ್ಲಿ ಒಬ್ಬರು ದೊಡ್ಡ ಉದ್ಯಮಿ, ಮತ್ತೊಬ್ಬರು ಅಮೆರಿಕ ವಾಯುಪಡೆಯ ನಿವೃತ್ತ ಪೈಲಟ್‌. ಇನ್ನಿಬ್ಬರು ಸ್ಪೇಸ್‌ಎಕ್ಸ್‌ ಕಂಪನಿಯ ಎಂಜಿನಿಯರ್‌ಗಳು.‌

ಆ ಉದ್ಯಮಿ, ಶತಕೋಟ್ಯಧಿಪತಿ ಶಿಫ್ಟ್‌4 ಪೇಮೆಂಟ್ಸ್‌ ಸಂಸ್ಥಾಪಕ ಜೇರ್ಡ್‌ ಐಸಾಕ್‌ಮನ್‌. ಅವರು ಈ ಬಾಹ್ಯಾಕಾಶ ಯಾನದ ಕಮಾಂಡರ್‌ ಆಗಿದ್ದರು. ಮತ್ತೊಬ್ಬ ಯಾನಿ ಅಮೆರಿಕ ವಾಯುಪಡೆಯ ನಿವೃತ್ತ ಪೈಲಟ್‌ ಸ್ಕಾಟ್‌ ಪೊಟೀಟ್‌. ಇವರಿಬ್ಬರಿಗೆ ಜೊತೆಯಾದವರು ಸ್ಪೇಸ್‌ಎಕ್ಸ್‌ನ ಇಬ್ಬರು ಮಹಿಳಾ ಎಂಜಿನಿಯರ್‌ಗಳಾದ ಸಾರಾ ಗಿಲಿಸ್‌ ಮತ್ತು ಅನ್ನಾ ಮೆನನ್‌. 

ಬಾಹ್ಯಾಕಾಶ ಕೋಶವು ಅಂತರಿಕ್ಷದ ನಿರ್ದಿಷ್ಟ ಕಕ್ಷೆಯಲ್ಲಿ ಸುತ್ತುತ್ತಿರುವಾಗ ನಾಲ್ವರು ಗಗನಯಾತ್ರಿಗಳ ಪೈಕಿ ಐಸಾಕ್‌ಮನ್‌ ಮತ್ತು ಸಾರಾ ಗಿಲಿಸ್‌ ಅವರು ಕೋಶದಿಂದ ಹೊರಬಂದು ಬಾಹ್ಯಾಕಾಶ ನಡಿಗೆಯನ್ನು ಯಶಸ್ವಿಯಾಗಿ ನಡೆಸಿದರು. ಈ ಯಾನವು ಸೃಷ್ಟಿಸಿರುವ ಮೊದಲ ಇತಿಹಾಸ ಇದು. ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ನಾಗರಿಕರು (ಸಿವಿಲಿಯನ್‌) ನಡೆಸಿದ ಮೊದಲ ಖಾಸಗಿ ಅಂತರಿಕ್ಷ ನಡಿಗೆ ಇದು.  

ADVERTISEMENT

ಪ್ರಯಾಣದ ದೂರದಲ್ಲಿ ದಾಖಲೆ

ಈ ಪ್ರಯಾಣ ಬರೆದ ಇನ್ನೊಂದು ದಾಖಲೆ ಎಂದರೆ, ಐದು ದಶಕಗಳಲ್ಲೇ ಬಾಹ್ಯಾಕಾಶದಲ್ಲಿ ಅತ್ಯಂತ ಎತ್ತರಕ್ಕೆ ಮಾನವರನ್ನು ಕರೆದುಕೊಂಡು ಹೋಗಿದ್ದು. 1972ರಲ್ಲಿ ನಾಸಾದ ಅಪೊಲೊ ಯೋಜನೆಯ ನಂತರ ಯಾರು ಕೂಡ ಬಾಹ್ಯಾಕಾಶದಲ್ಲಿ ಇಷ್ಟೊಂದು ಎತ್ತರಕ್ಕೆ ಪ್ರಯಾಣ ಬೆಳೆಸಿಲ್ಲ.

ಸದ್ಯ ಬಾಹ್ಯಾಕಾಶದಲ್ಲಿ ಕಾರ್ಯಾಚರಿಸುತ್ತಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ಭೂಮಿಯಿಂದ 408 ಕಿ.ಮೀ ದೂರ ಇದೆ. ಆಕಾಶಕಾಯಗಳ ಮೇಲೆ ನಿಗಾ ಇಡುತ್ತಿರುವ ಹಬಲ್‌ ದೂರದರ್ಶಕ ಅಂದಾಜು 520 ಕಿ.ಮೀ ದೂರದಲ್ಲಿದೆ. 

ನಾಲ್ವರು ಗಗನಯಾತ್ರಿಗಳನ್ನು ಹೊತ್ತೊಯ್ದ ಡ್ರ್ಯಾಗನ್‌ ಬಾಹ್ಯಾಕಾಶ ಕೋಶವು 1,400 ಕಿ.ಮೀ ದೂರದಷ್ಟು ಎತ್ತರಕ್ಕೆ ಹೋಗಿ ಮರಳಿದೆ. 1972ರಲ್ಲಿ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸಿದ ನಂತರ ನಾಸಾ ಕೂಡ ಇಷ್ಟು ಬಾಹ್ಯಾಕಾಶದಲ್ಲಿ ಇಷ್ಟು ದೂರಕ್ಕೆ ಮಾನವವರನ್ನು ಕಳುಹಿಸಿಲ್ಲ. ಇದಕ್ಕೂ ಮೊದಲು, 1966ರಲ್ಲಿ ‘ಜೆಮಿನಿ–XI’ ಯೋಜನೆಯ ಅಡಿಯಲ್ಲಿ ಚಾರ್ಲ್ಸ್‌ ಕಾನ್‌ರಾಡ್‌ ಮತ್ತು ರಿಚರ್ಡ್‌ ಗೋರ್ಡನ್‌ ಎಂಬ ಇಬ್ಬರು ಗಗನಯಾನಿಗಳನ್ನು 1,364 ಕಿ.ಮೀ ಎತ್ತರಕ್ಕೆ ಕಳುಹಿಸಿತ್ತು. ಇವರಿಬ್ಬರು ಮೂರು ದಿನಗಳ ಕಾಲ ಅಂತರಿಕ್ಷದಲ್ಲಿದ್ದರು.    

ಜೇರ್ಡ್‌ ಐಸಾಕ್‌ಮನ್‌ ಮತ್ತು ಸಾರಾ ಗಿಲಿಸ್‌ ಅವರು ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದು, 740 ಕಿ.ಮೀ ಎತ್ತರದಲ್ಲಿ. ಮೊದಲು ಬಾಹ್ಯಾಕಾಶ ಕೋಶದಿಂದ ಹೊರ ಬಂದ ಐಸಾಕ್‌ಮನ್‌ ಕೆಲವು ನಿಮಿಷಗಳ ಕಾಲ ಸಂಕೀರ್ಣವಾದಂತಹ ಬಾಹ್ಯಾಕಾಶ ನಡಿಗೆ ಕೈಗೊಂಡರು. ಅವರು ಕೋಶಕ್ಕೆ ಮರಳಿದ ನಂತರ ಸಾರಾ ಗಿಲಿಸ್‌ ಅವರು ಹೊರಗಡೆ ಬಂದು ಕೆಲ ನಿಮಿಷ ಬಾಹ್ಯಾಕಾಶನಡಿಗೆ ಕೈಗೊಂಡರು. ಸ್ಪೇಸ್‌ ಎಕ್ಸ್‌ ಅಭಿವೃದ್ಧಿ ಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಬಾಹ್ಯಾಕಾಶ ಧಿರಿಸನ್ನು ಇಬ್ಬರೂ ಪರೀಕ್ಷೆಗೆ ಒಳಪಡಿಸಿದರು.‌ ಬಾಹ್ಯಾಕಾಶ ನಡಿಗೆಯನ್ನು ಸ್ಪೇಸ್‌ಎಕ್ಸ್‌ ನೇರಪ್ರಸಾರ ಕೂಡ ಮಾಡಿತ್ತು. 

ಐದು ದಿನಗಳ ಬಾಹ್ಯಾಕಾಶ ಯಾನದಲ್ಲಿ ನಾಲ್ವರು ಗಗನಯಾತ್ರಿಗಳು ಮಾನವನ ಆರೋಗ್ಯದ ಮೇಲೆ ಬಾಹ್ಯಾಕಾಶ ಯಾನಗಳು ಬೀರುವ ಪರಿಣಾಮಗಳು, ಅತ್ಯಾಧುನಿಕ ಬಾಹ್ಯಾಕಾಶ ಧಿರಿಸಿನ ಸಾಮರ್ಥ್ಯ ಸೇರಿದಂತೆ ವಿವಿಧ ರೀತಿಯ 40 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ಡ್ರ್ಯಾಗನ್‌ ಬಾಹ್ಯಾಕಾಶ ನೌಕೆ ಮತ್ತು ಸ್ಪೇಸ್‌ ಎಕ್ಸ್‌ನ ಸ್ಟಾರ್‌ಲಿಂಗ್‌ ಉಪಗ್ರಹದ ನಡುವೆ ಅಂತರಉಪಗ್ರಹ ಲೇಸರ್‌ ಸಂವಹನ ವ್ಯವಸ್ಥೆಯನ್ನೂ ಅವರು ಪರಿಶೀಲನೆಗೆ ಒಳಪಡಿಸಿದ್ದಾರೆ. ‌

ಭೂಮಿಗೆ ಯಶಸ್ವಿಯಾಗಿ ಮರಳಿದ ಸ್ಪೇಸ್‌ಎಕ್ಸ್‌ ‘ರೆಸಿಲನ್ಸ್‌ ಡ್ರ್ಯಾಗನ್‌’
ಡ್ರ್ಯಾಗನ್‌ ಬಾಹ್ಯಾಕಾಶಕೋಶದಲ್ಲಿ ಪ್ರಯಾಣ ಬೆಳೆಸಿದ್ದ ನಾಲ್ವರು ಗಗನಯಾತ್ರಿಗಳು  –ಸ್ಪೇಸ್‌ಎಕ್ಸ್‌ ವಿಡಿಯೊ ಚಿತ್ರ

ಯೋಜನೆಯ ಉದ್ದೇಶವೇನು?

ಮಂಗಳಗ್ರಹಕ್ಕೆ ಮಾನವರನ್ನು ಕಳುಹಿಸುವ ಮಹತ್ವಾಕಾಂಕ್ಷೆಯನ್ನು ನಾಸಾ ಸೇರಿದಂತೆ ವಿವಿಧ ಬಾಹ್ಯಾಕಾಶ ಸಂಸ್ಥೆಗಳು ಹೊಂದಿವೆ. ಎಲಾನ್‌ ಮಸ್ಕ್‌ ಅವರು ಕೂಡ ಇಂತಹ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಅವರ ಕಂಪನಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ತೊಡಗಿದೆ. ಈ ಪ್ರಯತ್ನದ ಭಾಗವಾಗಿ ಸ್ಪೇಸ್‌ಎಕ್ಸ್‌ ಮತ್ತು ಐಸಾಕ್‌ಮ್ಯಾನ್‌ ಅವರು ಪರಸ್ಪರ ಸಹಭಾಗಿತ್ವದಲ್ಲಿ ಮೂರು ಪೊಲಾರಿಸ್‌ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಮೊದಲನೆಯದು ‘ಪೊಲಾರಿಸ್‌ ಡಾನ್‌ ಮಿಷನ್‌’. ಅದೀಗ ಯಶಸ್ವಿಯಾಗಿ ಕೈಗೂಡಿದೆ. 

ಸ್ಪೇಸ್‌ಎಕ್ಸ್‌ ಕಂಪನಿಯು ‘ಸ್ಟಾರ್‌ಶಿಪ್‌’ ಎಂಬ ಅತಿ ಭಾರದಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಅತ್ಯಾಧುನಿಕ ರಾಕೆಟ್‌ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು ಅದರಲ್ಲಿ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸುವ ಯೋಜನೆಯನ್ನು ಹಾಕಿಕೊಂಡಿದೆ. 

ಇದಿಷ್ಟೇ ಅಲ್ಲ ‘ಪೊಲಾರಿಸ್‌ ಡಾನ್‌ ಮಿಷನ್‌’ ಬಾಹ್ಯಾಕಾಶ ಉದ್ದಿಮೆ ಕ್ಷೇತ್ರವನ್ನು ಹೊಸ ಅವಕಾಶಗಳಿಗೆ ತೆರೆಯುವಂತೆ ಮಾಡಿದೆ. ಅಂತರಿಕ್ಷ ಪ್ರವಾಸದ ಬೆಳವಣಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಧ್ಯಯನ ನಡೆಸಲು ಖಾಸಗಿ ಸಂಸ್ಥೆಗಳಿಗೆ ಇನ್ನಷ್ಟು ಅವಕಾಶ ಕಲ್ಪಿಸಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.