ಎಮ್ಮೆ ಖರೀದಿ ಮಾಡುವುದಕ್ಕೆ ಹೋದರೆ ಹತ್ತಾರು ಸಾವಿರ ಎಮ್ಮೆ ಖರೀದಿ ಮಾಡಿದ ನಂತರ ಅದಕ್ಕೊಂದು ದಾಬು/ಹಗ್ಗವನ್ನು ಎಮ್ಮೆ ಮಾಲೀಕ ಉಚಿತವಾಗಿ ಕೊಡುವುದು ಅತ್ಯಂತ ಸಾಮಾನ್ಯ. ಕೆಲವು ಕಂಜೂಸು ವ್ಯಾಪಾರಸ್ಥರು ಅದಕ್ಕೂ ಕ್ಯಾತೆ ತೆಗೆದು, ದಾಬು ನೀವೇ ತರಬೇಕು ನಾವು ಎಮ್ಮೆ ಮಾತ್ರ ಕೊಡುವುದು ಎನ್ನುವವರಿದ್ದಾರೆ! ಇದಕ್ಕೆ ನಾವು ಆ ಮನುಷ್ಯನನ್ನು ‘ಕಂಜೂಸು ಬುದ್ಧಿಯವ’ ಎಂದು ಹೀಗಳೆದು ಸುಮ್ಮನೆ ಬರುತ್ತೇವೆ.
ಆದರೆ, ಹೀಗೆ ದಾಬು ಕೊಡದೇ ಇರುವುದೇ ನಿಜವಾದ ವ್ಯಾಪಾರ ಎಂಬಂತಹ ವಾತಾವರಣ ಸ್ಮಾರ್ಟ್‌ಫೋನ್ ಮಾರ್ಕೆಟ್‌ನಲ್ಲಿ ನಿರ್ಮಾಣವಾಗಿದೆ. ಇಲ್ಲಿ ‘ದಾಬು’ ಎಂದರೆ ಚಾರ್ಜಿಂಗ್ ಕೇಬಲ್! ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟ ಸಮಯದಲ್ಲಿ ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್ ಅನ್ನು ಸ್ಮಾರ್ಟ್‌ಫೋನ್ ಕಂಪನಿಗಳು ಕೊಡುತ್ತಿದ್ದವು. ಈಗಲೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುವ ಕಂಪನಿಗಳು ಚಾರ್ಜಿಂಗ್ ಕೇಬಲ್, ಅದರ ಜೊತೆಗೆ ಅಡಾಪ್ಟರ್ ಕೊಡುತ್ತಿವೆ. ಆದರೆ, ಯುರೋಪಿಯನ್ ಯೂನಿಯನ್ ಇತ್ತೀಚೆಗೆ ಮಾಡಿಕೊಂಡ ಒಪ್ಪಂದ ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುತ್ತದೆ.
2024ರ ವೇಳೆಗೆ ಎಲ್ಲ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಕ್ಯಾಮೆರಾಗಳು ಹಾಗೂ ಸಣ್ಣ ಸಾಧನಗಳೆಲ್ಲವೂ ಯುಎಸ್‌ಬಿ ಸಿ ಟೈಪ್ ಚಾರ್ಜಿಂಗ್ ಪೋರ್ಟ್ ಅನ್ನೇ ಬಳಸಬೇಕು ಎಂಬ ಒಮ್ಮತಕ್ಕೆ ಬಂದಿದೆ. ಅಂದರೆ, ಎಲ್ಲ ಸ್ಮಾರ್ಟ್‌ಫೋನ್ ಕಂಪನಿಗಳೂ ತಮ್ಮ ಸ್ಮಾರ್ಟ್‌ಫೋನ್‌ಗಳ ಚಾರ್ಜಿಂಗ್‌ಗೆ ಯುಎಸ್‌ಬಿ ಸಿ ಟೈಪ್ ಪೋರ್ಟ್ ಒದಗಿಸಬೇಕು. ಸದ್ಯದ ಮಟ್ಟಿಗೆ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಇದೇ ವಿಧಾನವನ್ನು ಬಳಸುತ್ತಿವೆ. ಆದರೆ, ಇದರಿಂದ ತೊಂದರೆಯಾಗುವುದು ಆ್ಯಪಲ್‌ಗೆ ಮಾತ್ರ. ಸದ್ಯ ಆ್ಯಪಲ್ ತನ್ನ ಐಫೋನ್‌ಗೆ ಲೈಟನಿಂಗ್ ಚಾರ್ಜಿಂಗ್ ಪೋರ್ಟ್ ಬಳಸುತ್ತಿದೆ. 2024ರ ನಂತರ ಮಾರುಕಟ್ಟೆಗೆ ಬರಲಿರುವ ಐಫೋನ್‌ಗಳು ಲೈಟನಿಂಗ್ ಪೋರ್ಟ್ ಬದಲಿಗೆ ಯುಎಸ್‌ಬಿ ಸಿ ಟೈಪ್ ಪೋರ್ಟ್ ಬಳಸಬೇಕಿದೆ.
ಇದು ಮೇಲ್ನೋಟಕ್ಕೆ ಕೇವಲ ಐಫೋನ್‌ಗೆ ಅನ್ವಯಿಸುವ ನಿಯಮ ಎನ್ನಬಹುದು. ಆದರೆ, ಇದರಿಂದ ಹಲವು ಮಹತ್ವದ ಬದಲಾವಣೆಗಳು ಇನ್ನು ಕೆಲವೇ ವರ್ಷಗಳಲ್ಲಿ ಕಾಣಿಸಿಕೊಳ್ಳಲಿದೆ. ಈ ಬದಲಾವಣೆ ಕೇವಲ ಯುರೋಪಿಯನ್ ಯೂನಿಯನ್ ಮಾರುಕಟ್ಟೆಯಲ್ಲಿ ಆಗುವುದಿಲ್ಲ. ಬದಲಿಗೆ ಇಡೀ ವಿಶ್ವದ ಮಾರುಕಟ್ಟೆಯಲ್ಲಿ ಆಗಲಿದೆ. ಏಕೆಂದರೆ, ಒಂದು ಡಿವೈಸ್‌ಗೆ ಯುರೋಪ್‌ನಲ್ಲಿ ಒಂದು ಚಾರ್ಜಿಂಗ್ ಪೋರ್ಟನ್ನೂ ಇತರ ದೇಶಗಳಲ್ಲಿ ಇನ್ನೊಂದು ಚಾರ್ಜಿಂಗ್ ಪೋರ್ಟನ್ನೂ ಕಂಪನಿ ಕೊಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಈ ಬದಲಾವಣೆ ಕೇವಲ ಸ್ಮಾರ್ಟ್‌ಫೋನ್‌ಗೆ ಮಾತ್ರವಲ್ಲ. ಇದರಿಂದ ಲ್ಯಾಪ್‌ಟಾಪ್‌ಗಳು, ಇ-ರೀಡರ್‌ಗಳು, ಇಯರ್‌ಬಡ್‌ಗಳು, ಕೀಬೋರ್ಡ್‌ಗಳು, ಮೌಸ್, ಪೋರ್ಟಬಲ್ ನ್ಯಾವಿಗೇಶನ್ ಸಾಧನಗಳು, ಹೆಡ್‌ಫೋನ್‌ಗಳು, ಹೆಡ್‌ಸೆಟ್‌ಗಳು, ವೀಡಿಯೋಗೇಮ್ ಕನ್ಸೋಲ್‌ಗಳು, ಪೋರ್ಟಬಲ್ ಸ್ಪೀಕರ್‌ಗಳು ಸೇರಿದಂತೆ ಬಹುತೇಕ ಎಲ್ಲ ಸ್ಮಾರ್ಟ್ ಸಾಧನಗಳಿಗೂ ಅನ್ವಯಿಸುತ್ತವೆ.
ಪ್ರೇಮವೋ ಮೋಹವೋ?
ಮೇಲ್ನೋಟಕ್ಕೆ ಇದು ಕಂಪನಿಗಳು ತಮ್ಮ ಅನುಕೂಲಕ್ಕೆ ಮಾಡಿಕೊಂಡ ಬದಲಾವಣೆ ಎಂಬಂತೆ ಕಾಣಿಸುತ್ತದೆ. ಆದರೆ, ವಾಸ್ತವವಾಗಿ ಇದು ಪರಿಸರಸ್ನೇಹಿ ಕ್ರಮವೂ ಹೌದು. ಬಹುತೇಕ ಮನೆಗಳಲ್ಲಿ ಈಗ ಕನಿಷ್ಠ ಐದಾರು ರೀತಿಯ ಚಾರ್ಜಿಂಗ್ ಕೇಬಲ್‌ಗಳು ಬಿದ್ದಿರುತ್ತವೆ. ಒಂದೊಂದು ಸಾಧನಕ್ಕೂ ಒಂದೊಂದು ರೀತಿಯ ಚಾರ್ಜಿಂಗ್ ಕೇಬಲ್‌ಗಳಿವೆ. ಈಗಲೂ ಕಂಪ್ಯೂಟರ್ ಮೌಸ್‌ಗಳು ಯುಎಸ್‌ಬಿ ಬಿ ಟೈಪ್ ಕೇಬಲ್‌ಗಳನ್ನೇ ಬಳಸುತ್ತವೆ. ಕ್ಯಾಮೆರಾಗಳು ಯುಎಸ್‌ಬಿ ಬಿ ಟೈಪ್ ಬಳಸುತ್ತವೆ. ಇನ್ನು ಶೇವಿಂಗ್ ಸಾಧನಗಳು ಹಾಗೂ ಇತರ ಸಾಧನಗಳ ಚಾರ್ಜಿಂಗ್‌ಗೆ ಒಂದೊಂದು ಕಂಪನಿ ಒಂದೊಂದು ವಿಧದ ಪೋರ್ಟ್ ಬಳಸುತ್ತಿವೆ.
ಒಂದು ವೇಳೆ ಒಂದು ಮನೆಯಲ್ಲಿ ಪತಿ ಪತ್ನಿ ವಾಸಿಸುತ್ತಿದ್ದಾರೆ. ಇಬ್ಬರ ಬಳಿಯೂ ಒಂದೊಂದು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಇದೆ ಎಂದುಕೊಳ್ಳೋಣ. ಒಂದೊಂದು ಸ್ಮಾರ್ಟ್‌ಫೋನ್ ಕೂಡ ಒಂದೊಂದು ರೀತಿಯ ಚಾರ್ಜರ್ ಬಳಸುತ್ತಿದ್ದರೆ ಆಗ ನಾಲ್ಕು ಚಾರ್ಜರ್ ಬೇಕಾಗುತ್ತದೆ. ಅವರ ಬಳಿ ಕೀಬೋರ್ಡ್, ಮೌಸ್, ಶೇವಿಂಗ್ ಕಿಟ್, ಎರಡು ಇಯರ್‌ಬಡ್ ಇದ್ದರೆ ಅಲ್ಲಿಗೆ ಚಾರ್ಜಿಂಗ್ ಕೇಬಲ್ ಸಂಖ್ಯೆ 12 ಆಗುತ್ತದೆ. ಸದ್ಯದ ಮಟ್ಟಿಗೆ ಬಹುತೇಕ ಮನೆಗಳಲ್ಲಿ ಇದೇ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಒಂದು ವೇಳೆ ಎಲ್ಲ ಸಾಧನಗಳಿಗೂ ಒಂದೇ ಚಾರ್ಜಿಂಗ್ ಕೇಬಲ್ ಬಳಸಬಹುದು ಎಂದಾದರೆ, ಇಡೀ ಮನೆಯಲ್ಲಿ ಎಲ್ಲ ಸಾಧನಗಳಿಗೂ ಒಂದೋ ಎರಡೋ ಕೇಬಲ್ ಇಟ್ಟುಕೊಂಡರೆ ಸಾಕು!
ಇದರಿಂದ ಒಟ್ಟಾರೆಯಾಗಿ ಆಗುವ ಅನುಕೂಲ ಮುಖ್ಯವಾಗಿ ಎರಡು. ವೈಯಕ್ತಿಕವಾಗಿ ಚಾರ್ಜಿಂಗ್ ಕೇಬಲ್‌ಗಾಗಿ ಪರೋಕ್ಷವಾಗಿ ವೆಚ್ಚ ಮಾಡುವ ಹಣ ಕಡಿಮೆಯಾಗುತ್ತದೆ. ಕಂಪನಿಗಳು ತಮ್ಮ ಸಾಧನದ ಜೊತೆಗೆ ಚಾರ್ಜಿಂಗ್ ಕೇಬಲ್ ಅನ್ನು ಉಚಿತವಾಗಿ ಕೊಡುತ್ತವೆ ಎಂದು ಅನಿಸಿದರೂ, ಚಾರ್ಜಿಂಗ್ ಕೇಬಲ್ ತಯಾರಿಕೆಗೆ ಉಂಟಾಗುವ ವೆಚ್ಚವನ್ನು ಸಾಧನದ ವೆಚ್ಚಕ್ಕೇ ಸೇರಿಸಿರುತ್ತಾರೆ. ಚಾರ್ಜಿಂಗ್ ಕೇಬಲ್ ಕೊಡಬೇಕಿಲ್ಲ ಎಂದಾದಾಗ ಅದರ ವೆಚ್ಚವನ್ನು ಕಡಿತಗೊಳಿಸುವುದು ಸಹಜ.
ಇನ್ನೊಂದೇನೆಂದರೆ ಪರಿಸರಕ್ಕೆ ಇದರಿಂದ ಹಾನಿ ಕಡಿಮೆಯಾಗುತ್ತದೆ. ಸಾಧನ ಹಾಳಾದಾಗ ಅದರ ಜೊತೆಗೆ ಬಂದ ಕೇಬಲ್ ಅನಾಥವಾಗಿಬಿಡುತ್ತದೆ. ಆಗ ಅದನ್ನು ನಾವು ಕಸದ ಜೊತೆಗೆ ಎಸೆಯುತ್ತೇವೆ. ಈ ಸಮಸ್ಯೆ ತಪ್ಪಿಸಬಹುದು. ಅಷ್ಟೇ ಅಲ್ಲ, ಒಂದೊಂದು ಸಾಧನಕ್ಕೆ ಒಂದೊಂದು ಕೇಬಲ್ ತಯಾರಿಸುವ ಅಗತ್ಯ ಇಲ್ಲದ್ದರಿಂದ ಅದರಿಂದ ಪ್ಲಾಸ್ಟಿಕ್ ಹಾಗೂ ಇತರ ಲೋಹದ ಬಳಕೆ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ.
ಚಾರ್ಜರ್‌ಗಳು ಮಾಯ?
ಸದ್ಯ ಐಫೋನ್ ಮಾತ್ರ ಚಾರ್ಜರ್‌ಗಳನ್ನು ಕೊಡುವುದಿಲ್ಲ. ಆದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರು ಮಾಡುವ ಎಲ್ಲ ಕಂಪನಿಗಳೂ ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್ ಕೊಡುತ್ತಿವೆ. ಒಂದೇ ಕೇಬಲ್ ನಿಯಮ ಬಂದ ನಂತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರು ಮಾಡುವ ಕಂಪನಿಗಳೂ ಕೇಬಲ್ ಮತ್ತು ಅಡಾಪ್ಟರ್ ಕೊಡದೇ ಇರುವ ನಿಲುವನ್ನು ತಳೆಯಬಹುದು. ಅದಕ್ಕಾಗಿ ಪ್ರತ್ಯೇಕವಾಗಿ ಗ್ರಾಹಕರು ಖರೀದಿ ಮಾಡಬೇಕಾಗಬಹುದು. ಆದರೆ, ಇದರಿಂದ ಒಂದು ಅನುಕೂಲವೆಂದರೆ ಎರಡನೇ ಬಾರಿಗೆ ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ ಹಳೆಯ ಸ್ಮಾರ್ಟ್‌ಫೋನ್‌ನ ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್ ಇರುವುದರಿಂದ ಆ ವೆಚ್ಚ ಉಳಿತಾಯವಾಗುತ್ತದೆ. ಮೊದಲ ಬಾರಿ ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತಿದ್ದೀರಿ ಎಂದಾದರೆ ಈ ವೆಚ್ಚ ಹೆಚ್ಚುವರಿಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.