ADVERTISEMENT

Boult Striker: ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ವಾಚ್‌

ವಿಶ್ವನಾಥ ಎಸ್.
Published 17 ಮಾರ್ಚ್ 2023, 19:45 IST
Last Updated 17 ಮಾರ್ಚ್ 2023, 19:45 IST
ಬೌಲ್ಟ್‌ ಸ್ಟ್ರೈಕರ್ ಸ್ಮಾರ್ಟ್‌ವಾಚ್
ಬೌಲ್ಟ್‌ ಸ್ಟ್ರೈಕರ್ ಸ್ಮಾರ್ಟ್‌ವಾಚ್   

ಬೌಲ್ಟ್‌ ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ಸ್ಟ್ರೈಕರ್‌ ಸ್ಮಾರ್ಟ್‌ವಾಚ್‌ ಆಕರ್ಷಕವಾಗಿದ್ದು, ಬ್ಯಾಟರಿ ಬಾಳಿಕೆ, ಗುಣಮಟ್ಟದಿಂದ ಗಮನ ಸಳೆಯುತ್ತದೆ. ಸಾಂಪ್ರದಾಯಿಕ ವಾಚ್‌ಗಳಂತೆ ರೌಂಡ್‌ ಡಯಲ್ ಹೊಂದಿದ್ದು, 1.3 ಎಚ್‌ಡಿ ಡಿಸ್‌ಪ್ಲೇ ಒಳಗೊಂಡಿದೆ.

ಮೊಬೈಲ್‌ನಲ್ಲಿ ಬೌಲ್ಟ್‌ ಫಿಟ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು ವಾಚ್‌ ಜೊತೆ ಎರಡು ರೀತಿಯಲ್ಲಿ ಸಂಪರ್ಕಿಸಬೇಕು. ಮೊದಲಿಗೆ ಫೋನ್‌ನಲ್ಲಿ ಬ್ಲುಟೂತ್ ಆಯ್ಕೆ ಸಕ್ರಿಯಗೊಳಿಸಿದ ಬಳಿಕ ‘watch R’ ಹುಡುಕಿ ಅದನ್ನು ಸಂಪರ್ಕಿಸಬೇಕು. ಆ ಬಳಿಕ ವಾಚ್‌ನಲ್ಲಿ ಕಾಲಿಂಗ್‌ ಆಯ್ಕೆ ಸಕ್ರಿಯಗೊಳಿಸಲು ‘Watch R_Ph’ ಜೊತೆ ಸಂಪರ್ಕಿಸಬೇಕು. ಮಕ್ಕಳ ಕೈಗೆ ವಾಚ್‌ ಕೊಟ್ಟಾಗ ಅವರು ಕಾಲ್‌ ಮಾಡುವುದನ್ನು ತಪ್ಪಿಸಲು ಇದು ಹೆಚ್ಚು ಉಪಯೋಗಕ್ಕೆ ಬರುತ್ತದೆ.

ಮೊದಲ ಬಾರಿಗೆ, ಬೌಲ್ಟ್‌ ಫಿಟ್‌ (BoultFit) ಆ್ಯಪ್‌ ಜೊತೆ ಸ್ಮಾರ್ಟ್‌ವಾಚನ್ನು ಸಂಪರ್ಕಿಸಲೇ ಬೇಕು. ಹೀಗೆ ಮಾಡದೇ ಇದ್ದರೆ ವಾಚ್‌ನಲ್ಲಿ ಟೈಮಿಂಗ್ಸ್‌ ಮತ್ತು ಡೇಟ್‌ ಸೆಟ್‌ ಮಾಡಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಇದು ಸ್ಮಾರ್ಟ್‌ವಾಚ್‌ಗೆ ಅಪವಾದವೇ ಸರಿ. ಸ್ಮಾರ್ಟ್‌ವಾಚ್‌ನಲ್ಲಿಯೇ ಟೈಮಿಂಗ್ಸ್‌ ಮತ್ತು ಡೇಟ್‌ ಸೆಟ್‌ ಮಾಡುವಂತೆ ಇರಬೇಕು. ಹೀಗೆ ವ್ಯವಸ್ಥೆಗೊಳಿಸುವುದು ಕಷ್ಟದ ಕೆಲಸವೇನೂ ಅಲ್ಲ. ಆದರೆ, ಕಂಪನಿ ಈ ವಿಷಯದಲ್ಲಿ ಹಿಂದೆ ಬಿದ್ದಿದೆ.

ADVERTISEMENT

ಬ್ಲುಟೂತ್ 5.1 ವರ್ಷ ಹೊಂದಿದೆ. ಫೋನ್‌ನಲ್ಲಿ ಬ್ಲುಟೂತ್‌ ಆನ್‌ ಮಾಡಿ ‘Watch R_Ph’ಗೆ ಸಂಪರ್ಕಿಸಿದರೆ ಸ್ಮಾರ್ಟ್‌ವಾಚ್‌ ಮೂಲಕವೇ ಕರೆ ಮಾಡುವ ಮತ್ತು ಸ್ವೀಕರಿಸುವ ಆಯ್ಕೆ ಸಕ್ರಿಯಗೊಳ್ಳುತ್ತದೆ. ಫೋನ್‌ ಕಾಂಟ್ಯಾಕ್ಟ್‌ ಅನ್ನು ವಾಚ್‌ನೊಂದಿಗೆ ಸಿಂಕ್ ಮಾಡಿ ಕಾಲ್‌ ಹಿಸ್ಟರಿ ಪಡೆಯಬಹುದು. ಫೆವರಿಟ್‌ ಕಾಂಟ್ಯಾಕ್ಟ್‌ಗಳನ್ನು ಸಹ ವಾಚ್‌ನಲ್ಲಿ ಸಿದ್ಧಪಡಿಸಿ ಇಟ್ಟುಕೊಳ್ಳಬಹುದು. ಇಷ್ಟೇ ಅಲ್ಲದೆ, ಸೇವ್ ಆಗಿಲ್ಲದ ನಂಬರ್‌ಗೂ ಡಯಲ್‌ ಮಾಡಿ ಕಾಲ್‌ ಮಾಡಬಹುದು. ಮೈಕ್ರೊಫೋನ್‌ ಮೂಲಕ ಧ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ. ಫೋನಿನ ಇನ್ನೊಂದು ತುದಿಯಲ್ಲಿ ಮಾತನಾಡುವವರಿಗೂ ನನ್ನ ಧ್ವನಿ ಸ್ಪಷ್ಟವಾಗಿ ಕೇಳಿದೆ. ಫೋನ್‌ ನಮ್ಮಿಂದ 10 ಮೀಟರ್‌ ವ್ಯಾಪ್ತಿಯೊಳಗೆ ಎಲ್ಲೇ ಇಟ್ಟಿದ್ದರೂ ಕಾಲ್‌ ಬಂದಾಗ ವಾಚ್‌ ಮೂಲಕವೇ ರಿಸೀವ್‌ ಮಾಡಿ ಮಾತನಾಡಬಹುದು.

ಆ್ಯಪ್‌ನಲ್ಲಿ ಸ್ಮಾರ್ಟ್‌ ನೋಟಿಫಿಕೇಷನ್‌ ಸಕ್ರಿಯಗೊಳಿಸುವ ಆಯ್ಕೆ ಇದೆ. ಅಲ್ಲಿ ಮೆಸೇಜ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌... ಹೀಗೆ ಯಾವೆಲ್ಲಾ ಆ್ಯಪ್‌ಗಳ ನೋಟಿಫಿಕೇಷನ್‌ಗಳನ್ನು ನೋಡಬೇಕು ಎನ್ನುವುದನ್ನು ಆಯ್ಕೆ ಮಾಡಿದರೆ ಅವೆಲ್ಲವೂ ಸ್ಮಾರ್ಟ್‌ವಾಚ್‌ನ ಪರದೆಯಲ್ಲಿ ಕಾಣಿಸುತ್ತವೆ. ನೀರು ಮತ್ತು ದೂಳಿನಿಂದ ರಕ್ಷಣೆ ಒದಗಿಸಲು ಐಪಿ67 ರೇಟಿಂಗ್ಸ್‌ ಇದೆ. 100ಕ್ಕೂ ಹೆಚ್ಚಿನ ಸ್ಪೋರ್ಟ್ಸ್ ಮೋಡ್‌ ಇದೆ. ಸಿರಿ, ಗೂಗಲ್‌ ಅಸಿಸ್ಟ್‌ ಮೂಲಕವೂ ವಾಚ್‌ನ ವೈಶಿಷ್ಟ್ಯಗಳನ್ನು ನಿರ್ವಹಿಸಬಹುದು.

ಆಂಡ್ರಾಯ್ಡ್‌ 5.0 ಅಥವಾ ಐಒಎಸ್ 9.0 ನಂತರದ ಪೋನ್‌ಗಳಿಗೆ ಇದು ಬೆಂಬಲಿಸುತ್ತದೆ. ಸೈಡ್‌ ಬಟನ್‌ ಅನ್ನು 5 ಸೆಕೆಂಡ್‌ ಲಾಂಗ್ ಪ್ರೆಸ್‌ ಮಾಡಿದರೆ Reboot, Power off, Reset ಆಯ್ಕೆಗಳು ಕಾಣಿಸುತ್ತವೆ. ನಿತ್ಯದ ಚಟುವಟಿಕೆಗಳು ಅಂದರೆ ಎಷ್ಟು ಹೆಜ್ಜೆ ನಡೆದಿದ್ದೇವೆ, ಎಷ್ಟು ಹೊತ್ತು ಓಡಿದ್ದೇವೆ. ಅನ್ನುವುದನ್ನು ದಾಖಲಿಸಬಹುದು. ಎಷ್ಟು ಹೊತ್ತು ನಿದ್ರೆ ಮಾಡಿದ್ದೇವೆ. ನಿದ್ರೆಯ ಗುಣಮಟ್ಟ ಹೇಗಿದೆ ಎನ್ನುವುದನ್ನು ಕಂಡುಕೊಳ್ಳಬಹದು. ಹಾರ್ಟ್‌ ರೇಟ್‌ ಮಾನಿಟರ್, ವೆದರ್, ಬ್ಲಡ್‌ ಫ್ರೆಷರ್‌, ಬಿಟಿ ಕ್ಯಾಮೆರಾ ಕಂಟ್ರೋಲ್, ‌ರಿಮೈಂಡ್‌ ಟು ಡ್ರಿಂಕ್, ರಿಮೈಂಡ್ ಟು ಮೂವ್, ಸ್ಟಾಪ್‌ವಾಚ್‌, ಮ್ಯೂಸಿಕ್‌ ಕಂಟ್ರೊಲ್‌, ಥಿಯೇಟರ್ ಮೋಡ್, ಬ್ರೈಟ್‌ನೆಸ್‌ ಅಡ್ಜೆಸ್ಟ್‌ಮೆಂಟ್‌, ಪವರ್ ಸೇವಿಂಗ್ ಮೋಡ್, ಡುನಾಟ್ ಡಿಸ್ಟರ್ಬ್‌ ಹೀಗೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಒಮ್ಮೆ ಪೂರ್ತಿ ಚಾರ್ಜ್ ಮಾಡಲು 2 ಗಂಟೆ ಬೇಕು. ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 20 ದಿನ ಬ್ಯಾಟರಿ ಚಾರ್ಜ್ ಉಳಿದಿರುತ್ತದೆ. ಒಮ್ಮೆ ಪೂರ್ತಿ ಚಾರ್ಜ್ ಆದರೆ ಏಳು ದಿನ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಪ‍್ರಾಯೋಗಿಕವಾಗಿ ಬ್ಲುಟೂತ್ ಕಾಲಿಂಗ್ ಆಯ್ಕೆಯನ್ನು ಹೆಚ್ಚು ಬಳಸದೇ ಇದ್ದಾಗ 10ದಿನದವರೆಗೂ ಬ್ಯಾಟರಿ ಬಾಳಿಕೆ ಬಂತು. ಕಾಲಿಂಗ್ ಆಯ್ಕೆಯನ್ನೂ ಬಳಸಿದರೆ ಕಂಪನಿ ಹೇಳಿದಂತೆ ಏಳು ದಿನವಂತೂ ವಾಚ್‌ ಬಳಸಲು ಯಾವುದೇ ಅಡ್ಡಿ ಇಲ್ಲ. ಚಾರ್ಜಿಂಗ್‌ಗೆ ಮ್ಯಾಗ್ನೆಟಿಕ್‌ ಚಾರ್ಜಿಂಗ್‌ ಪೋರ್ಟ್‌ ಇದೆ. ಕಂಪನಿಯ ಜಾಲತಾಣದಲ್ಲಿ ಇದರ ಎಂಆರ್‌ಪಿ ₹7,999 ಇದೆ. ಆದರೆ ₹1,799ಕ್ಕೆ ಕಂಪನಿ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.