ಧರಿಸಬಲ್ಲ ಸಾಧನಗಳ (ಆಡಿಯೊ ಮತ್ತು ಸ್ಮಾರ್ಟ್‌ವಾಚ್) ವಿಭಾಗದಲ್ಲಿ ಬೌಲ್ಟ್ ಕಂಪನಿಯು ಉತ್ತಮ ಬೆಳವಣಿಗೆ ಸಾಧಿಸುತ್ತಿದೆ. ಇಂಟರ್‌ನ್ಯಾಷನಲ್ ಡೇಟಾ ಕಾರ್ಪೊರೇಷನ್‌ನ ಈಚಿನ ವರದಿಯ ಪ್ರಕಾರ, 2023ರ ಮೊದಲ ತ್ರೈಮಾಸಿಕದಲ್ಲಿ ಧರಿಸಬಲ್ಲ ಸಾಧನಗಳ (ಆಡಿಯೊ ಮತ್ತು ಸ್ಮಾರ್ಟ್‌ವಾಚ್) ವಿಭಾಗದಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಬ್ರ್ಯಾಂಡ್ ಆಗಿ ‘ಬೌಲ್ಟ್ ಆಡಿಯೊ’ ಹೊರಹೊಮ್ಮಿದೆ. ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ‘ಬೌಲ್ಟ್ ಸ್ಟೆರ್ಲಿಂಗ್ ಪ್ರೊ’ ಸ್ಮಾರ್ಟ್‌ವಾಚ್, ಸಾಂಪ್ರದಾಯಿಕ ನೋಟದೊಂದಿಗೆ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ರೌಂಡ್ ಡಯಲ್, ಬೆಲ್ಟ್ ಬದಲಿಗೆ ಚೈನ್... ಹೀಗೆ ತಕ್ಷಣಕ್ಕೆ ಇದೊಂದು ಸಾಂಪ್ರದಾಯಿಕ ವಾಚ್ ರೀತಿಯಲ್ಲೇ ಕಾಣಿಸುತ್ತದೆ. ಆದರೆ, ಬ್ಲುಟೂತ್ ಕಾಲಿಂಗ್, ಫಿಟ್‌ನೆಸ್ ಟ್ರ್ಯಾಕರ್, ಸ್ಪೋರ್ಟ್ಸ್ ಮೋಡ್ ವೈಶಿಷ್ಟ್ಯಗಳಿಂದಾಗಿ ಗಮನ ಸೆಳೆಯುತ್ತದೆ.
1.43 ಇಂಚು ಅಮೊಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 466X466 ಪಿಕ್ಸಲ್ ರೆಸಲ್ಯೂಷನ್ ಒಳಗೊಂಡಿದೆ. 800 ನಿಟ್ಸ್ ಬ್ರೈಟ್‌ನೆಸ್ ಇದ್ದು, ಬಿಸಿಲಿನಲ್ಲಿಯೂ ಡಿಸ್‌ಪ್ಲೆ ಸ್ಪಷ್ಟವಾಗಿ ಕಾಣಿಸುತ್ತದೆ. ಮಲ್ಟಿ ಫಂಕ್ಷನ್ ಬಟನ್, ಸ್ಪೋರ್ಟ್ಸ್ ಮೋಡ್ ಬಟನ್ ಹೀಗೆ ಎರಡು ಬಟನ್‌ಗಳಿವೆ. ನೀರು ಮತ್ತು ಧೂಳಿನಿಂದ ರಕ್ಷಣೆಗೆ ಐಪಿ 68 ರೇಟಿಂಗ್ಸ್ ನೀಡಲಾಗಿದೆ.
ಮೊಬೈಲ್ ಜೊತೆ ಸುಲಭವಾಗಿ ಸಂಪರ್ಕ ಸಾಧಿಸಲು ಬ್ಲುಟೂತ್ 5.3 ಆವೃತ್ತಿಯನ್ನು ಹೊಂದಿದೆ. ಪ್ಲೇ ಸ್ಟೋರ್‌ನಿಂದ ‘ಬೌಲ್ಟ್ ಟ್ರ್ಯಾಕ್’ ಆ್ಯಪ್ (BoultTrack) ಡೌನ್‌ಲೋಡ್ ಮಾಡಿಕೊಳ್ಳಬೇಕು. ಮೊಬೈಲ್‌ನಲ್ಲಿ ಬ್ಲುಟೂತ್ ಆನ್ ಮಾಡಿ ಸರ್ಚ್ ಕೊಟ್ಟರೆ ‘ಬೌಲ್ಟ್ ವಾಚ್ ಆರ್‌ಇ’ ಹೆಸರು ಕಾಣಿಸುತ್ತದೆ; ಅದರ ಮೇಲೆ ಕ್ಲಿಕ್ ಮಾಡಿದರೆ ಮೊಬೈಲ್ ಜೊತೆ ವಾಚ್ ಸಂಪರ್ಕಕ್ಕೆ ಬರುತ್ತದೆ.
ವಾಚ್ ಮೂಲಕವೇ ಕಾಲ್ ಮಾಡುವ ಮತ್ತು ರಿಸೀವ್ ಮಾಡುವುದು ಸರಿಯಾಗಿ ಕೆಲಸ ಮಾಡುತ್ತದೆ. ಕಾಂಟ್ಯಾಕ್ಟ್ ಸಿಂಕ್ ಮಾಡಿಕೊಳ್ಳುವುದಷ್ಟೇ ಅಲ್ಲದೆ ಲಿಸ್ಟ್‌ನಲ್ಲಿ ಇಲ್ಲದ ನಂಬರ್ ಅನ್ನು ಡಯಲ್ ಮಾಡಬಹುದು. ಇನ್‌ಬಿಲ್ಟ್ ಮೈಕ್ರೊಪೋನ್ ಮತ್ತು ಸ್ಪೀಕರ್ ಇದ್ದು, ಫೋನ್‌ನ ಎರಡೂ ತುದಿಯಲ್ಲಿ ಇರುವವರಿಗೆ ಧ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ.
ಸಿರಿ, ಗೂಗಲ್ ಅಸಿಸ್ಟಂಟ್ ಅಥವಾ ಇನ್ಯಾವುದೇ ವಾಯ್ಸ್ ಅಸಿಸ್ಟಂಟ್ ಮೂಲಕವೇ ವಾಚ್ ಅನ್ನು ನಿಯಂತ್ರಿಸಬಹುದು. ಕಾಲ್ ಮಾಡುವುದು, ರಿಮೈಂಡರ್ ಇಡುವುದು, ಮೆಸೆಜ್ ಕಳುಹಿಸುವುದು ಇತ್ಯಾದಿ. ಹೃದಯದ ಬಡಿತದ ಮಾಹಿತಿ ನೀಡುವ, ಎಷ್ಟು ಹೊತ್ತು ನಿದ್ದೆ ಮಾಡಿದ್ದೀರಿ ಎಂದು ಹೇಳುವ, ಒಂದೇ ಕಡೆ ಹೆಚ್ಚು ಹೊತ್ತು ಕೂತಿದ್ದೀರಿ, ಇದೀಗ ನಡೆಯುವ ಸಮಯ ಎಂದು ಎಚ್ಚರಿಸುವ, ಆಗಾಗ್ಗೆ ನೀರು ಕುಡಿಯಲು ನೆನಪಿಸುವಂತೆ ವಾಚ್‌ನಲ್ಲಿ ಸೆಟ್ಟಿಂಗ್ಸ್ ಮಾಡಿಟ್ಟುಕೊಳ್ಳಬಹುದು. ಅಲ್ಲದೆ, ಮ್ಯೂಸಿಕ್, ಮೆಸೆಜ್, ಫೈಂಡ್ ವಾಚ್, ಲೋ ಬ್ಯಾಟರಿ ರಿಮೈಂಡರ್, ಇನ್ಕಮಿಂಗ್ ಕಾಲ್ ರಿಮೈಂಡರ್, ಪವರ್ ಆನ್/ಆಫ್, ಪವರ್ ಸೇವಿಂಗ್, ಡುನಾಟ್ ಡಿಸ್ಟರ್ಬ್‌ನಂತಹ ಅಗತ್ಯ ವೈಶಿಷ್ಟ್ಯಗಳನ್ನೂ ಒಳಗೊಂಡಿದೆ.
ನಿಮ್ಮ ಕೈಯಳತೆಗೆ ಚೈನನ್ನು ಹೊಂದಿಸಲು ಒಂದು ಸಾಧನ ನೀಡಲಾಗಿದೆ. ಅದರ ಮೂಲಕ ಚೈನ್‌ನ ಲಿಂಕ್ ತಪ್ಪಿಸಿ ಅಳತೆಗಿಂತ ಹೆಚ್ಚಿಗೆ ಇರುವ ಕೊಂಡಿಯನ್ನು ಪ್ರತ್ಯೇಕಿಸಬೇಕು. ಆದರೆ ಈ ಕೆಲಸವು ಸಂಯಮ ಮತ್ತು ಸಮಯ ಎರಡನ್ನೂ ಬೇಡುತ್ತದೆ. ಚೈನ್ ಹೊಂದಿಸುವ ಸಾಧನ ಒಂದೇ ಇದ್ದರೆ ಸಾಲದು. ಚೈನ್ ಲಿಂಕ್ ತಪ್ಪಿಸಲು ಪಿನ್ ತೆಗೆಯುವಾಗ ಕಟಿಂಗ್‌ಪ್ಲಯರ್ ಅಥವಾ ಗಟ್ಟಿಮುಟ್ಟಾಗಿರುವ ಚಿಮಟ ಬೇಕಾಗುತ್ತದೆ. ಹಾಗೆ ಲಿಂಕ್ ತಪ್ಪಿಸಿದ ಬಳಿಕ ಮತ್ತೆ ಚೈನ್ ಅನ್ನು ಸೇರಿಸುವುದು ಸಹ ಸುಲಭವದ ಕೆಲಸವೇನಲ್ಲ.
ಸ್ಪೋರ್ಟ್ ಮೋಡ್‌ಗೆಂದೇ ಪ್ರತ್ಯೇಕವಾದ ಬಟನ್ ನೀಡಲಾಗಿದೆ. ರನ್ನಿಂಗ್, ರಾಕ್ ಕ್ಲೈಂಬಿಗ್, ಸ್ಕಿಪ್ಪಿಂಗ್ ಹೀಗೆ 100ಕ್ಕೂ ಅಧಿಕ ಸ್ಪೋರ್ಟ್ ಮೋಡ್‌ಗಳು ಇದರಲ್ಲಿವೆ. ಆಂಡ್ರಾಯ್ಡ್ 5.0 ಅಥವಾ ಐಒಎಸ್ 9.0 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಈ ಸ್ಮಾರ್ಟ್‌ವಾಚ್ ಕೆಲಸ ಮಾಡುತ್ತದೆ. ಫೋನ್ ಇರುವಲ್ಲಿಂದ 10 ಮೀಟರ್ ವ್ಯಾಪ್ತಿಯಲ್ಲಿ ಇದನ್ನು ಬಳಸಬಹುದು. ಒಟ್ಟಿನಲ್ಲಿ ಗುಣಮಟ್ಟ, ಆಡಿಯೊ ಕ್ಲಾರಿಟಿಯ ದೃಷ್ಟಿಯಿಂದ ಉತ್ತಮ ಸ್ಮಾರ್ಟ್‌ವಾಚ್ ಇದಾಗಿದೆ. ಕಂಪನಿಯ ಜಾಲತಾಣದಲ್ಲಿ ಎಂಆರ್‌ಪಿ ₹7,999 ಇದೆ. ಆದರೆ ₹2,099ಕ್ಕೆ ಕಂಪನಿ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.