ಐಫೋನ್ 16 ಸರಣಿಯಲ್ಲಿ ಗರಿಷ್ಠ ವೈಶಿಷ್ಟ್ಯಗಳು ಮತ್ತು ಗರಿಷ್ಠ ಬೆಲೆ ಇರುವುದು ಐಫೋನ್ 16 ಪ್ರೊ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುವುದು ಐಫೋನ್ 16 ಪ್ರೊ ಮ್ಯಾಕ್ಸ್. ಆದರೆ, ಬಹುತೇಕ ಐಫೋನ್ 16 ಪ್ರೊ ಮ್ಯಾಕ್ಸ್ ಗಾತ್ರವನ್ನು ಹೋಲುವ, 16 ಪ್ರೊದ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದ್ದೂ ಕೊಂಚ ಕಡಿಮೆ ಬೆಲೆಯಲ್ಲಿ ದೊರೆಯುವುದು ಐಫೋನ್ 16 ಪ್ಲಸ್. ಪ್ರಜಾವಾಣಿಗೆ ರಿವ್ಯೂಗೆ ದೊರೆತ 6.7 ಇಂಚು ಸ್ಕ್ರೀನ್ ಇರುವ ಐಫೋನ್ 16 ಪ್ಲಸ್ ಹೇಗಿದೆ? ಇಲ್ಲಿದೆ ಮಾಹಿತಿ.
ಗಾತ್ರ: 160.9x77.8x7.8 ಮಿಮೀ, ತೂಕ 199 ಗ್ರಾಂ.
ಡಿಸ್‌ಪ್ಲೇ: 6.70 ಇಂಚು ಸೂಪರ್ ರೆಟಿನಾ XDR OLED, HDR10
ಚಿಪ್‌ಸೆಟ್: ಆ್ಯಪಲ್ ಎ18 (3 nm): ಹೆಕ್ಸಾ ಕೋರ್; ಆ್ಯಪಲ್ GPU
ಮೆಮೊರಿ: 128GB+8GB RAM, 256GB+8GB RAM, 512GB+8GB RAM
ಕ್ಯಾಮೆರಾ: 48 MP ಪ್ರಧಾನ ಲೆನ್ಸ್, 12 MP ಅಲ್ಟ್ರಾವೈಡ್, 12 MP ಸೆಲ್ಫಿ ಕ್ಯಾಮೆರಾ
ಬೆಲೆ: ₹89,900 (128GB+8GB), ₹99,900 (256GB+8GB), ₹1,19,900 (512GB+8GB)
ವಿನ್ಯಾಸ, ಗಾತ್ರ, ಡಿಸ್‌ಪ್ಲೇ
ಐಫೋನ್ 16 ಪ್ಲಸ್, 6.7 ಇಂಚು ಗಾತ್ರದ ಸೂಪರ್ ರೆಟಿನಾ XDR OLED ಸ್ಕ್ರೀನ್ ಹಾಗೂ 60Hz ರಿಫ್ರೆಶ್ ರೇಟ್ ಹೊಂದಿದೆ. ಹಿಂದಿನ ಆವೃತ್ತಿಯಾದ ಐಫೋನ್ 15 ಪ್ಲಸ್‌ಗಿಂತ ಪ್ರಧಾನವಾಗಿ ಮೊದಲ ನೋಟದಲ್ಲೇ ವ್ಯತ್ಯಾಸ ಕಾಣಿಸುವುದೆಂದರೆ, ಇದರ ಹಿಂಭಾಗದ ಎರಡು ಕ್ಯಾಮೆರಾ ಲೆನ್ಸ್‌ಗಳು ಲಂಬ ಸಾಲಿನಲ್ಲಿರುವುದು. ಹಿಂದಿನದರಲ್ಲಿ ಕರ್ಣ ಸಾಲಿನಲ್ಲಿತ್ತು. ಜೊತೆಗೊಂದು ಫ್ಲ್ಯಾಶ್ ಎಲ್ಇಡಿ ಲೈಟ್ ಇದೆ. ಪಿಂಕ್ ಸಹಿತವಾಗಿ ಐದು ಬಣ್ಣಗಳಲ್ಲಿ ಲಭ್ಯವಿರುವ ಐಫೋನ್ 16 ಪ್ಲಸ್‌ನಲ್ಲಿಯೂ ಪ್ರೊ ಸರಣಿಯ ಫೋನ್‌ಗಳಂತೆಯೇ ವಿನೂತನ ವಿನ್ಯಾಸದ ಆ್ಯಕ್ಷನ್ ಬಟನ್ ಜೊತೆಗೆ, ಸ್ಪರ್ಶ-ಸಂವೇದಿ ಕ್ಯಾಮೆರಾ ಬಟನ್ ಕೂಡ ಇದೆ. ಐಒಎಸ್ 18 ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆಯಿದ್ದು, ತೂಕ 199 ಗ್ರಾಂ ಇದೆ.
ಕೆಳಭಾಗದಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಹಾಗೂ ಸ್ಪೀಕರ್, ಎಡಭಾಗದಲ್ಲಿ ವಾಲ್ಯೂಮ್ ಬಟನ್‌ಗಳು, ಆ್ಯಕ್ಷನ್ ಬಟನ್ ಹಾಗೂ ಸಿಮ್ ಕಾರ್ಡ್ ಟ್ರೇ, ಬಲಭಾಗದಲ್ಲಿ ಪವರ್ ಬಟನ್ ಮತ್ತು ಕ್ಯಾಮೆರಾ ಬಟನ್ ಇದೆ. ಸ್ಕ್ರೀನ್ ಮೇಲೆ ಡೈನಮಿಕ್ ಐಲೆಂಡ್ ಖಾಲಿ ಜಾಗವು ಮುಂಭಾಗದ ಕ್ಯಾಮೆರಾವನ್ನೂ ಆವರಿಸಿದೆ. ಅಲ್ಯುಮೀನಿಯಂ ಚೌಕಟ್ಟಿನಲ್ಲಿರುವ ಸ್ಕ್ರೀನ್‌ನಲ್ಲಿ ಸಿರಾಮಿಕ್ ಶೀಲ್ಡ್ ಗಾಜು ಇದ್ದು, ಬೆಝೆಲ್ (ಸ್ಕ್ರೀನ್ ಸುತ್ತಲಿನ ಖಾಲಿ ಸ್ಥಳ) ತೀರಾ ಕಿರಿದಾಗಿರುವುದರಿಂದ, ದೊಡ್ಡದಾಗಿ ಚಿತ್ರ-ವಿಡಿಯೊ ವೀಕ್ಷಣೆಗೆ ಅನುಕೂಲ. ಇಯರ್‌ಪೀಸ್‌ನಲ್ಲೇ ಧ್ವನಿ ವರ್ಧಕವೂ ಇದೆ. ಕೆಳಭಾಗದಲ್ಲಿಯೂ ಪುಟ್ಟ ಇಯರ್‌ಪೀಸ್ ಇದೆ.
ಹೊರಾಂಗಣದಲ್ಲಿ ಸ್ಕ್ರೀನ್ ನೋಡಲು ಅತ್ಯಂತ ಅನುಕೂಲಕರ, ಪ್ರಖರ ಬಿಸಿಲಿನಲ್ಲಿಯೂ ಸಂದೇಶ ಓದಲು ಅಥವಾ ಅಂತರಜಾಲ ಪುಟಗಳನ್ನು ನೋಡುವುದಕ್ಕೆ ಇದರ ಬ್ರೈಟ್‌ನೆಸ್ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತದೆ. ಹೀಗಾಗಿ ಕಣ್ಣುಗಳಿಗೆ ತ್ರಾಸವಿಲ್ಲ.
ಆ್ಯಕ್ಷನ್ ಬಟನ್
ಹಿಂದೆ ಆ್ಯಕ್ಷನ್ ಬಟನ್ ಅನ್ನು ಸೈಲೆಂಟ್ ಮೋಡ್‌ಗೆ ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ನಿರ್ದಿಷ್ಟ ಕೆಲಸಗಳನ್ನು ಅಂದರೆ ವಿಭಿನ್ನ ಆ್ಯಪ್‌ಗಳಿಗೆ ಶಾರ್ಟ್ ಕಟ್ ಆಗಿ ಈ ಬಟನ್ ಅನ್ನು ಹೊಂದಿಸಬಹುದು. ಉದಾಹರಣೆಗೆ ಸೈಲೆಂಟ್ ಮೋಡ್ ಮಾತ್ರವಲ್ಲೆ ಫೋಕಸ್ ವೈಶಿಷ್ಟ್ಯ ಆನ್ ಮಾಡುವುದಕ್ಕೆ, ಟಾರ್ಚ್ ಬಳಸಲು, ವಾಯ್ಸ್ ಮೆಮೊ (ರೆಕಾರ್ಡಿಂಗ್‌ಗೆ) - ಹೀಗೆ ವಿವಿಧ ಆ್ಯಪ್‌ಗಳನ್ನು ಹೊಂದಿಸುವ ಆಯ್ಕೆಯಿದೆ.
ಕ್ಯಾಮೆರಾ ನಿಯಂತ್ರಣ ಬಟನ್
ಕ್ಯಾಮೆರಾ ತೆರೆಯಲು ಹೊಸದಾದ ಕ್ಯಾಮೆರಾ ಕಂಟ್ರೋಲ್ ಬಟನ್ ಬಳಸಬಹುದು. ಕ್ಯಾಮೆರಾ ಆನ್ ಮಾಡಿ ಮೆದುವಾಗಿ ಒತ್ತಿದರೆ, ವಿಭಿನ್ನ ನಿಯಂತ್ರಣಗಳ ಮೆನು ಬಟನ್‌ಗಳು ಗೋಚರಿಸುತ್ತವೆ. ಉದಾಹರಣೆಗೆ, ಝೂಮ್ ಬಟನ್. ಇದನ್ನು ಆಯ್ಕೆ ಮಾಡಿ, ಬಟನ್ ಮೇಲೆ ಎಡ-ಬಲ ಸ್ವೈಪ್ ಮಾಡಿದರೆ ಝೂಮ್ ಇನ್ ಅಥವಾ ಝೂಮ್ ಔಟ್ ಫೋಕಸ್ ಮಾಡಬಹುದು. ಬಳಿಕ ಒಮ್ಮೆ ಒತ್ತಿದರೆ ಫೋಟೊ ಸೆರೆಯಾಗುತ್ತದೆ. ಒತ್ತಿ ಕೆಲ ಕ್ಷಣ ಹಿಡಿದರೆ ವಿಡಿಯೊ ದಾಖಲಿಸಿಕೊಳ್ಳಬಹುದು.
ಆ್ಯಪಲ್ ಇಂಟಲಿಜೆನ್ಸ್
ಐಒಎಸ್ 18.1 ಕಾರ್ಯಾಚರಣಾ ವ್ಯವಸ್ಥೆಯ ಅಪ್‌ಗ್ರೇಡ್ ಅಕ್ಟೋಬರ್ ಮಾಸಾಂತ್ಯದಲ್ಲಿ ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಇದರಲ್ಲಿ ಸ್ಯಾಮ್‌ಸಂಗ್, ಗೂಗಲ್‌ನಂತೆಯೇ ಆ್ಯಪಲ್ ಕೂಡ ತನ್ನದೇ ಆದ ಆ್ಯಪಲ್ ಇಂಟೆಲಿಜೆನ್ಸ್ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆಯ ವೈಶಿಷ್ಟ್ಯವನ್ನು ಅಳವಡಿಸಿದೆ. ಓದುವ ಟೂಲ್, ಪಠ್ಯದ ಸಾರಾಂಶ ಒದಗಿಸುವುದು, ನಮ್ಮದೇ ಎಮೋಜಿಗಳನ್ನು ತಯಾರಿಸುವುದು, ನಿರ್ದಿಷ್ಟ ರೀತಿಯ ಇಮೇಲ್ ಅಥವಾ ಲೇಖನಕ್ಕೆ ಪಠ್ಯವನ್ನು ತಯಾರಿಸಿಕೊಡುವುದು ಮುಂತಾದ ಕೆಲಸಗಳು ಇದರಲ್ಲಿವೆ.
ಕ್ಯಾಮೆರಾ
48 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾ ಇದೆ. 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಲೆನ್ಸ್ ನಿರ್ದಿಷ್ಟ ವಸ್ತುವಿನ ಮೇಲೆ ಸ್ವಯಂಚಾಲಿತವಾಗಿ ಫೋಕಸ್ ಮಾಡಲು ನೆರವಾಗುತ್ತದೆ. ಹಗಲು ಬೆಳಕಿನಲ್ಲಿ ತೆಗೆದ ಚಿತ್ರಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಸ್ಪಷ್ಟವಾಗಿ ಮತ್ತು ಶಾರ್ಪ್ ಆಗಿ ವಸ್ತುಗಳ ಡೀಟೇಲ್ಸ್ ಸೆರೆಯಾಗುತ್ತವೆ. ಸಹಜ ಬಣ್ಣಗಳು ಆ್ಯಪಲ್ ಕ್ಯಾಮೆರಾದ ವಿಶೇಷತೆಗಳಲ್ಲೊಂದು. 2x ಡಿಜಿಟಲ್ ಝೂಮ್ ಮೂಲಕವೂ ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ರಾತ್ರಿ ಅಥವಾ ಕಡಿಮೆ ಬೆಳಕಿನಲ್ಲಿಯೂ ಚಿತ್ರಗಳು ಶಾರ್ಪ್ ಆಗಿ ಮೂಡಿಬರುತ್ತವೆ ಮತ್ತು ಬೆಳಕಿನ ಸ್ವಯಂ ಹೊಂದಾಣಿಕೆಯೊಂದಿಗೆ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತವೆ.
ಅಲ್ಟ್ರಾವೈಡ್ ಕ್ಯಾಮೆರಾ ಮೂಲಕ ದೂರದ ಚಿತ್ರಗಳನ್ನು ಹಾಗೂ ಹೆಚ್ಚು ವಿಸ್ತಾರವಾದ ಪ್ರದೇಶದ ಚಿತ್ರವನ್ನು ದೂರದಿಂದಲೇ ಸೆರೆಹಿಡಿಯಬಹುದು. ಅದೇ ರೀತಿ, ಇದರಲ್ಲಿ ಆಟೋಫೋಕಸ್ ವ್ಯವಸ್ಥೆಯಿರುವುದರಿಂದ, ತೀರಾ ಸಮೀಪದ ಚಿತ್ರಗಳನ್ನು ಕೂಡ (ಉದಾಹರಣೆಗೆ, ಹೂವು, ಕೀಟ ಇತ್ಯಾದಿ) ಸುಂದರವಾಗಿ, ಸ್ಪಷ್ಟವಾಗಿ ಸೆರೆಹಿಡಿಯಬಹುದಾಗಿದೆ.
12 ಮೆಗಾಪಿಕ್ಸೆಲ್ ಆಟೋಫೋಕಸ್ ವೈಶಿಷ್ಟ್ಯವಿರುವ ಮುಂಭಾಗದ (ಸೆಲ್ಫಿ) ಕ್ಯಾಮೆರಾದಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಸೆರೆಯಾಗುತ್ತವೆ. ಹೆಚ್ಚು ಜನರ ಗುಂಪಿನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅನುಕೂಲಕರ.
4ಕೆ ಸಾಮರ್ಥ್ಯದ ವಿಡಿಯೊಗಳು ಅತ್ಯಂತ ಸ್ಪಷ್ಟ ಧ್ವನಿಯೊಂದಿಗೆ ಸೆರೆಯಾಗುವುದು ಆ್ಯಪಲ್ ಐಫೋನ್ ವೈಶಿಷ್ಟ್ಯ. 16 ಪ್ಲಸ್‌ನಲ್ಲಿಯೂ ಇದನ್ನು ಗಮನಿಸಬಹುದು. ಅಲ್ಟ್ರಾವೈಡ್ ಲೆನ್ಸ್ ಮೂಲಕ ಬರುವ ಕ್ಲಿಪ್‌ಗಳು ಕೂಡ ಶಾರ್ಪ್ ಆಗಿ ಗಮನ ಸೆಳೆಯುವಂತಿವೆ. ಹಾಡುಗಳನ್ನು ಆಲಿಸಲು ಮತ್ತು ಕರೆಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಸ್ಪೀಕರ್ ಧ್ವನಿಯ ಗುಣಮಟ್ಟವು ಕೂಡ ಆನಂದದಾಯಕವಾಗಿದೆ.
ಬ್ಯಾಟರಿ ಸಾಮರ್ಥ್ಯವು ಹಿಂದಿನ ಮಾಡೆಲ್‌ಗಿಂತ ತುಸು ಅಂದರೆ ಶೇ 7ರಷ್ಟು ಹೆಚ್ಚಾಗಿದ್ದರೂ, ಹೆಚ್ಚು ಶಕ್ತಿಶಾಲಿಯಾದ ಆ್ಯಪಲ್ ಎ18 ಚಿಪ್‌ಸೆಟ್, ಐಒಎಸ್ 18ರ ಆಧುನಿಕ ಸ್ಪರ್ಶ ಮತ್ತು ಕೆಲವು ಹಾರ್ಡ್‌ವೇರ್ ಸಂಬಂಧಿತ ವೈಶಿಷ್ಟ್ಯಗಳಿಂದಾಗಿ ಬ್ಯಾಟರಿ ಚಾರ್ಜ್ ಗರಿಷ್ಠ ಬಾಳಿಕೆ ಬರುತ್ತದೆ. ಬ್ರೌಸಿಂಗ್, ಒಂದಷ್ಟು ವಿಡಿಯೊ ವೀಕ್ಷಣೆ ಮತ್ತು ಇತರ ದೈನಂದಿನ ಕಾರ್ಯಚಟುವಟಿಕೆಗಳನ್ನು ಮಾಡಿದಾಗ 25 ಗಂಟೆ ಬ್ಯಾಟರಿ ಚಾರ್ಜ್‌ಗೆ ಸಮಸ್ಯೆಯಾಗಲಿಲ್ಲ.
ಸಾಮರ್ಥ್ಯ ಹೇಗಿದೆ?
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡ ಫೋನ್, ಆದರೆ ಬೆಲೆ ತೀರಾ ಹೆಚ್ಚಿರಬಾರದು, ಹೆಚ್ಚು ಆಧುನಿಕ ವೈಶಿಷ್ಟ್ಯಗಳಿರಬೇಕು ಎಂದುಕೊಳ್ಳುವವರಿಗೆ ಇದು ಸೂಕ್ತವಾದೀತು. ಸುಲಲಿತವಾದ ಕಾರ್ಯಾಚರಣೆ, ಐಒಎಸ್ 18ರ ಅತ್ಯಾಧುನಿಕ ವೈಶಿಷ್ಟ್ಯಗಳು, ಆ್ಯಪಲ್ ಇಂಟೆಲಿಜೆನ್ಸ್, ಕ್ಯಾಮೆರಾ ಬಟನ್, ಆ್ಯಕ್ಷನ್ ಬಟನ್, ದೊಡ್ಡ ಪರದೆ ಮತ್ತು ಗಟ್ಟಿಯಾದ ಫೋನ್ ಬಾಡಿಯಿಂದ ಐಫೋನ್ 16 ಪ್ಲಸ್ ಗಮನ ಸೆಳೆಯುತ್ತದೆ. ಇದಲ್ಲದೆ, ಎಂದಿನಂತೆ ಆ್ಯಪಲ್‌ನಿಂದ ಐದು ವರ್ಷಗಳ ಕಾಲ ತಂತ್ರಾಂಶ ಅಪ್‌ಡೇಟ್ ದೊರೆಯಲಿದೆ. ದೊಡ್ಡ ಪರದೆಯ ಐಫೋನ್ ಪ್ರೊ ಮ್ಯಾಕ್ಸ್ ಸರಣಿಯ ಫೋನ್‌ಗಳು ದುಬಾರಿ ಅಂತ ಅಂದುಕೊಳ್ಳುವವರಿಗೆ, ಬಹುತೇಕ ಪ್ರಮುಖ ಪ್ರೊ ಅದರ ವೈಶಿಷ್ಟ್ಯಗಳನ್ನು ಹೊಂದಿರುವ, ಆದರೆ ಬೆಲೆ ಕೊಂಚ ಕಡಿಮೆ ಇರುವ ಐಫೋನ್ 16 ಪ್ಲಸ್ ಇಷ್ಟವಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.