ಸ್ಮಾರ್ಟ್‌ಫೋನ್ ಜೊತೆಗೆ ಬಳಸುವ ಇಯರ್‌ಬಡ್ಸ್ ಬಗ್ಗೆ ಜನರ ಆಕರ್ಷಣೆಯೂ, ಕಾಳಜಿಯೂ ಇತ್ತೀಚೆಗೆ ಹೆಚ್ಚಾಗಿದೆ. ಈ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ಪ್ರಮುಖ ಬ್ರ್ಯಾಂಡ್‌ನ ಕಂಪನಿಗಳ ಜೊತೆಗೆ ದೇಶೀ ಕಂಪನಿಗಳೂ ಉತ್ತಮ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಪೈಪೋಟಿ ನೀಡುತ್ತಿವೆ. ಅಂಥವುಗಳಲ್ಲೊಂದು ಆಡಿಯೋ ಸಾಧನಗಳಲ್ಲಿ ಗಮನ ಸೆಳೆಯುತ್ತಿರುವ, ಭಾರತೀಯ ಮೂಲದ ಮಿವಿ ಕಂಪನಿಯ ಸೂಪರ್‌ಪಾಡ್ಸ್ ಡ್ಯೂಟೊ (Mivi Superpods Dueto). ಕೇವಲ ₹1999 ಗೆ ಲಭ್ಯವಾಗುವ ಈ ಟ್ರೂ ವೈರ್‌ಲೆಸ್ ಸ್ಪೀಕರ್ (TWS) ಇರುವ ಇಯರ್‌ಬಡ್ಸ್ ಹೇಗಿದೆ? ಎರಡು ವಾರ ಬಳಸಿದ ಬಳಿಕ ಕಂಡು ಬಂದ ಅಂಶಗಳು ಇಲ್ಲಿವೆ.
ವಿನ್ಯಾಸ ಮತ್ತು ಅನುಕೂಲ
ಪ್ಯಾಕ್ ತೆರೆದಾಕ್ಷಣ ಗಮನ ಸೆಳೆದದ್ದು ಚಿನ್ನದ ಬಣ್ಣದ ಲೇಪನವಿರುವ ಚಾರ್ಜಿಂಗ್ ಕೇಸ್‌ನ ಮುಚ್ಚಳ. ತೀರಾ ಆಕರ್ಷಕವಾಗಿದ್ದು, ಕನ್ನಡಿಯಂತಹ ಹೊಳಪಿದೆ. ಇದರ ಜೊತೆಗೆ ಇಯರ್‌ಬಡ್‌ಗಳ 'ಸ್ಟೆಮ್' (ಹಿಡಿಕೆ) ಮೇಲ್ಭಾಗದಲ್ಲಿಯೂ ಚಿನ್ನದ ಬಣ್ಣ ಲೇಪಿತವಾಗಿದೆ. ಆದರೆ ಪ್ಲಾಸ್ಟಿಕ್‌ನಿಂದ ಮಾಡಲಾಗಿರುವುದರಿಂದ, ಬೆರಳಚ್ಚು ಅಥವಾ ಗೀರುಗಳಾಗದಂತೆ ಎಚ್ಚರ ವಹಿಸಬೇಕಾಗಬಹುದು. ಅದರ ಹಿಂಭಾಗದಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಮತ್ತು ಮುಂಭಾಗದಲ್ಲಿ, ಚಾರ್ಜಿಂಗ್ ಆಗುತ್ತಿರುವುದನ್ನು ತೋರಿಸುವ ನಾಲ್ಕು ಪುಟ್ಟ ಎಲ್‌ಇಡಿ ಬಲ್ಬುಗಳಿವೆ. ಅಯಸ್ಕಾಂತದ ಶಕ್ತಿಯ ಮೂಲಕ ಇಯರ್‌ಬಡ್‌ಗಳು ಕೇಸ್‌ನೊಳಗೆ ಚೆನ್ನಾಗಿ ಕೂರುತ್ತವೆ.
ಉದ್ದನೆಯ ಹಿಡಿಕೆ ಇರುವುದರಿಂದ ಈ ಬಡ್‌ಗಳು ಕಿವಿಯಲ್ಲಿ ಸರಿಯಾಗಿ ಕೂರಲು ಸಹಾಯಕವಾಗಿದೆ. ತುದಿಗಳಲ್ಲಿರುವ ಸಿಲಿಕೋನ್ ಇಯರ್‌ಟಿಪ್ಸ್ ಕಿವಿಗೆ ಅನುಕೂಲಕರವಾಗಿದೆ. IPX4 ರೇಟೆಡ್ ಆಗಿರುವುದರಿಂದ ಬೆವರು ಅಥವಾ ನೀರಿನ ಸಿಂಚನವಾದರೆ ಸಮಸ್ಯೆಯಾಗದು.
ಇಯರ್‌ಬಡ್‌ಗಳಲ್ಲಿರುವ ಸ್ಪರ್ಶ ಸಂವೇದನೆ (ಟಚ್ ಸೆನ್ಸಿಟಿವಿಟಿ) ಚೆನ್ನಾಗಿದೆ. ಇದರ ಮೂಲಕ ಪ್ಲೇ/ಆಫ್ ಮಾಡುವುದು, ಕರೆ ಸ್ವೀಕರಿಸುವುದು/ಕಟ್ ಮಾಡುವುದು ಹಾಗೂ ವಾಲ್ಯೂಮ್ ನಿಯಂತ್ರಣ ಮಾಡಬಹುದು. ಜೊತೆಗೆ ಧ್ವನಿ ಸಹಾಯಕ (ವಾಯ್ಸ್ ಅಸಿಸ್ಟೆಂಟ್) ಆ್ಯಪ್‌ಗಳನ್ನು ಕೂಡ ಈ ಪ್ಯಾನೆಲ್ ಮೂಲಕವೇ ಸಕ್ರಿಯಗೊಳಿಸಬಹುದಾಗಿದೆ.
ಧ್ವನಿ ಮತ್ತು ಕರೆ ಗುಣಮಟ್ಟ
ಮಿವಿ ಸೂಪರ್‌ಪಾಡ್ಸ್ ಡ್ಯೂಟೊ ಇಯರ್‌ಬಡ್‌ಗಳಲ್ಲಿ ಸ್ಪಷ್ಟತೆಗಾಗಿ 6ಮಿಮೀ ಟ್ವೀಟರ್ ಮತ್ತು ಬೇಸ್ ಧ್ವನಿಗಾಗಿ 13ಮಿಮೀ ವೂಫರ್ ಜೊತೆಗೆ ಸ್ಟೀರಿಯೊ ಧ್ವನಿ ಪರಿಣಾಮ ಚೆನ್ನಾಗಿರುವುದರಿಂದ ಹಾಡುಗಳನ್ನು ಕೇಳುವುದು ಅತ್ಯಂತ ಹಿತಕರವಾಗಿದೆ. ಸಂಗೀತದ ವಿಭಿನ್ನ ಪರಿಕರಗಳ ಧ್ವನಿಗಳು ಸ್ಪಷ್ಟವಾಗಿ ಮತ್ತು ಪ್ರತ್ಯೇಕವಾಗಿ ಕೇಳಿಸುವುದರಿಂದ, ಇದಕ್ಕೆ ಪೂರಕವಾಗಿ ವಾತಾವರಣದ ಗದ್ದಲ ಕಡಿಮೆಗೊಳಿಸುವ (ENC) ವ್ಯವಸ್ಥೆಯೂ ಇರುವುದರಿಂದ ಸಂಗೀತಪ್ರಿಯರಿಗೆ ಇದು ಇಷ್ಟವಾಗಬಹುದು. ಜೊತೆಗೆ ಫೋನ್ ಕರೆಯಲ್ಲಿರುವಾಗ ಅತ್ತಕಡೆ ಇರುವವರಿಗೆ ನಮ್ಮ ಧ್ವನಿಯ ಸ್ಪಷ್ಟತೆ ಹೆಚ್ಚಿರುತ್ತದೆ.
ಈ ಇಯರ್‌ಬಡ್‌ಗಳನ್ನು ಎರಡು ಸಾಧನಗಳಿಗೆ ಏಕಕಾಲದಲ್ಲಿ ಸಂಪರ್ಕಿಸುವ ಅವಕಾಶವಿದೆ. ಬ್ಯಾಟರಿ ಬ್ಯಾಕಪ್ ಚೆನ್ನಾಗಿದ್ದು, ಚಾರ್ಜಿಂಗ್ ಕೇಸ್‌ನಲ್ಲಿ ಸುಮಾರು 50 ಗಂಟೆಗಳ ಬಳಕೆಗೆ ಬ್ಯಾಟರಿ ಇರುತ್ತದೆ. ಇಯರ್‌ಬಡ್ಸ್‌ನಲ್ಲಿ ಸುಮಾರು ಏಳೆಂಟು ಗಂಟೆ ನಿರಂತರವಾಗಿ ಸಂಗೀತ ಆಲಿಸಬಹುದಾಗಿದೆ.
2016ರಲ್ಲಿ ಭಾರತೀಯರಿಂದಲೇ ಆರಂಭಗೊಂಡಿದ್ದ ಮಿವಿ ಕಂಪನಿಯು ಭಾರತೀಯರ ಅಗತ್ಯಗಳನ್ನು ಗುರಿಯಾಗಿಸಿಕೊಂಡು 'ಮೇಡ್ ಇನ್ ಇಂಡಿಯಾ' ಆಡಿಯೋ ಸಾಧನಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಮಿವಿ ಸೂಪರ್‌ಪಾಡ್ಸ್ ಡ್ಯೂಟೊ ಅಗ್ಗದ ಬೆಲೆಯಲ್ಲಿ ದೊರೆಯುವ ಮೇಡ್ ಇನ್ ಇಂಡಿಯಾ ಇಯರ್‌ಪಾಡ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.