ಮೂರು ವರ್ಷಗಳ ಬಳಿಕ ಆ್ಯಪಲ್ ಕಂಪನಿಯು ಹೊಸ ವರ್ಷಕ್ಕೆ ಐದನೇ ಪೀಳಿಗೆಯ ‘ಐಪಾಡ್ ಮಿನಿ 5’ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ. ಇದನ್ನು ಕೇವಲ ಗಾಳಿ ಸುದ್ದಿ ಎಂದು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆಂದರೆ 2015ರಲ್ಲಿ ನಾಲ್ಕನೇ ಪೀಳಿಗೆಯ ಐಪಾಡ್ ಮಿನಿ ಬಿಡುಗಡೆ ಮಾಡಿದ ಬಳಿಕ ಸುಧಾರಿತ ಆವೃತ್ತಿಗಳಾವುವೂ ಹೊರಬಂದಿಲ್ಲ.
ಕಂಪನಿಯು 2018ರ ಅಂತ್ಯಕ್ಕೆ ಅಥವಾ 2019ರ ಆರಂಭದಲ್ಲಿ ಹೊಸ ಐಪಾಡ್ ಬಿಡುಗಡೆ ಮಾಡಲಿದೆ ಎಂದು ಆ್ಯಪಲ್‌ನ ವಿಶ್ಲೇಷಕ ಮಿಂಗ್ ಚಿ ಕು ಅವರು ಸಹ ಹೇಳಿದ್ದಾರೆ.ಮೂಲಗಳ ಪ್ರಕಾರ ಕಂಪನಿಯು ಡಿಸೆಂಬರ್ ಅಂತ್ಯಕ್ಕೂ ಮುನ್ನವೇ ಐಪಾಡ್ ಮಿನಿ ತಯಾರಿಕೆ ಆರಂಭಿಸಲಿದ್ದು, 2019ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
2015ರಲ್ಲಿ ಬಿಡುಗಡೆ ಆಗಿದ್ದ ಐಪಾಡ್ ಮಿನಿ, ತಯಾರಿಕೆ ಸ್ಥಗಿತಗೊಂಡಿದ್ದರೂ, ಭಾರತವನ್ನೂ ಒಳಗೊಂಡು ಇನ್ನೂ ಹಲವು ಮಾರುಕಟ್ಟೆಗಳಲ್ಲಿ ಇಂದಿಗೂ ಮಾರಾಟವಾಗುತ್ತಿದೆ. ಕಾಂಪ್ಯಾಕ್ಟ್ ಮತ್ತು ಕಡಿಮೆ ಬೆಲೆಯ ಟ್ಯಾಬ್ಲೆಟ್ ಇಷ್ಟಪಡುವವರಿಗೆ ಐಪಾಡ್ ಮಿನಿ ಸರಣಿ ಉತ್ತಮ ಆಯ್ಕೆ.
ಹೊಸ ಐಪಾಡ್‌ನಲ್ಲಿ ಏನಿರಲಿದೆ ಎನ್ನುವುದು ಗೊತ್ತಿಲ್ಲ. ಆದರೆ ಹೊಸ ವಿನ್ಯಾಸವನ್ನಂತೂ ನಿರೀಕ್ಷಿಸಬಹುದು. ಐಪಾಡ್ ಅಂಚಿನವರೆಗೂ ಪರದೆ ಇರಲಿದೆ. ಆದರೆ, ಕಡಿಮೆ ಬೆಲೆಯ ವಿಭಾಗದಲ್ಲಿ ಇರುವುದರಿಂದ ಫೇಸ್ ಐಡಿಯಂತಹ ವೈಶಿಷ್ಟ್ಯ ನಿರೀಕ್ಷಿಸದೇ ಇರುವುದೇ ಒಳಿತು ಎನ್ನುತ್ತಿದ್ದಾರೆ ತಜ್ಞರು.
ಐಪಾಡ್ 10: 2019ರ ದ್ವಿತೀಯಾರ್ಧದಲ್ಲಿ ಐಪಾಡ್ 10 ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಇದರಲ್ಲಿಯು ಸಹ ಫೇಸ್ ಐಡಿ ಮತ್ತು ಮುಂದಿನ ಪೀಳಿಗೆಯ ಚಿಪ್‌ಸೆಟ್ ಇರುವುದು ಅನುಮಾನ. ಬದಲಾಗಿ 9.7 ಇಂಚಿನ ಐಪಾಡ್ ಅನ್ನು ಮರುವಿನ್ಯಾಸಗೊಳಿಸಿ ಐಪಾಡ್‌ನ ಅಂಚಿನವರೆಗೂ ಪರದೆಯನ್ನುನೀಡುವ ಸಾಧ್ಯತೆ ಇದೆ. ಇದರ ಬೆಲೆ 9.7 ಇಂಚಿನ ಐಪಾಡ್‌ನಷ್ಟೇ ಅಂದರೆ ಅಂದಾಜು ₹ 23 ಸಾವಿರ ಇರಬಹುದು ಎಂದು ವರದಿಯೊಂದು ತಿಳಿಸಿದೆ.
**
ಇನ್ನಷ್ಟು ಅಗ್ಗ?
ಮುಂಬರುವ ದಿನಗಳಲ್ಲಿ ಐಪಾಡ್‌ಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.ಆ್ಯಪಲ್ ಬಿಡುಗಡೆ ಮಾಡಿರುವ ಐಪಾಡ್‌ಗಳಲ್ಲಿ 9.7 ಇಂಚಿನ ಐಪಾಡ್ ಅತ್ಯಂತ ಕಡಿಮೆ ಬೆಲೆಯದ್ದಾಗಿದೆ. ₹ 24 ಸಾವಿರ. ಆದರೆ, ಐಪಾಡ್ ಮಿನಿ 5 ಇದಕ್ಕಿಂತಲೂ ಕಡಿಮೆ ಬೆಲೆಗೆ ಸಿಗುವ ಅಂದಾಜು ಮಾಡಲಾಗಿದೆ (ಸಂಗ್ರಹಣಾ ಸಾಮರ್ಥ್ಯದ ಆಧಾರದ ಮೇಲೆ). ಸದ್ಯ, 128 ಜಿಬಿ ಸಾಮರ್ಥ್ಯದ ಐಪಾಡ್ ಮಿನಿ ಮಾರುಕಟ್ಟೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.