ADVERTISEMENT

Boult Crown Smarwatch: ಬೌಲ್ಟ್‌ಗೆ ಹೊಸ ಮೆರಗು ‘ಕ್ರೌನ್‌’

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 0:09 IST
Last Updated 22 ಜುಲೈ 2023, 0:09 IST
ಬೌಲ್ಟ್‌ ಕ್ರೌನ್
ಬೌಲ್ಟ್‌ ಕ್ರೌನ್   

ಸ್ಮಾರ್ಟ್‌ಸಾಧನಗಳ ವಿಭಾಗದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿರುವ ಬೌಲ್ಟ್‌ ಕಂಪ‍ನಿಯ ಹೊಸ ವೈಶಿಷ್ಟ್ಯಗಳೊಂದಿಗೆ ಹೊಸ ಸ್ಮಾರ್ಟ್‌ಸಾಧನಗಳನ್ನು ಬಿಡುಗುಡೆ ಮಾಡುತ್ತಲೇ ಇರುತ್ತದೆ. ಐಡಿಸಿ ವರದಿಯ ಪ್ರಕಾರ, 2023ರ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ಭಾರತದಲ್ಲಿ ಧರಿಸಬಲ್ಲ ಸಾಧನಗಳ (ಆಡಿಯೊ&ಸ್ಮಾರ್ಟ್‌ವಾಚ್‌) ವಿಭಾಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್‌ ಇದಾಗಿದೆ.

ಕಂಪನಿಯು ಈಚೆಗಷ್ಟೇ ಬ್ಲುಟೂತ್ ಕಾಲಿಂಗ್‌ ಇರುವ ಹೊಸ ಸ್ಮಾರ್ಟ್‌ವಾಚ್‌ ‘ಬೌಲ್ಟ್‌ ಕ್ರೌನ್‌’ (Boult Crown) ಬಿಡುಗಡೆ ಮಾಡಿದೆ. ಗುಣಮಟ್ಟ, ಬ್ಯಾಟರಿ ಬಾಳಿಕೆ, ಆಡಿಯೊ ಕ್ಲಾರಿಟಿ, ಫಿಟ್‌ನೆಸ್‌ ವೈಶಿಷ್ಟ್ಯಗಳು ಹೀಗೆ ಎಲ್ಲ ದೃಷ್ಟಿಯಿಂದಲೂ ಉತ್ತಮ ಸ್ಮಾರ್ಟ್‌ವಾಚ್‌ ಇದಾಗಿದೆ.

ಕಂಪನಿಯ ಈ ಹಿಂದಿನ ಎಲ್ಲ ಸ್ಮಾರ್ಟ್‌ವಾಚ್‌ಗಳಿಗಿಂತಲೂ ಇದು ಭಿನ್ನವಾಗಿದೆ. ಹೆಚ್ಚು ಇಷ್ಟವಾಗಿದ್ದು, ಇದರ ಚೌಕಾಕಾರದ ಡಯಲ್ ಮತ್ತು ಬೆಲ್ಟ್ ವಿನ್ಯಾಸ. ಜಿಂಕ್‌ ಅಲಾಯ್‌ ಮೆಟಲ್‌ ಬಳಸಿ ಡಯಲ್‌ ರೂಪಿಸಲಾಗಿದೆ. ಬೆಲ್ಟ್‌ ಅನ್ನು ಹಿಡಿದಿಟ್ಟುಕೊಳ್ಳಲು ಮೆಟಲ್‌ ಬಳಸಲಾಗಿದೆ. ಇದರಿಂದಾಗಿ ಕೈಯಲ್ಲಿ ಜಾರದಂತೆ ಗಟ್ಟಿಯಾಗಿ ಕೂರುತ್ತದೆ. ವಾಚ್‌ ತೆಗೆಯುವಾಗಲೂ ಜಾರಿಹೋಗುವುದಿಲ್ಲ. 1.95 ಇಂಚು ಎಚ್‌ಡಿ ಸ್ಕ್ರೀನ್‌, 900 ನೈಟ್ಸ್‌ ಬ್ರೈಟ್‌ನೆಸ್‌ ಡಿಸ್‌ಪ್ಲೇ ಹೊಂದಿದೆ. ಹೀಗಾಗಿ ತೀವ್ರ ಬಿಸಿಲಿನಲ್ಲಿಯೂ ಡಿಸ್‌ಪ್ಲೆ ಸ್ಪಷ್ಟವಾಗಿ ಕಾಣಿಸುತ್ತದೆ. ಸೈಡ್‌ ಬಟನ್‌ ಅನ್ನು 5 ಸೆಕೆಂಡ್‌ ಲಾಂಗ್ ಪ್ರೆಸ್‌ ಮಾಡಿದರೆ Reboot, Power off, Reset ಆಯ್ಕೆಗಳು ಕಾಣಿಸುತ್ತವೆ. ವಾಚ್‌ ಫೇಸ್‌ ಬದಲಿಸುವ ಬಟನ್‌ ಒಳಗೊಂಡಿದೆ. 

ADVERTISEMENT

ಮೊಬೈಲ್‌ನಲ್ಲಿ ಬೌಲ್ಟ್‌ ಫಿಟ್‌ (BoultFit) ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು ವಾಚ್‌ ಜೊತೆ ಸಂಪರ್ಕಿಸಬೇಕು. ಮೊದಲಿಗೆ ಫೋನ್‌ನಲ್ಲಿ ಬ್ಲುಟೂತ್ ಆಯ್ಕೆ ಸಕ್ರಿಯಗೊಳಿಸಿದ ಬಳಿಕ ‘Boult Watch SB’ ಹುಡುಕಿ ಅದನ್ನು ಸಂಪರ್ಕಿಸಬೇಕು. ಮೊದಲ ಬಾರಿಗೆ, ಬೌಲ್ಟ್‌ ಫಿಟ್‌ ಆ್ಯಪ್‌ ಜೊತೆ ಸ್ಮಾರ್ಟ್‌ವಾಚನ್ನು ಸಂಪರ್ಕಿಸಲೇ ಬೇಕು. ಹೀಗೆ ಮಾಡದೇ ಇದ್ದರೆ ವಾಚ್‌ನಲ್ಲಿ ಟೈಮಿಂಗ್ಸ್‌ ಮತ್ತು ಡೇಟ್‌ ಸೆಟ್‌ ಮಾಡಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಇದು ಸ್ಮಾರ್ಟ್‌ವಾಚ್‌ಗೆ ಅಪವಾದವೇ ಸರಿ. ಸ್ಮಾರ್ಟ್‌ವಾಚ್‌ನಲ್ಲಿಯೇ ಟೈಮಿಂಗ್ಸ್‌ ಮತ್ತು ಡೇಟ್‌ ಸೆಟ್‌ ಮಾಡುವಂತೆ ಇರಬೇಕು. ಹೀಗೆ ವ್ಯವಸ್ಥೆಗೊಳಿಸುವುದು ಕಷ್ಟದ ಕೆಲಸವೇನೂ ಅಲ್ಲ. ಆದರೆ, ಕಂಪನಿ ಈ ವಿಷಯದಲ್ಲಿ ಹಿಂದೆ ಬಿದ್ದಿದೆ.

ಬ್ಲುಟೂತ್ 5.2 ಸಿಂಗಲ್‌ ಚಿಪ್‌ ಕಾಲಿಂಗ್‌ ಸೌಲಭ್ಯ ಹೊಂದಿದೆ. ಫೋನ್‌ ಕಾಂಟ್ಯಾಕ್ಟ್‌ ಅನ್ನು ವಾಚ್‌ನೊಂದಿಗೆ ಸಿಂಕ್ ಮಾಡಿ ಕಾಲ್‌ ಹಿಸ್ಟರಿ ಪಡೆಯಬಹುದು. ಫೆವರಿಟ್‌ ಕಾಂಟ್ಯಾಕ್ಟ್‌ಗಳನ್ನು ಸಹ ವಾಚ್‌ನಲ್ಲಿ ಸಿದ್ಧಪಡಿಸಿ ಇಟ್ಟುಕೊಳ್ಳಬಹುದು. ಇಷ್ಟೇ ಅಲ್ಲದೆ, ಸೇವ್ ಆಗಿಲ್ಲದ ನಂಬರ್‌ಗೂ ಡಯಲ್‌ ಮಾಡಿ ಕಾಲ್‌ ಮಾಡಬಹುದು. ಮೈಕ್ರೊಫೋನ್‌ ಮೂಲಕ ಧ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ. ಫೋನಿನ ಇನ್ನೊಂದು ತುದಿಯಲ್ಲಿ ಮಾತನಾಡುವವರಿಗೂ ನನ್ನ ಧ್ವನಿ ಸ್ಪಷ್ಟವಾಗಿ ಕೇಳಿದೆ. ಫೋನ್‌ ನಮ್ಮಿಂದ 10 ಮೀಟರ್‌ ವ್ಯಾಪ್ತಿಯೊಳಗೆ ಎಲ್ಲೇ ಇಟ್ಟಿದ್ದರೂ ಕಾಲ್‌ ಬಂದಾಗ ವಾಚ್‌ ಮೂಲಕವೇ ರಿಸೀವ್‌ ಮಾಡಿ ಮಾತನಾಡಬಹುದು.

150ಕ್ಕೂ ಅಧಿಕ ವಾಚ್‌ ಫೇಸ್‌ಗಳಿವೆ. ಇಷ್ಟೇ ಅಲ್ಲದೆ ನಮಗೆ ಬೇಕಿರುವಂತೆಯೂ ಹೊಂದಿಸಿಕೊಳ್ಳುವ ಹಾಗೂ ಅನಿಮೇಟೆಡ್‌ ಫೇಸ್‌ ಬಳಸುವ ಅವಕಾಶವೂ ಇದರಲ್ಲಿದೆ. ಆ್ಯಪ್‌ನಲ್ಲಿ ಸ್ಮಾರ್ಟ್‌ ನೋಟಿಫಿಕೇಷನ್‌ ಸಕ್ರಿಯಗೊಳಿಸುವ ಆಯ್ಕೆ ಇದೆ. ಅಲ್ಲಿ ಮೆಸೇಜ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌... ಹೀಗೆ ಯಾವೆಲ್ಲಾ ಆ್ಯಪ್‌ಗಳ ನೋಟಿಫಿಕೇಷನ್‌ಗಳನ್ನು ನೋಡಬೇಕು ಎನ್ನುವುದನ್ನು ಆಯ್ಕೆ ಮಾಡಿದರೆ ಅವೆಲ್ಲವೂ ಸ್ಮಾರ್ಟ್‌ವಾಚ್‌ನ ಪರದೆಯಲ್ಲಿ ಕಾಣಿಸುತ್ತವೆ. ಸಂದೇಶಗಳಿಗೆ ತಕ್ಷಣಕ್ಕೆ ಪ್ರತ್ಯುತ್ತರ ನೀಡುವಂತೆ ಇದ್ದಿದ್ದರೆ ಇನ್ನೂ ಹೆಚ್ಚಿನ ಅನುಕೂಲ ಆಗುತ್ತಿತ್ತು. ಕನ್ನಡ ಫಾಂಟ್‌ಗೆ ಈ ವಾಚ್‌ ಬೆಂಬಲಿಸುವುದಿಲ್ಲ. ಕನ್ನಡದಲ್ಲಿ ಸಂದೇಶಗಳು ಬಂದರೆ ಪ್ರಶ್ನಾರ್ಥಕ ಚಿನ್ಹೆ ಕಾಣಿಸುತ್ತದೆ. ನೀರು ಮತ್ತು ದೂಳಿನಿಂದ ರಕ್ಷಣೆ ಒದಗಿಸಲು ಐಪಿ67 ರೇಟಿಂಗ್ಸ್‌ ಇದೆ.

150ಕ್ಕೂ ಹೆಚ್ಚಿನ ಸ್ಪೋರ್ಟ್ಸ್ ಮೋಡ್‌ ಇದೆ. ಸ್ಪೋರ್ಟ್ಸ್ ಮೋಡ್‌ ನಿರ್ವಹಿಸಲೆಂದೇ ಪ್ರತ್ಯೇಕ ಬಟನ್‌ ಅನ್ನು ನೀಡಲಾಗಿದೆ. ನಿತ್ಯದ ಚಟುವಟಿಕೆಗಳು ಅಂದರೆ ಎಷ್ಟು ಹೆಜ್ಜೆ ನಡೆದಿದ್ದೇವೆ, ಎಷ್ಟು ಹೊತ್ತು ಓಡಿದ್ದೇವೆ. ಅನ್ನುವುದನ್ನು ದಾಖಲಿಸಬಹುದು. ಎಷ್ಟು ಹೊತ್ತು ನಿದ್ರೆ ಮಾಡಿದ್ದೇವೆ. ನಿದ್ರೆಯ ಗುಣಮಟ್ಟ ಹೇಗಿದೆ ಎನ್ನುವುದನ್ನು ಕಂಡುಕೊಳ್ಳಬಹದು. ಹಾರ್ಟ್‌ ರೇಟ್‌ ಮಾನಿಟರ್, ವೆದರ್, ಬ್ಲಡ್‌ ಫ್ರೆಷರ್‌, ಬಿಟಿ ಕ್ಯಾಮೆರಾ ಕಂಟ್ರೋಲ್, ‌ರಿಮೈಂಡ್‌ ಟು ಡ್ರಿಂಕ್, ರಿಮೈಂಡ್ ಟು ಮೂವ್, ಸ್ಟಾಪ್‌ವಾಚ್‌, ಮ್ಯೂಸಿಕ್‌ ಕಂಟ್ರೊಲ್‌, ಥಿಯೇಟರ್ ಮೋಡ್, ಬ್ರೈಟ್‌ನೆಸ್‌ ಅಡ್ಜೆಸ್ಟ್‌ಮೆಂಟ್‌, ಪವರ್ ಸೇವಿಂಗ್ ಮೋಡ್, ಡುನಾಟ್ ಡಿಸ್ಟರ್ಬ್‌ ಹೀಗೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 

ಮಿನಿ ಗೇಮ್ಸ್: ಈ ಸ್ಮಾರ್ಟ್‌ವಾಚ್‌ನ ಹೊಸ ಮತ್ತು ಹೆಚ್ಚು ಇಷ್ಟವಾಗುವ ವೈಶಿಷ್ಟವೇ ಮಿನಿ ಗೇಮ್ಸ್‌. ಯಂಗ್ ಬರ್ಡ್‌, ಹ್ಯಾಮ್‌ಸ್ಟಾರ್‌ ,ಬ್ಯಾಟಲ್‌ಶಿಪ್, 2048 ಗೇಮ್‌ಗಳು ಇದರಲ್ಲಿವೆ. ವಿಡಿಯೊ ಗೇಮ್ ಮತ್ತು ಫೀಚರ್ ಫೋನ್‌ಗಳಲ್ಲಿ ಗೇಮ್‌ ಆಡಿರುವವರಿಗೆ ಈ ಗೇಮ್‌ಗಳು ಹೆಚ್ಚು ಇಷ್ಟವಾಗಲಿವೆ. ಬೇಜಾರಾಗಿದ್ದಾಗ ಈ ಗೇಮ್‌ಗಳನ್ನು ಆಡಿದರೆ ಮನಸ್ಸಿಗೆ ಒಂದಿಷ್ಟು ತಿಳಿಯಾಗುತ್ತದೆ.

ಒಮ್ಮೆ ಪೂರ್ತಿ ಚಾರ್ಜ್ ಮಾಡಲು 2 ಗಂಟೆ ಬೇಕು. ಒಮ್ಮೆ ಪೂರ್ತಿ ಚಾರ್ಜ್ ಆದರೆ ಏಳು ದಿನ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಪ‍್ರಾಯೋಗಿಕವಾಗಿ ಬ್ಲುಟೂತ್ ಕಾಲಿಂಗ್ ಆಯ್ಕೆಯನ್ನು ಹೆಚ್ಚು ಬಳಸದೇ ಇದ್ದಾಗ 10ದಿನದವರೆಗೂ ಬ್ಯಾಟರಿ ಬಾಳಿಕೆ ಬಂತು. ಕಾಲಿಂಗ್ ಆಯ್ಕೆಯನ್ನೂ ಬಳಸಿದರೆ ಕಂಪನಿ ಹೇಳಿದಂತೆ ಏಳು ದಿನವಂತೂ ವಾಚ್‌ ಬಳಸಲು ಯಾವುದೇ ಅಡ್ಡಿ ಇಲ್ಲ. ಚಾರ್ಜಿಂಗ್‌ಗೆ ಮ್ಯಾಗ್ನೆಟಿಕ್‌ ಚಾರ್ಜಿಂಗ್‌ ಪೋರ್ಟ್‌ ಇದೆ. ಆಂಡ್ರಾಯ್ಡ್‌ 5.0 /ಐಒಎಸ್‌ 9.0 ನಂತರದ ಆವೃತ್ತಿ ಇರುವ ಫೋನ್‌ಗಳಿಗೆ ಇದು ಬೆಂಬಲಿಸುತ್ತದೆ. ಸಿರಿ, ಗೂಗಲ್‌ ಅಸಿಸ್ಟ್‌ ಮೂಲಕವೂ ವಾಚ್‌ನ ವೈಶಿಷ್ಟ್ಯಗಳನ್ನು ನಿರ್ವಹಿಸಬಹುದು.  ಕಂಪನಿಯ ಜಾಲತಾಣದಲ್ಲಿ ಇದರ ಎಂಆರ್‌ಪಿ ₹4,499 ಇದೆ. ಆದರೆ ₹1,499ಕ್ಕೆ ಕಂಪನಿ ನೀಡುತ್ತಿದೆ.

ಬೌಲ್ಟ್‌ ಕ್ರೌನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.