ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಆ್ಯಪಲ್ ಐಫೋನ್ 14 ಅನ್ನು ಸುಮಾರು ಒಂದು ತಿಂಗಳ ಕಾಲ ಬಳಸಿ ನೋಡಿದ ಸಂದರ್ಭದಲ್ಲಿ, ಅದರ ಕಾರ್ಯಾಚರಣೆ, ವೇಗ, ಕ್ಯಾಮೆರಾ ಗುಣಮಟ್ಟ ಹೇಗಿದೆ? ಇಲ್ಲಿದೆ ಮಾಹಿತಿ. ಐಫೋನ್ 13ಕ್ಕೆ ಹೋಲಿಸಿದರೆ, ಅದೇ ವಿನ್ಯಾಸ ಆದರೆ ಕಾರ್ಯಾಚರಣೆ ಮತ್ತು ವೇಗ - ಹೆಚ್ಚು ಗುಣಮಟ್ಟದ ಕ್ಯಾಮೆರಾ ಈ ಐಫೋನ್ 14ರಲ್ಲಿದೆ.
ಪ್ರಮುಖ ವೈಶಿಷ್ಟ್ಯಗಳು
ವಿನ್ಯಾಸ ಹಾಗೂ ಡಿಸ್‌ಪ್ಲೇ
ಐಫೋನ್ 13ನ್ನೇ ಬಹುತೇಕ ಹೋಲುವ ಐಫೋನ್ 14, ಕೈಯಲ್ಲಿ ಹಿಡಿದುಕೊಳ್ಳುವಾಗ ಕೂಡ ಅದೇ ಭಾವನೆ ನೀಡುತ್ತದೆ. ಅತ್ಯುತ್ತಮ ಬಿಲ್ಡ್ ಗುಣಮಟ್ಟದೊಂದಿಗೆ ಹಗುರವಾಗಿದೆ, ಆದರೆ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿನ್ಯಾಸವು ಆಕರ್ಷಕವಾಗಿ ಗಮನ ಸೆಳೆಯುತ್ತದೆ. ರಿವ್ಯೂಗೆ ದೊರೆತದ್ದು ಬಿಳಿ ಬಣ್ಣದ ಐಫೋನ್ 14 ಆಗಿದ್ದು, ಉಳಿದಂತೆ ಕಪ್ಪು, ನೇರಳೆ ಮತ್ತು ಕೆಂಪು ಬಣ್ಣಗಳಲ್ಲಿಯೂ ಲಭ್ಯವಿದೆ. ವಾಲ್ಯೂಮ್ ಹಾಗೂ ಸೈಲೆಂಟ್ ಬಟನ್‌ಗಳು ಎಡಭಾಗದಲ್ಲಿಯೂ, ಪವರ್ ಬಟನ್ ಬಲಭಾಗದಲ್ಲಿಯೂ ಇದ್ದು, ಕೆಳಭಾಗದಲ್ಲಿ ಸ್ಪೀಕರ್ ಹಾಗೂ ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್ ಇದೆ.
6.1 ಇಂಚಿನ OLED ಪ್ಯಾನೆಲ್ ಡಿಸ್‌ಪ್ಲೇ ಇದ್ದು, ಉತ್ತಮ ರೆಸೊಲ್ಯುಶನ್‌ನಿಂದಾಗಿ ಚಿತ್ರಗಳು, ವಿಡಿಯೊಗಳು ಸ್ಫುಟವಾಗಿ ಮತ್ತು ಬಣ್ಣಗಳು ನಿಖರವಾಗಿ ಗೋಚರಿಸಲು ನೆರವಾಗುತ್ತದೆ. 60Hz ರೀಫ್ರೆಶ್ ರೇಟ್ ಇದ್ದು ಸ್ಕ್ರಾಲಿಂಗ್ ಮತ್ತು ಬ್ರೌಸಿಂಗ್ ಸುಲಲಿತವಾಗಿದೆ.
ಕ್ಯಾಮೆರಾ
12 ಮೆಗಾಪಿಕ್ಸೆಲ್ ವೈಡ್ ಹಾಗೂ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್‌ಗಳಿರುವ ಪ್ರಧಾನ ಕ್ಯಾಮೆರಾ ಸೆಟಪ್ ಚೌಕಾಕಾರದಲ್ಲಿದ್ದು, ಫ್ಲ್ಯಾಶ್ ಕೂಡ ಇದೆ. ಈ ಬಾರಿ ಫೋಟೋನಿಕ್ ಎಂಜಿನ್ ಎಂಬ ತಂತ್ರಾಂಶ ಸಂಬಂಧಿತ ವ್ಯವಸ್ಥೆಯನ್ನು ಕ್ಯಾಮೆರಾದಲ್ಲಿ ಅಳವಡಿಸಲಾಗಿದ್ದು, ಫೊಟೊ ತೆಗೆಯುವಾಗ ಚಿತ್ರಗಳನ್ನು, ವಿಶೇಷವಾಗಿ ಕಡಿಮೆ ಬೆಳಕಿರುವಲ್ಲಿ ಅತ್ಯುತ್ತಮವಾಗಿ ತೋರಿಸುತ್ತದೆ. ಇದರ ಮೂಲಕ ಚಿತ್ರಗಳ ಗುಣಮಟ್ಟವನ್ನು ಕೂಡ ಹೆಚ್ಚಿಸಲಾಗಿದೆ. ಚಿತ್ರಗಳು ಬಹುತೇಕವಾಗಿ ಐಫೋನ್ 14 ಪ್ರೊ ಗುಣಮಟ್ಟದಲ್ಲೇ ಸೆರೆಯಾಗುತ್ತವೆ (ಅದರಲ್ಲಿರುವುದು 48 ಮೆಗಾಪಿಕ್ಸೆಲ್ ಆಗಿರುವುದರಿಂದಾಗಿ ಸ್ವಲ್ಪ ಹೆಚ್ಚು ಸ್ಪಷ್ಟವಾಗಿರುತ್ತದೆ).
ಚೆನ್ನಾಗಿ ಬೆಳಕಿರುವಲ್ಲಂತೂ ಫೋಟೊ ಹಾಗೂ ವಿಡಿಯೊಗಳು ಅತ್ಯುತ್ತಮವಾಗಿ, ನಿಖರವಾದ ಬಣ್ಣಗಳೊಂದಿಗೆ ಸೆರೆಯಾದವು. ವಿಡಿಯೊ ಶೂಟಿಂಗ್‌ಗೆ ಹೆಚ್ಚು ಬೆಳಕಿರುವಲ್ಲಿ ನೆರವಾಗುವ ಆ್ಯಕ್ಷನ್ ಮೋಡ್ ಪರಿಚಯಿಸಲಾಗಿದೆ. ಇದು ನಡೆಯುತ್ತಾ ವಿಡಿಯೊ ಶೂಟ್ ಮಾಡುವವರಿಗೆ, ವಿಶೇಷವಾಗಿ ಯೂಟ್ಯೂಬರ್‌ಗಳು, ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಮಾಡುವವರಿಗೆ ಹೆಚ್ಚು ಅನುಕೂಲಕರವಾಗಿದೆ. ಜೊತೆಗೆ ಸಿನೆಮ್ಯಾಟಿಕ್ ಮೋಡ್ ಮೂಲಕ ವಿಡಿಯೊಗಳಲ್ಲಿ ಚಲಿಸುವ ವಸ್ತುಗಳ ಮೇಲೆ ಸ್ವಯಂಚಾಲಿತ ಫೋಕಸ್ ಮಾಡಬಹುದಾಗಿದೆ. ಹಿಂದಿನ ಮಾಡೆಲ್‌ಗಳಲ್ಲಿಯೂ ಇರುವ ಈ ಮೋಡ್‌ನ ವಿಶೇಷತೆಯೇನೆಂದರೆ, ವಿಡಿಯೊ ಸೆರೆಹಿಡಿದ ಬಳಿಕ, ಫೋಕಸ್ ಆಗಬೇಕಾದ ವಸ್ತುವನ್ನು ನಾವು ತಿದ್ದಬಹುದಾಗಿದೆ. 5x ಝೂಮ್ ಚೆನ್ನಾಗಿ ಕೆಲಸ ಮಾಡುತ್ತಿದ್ದು, ದೂರದ ವಸ್ತುಗಳು ಹೆಚ್ಚು ಸ್ಪಷ್ಟವಾಗಿ ಸೆರೆಯಾಗಬಲ್ಲವು.
ಸೆಲ್ಫೀ ಕ್ಯಾಮೆರಾ ಕೂಡ 12 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದ್ದು, ಇದರಲ್ಲಿನ ಪೋರ್ಟ್ರೇಟ್ ಮೋಡ್ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.
ಕಾರ್ಯಾಚರಣೆ, ಬ್ಯಾಟರಿ
ಐಒಎಸ್ 16 ಕಾರ್ಯಾಚರಣಾ ವ್ಯವಸ್ಥೆಯು ಫೋನ್‌ನ ಕಾರ್ಯಾಚರಣೆಯನ್ನು ಮತ್ತಷ್ಟು ಸುಲಲಿತವಾಗಿಸಿದೆ. ಹೊಸದಾಗಿ ಪರಿಚಯಿಸಿರುವ ಲಾಕ್‌ಸ್ಕ್ರೀನ್ ಕಸ್ಟಮೈಸ್ (ನಮಗೆ ಬೇಕಾದಂತೆ ಹೊಂದಿಸಿಕೊಳ್ಳುವ) ವ್ಯವಸ್ಥೆಯು ಅನುಕೂಲಕರವಾಗಿದೆ. ಇಲ್ಲಿ ಗಡಿಯಾರದ ಫಾಂಟ್ ಮತ್ತು ಬಣ್ಣ ಕೂಡ ಬದಲಿಸಿಕೊಳ್ಳಬಹುದಾಗಿದೆ.
ಹೊಸದಾಗಿ ಪರಿಚಯಿಸಲಾಗಿರುವ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವು, ಅಪಘಾತವೇನಾದರೂ ಆದರೆ, ತಾನಾಗಿಯೇ (ಮೊದಲೇ ಫೀಡ್ ಮಾಡಲಾಗಿರುವ) ಆತ್ಮೀಯರಿಗೆ ಕರೆ ಮಾಡುತ್ತದೆ.
ಬಾಕ್ಸ್‌ನಲ್ಲಿ ಯುಎಸ್‌ಬಿ ಟೈಪ್ ಸಿ ಚಾರ್ಜರ್‌ಗೆ ಹೊಂದಿಕೊಳ್ಳುವ ಲೈಟ್ನಿಂಗ್ ಕೇಬಲ್ ನೀಡಲಾಗಿದ್ದು, ಚಾರ್ಜರ್ ನೀಡಲಾಗಿಲ್ಲ. ಟೈಪ್-ಸಿ ಚಾರ್ಜಿಂಗ್ ಪೋರ್ಟನ್ನೇ ಒದಗಿಸುವುದರ ಬಗ್ಗೆ ಆ್ಯಪಲ್ ಬಹುಶಃ ಮುಂದಿನ ವರ್ಷ ಯೋಚನೆ ಮಾಡಬಹುದು. ಯಾಕೆಂದರೆ, ಈಗಾಗಲೇ ಐಪ್ಯಾಡ್ 10ರಲ್ಲಿ ಟೈಪ್ ಸಿ ಪೋರ್ಟ್ ಇದೆ. ಇದು ಬಂದರೆ, ಆಂಡ್ರಾಯ್ಡ್, ಆ್ಯಪಲ್ ಹಾಗೂ ವಿಂಡೋಸ್ ಮುಂತಾದ ಕೆಲವು ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಕೂಡ ಟೈಪ್-ಸಿ ಪೋರ್ಟ್ ಬೆಂಬಲಿಸಲು ಆರಂಭಿಸಿದ್ದು, ಚಾರ್ಜಿಂಗ್‌ಗೆ ಹಲವು ಕೇಬಲ್‌ಗಳನ್ನು ಒಯ್ಯುವ ತ್ರಾಸ ತಪ್ಪಬಹುದು. ಬ್ಯಾಟರಿ ಚಾರ್ಜ್ ಬಾಳಿಕೆ ಬಗ್ಗೆ ಹೇಳುವುದಾದರೆ ಸಾಮಾನ್ಯ ಕಾರ್ಯಾಚರಣೆಯಲ್ಲಿ, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ವಿಶೇಷವಾಗಿ ಹೆಚ್ಚು ವೈಫೈ ಬಳಸಿದಲ್ಲಿ ಎರಡು ದಿನಗಳಿಗೆ ಅಡ್ಡಿಯಿಲ್ಲ.
ಒಟ್ಟಿನಲ್ಲಿ, ಐಫೋನ್ 14 ಪ್ರೊ ಮಾದರಿಗೆ (ಎ16) ಹೋಲಿಸಿದಾಗ ಐಫೋನ್ 14ರಲ್ಲಿ ಎ15 ಬಯೋನಿಕ್ ಪ್ರೊಸೆಸರ್ ಇದೆ ಎಂಬುದು ಬಿಟ್ಟರೆ, ಕಾರ್ಯಾಚರಣೆಯಲ್ಲಿ ಇದೇನೂ ಹಿಂದುಳಿದಿಲ್ಲ. ಗ್ರಾಫಿಕ್ಸ್ ಹೆಚ್ಚಿರುವ ಗೇಮ್ ಆಡುವುದಕ್ಕಾಗಲೀ, 4ಕೆ ವಿಡಿಯೊ ವೀಕ್ಷಣೆ ಸಂದರ್ಭದಲ್ಲಾಗಲೀ ಮತ್ತು ಮಲ್ಟಿಟಾಸ್ಕಿಂಗ್ ಸಂದರ್ಭದಲ್ಲಿ ಯಾವುದೇ ಅಡಚಣೆ ಕಂಡುಬಂದಿಲ್ಲ. ಫೇಸ್ ಐಡಿ ಮೂಲಕ ವೇಗವಾಗಿ ಸ್ಕ್ರೀನ್ ಅನ್‌ಲಾಕ್ ಆಗುತ್ತದೆ.
ಉತ್ತಮ ಸ್ಕ್ರೀನ್, ವೇಗದ ಕಾರ್ಯಾಚರಣೆ, ಸುಲಲಿತವಾದ ತಂತ್ರಾಂಶ ಮತ್ತು ಅತ್ಯುತ್ತಮ ಕ್ಯಾಮೆರಾ - ಈ ವೈಶಿಷ್ಟ್ಯಗಳು ಐಫೋನ್ 14ನ್ನು ಖರೀದಿಸುವವರ ಗಮನ ಸೆಳೆಯಬಲ್ಲವು. ಬೆಲೆ ₹79900 (128GB) ₹89900 (256GB) ಹಾಗೂ ₹109900(512GB).
ಇದನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.