ADVERTISEMENT

Apple iPhone 16 Pro Review: ಅತ್ಯುತ್ತಮ ಕ್ಯಾಮೆರಾ, ವೇಗದ ಕಾರ್ಯಾಚರಣೆ

48 MP ಕ್ಯಾಮೆರಾ, ಎ18 ಪ್ರೊ ಚಿಪ್, 6.3 ಇಂಚು OLED ಸ್ಕ್ರೀನ್, ಪ್ರೀಮಿಯಂ ವಿನ್ಯಾಸ, ಕನ್ನಡ ಕೀಬೋರ್ಡ್, ₹1,19,900 ಆರಂಭಿಕ ಬೆಲೆ. ಫೋಟೊ, ವಿಡಿಯೊ, ಗೇಮಿಂಗ್‌ಗಾಗಿ ಸೂಕ್ತ.

ಅವಿನಾಶ್ ಬಿ.
Published 18 ಅಕ್ಟೋಬರ್ 2024, 10:50 IST
Last Updated 18 ಅಕ್ಟೋಬರ್ 2024, 10:50 IST
<div class="paragraphs"><p>ಆ್ಯಪಲ್ ಐಫೋನ್ 16 ಪ್ರೊ</p></div>

ಆ್ಯಪಲ್ ಐಫೋನ್ 16 ಪ್ರೊ

   

ಅವಿನಾಶ್ ಬಿ.

ಆ್ಯಪಲ್‌ನ ಬಹುನಿರೀಕ್ಷಿತ ಈ ವರ್ಷದ ಐಫೋನ್ 16 ಪ್ರೊ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಕಾಂಪ್ಯಾಕ್ಟ್ ಗಾತ್ರದ ಫ್ಲ್ಯಾಗ್‌ಶಿಪ್ ಫೋನ್‌ನ ವೈಶಿಷ್ಟ್ಯಗಳ ಬಗೆಗಿನ ಕುತೂಹಲಕ್ಕೆ ತೆರೆಬಿದ್ದಿದ್ದು, ಪ್ರಜಾವಾಣಿಗೆ ರಿವ್ಯೂಗೆ ದೊರೆತ, 6.3 ಇಂಚು ಸ್ಕ್ರೀನ್‌ನ ಸ್ಮಾರ್ಟ್ ಫೋನ್ ಹೇಗಿದೆ? ಮೂರು ವಾರ ಬಳಸಿ ನೋಡಿದ ಬಳಿಕ ಗಮನಕ್ಕೆ ಬಂದ ವಿಚಾರಗಳು ಇಲ್ಲಿವೆ.

ADVERTISEMENT

ನಿರೀಕ್ಷೆಗೆ ತಕ್ಕಂತೆ, ಗ್ರಾಫೈಟ್ ಐಫೋನ್ 16 ಪ್ರೊ ನೋಡಲು ಆಕರ್ಷಕವಾಗಿದೆ ಮತ್ತು ಈ ಬಾರಿ ವಿಶೇಷವಾಗಿ ಗಮನ ಸೆಳೆದಿರುವುದು ಅದರಲ್ಲಿರುವ ಕ್ಯಾಮೆರಾ ನಿಯಂತ್ರಣ ಬಟನ್. ಜೊತೆಗೆ, ಈಗಾಗಲೇ ಪಾರ್ಶ್ವಭಾಗದಲ್ಲಿರುವ ಆ್ಯಕ್ಷನ್ ಬಟನ್‌ನಲ್ಲಿ ಒಂದು ಪುಟ್ಟ ಬದಲಾವಣೆ. ಉಳಿದಂತೆ, ಎ18 ಪ್ರೊ ಚಿಪ್, 6.3 ಇಂಚಿನ OLED ಸ್ಕ್ರೀನ್, ಐಒಎಸ್ 18 ಅತ್ಯಾಧುನಿಕ ಕಾರ್ಯಾಚರಣೆ ವ್ಯವಸ್ಥೆಯಿದ್ದು, ಫೋನ್ ಬೆಲೆ ₹1,19,000ದಿಂದ ಆರಂಭವಾಗುತ್ತದೆ.

ಪ್ರಮುಖ ವೈಶಿಷ್ಟ್ಯಗಳು

  • ಡಿಸ್‌ಪ್ಲೇ 6.3-ಇಂಚು

  • ಪ್ರೊಸೆಸರ್ ಎ18 ಪ್ರೊ

  • ಕ್ಯಾಮೆರಾ (ಪ್ರಧಾನ) 48 MP

  • ಕ್ಯಾಮೆರಾ (ಸೆಲ್ಫಿ) 12 MP

  • RAM 8 GB

  • ಮೆಮೊರಿ 128/256/512 GB or 1 TB

  • ಕಾರ್ಯಾಚರಣಾ ವ್ಯವಸ್ಥೆ iOS 18

  • ತೂಕ 194 ಗ್ರಾಂ

  • ಆರಂಭಿಕ ಬೆಲೆ Rs 1,19,900

ವಿನ್ಯಾಸ, ಡಿಸ್‌ಪ್ಲೇ

ಐಫೋನ್ 16 ಪ್ರೊ ಗಾತ್ರವನ್ನು ಗಮನಿಸಿದರೆ ಸಾಮಾನ್ಯ ಬಳಕೆದಾರರಿಗೆ ಸೂಕ್ತವಾಗಿದೆ. ಕಂಟೆಂಟ್ ಕ್ರಿಯೇಟರ್‌ಗಳು ಅಥವಾ ವಿಡಿಯೊ, ಗೇಮ್ಸ್ ಆಡುವವರಿಗೆಂದೇ ದೊಡ್ಡ ಪರದೆಯುಳ್ಳ ಪ್ರೊ ಮ್ಯಾಕ್ಸ್ ಆವೃತ್ತಿ ಇರುತ್ತದೆ. ಆದರೆ ಇದು, ಐಫೋನ್ 15 ಪ್ರೊ ಸಾಧನಕ್ಕೆ ಹೋಲಿಸಿದರೆ 0.2 ಇಂಚಿನಷ್ಟು ದೊಡ್ಡ ಪರದೆಯಿದ್ದರೂ (6.1 ಇಂಚು ಇದ್ದದ್ದು 6.3 ಇಂಚು ಸ್ಕ್ರೀನ್) ಜೇಬಿನಲ್ಲಿ ಸುಲಭವಾಗಿ ಕೂರುತ್ತದೆ. ಟೈಟಾನಿಯಂ ಚೌಕಟ್ಟು, ಗಟ್ಟಿ ಗಾಜಿನ ಹಿಂಭಾಗದ ಕವಚ, ಸ್ಕ್ರೀನ್ ಮೇಲೆ ಡೈನಮಿಕ್ ಐಲೆಂಡ್ ಹೆಸರಿನ ಖಾಲಿ ಭಾಗ - ಇವೆಲ್ಲವೂ ಸಾಧನಕ್ಕೆ ಪ್ರೀಮಿಯಂ ನೋಟವನ್ನು ನೀಡುತ್ತದೆ.

ಐಫೋನ್ 16 ಪ್ರೊ ಸಾಧನದಲ್ಲಿ ಆ್ಯಪಲ್, ಆ್ಯಕ್ಷನ್ ಬಟನ್ ಜೊತೆಗೆ ಈ ಬಾರಿ ವಿಶೇಷವಾಗಿ ಒಂದು ಕ್ಯಾಮೆರಾ ಬಟನ್ ಅಳವಡಿಸಿದೆ. ಸಾಂಪ್ರದಾಯಿಕ ಕ್ಯಾಮೆರಾದಲ್ಲಿರುವ ಶಟರ್ ಬಟನ್ ಇರುವಂತಿದೆ. ಈ ಬಟನ್ ಮೂಲಕ ಕ್ಯಾಮೆರಾ ತೆರೆಯಬಹುದು, ನೇರವಾಗಿ ಫೋಟೊ ಅಥವಾ ವಿಡಿಯೊ ರೆಕಾರ್ಡಿಂಗ್ ಪ್ರಾರಂಭಿಸಬಹುದು. ಮೆದುವಾಗಿ ಒತ್ತಿದರೆ ಝೂಮ್, ಎಕ್ಸ್‌ಪೋಶರ್, ಡೆಪ್ತ್ ಮುಂತಾದ ಕೆಲವೊಂದು ಕ್ಯಾಮೆರಾ ಸಲಕರಣೆಗಳಿರುವ ಪುಟ್ಟ ಮೆನು ಕೆಳ-ಬಲತುದಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಆಯ್ಕೆ ಮಾಡುವುದಕ್ಕೆ, ಕ್ಯಾಮೆರಾ ನಿಯಂತ್ರಣ ಬಟನ್ ಮೇಲೆ ಬೆರಳನ್ನು ಆಡಿಸಿದರಾಯಿತು. ಇದು ಸ್ಪರ್ಶಸಂವೇದಿ ಬಟನ್. ಕಂಪ್ಯೂಟರ್ ಕೀಬೋರ್ಡ್‌ನ ಟಚ್ ಪ್ಯಾಡ್ ರೀತಿ ಕೆಲಸ ಮಾಡುತ್ತದೆ. ನಿರ್ದಿಷ್ಟ ಮೆನು ಐಟಂ ಆಯ್ಕೆ ಮಾಡಲು, ಅದರ ಮೇಲೆ ಕರ್ಸರ್ ಇರಿಸಿ ಮೆದುವಾಗಿ ಒತ್ತಿದರಾಯಿತು.

ಬಳಸಿ ಅಭ್ಯಾಸವಾದವರಿಗೆ ಕ್ಯಾಮೆರಾ ಆ್ಯಪ್‌ನಲ್ಲೇ ಇರುವ ಆನ್-ಸ್ಕ್ರೀನ್ ಬಟನ್‌ಗಳು ಹೆಚ್ಚು ಇಷ್ಟವಾದೀತಾದರೂ, ಹೊಸತನವಿರುವ ಈ ಬಟನ್‌ನ ಬಳಕೆ ಅಭ್ಯಾಸ ಮಾಡಿಕೊಂಡರೆ ಫೋಟೊ, ವಿಡಿಯೊ ರೆಕಾರ್ಡಿಂಗ್ ಸುಲಭವಾಗುತ್ತದೆ.

ಅತ್ಯಾಧುನಿಕವಾದ ಎ18 ಪ್ರೊ ಪ್ರೊಸೆಸರ್ ಇದರಲ್ಲಿದ್ದು, ಐಫೋನ್ 15 ಪ್ರೊ ಬಳಸಿದವರಿಗೆ ಖಂಡಿತವಾಗಿಯೂ ವ್ಯತ್ಯಾಸ ತಿಳಿಯುತ್ತದೆ. ಹೆಚ್ಚು ಸುಲಲಿತವಾದ ಬ್ರೌಸಿಂಗ್ ಅನುಭವ ಮತ್ತು ಗೇಮಿಂಗ್‌ಗೂ ಹೆಚ್ಚು ವೇಗ ತುಂಬುತ್ತದೆ. ಜೊತೆಗೆ, ಬ್ಯಾಟರಿ ಬಾಳಿಕೆಯನ್ನು ಇದು ಹೆಚ್ಚಿಸಿರುವುದೂ ಗಮನಕ್ಕೆ ಬಂತು.

ಆಕರ್ಷಕ ಕ್ಯಾಮೆರಾ

ಫೋಟೊಗ್ರಫಿ ಅಥವಾ ವಿಡಿಯೊಗ್ರಫಿ ಪ್ರಿಯರಿಗೆ ಐಫೋನ್ 16 ಪ್ರೊ ಅತ್ಯಂತ ಖುಷಿ ನೀಡಬಲ್ಲದು. 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮೂಲಕ ಸ್ಪಷ್ಟವಾದ ಚಿತ್ರ, ವಿಡಿಯೊಗಳು ಸೆರೆಯಾಗುತ್ತವೆ. 48 ಮೆಗಾಪಿಕ್ಸೆಲ್ ಫ್ಯೂಶನ್ ಕ್ಯಾಮೆರಾ ಮೂಲಕ 5x ಟೆಟ್ರಾ-ಪ್ರಿಸಂ ಝೂಮ್ ತಂತ್ರಜ್ಞಾನವಿದ್ದು, ದೂರದ ಚಿತ್ರಗಳನ್ನು ಕೂಡ ಹೆಚ್ಚು ಪಿಕ್ಸಲೇಟ್ ಆಗದಂತೆ ಸೆರೆಹಿಡಿಯಲು ಅನುಕೂಲಕರವಾಗಿದೆ. ಈ ವೈಶಿಷ್ಟ್ಯವು ಇದುವರೆಗೆ ಪ್ರೊ-ಮ್ಯಾಕ್ಸ್ ಸರಣಿಗೆ ಮಾತ್ರ ಇತ್ತು. ಇದೀಗ ಪ್ರೊ ಸರಣಿಗೂ ಬಂದಿದೆ. ಉಳಿದಂತೆ, 25x ಡಿಜಿಟಲ್ ಝೂಮ್ ಮಾಡಬಹುದಾದರೂ, ಚಿತ್ರ ಪಿಕ್ಸಲೇಟ್ ಆಗುತ್ತದೆ.

ನೆರಳು ಮತ್ತು ಬೆಳಕುಗಳ ಪ್ರಖರತೆಯನ್ನು ಈ ಕ್ಯಾಮೆರಾ ಸೆಟ್ಅಪ್ ಚೆನ್ನಾಗಿ ನಿಭಾಯಿಸಿ, ಉತ್ತಮ ಚಿತ್ರಗಳನ್ನು ನೀಡಬಲ್ಲದು. ಸಹಜವಾದ ಬಣ್ಣಗಳೊಂದಿಗೆ ಹಗಲಿನ ಚಿತ್ರಗಳು ಗಮನ ಸೆಳೆದರೆ, ನೆರಳು-ಬೆಳಕುಗಳನ್ನು ಸಮರ್ಥವಾಗಿ ಸಂಯೋಜಿಸುವ ರಾತ್ರಿಯ ಚಿತ್ರಗಳು ವಿಶೇಷ ಆಕರ್ಷಣೆಯನ್ನು ಒದಗಿಸುತ್ತವೆ. ಮಂದ ಬೆಳಕಿನಲ್ಲಿ ನಿರ್ದಿಷ್ಟ ವಸ್ತುವಿಷಯ (ಆಬ್ಜೆಕ್ಟ್) ಮೇಲೆ ಹೆಚ್ಚು ಒತ್ತು ನೀಡಿ, ಸ್ವಯಂ ಫೋಕಸ್‌ನಿಂದ ಉತ್ತಮ ಚಿತ್ರಗಳು ಸೆರೆಯಾಗುತ್ತವೆ. ಯಕ್ಷಗಾನ ಕಾರ್ಯಕ್ರಮದಲ್ಲಿ ಎದುರಿನಿಂದ ಬೆಳಕು ಇದ್ದಾಗ, ಸ್ಟೇಜ್‌ನಿಂದ ಸೆರೆಹಿಡಿದ ಚಿತ್ರದ ಸ್ಪಷ್ಟತೆ, ನೆರಳು-ಬೆಳಕಿನ ಸಂಯೋಜನೆ ಗಮನಿಸಿ.

ಆ್ಯಪಲ್ ಇಂಟೆಲಿಜೆನ್ಸ್ ಅಳವಡಿಕೆಯ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿಬರುತ್ತಿವೆ. ಆದರೆ, ಆರಂಭದಲ್ಲಿ ಅಮೆರಿಕದ ಫೋನ್‌ಗಳಿಗೆ ಇದು ಬಿಡುಗಡೆಯಾಗುತ್ತದೆ ಮತ್ತು ಇನ್ನಷ್ಟೇ ಭಾರತೀಯ ಬಳಕೆದಾರರಿಗೂ ಲಭ್ಯವಾಗಬೇಕಿದೆ. ಆ್ಯಪ್ ಕೇಂದ್ರಿತವಾದ ಕೃತಕ ಬುದ್ಧಿಮತ್ತೆ (ಆ್ಯಪಲ್ ಎಐ) ವೈಶಿಷ್ಟ್ಯಗಳ ಬಗ್ಗೆ ಸಾಕಷ್ಟು ಕುತೂಹಲವಿದೆ. ಐಒಎಸ್ 18.1 ಅಪ್‌ಗ್ರೇಡ್‌ನಲ್ಲಿ ಬಹುಶಃ ಮುಂದಿನ ವರ್ಷಾರಂಭದಲ್ಲಿ ಇದು ಭಾರತಕ್ಕೆ ದೊರೆಯುವ ಸಾಧ್ಯತೆಗಳಿವೆ.

ಬ್ಯಾಟರಿ

ಸಾಮಾನ್ಯ ಬಳಕೆಗೆ (ಇಮೇಲ್, ವಾಟ್ಸ್ಆ್ಯಪ್, ಒಂದೆರಡು ಗಂಟೆ ವಿಡಿಯೊ, ಒಂದು ಗಂಟೆ ಸೋಷಿಯಲ್ ಮೀಡಿಯಾ, ಸುದ್ದಿ ಆ್ಯಪ್ ಇತ್ಯಾದಿ) ದಿನಪೂರ್ತಿ ಬ್ಯಾಟರಿ ಚಾರ್ಜ್‌ಗೆ ಯಾವುದೇ ಸಮಸ್ಯೆಯಾಗಿಲ್ಲ. ಐಫೋನ್ 15 ಪ್ರೊ ಹೋಲಿಸಿದರೆ, ಬ್ಯಾಟರಿ ಚಾರ್ಜ್ ಸ್ವಲ್ಪ ಹೆಚ್ಚು ಕಾಲವೇ ಉಳಿಯುತ್ತದೆ. ಇದಕ್ಕೆ ಕಾರಣ ಅತ್ಯಾಧುನಿಕ ಚಿಪ್‌ಸೆಟ್ ಮತ್ತು ಸಂಬಂಧಿತ ಹಾರ್ಡ್‌ವೇರ್‌ಗಳು. ವೈರ್‌ಲೆಸ್ ಚಾರ್ಜಿಂಗ್ ಕೂಡ ವೇಗವಾಗಿಯೇ ಆಗುತ್ತದೆ.

ಕನ್ನಡ ಕೀಬೋರ್ಡ್

ಐಒಎಸ್ 18ರಲ್ಲಿ ಮತ್ತೊಂದು ಹೊಸ ಆಕರ್ಷಣೆ ಎಂದರೆ, ಕನ್ನಡಕ್ಕೆ ವೇಗವಾಗಿ ಟೈಪ್ ಮಾಡಲು ಅನುಕೂಲವಾಗುವ ಇನ್‌ಸ್ಕ್ರಿಪ್ಟ್ ಲೇಔಟ್ ಇರುವ ಕೀಬೋರ್ಡ್ ಮಾತ್ರವೇ ಅಲ್ಲದೆ, ಲಿಪ್ಯಂತರ ಕೀಬೋರ್ಡ್ ಕೂಡ ನೀಡಲಾಗಿದೆ. ಅಂದರೆ, ಇಂಗ್ಲಿಷ್ ಲಿಪಿಯಲ್ಲಿ ಬರೆದಿರುವುದನ್ನು ತಾನಾಗಿ ಕನ್ನಡ ಲಿಪಿಗೆ ಪರಿವರ್ತಿಸುವ ಕೀಬೋರ್ಡ್ ಇದು. ಬಾಹ್ಯ ಕೀಬೋರ್ಡ್ ಆ್ಯಪ್ ಬಳಸಲು ಇಷ್ಟಪಡದ ಕನ್ನಡಿಗರಿಗೆ ಈ ಅಂತರ್-ನಿರ್ಮಿತ ಕೀಬೋರ್ಡ್ ಹೆಚ್ಚು ಇಷ್ಟವಾಗಬಹುದು.

ಬೆಲೆ

ಸ್ಟೋರೇಜ್ ವ್ಯತ್ಯಾಸಗಳೊಂದಿಗೆ ನಾಲ್ಕು ಮಾದರಿಗಳು ಲಭ್ಯವಿದ್ದು 128 GB, 256 GB, 512 GB ಹಾಗೂ 1 TB ಮಾದರಿಗಳಿಗೆ ಅನುಕ್ರಮವಾಗಿ ₹1,19,900, ₹1,29,900, ₹1,49,900 ಹಾಗೂ ₹1,69,900 ಬೆಲೆ ಇದೆ.

ಒಟ್ಟಾರೆ ಹೇಗಿದೆ?

ಆ್ಯಪಲ್ ಐಫೋನ್ 16 ಪ್ರೊ ಫೋನ್ ತೀರಾ ದೊಡ್ಡದಲ್ಲದ, ಜೇಬಿನಲ್ಲಿ ಕೂರಬಹುದಾದ ಉತ್ತಮ ಬ್ಯಾಟರಿ ಇರುವ, ಅತ್ಯುತ್ತಮ ಕ್ಯಾಮೆರಾ ಇರುವ ಐಷಾರಾಮಿ ಫೋನ್. ಹೆಚ್ಚು ಬಾಳಿಕೆಯಿರುವ ಗಟ್ಟಿಯಾದ ಬಾಡಿ ಇದೆ. ಅಲ್ಲದೆ ಅತ್ಯಾಧುನಿಕ ಪ್ರೊಸೆಸರ್ ಮೂಲಕವಾಗಿ ನ್ಯಾವಿಗೇಶನ್, ಗೇಮಿಂಗ್ ಅತ್ಯಂತ ಸುಲಲಿತವಾಗಿದೆ. ಫೋಟೋಗ್ರಫಿ, ವಿಡಿಯೊಗ್ರಫಿಗೆ ಮತ್ತು ಆಡಿಯೊ ರೆಕಾರ್ಡಿಂಗ್‌ಗೆ ಕೂಡ ಪೂರಕವಾಗಿರುವುದರಿಂದ ಜನ ಸಾಮಾನ್ಯರಲ್ಲದೆ, ಕಂಟೆಂಟ್ ಕ್ರಿಯೇಟರ್‌ಗಳಿಗೆ ಪ್ರತ್ಯೇಕ ಕ್ಯಾಮೆರಾ ಖರೀದಿಸಬೇಕಾದ ಅಗತ್ಯವಿಲ್ಲದಂತೆ ಮಾಡಬಲ್ಲ ಫೋನ್ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.