ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 5: ಹಗುರವಾದ ಫಿಟ್ನೆಸ್ ಸಂಗಾತಿ

ಅವಿನಾಶ್ ಬಿ.
Published 4 ನವೆಂಬರ್ 2022, 12:24 IST
Last Updated 4 ನವೆಂಬರ್ 2022, 12:24 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 5 (ಮಧ್ಯದ ಚಿತ್ರದಲ್ಲಿ ವಾಚ್ ಹಿಂಭಾಗದಲ್ಲಿರುವ ಸೆನ್ಸರ್‌ಗಳು)
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 5 (ಮಧ್ಯದ ಚಿತ್ರದಲ್ಲಿ ವಾಚ್ ಹಿಂಭಾಗದಲ್ಲಿರುವ ಸೆನ್ಸರ್‌ಗಳು)   

ಕಳೆದ ತಿಂಗಳು ಪ್ರೊ ಮಾದರಿಯ ಜೊತೆಗೇ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾದ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 5. ಎರಡು ವಾರಗಳ ಕಾಲ ಇದನ್ನು ಬಳಸಿ ನೋಡಿದಾಗಿನ ಅನುಭವದ ಮಾಹಿತಿ ಇಲ್ಲಿದೆ.

ಗ್ಯಾಲಕ್ಸಿ ವಾಚ್ 4 ಸರಣಿಗೆ ಹೋಲಿಸಿದರೆ, ಹೆಚ್ಚು ಬ್ಯಾಟರಿ ಸಾಮರ್ಥ್ಯ, ಆಕರ್ಷಕ ವಿನ್ಯಾಸ ಮತ್ತು ಹೊಸದಾಗಿ ಸೇರ್ಪಡೆಯಾಗಿರುವ ಉಷ್ಣತಾಮಾಪನದ ಸೆನ್ಸರ್ - ಇವುಗಳು ಹೆಚ್ಚುವರಿ.

ಪ್ರಮುಖ ವೈಶಿಷ್ಟ್ಯಗಳು
1.4 ಇಂಚಿನ ಸೂಪರ್ AMOLED ಸಫೈರ್ ಕ್ರಿಸ್ಟಲ್ ಡಿಸ್‌ಪ್ಲೇ
1.18GHz ಡ್ಯುಯಲ್ ಕೋರ್ ಪ್ರೊಸೆಸರ್
1.5 ಜಿಬಿ RAM, 16 ಜಿಬಿ ಸ್ಟೋರೇಜ್ (ಬಳಕೆಗೆ 7.5 ಜಿಬಿ ಲಭ್ಯ)
44 ಮಿಮೀ ಮತ್ತು 40 ಮಿಮೀ ಎರಡು ಮಾದರಿಗಳು (ಬೆಲೆಯಲ್ಲಿ ಸುಮಾರು 3 ಸಾವಿರ ರೂ. ವ್ಯತ್ಯಾಸ)
33.5 ಗ್ರಾಂ ಹಾಗೂ 28.7 ಗ್ರಾಂ ತೂಕ
410 mAh ಬ್ಯಾಟರಿ
ಬಣ್ಣಗಳು: ಗ್ರಾಫೈಟ್, ಸಿಲ್ವರ್, ಪಿಂಕ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ.
ಬೆಲೆ ₹30999 ಮತ್ತು ₹27999

ADVERTISEMENT

ಗ್ಯಾಲಕ್ಸಿ ವಾಚ್ 5 ಪ್ರೊ ಆವೃತ್ತಿಗಿಂತ ಗ್ಯಾಲಕ್ಸಿ ವಾಚ್ 5 ಆವೃತ್ತಿಯ ವಾಚು ಗಾತ್ರದಲ್ಲಿ, ತೂಕದಲ್ಲಿ ಕಿರಿದು ಮತ್ತು ಬ್ಯಾಟರಿ ಕೊಂಚ ಕಡಿಮೆ ಇದೆ. ಉಳಿದಂತೆ ಪ್ರಮುಖ ವೈಶಿಷ್ಟ್ಯಗಳೆಲ್ಲವೂ ಎರಡರಲ್ಲೂ ಇವೆ. ಆದರೆ ಹಿಂದಿನ ಗ್ಯಾಲಕ್ಸಿ ವಾಚ್ 4ಗೆ ಹೋಲಿಸಿದರೆ, ಬ್ಯಾಟರಿ ಹೆಚ್ಚು ಹಾಗೂ ವಿನ್ಯಾಸವೂ ವಿನೂತನ, ಜೊತೆಗೆ ಹೆಚ್ಚುವರಿ ವೈಶಿಷ್ಟ್ಯಗಳಿವೆ.

ಪ್ರಧಾನವಾಗಿ, ವಾಚ್ 4ರಲ್ಲಿ ಬೆಝೆಲ್ (ಸ್ಕ್ರೀನ್ ಸುತ್ತ ಇರುವ ಖಾಲಿ ಜಾಗ) ಅನ್ನು ತಿರುಗಿಸಬಹುದಾಗಿತ್ತು. ಅದೀಗ ಸ್ಕ್ರೀನ್ ಮೇಲೆ ಸ್ಪರ್ಶ ಆಧಾರಿತವಾಗಿ ಬದಲಾಗಿದೆ. ಈ ಬೆಝೆಲ್ ಭಾಗವನ್ನು ಸ್ಪರ್ಶಿಸಿ ವೃತ್ತಾಕಾರದಲ್ಲಿ ಎಳೆಯುವ ಮೂಲಕ ವಾಚ್‌ನಲ್ಲಿ ನ್ಯಾವಿಗೇಶನ್ ಅನ್ನು ಸುಲಭವಾಗಿ ನಿಭಾಯಿಸಬಹುದು. ಒಂದು ಭಾಗದಲ್ಲಿ ಸ್ಪರ್ಶ ಆಧಾರಿತ ಎರಡು ಬಟನ್‌ಗಳಿದ್ದು, ಹೋಂ ಬಟನ್ ಮತ್ತು ಪವರ್ ಬಟನ್ ಆಗಿಯೂ ಇವು ಕಾರ್ಯನಿರ್ವಹಿಸುತ್ತವೆ.

ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ W5 ಚಿಪ್, 1.5 ಜಿಬಿ RAM ಹಾಗೂ 16ಜಿಬಿ ಸ್ಟೋರೇಜ್ ಇರುವುದರಿಂದ, ವಾಚ್ ಕಾರ್ಯನಿರ್ವಹಣೆ, ಸ್ಪರ್ಶ ಸಂವೇದನೆ ಮತ್ತು ನ್ಯಾವಿಗೇಶನ್ ಅತ್ಯಂತ ಸುಲಲಿತವಾಗಿದೆ. ವೇರ್ ಒಎಸ್ 3 ಆಧಾರಿತ ಸ್ಯಾಮ್‌ಸಂಗ್ ಒನ್ ಯುಐ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಇದು ಕೆಲಸ ಮಾಡುತ್ತದೆ.

ಆರೋಗ್ಯ, ಫಿಟ್ನೆಸ್ ಮೇಲೆ ಒತ್ತು
2018ರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ಗಳು ಪ್ರಥಮವಾಗಿ ಮಾರುಕಟ್ಟೆಗೆ ಬಂದಿದ್ದು, ಹೊಸ ಆವೃತ್ತಿಗಳಲ್ಲಿ ಫಿಟ್ನೆಸ್ ಹಾಗೂ ಆರೋಗ್ಯದ ಮೇಲೆ ಹೆಚ್ಚು ಒತ್ತು ನೀಡಲಾಗಿದೆ. ಗೂಗಲ್ ಫಿಟ್ ಆ್ಯಪ್ ಹಾಗೂ ಸ್ಯಾಮ್‌ಸಂಗ್ ಹೆಲ್ತ್ ಮಾನಿಟರ್ ಆ್ಯಪ್ ಮೂಲಕ ನಮ್ಮ ನಡಿಗೆ, ನಿದ್ರೆ, ವ್ಯಾಯಾಮ ಮುಂತಾದ ಶರೀರದ ಕ್ರಿಯೆಗಳನ್ನು ಈ ವಾಚ್ ದಾಖಲಿಸಿಕೊಳ್ಳುತ್ತದೆ. ಇದಕ್ಕೆ ಬೇಕಾಗಿರುವ ಸೆನ್ಸರ್‌ಗಳೆಲ್ಲವೂ ವಾಚ್ ಕೇಸ್‌ನ ಹಿಂಭಾಗದಲ್ಲಿವೆ. ರಕ್ತದ ಆಮ್ಲಜನಕ ಪ್ರಮಾಣ, ಇಸಿಜಿ (ಇದಕ್ಕೆ ಸ್ಯಾಮ್‌ಸಂಗ್ ಫೋನ್ ಸಂಪರ್ಕ ಬೇಕಾಗುತ್ತದೆ), ಹೃದಯ ಬಡಿತ, ನಡಿಗೆ ಅಥವಾ ಓಟದ ಹೆಜ್ಜೆಗಳ ಸಂಖ್ಯೆ - ಎಲ್ಲವೂ ದಾಖಲಾಗುತ್ತವೆ.

ಇಷ್ಟಲ್ಲದೆ, ನಿದ್ರೆಯ ಸ್ಥಿತಿ (ಗಾಢ ನಿದ್ದೆ, ಅಡಚಣೆಗಳಿರುವ ನಿದ್ದೆ, ಗೊರಕೆಯ ಟ್ರ್ಯಾಕಿಂಗ್ ಮುಂತಾದ ಮಾಹಿತಿ) ಕೂಡ ಅಳೆದು ತೋರಿಸುತ್ತದೆ.

ವಿಶೇಷ ಅನುಕೂಲವೆಂದರೆ, ಒಂದಷ್ಟು ಹೆಜ್ಜೆ ನಡೆದ ತಕ್ಷಣ, ತಾನಾಗಿಯೇ ಅದು 'ವಾಕಿಂಗ್' ಎಂದು ಅರಿತುಕೊಂಡು, ಟೈಮರ್ ಪ್ರಾರಂಭವಾಗುತ್ತದೆ. ಅದೇ ರೀತಿ, ಕೆಲವು ಕ್ಷಣ ನಿಂತರೆ, ಟೈಮರ್ ಸ್ಥಗಿತವಾಗುತ್ತದೆ. ಪುನಃ ನಡೆಯಲು ಆರಂಭಿಸಿದಾಗ ಅದು ಮರುಚಾಲನೆಗೊಳ್ಳುತ್ತದೆ. ಇದು, ನಡಿಗೆಯ ಬಟನ್ ಅನ್ನು ಪದೇ ಪದೇ ಒತ್ತುವ ಕೆಲಸವನ್ನು ತಪ್ಪಿಸುತ್ತದೆ.

ಆ್ಯಪಲ್ ವಾಚ್‌ನಲ್ಲಿರುವಂತೆ ಹೃದಯ ಬಡಿತವನ್ನು ಸ್ವಯಂಚಾಲಿತವಾಗಿ ಈ ವಾಚ್ ಅಳೆಯುವುದಿಲ್ಲ. ಸಂಬಂಧಿತ ಆ್ಯಪ್ ಮೂಲಕ ನಾವಾಗಿಯೇ ಅಳೆಯಬೇಕಾಗುತ್ತದೆ.

ಇದರಲ್ಲಿ ಬಯೋ ಇಂಪಿಡೆನ್ಸ್ ಸೆನ್ಸರ್ ಅಡಕವಾಗಿದೆ. ಇದರ ಮೂಲಕ ದೇಹದ ಸಾಂದ್ರತೆಯನ್ನು (ಎತ್ತರ, ತೂಕಕ್ಕೆ ಅನುಗುಣವಾಗಿ ದೈಹಿಕ ಸಾಂದ್ರತೆ) ಅಳೆಯಬಹುದು. ಎರಡೂ ಕೀಗಳ ಮೇಲೆ ಮಧ್ಯದ ಮತ್ತು ಉಂಗುರ ಬೆರಳನ್ನು ಇರಿಸಿ ಇದನ್ನು ಅಳೆಯಬಹುದಾಗಿದೆ. ಆದರೆ, ಇವೆಲ್ಲವೂ ನಮ್ಮ ಅಂದಾಜು ಮಾಹಿತಿಗಾಗಿ ಮಾತ್ರವೇ ಹೊರತು, ವೈದ್ಯಕೀಯ ಉಪಯೋಗಕ್ಕಲ್ಲ ಎಂಬುದನ್ನು ನೆನಪಿಡಬೇಕು.

ಇದಲ್ಲದೆ, ವಾಚ್ ಮೂಲಕ ಫೋನ್ ಕರೆ ಸ್ವೀಕರಿಸಬಹುದು, ಪಠ್ಯ ಸಂದೇಶ ಟೈಪ್ ಮಾಡಿ ಕಳುಹಿಸಬಹುದು. ವಾಚ್‌ನಲ್ಲೇ ಹಾಡುಗಳನ್ನು ಸ್ಟೋರ್ ಮಾಡಿ, ಅದರಿಂದಲೇ (ಹೆಡ್ ಫೋನ್ ಅಗತ್ಯವಿಲ್ಲದೆ) ಆಲಿಸಬಹುದಾಗಿದೆ. ಇದರ ಜೊತೆಗೆ ಸುಮಾರು 90ರಷ್ಟು ವೈವಿಧ್ಯಮಯ ವರ್ಕೌಟ್ (ವ್ಯಾಯಾಮ) ಲೆಕ್ಕಾಚಾರ ಹಾಕಲು ವ್ಯವಸ್ಥೆಯಿದೆ.

ಬ್ಯಾಟರಿ: ಸದಾ ಕಾಲ ಆನ್ ಇರುವ ಸ್ಕ್ರೀನ್ ವೈಶಿಷ್ಟ್ಯ ಬಳಸದೇ ಇದ್ದರೆ (ನಾವು ಕೈಮಣಿಗಂಟನ್ನು ಎತ್ತಿ ನೋಡಿದಾಗ ಮಾತ್ರ ಸಮಯ ಕಾಣಿಸುವಂತೆ) ಬ್ಯಾಟರಿ ಎರಡು ದಿನಗಳಿಗೂ ಹೆಚ್ಚು ಕಾಲ ಚಾರ್ಜ್ ಉಳಿಯುತ್ತದೆ. ಸದಾ ಕಾಲ ಡಿಸ್‌ಪ್ಲೇ ಆನ್ ಇಟ್ಟುಕೊಂಡಲ್ಲಿ ಒಂದುವರೆ ದಿನಕ್ಕೆ ಸಾಕಾಗುತ್ತದೆ. ಅಲ್ಲದೆ, 25W ವೇಗದ ಚಾರ್ಜಿಂಗ್ ಅಡಾಪ್ಟರ್ ಅನ್ನು ಈ ವಾಚ್ ಚಾರ್ಜರ್ ಬೆಂಬಲಿಸುತ್ತದೆ. ಹೀಗಾಗಿ, ಅರ್ಧ ಗಂಟೆಯಲ್ಲಿ ಸುಮಾರು ಶೇ.50ರಷ್ಟು ಚಾರ್ಜ್ ಪೂರ್ಣಗೊಳ್ಳುತ್ತದೆ.

ಫಿಟ್ನೆಸ್ ಬಗ್ಗೆ, ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರಿಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ 5 ಸರಣಿಯ ವಾಚ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಈಗಿನ ಟ್ರೆಂಡ್ ಕೂಡ. ಆ್ಯಪಲ್, ಫಿಟ್‌ಬಿಟ್ ಹಾಗೂ ಇತರ ಸಣ್ಣಪುಟ್ಟ ಕಂಪನಿಗಳ ಸ್ಮಾರ್ಟ್‌ವಾಚ್‌ಗಳೂ ಫಿಟ್ನೆಸ್ ಬಗ್ಗೆ ಗಮನ ಹರಿಸಿರುವುದರಿಂದ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೂಡ ಈ ಸ್ಫರ್ಧಾ ಕಣದಲ್ಲಿ ಉತ್ತಮ ಸ್ಫರ್ಧಿಯಾಗಿ ರೂಪುಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.