ADVERTISEMENT

Tech Summit | ಮುಂದಿನ ದಶಕ ಜೈವಿಕ ಎಂಜಿನಿಯರಿಂಗ್‌ನ ಕಾಲ: ಕಿರಣ್ ಮಜುಂದಾರ್ ಷಾ

ದೇಶದ ಪ್ರಗತಿಯ ದಿಕ್ಕು ಬದಲಿಸಿರುವ ತಂತ್ರಜ್ಞಾನ– ಕಿರಣ್ ಮಜುಂದಾರ್ ಷಾ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 20:08 IST
Last Updated 19 ನವೆಂಬರ್ 2024, 20:08 IST
ಕಿರಣ್‌ ಮಜುಂದಾರ್ ಷಾ
ಕಿರಣ್‌ ಮಜುಂದಾರ್ ಷಾ   

ಬೆಂಗಳೂರು: ‘ಈಗ ದೇಶದ ತಂತ್ರಜ್ಞಾನ ಕ್ಷೇತ್ರವನ್ನು ಕೃತಕ ಬುದ್ಧಿಮತೆ (ಎಐ) ಮುನ್ನಡೆಸುತ್ತಿದೆ. ಆದರೆ ಮುಂದಿನ ದಶಕಗಳಲ್ಲಿ ಜೈವಿಕ ಎಂಜಿನಿಯರಿಂಗ್‌ ದೇಶದ ಪ್ರಗತಿಯ ದಿಕ್ಕನ್ನು ಬದಲಿಸಲಿದೆ’ ಎಂದು ಬಯೋಕಾನ್‌ ಅಧ್ಯಕ್ಷೆ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ವಿಷನ್‌ ಗ್ರೂಪ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ಹೇಳಿದರು.

ಬೆಂಗಳೂರು ಟೆಕ್‌ ಶೃಂಗದ ಭಾಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ‘ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯ ತಂತ್ರಜ್ಞಾನ’ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಜೈವಿಕ ಎಂಜಿನಿಯರಿಂಗ್‌ ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗ. ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ, ಆಹಾರ ಪದಾರ್ಥಗಳ ಉತ್ಪಾದನೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಲು ಇದು ನೆರವಾಗುತ್ತದೆ’ ಎಂದರು.

ಜೈವಿಕ ಎಂಜಿನಿಯರಿಂಗ್‌ನಿಂದ ಜನ ಸಾಮಾನ್ಯರಿಗೆ ನೇರವಾಗಿ ಏನು ಉಪಯೋಗವಾಗುತ್ತದೆ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲಾನ್‌ ಮಸ್ಕ್‌ ಅವರ ಕಂಪನಿ ನ್ಯೂರೊ ಚಿಪ್‌ ಅನ್ನು ಅಭಿವೃದ್ಧಿಪಡಿಸಿದೆ. ಅದು ಜೈವಿಕ ಎಂಜಿನಿಯರಿಂಗ್‌ಗೆ ಉತ್ತಮ ಉದಾಹರಣೆ. ಅದನ್ನು ಮಾನವನ ಮಿದುಳಿನಲ್ಲಿ ಅಳವಡಿಸಲಾಗುತ್ತದೆ. ಸಾಮಾನ್ಯ ಮನುಷ್ಯನ ಮಿದುಳು ಸೆಕೆಂಡ್‌ ಒಂದಕ್ಕೆ ಒಂದು ಬೈಟ್‌ನಷ್ಟು ದತ್ತಾಂಶವನ್ನು ನಿರ್ವಹಿಸುತ್ತದೆ. ಈ ಚಿಪ್‌ ಅಳವಡಿಸಿದಾಗ ಮಿದುಳಿನ ಸಾಮರ್ಥ್ಯ, ಪ್ರತಿ ಸೆಕೆಂಡ್‌ಗೆ 100 ಬೈಟ್‌ಗಳ ದತ್ತಾಂಶ ನಿರ್ವಹಣೆ ಮಾಡುವಷ್ಟು ವೃದ್ಧಿಸುತ್ತದೆ’ ಎಂದು ಉದಾಹರಿಸಿದರು.

ADVERTISEMENT

ಮುಂದುವರೆದು, ‘ನಿಧಾನ ಗತಿಯ ಕಲಿಕೆ ಇರುವ ಮಕ್ಕಳು ಮತ್ತು ವ್ಯಕ್ತಿಗಳು, ಮರೆವಿನ ಸಮಸ್ಯೆ ಇರುವವರಿಗೆ ಅಂತಹ ಚಿಪ್‌ ಅಳವಡಿಸಿದರೆ, ಅವರ ಸಮಸ್ಯೆಗಳನ್ನು ಪರಿಹರಿಸಬಹುದು’ ಎಂದರು.

ಕಸ ನಿರ್ವಹಣೆ, ಕಸ ಕರಗಿಸುವ ಸೂಕ್ಷ್ಮಾಣು ಜೀವಿಗಳ ಅಭಿವೃದ್ಧಿ, ಜೈವಿಕ ತಂತ್ರಜ್ಞಾನ ಆಧಾರಿತ ಬ್ಯಾಟರಿಗಳ ಅಭಿವೃದ್ಧಿಯಲ್ಲಿ ಜೈವಿಕ ಎಂಜಿನಿಯರಿಂಗ್‌ನ ಪಾತ್ರಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಭಿಕರು ಚರ್ಚಿಸಿದರು.

ಭಾರತವು ಮಧ್ಯಮ ಆದಾಯದ ದೇಶಗಳ ಗುಂಪಿನಿಂದ ಮೇಲಕ್ಕೆ ಏರಲು ಜೈವಿಕ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಒತ್ತು ನೀಡುವುದು ಅತ್ಯಗತ್ಯ. ಕೇಂದ್ರ ಸರ್ಕಾರ ಆ ಕೆಲಸ ಮಾಡುತ್ತಿದೆ
ರಾಜೇಶ್‌. ಎಸ್‌ ಗೋಖಲೆ, ಕಾರ್ಯದರ್ಶಿ, ಕೇಂದ್ರ ಜೈವಿಕ ತಂತ್ರಜ್ಞಾನ ಸಚಿವಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.