ADVERTISEMENT

ಇಂಟರ್‌ನೆಟ್‌ ಇಲ್ಲದೆ ಫೈಲ್ ಶೇರಿಂಗ್‌ ಸೌಲಭ್ಯ ಪರೀಕ್ಷಿಸುತ್ತಿದೆ ವಾಟ್ಸ್‌ಆ್ಯಪ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2024, 10:17 IST
Last Updated 24 ಜುಲೈ 2024, 10:17 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಅಧಿಕ ಗುಣಮಟ್ಟದ ವಿಡಿಯೊ, ಚಿತ್ರಗಳನ್ನು ಅಂತರ್ಜಾಲ ಸಂಪರ್ಕವಿಲ್ಲದೆ ಎರಡು ಫೋನ್‌ಗಳ ನಡುವೆ ಹಂಚಿಕೊಳ್ಳಲು ಅನುಕೂಲವಾಗುವಂತ ಸೌಕರ್ಯವನ್ನು ವಾಟ್ಸ್‌ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಬಿಡುಗಡೆ ಪೂರ್ವ ಪರೀಕ್ಷಾ ಹಂತದಲ್ಲಿದೆ ಎಂದು ವರದಿಯಾಗಿದೆ. 

ಈ ಕುರಿತಂತೆ ವಾಟ್ಸ್‌ಆ್ಯಪ್ ಕಮ್ಯುನಿಟಿ ಬ್ಲಾಗ್‌, ಡಬ್ಲೂಎಬಿಟಾಇನ್ಫೊದಲ್ಲಿ ಈ ಕುರಿತು ಚರ್ಚೆಗಳು ನಡೆದಿವೆ. iOS ಸಾಧನಗಳಿಗಾಗಿ ರೂಪಿಸಿರುವ ವಾಟ್ಸ್ಆ್ಯಪ್‌ನ ಬೀಟಾ ಆವೃತ್ತಿಯಲ್ಲಿ (v24.15.10.70) ಸಮೀಪದ ಫೋನ್‌ನೊಂದಿಗೆ ಹೆಚ್ಚಿನ ಗಾತ್ರದ ಎಚ್‌ಡಿ ಗುಣಮಟ್ಟದ ವಿಡಿಯೊ, ಚಿತ್ರಗಳನ್ನು ಕಳುಹಿಸಲು ಸಾಧ್ಯ.

ADVERTISEMENT

ಮಾರ್ಕ್ ಝುಕರ್‌ಬರ್ಗ್‌ ಅವರು ಈ ತಿಂಗಳ ಆರಂಭದಲ್ಲಿ ಹೊಸತೊಂದು ಸೌಕರ್ಯವನ್ನು ಬಿಡುಗಡೆ ಮಾಡಿದ್ದು ಸುದ್ದಿಯಾಗಿತ್ತು. ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಅಥವಾ ಗಮನಕ್ಕೆ ಬಾರದೆ ವಾಟ್ಸ್‌ಆ್ಯಪ್ ಗುಂಪಿಗೆ ಸೇರಿಸಿದಲ್ಲಿ, ಅಂಥವರ ರಕ್ಷಣೆಗಾಗಿ ಹೊಸ ಸೌಕರ್ಯವನ್ನು ಬಿಡುಗಡೆ ಮಾಡಲಾಗಿದೆ. ‘ಕಂಟೆಕ್ಷ್ಟ್‌ ಕಾರ್ಡ್‌‘ ಎಂದು ಕರೆಯಲಾಗುವ ಈ ಸೌಲಭ್ಯದಲ್ಲಿ ತಿಳಿಯದೇ ಸೇರಿಕೊಂಡ ಗುಂಪಿನ ಮಾಹಿತಿ ಸಿಗಲಿದೆ. ಇದರಲ್ಲಿ ನಮ್ಮನ್ನು ಸೇರಿಸಿದ್ದು ಯಾರು, ಎಷ್ಟು ದಿನಗಳ ಹಿಂದೆ ಈ ಗುಂಪು ಆರಂಭಗೊಂಡಿತು ಹಾಗೂ ಯಾರು ಅದನ್ನು ಆರಂಭಿಸಿದರು ಎಂಬ ಮಾಹಿತಿ ಸಿಗಲಿದೆ. ಇದನ್ನು ಆಧರಿಸಿ ಗುಂಪಿನಲ್ಲಿ ಮುಂದುವರಿಯಬೇಕೇ ಅಥವಾ ಹೊರಬರಬೇಕೇ ಎಂಬುದನ್ನು ನಿರ್ಧರಿಸಬಹುದು.

ಇದೀಗ ಸಮೀಪದ ಫೋನ್‌ಗೆ ಡಾಕ್ಯುಮೆಂಟ್‌ಗಳು, ವಿಡಿಯೊ, ಫೋಟೊಗಳನ್ನು ಸುಲಭವಾಗಿ ಹಂಚಿಕೊಳ್ಳುವ ಅವಕಾಶವನ್ನು ವಾಟ್ಸ್‌ಆ್ಯಪ್ ನೀಡಲು ಮುಂದಾಗಿದೆ. ಇದಕ್ಕೆ ಅಂತರ್ಜಾಲದ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಇದು ಆ್ಯಪಲ್ ಮೊಬೈಲ್‌ಗಳಲ್ಲಿರುವ ಏರ್‌ಡ್ರಾಪ್‌ನಂತೆಯೇ ಕೆಲಸ ಮಾಡಲಿದೆ.

ಸಮೀಪದಲ್ಲಿರುವ ವಾಟ್ಸ್‌ಆ್ಯಪ್ ಬಳಕೆದಾರರು ಅಂತರ್ಜಾಲ ಸಂಪರ್ಕವಿಲ್ಲದೆ ಫೈಲ್‌ಗಳನ್ನು ಪರಸ್ಪರ ಹಂಚಿಕೊಳ್ಳಬಹುದು. ಇದಕ್ಕೆ ಕೆಲವೇ ಸೆಕೆಂಡುಗಳು ಸಾಕು ಎಂದು ಬಿಟಾ ಆವೃತ್ತಿ ಬಳಕೆದಾರರು ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಐಫೋನ್ ಮತ್ತು ಆ್ಯಂಡ್ರಾಯ್ಡ್‌ ನಡುವೆ ಫೈಲ್‌ಗಳನ್ನು ಹಂಚಿಕೊಳ್ಳುವುದು ತೀರಾ ಕಷ್ಟದ ಕೆಲಸ. ಆದರೆ ವಾಟ್ಸ್‌ಆ್ಯಪ್‌ನ ಈ ಸೌಲಭ್ಯದಿಂದಾಗಿ, ಎರಡೂ ಭಿನ್ನ ಆಪರೇಟಿಂಗ್ ಸಿಸ್ಟಂ ಇರುವ ಫೋನ್‌ಗಳ ನಡುವೆ ಫೈಲ್‌ಗಳನ್ನು ಶೇರ್ ಮಾಡಬಹುದು. 

ಆ್ಯಪಲ್ ಫೋನ್‌ ವಾಟ್ಸ್‌ಆ್ಯಪ್‌ಗೂ ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಬಳಕೆಯಾಗುವ ಆ್ಯಪ್‌ಗೂ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ ಈ ನೂತನ ಸೌಲಭ್ಯದ ಪರೀಕ್ಷಾರ್ಥ ಪ್ರಯೋಗ ಇನ್ನೂ ಕೆಲವು ವಾರಗಳ ಕಾಲ ನಡೆಯಲಿದೆ.  

ಆ್ಯಂಡ್ರಾಯ್ಡ್‌ ಬಿಟಾ (v2.24.9.22) ಆವೃತ್ತಿಯಲ್ಲಿ, ಫೈಲ್ ಶೇರ್ ಮಾಡುವ ಮುನ್ನ, ಸಮೀಪವಿರುವ ಫೋನ್‌ಗಳ ವಿವರ ಪರದೆ ಮೇಲೆ ಮೂಡಲಿದೆ. ಆದರೆ ಐಫೋನ್‌ನಲ್ಲಿ ಫೈಲ್ ಕಳುಹಿಸಬೇಕಾದ ಫೋನ್‌ನಲ್ಲಿರುವ ವಾಟ್ಸ್‌ಆ್ಯಪ್‌ನ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುವಂತೆ ಅಭಿವೃದ್ಧಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.