ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಕೋವಿಡ್-19 ಬಾಧಿಸಿದ ಬಳಿಕ ಜನರಲ್ಲಿ ಆರೋಗ್ಯದ ಕುರಿತ ಕಾಳಜಿ ಹೆಚ್ಚುತ್ತಿದೆ. ಜೊತೆ ಜೊತೆಗೇ ಯುವ ಜನಾಂಗದಲ್ಲಿ ಸ್ಮಾರ್ಟ್ ವಾಚ್‌ಗಳ ಮೇಲಿನ ಕ್ರೇಜ್ ಕೂಡ ಹೆಚ್ಚಾಗಿದೆ. ನಡಿಗೆಯ ಹೆಜ್ಜೆಗಳು, ರಕ್ತದ ಆಮ್ಲಜನಕ ಪ್ರಮಾಣ, ರಕ್ತದೊತ್ತಡ, ಹೃದಯ ಬಡಿತ, ನಿದ್ರೆಯ ವೈಖರಿ ಇವುಗಳ ಜೊತೆಗೆ ಸಮಯವನ್ನೂ ತೋರಿಸಬಲ್ಲ ಸಾಧನಗಳು ಜನಾಕರ್ಷಣೆ ಪಡೆಯುತ್ತಿವೆ. ಮಾರುಕಟ್ಟೆಯಲ್ಲಿ ಸಾವಿರಾರು ಇಂಥ ಸ್ಮಾರ್ಟ್ ವಾಚ್‌ಗಳಿವೆ. ₹1 ಸಾವಿರದಿಂದ ₹1 ಲಕ್ಷದವರೆಗೂ ಸ್ಮಾರ್ಟ್ ವಾಚ್‌ಗಳು ಲಭ್ಯ. ಈ ಸಾಲಿನಲ್ಲಿ, ಅಗ್ಗದ ಬೆಲೆಯಲ್ಲಿ ಗಮನ ಸೆಳೆದಿದೆ ಕ್ರಾಸ್‌ಬೀಟ್ಸ್ (Crossbeats) ಕಂಪನಿಯ ಇಗ್ನೈಟ್ ಲೈಟ್ (Ignite Lyt) ಎಂಬ ಸ್ಮಾರ್ಟ್‌ವಾಚ್. ಪ್ರಜಾವಾಣಿಗೆ ರಿವ್ಯೂಗೆ ದೊರೆತ ಕ್ರಾಸ್‌ಬೀಟ್ಸ್ ಇಗ್ನೈಟ್ ಲೈಟ್ ಸ್ಮಾರ್ಟ್‌ವಾಚನ್ನು ಎರಡು ವಾರ ಬಳಸಿ ನೋಡಿದಾಗ ಕಂಡುಬಂದ ಅಂಶಗಳೊಂದಿಗೆ ಅದರ ಕುರಿತ ಮಾಹಿತಿ ಇಲ್ಲಿದೆ.
ವಿನ್ಯಾಸ, ನೋಟ
1.69 ಇಂಚಿನ (ಕರ್ಣ ರೇಖೆಯ ಅಳತೆ) ಚೌಕಾಕಾರದ ಡಯಲ್ ಅಥವಾ ಪರದೆಯೊಂದಿಗೆ, ಅತ್ಯಂತ ಹಗುರ (40 ಗ್ರಾಂ) ತೂಕದ ಈ ಸ್ಮಾರ್ಟ್‌ವಾಚ್ ನೋಡಿದ ತಕ್ಷಣ ಗಮನ ಸೆಳೆಯುತ್ತದೆ. ಇದು 2022 ಮೇ ತಿಂಗಳ ಮೊದಲ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದು, ವಿನ್ಯಾಸವೂ ಯಾವುದೇ ಪ್ರೀಮಿಯಂ ಸ್ಮಾರ್ಟ್ ವಾಚ್‌ನಂತೆಯೇ ಇದೆ. ಸ್ಕ್ರೀನ್ ಅಥವಾ ಡಯಲ್‌ನಲ್ಲಿ ಮೇಲಿಂದ ಸ್ವೈಪ್ ಮಾಡಿದರೆ ಸೆಟ್ಟಿಂಗ್ಸ್, ಕೆಳಗಿಂದ ಸ್ವೈಪ್ ಮಾಡಿದರೆ ನೋಟಿಫಿಕೇಶನ್‌ಗಳು, ಎಡದಿಂದ ಸ್ವೈಪ್ ಮಾಡಿದರೆ ಆ್ಯಪ್ ಶಾರ್ಟ್‌ಕಟ್‌ಗಳಿರುವ ಐಕಾನ್‌ಗಳು ಮತ್ತು ಬಲದಿಂದ ಸ್ವೈಪ್ ಮಾಡಿದರೆ ಆರೋಗ್ಯ ಸಂಬಂಧಿತ ಆ್ಯಪ್‌ಗಳಿಂದ ಕಾಣಿಸುವ ಫಲಿತಾಂಶಗಳು (ನಡೆದ ಹೆಜ್ಜೆ, ಬಿಪಿ, ಆಮ್ಲಜನಕ ಮಟ್ಟ ಇತ್ಯಾದಿ) ತೋರುತ್ತವೆ. ಇದು ಸ್ವಲ್ಪ ಮಟ್ಟಿಗೆ (ಐಪಿ 68) ಜಲನಿರೋಧಕ, ಧೂಳು ನಿರೋಧಕವಾಗಿಯೂ ಇದ್ದು, ಒಂದು ನಾಬ್ (knob) ಕೂಡ ಇದೆ. ಟಚ್ ಸ್ಕ್ರೀನ್ ಆನ್ ಆಗಬೇಕಿದ್ದರೆ ಈ ಗುಂಡಿಯನ್ನು ಅದುಮಬೇಕಾಗುತ್ತದೆ. ಬಾಕ್ಸ್‌ನಲ್ಲಿ ಚಾರ್ಜಿಂಗ್ ಕೇಬಲ್ ಇದೆ.
ತಂತ್ರಾಂಶ-ಯಂತ್ರಾಂಶ
ಕ್ರಾಸ್‌ಬೀಟ್ಸ್ ಇಗ್ನೈಟ್ ಲೈಟ್ ಸ್ಮಾರ್ಟ್‌ವಾಚ್ ಆ್ಯಪಲ್ ಐಒಎಸ್ ಹಾಗೂ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಗಳೆರಡರಲ್ಲೂ ಕೆಲಸ ಮಾಡುತ್ತದೆ. ಎಂದರೆ, ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ - ಯಾವುದಾದರೂ ಕೂಡ ಒಗ್ಗಿಕೊಳ್ಳುತ್ತದೆ. ಆಯಾ ಸಾಧನಗಳಿಗೆ ಅದರದ್ದೇ ಆದ ಆ್ಯಪ್ ಸ್ಟೋರ್‌ನಿಂದ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಬ್ಲೂಟೂತ್ ಮೂಲಕ ಫೋನ್ ಹಾಗೂ ವಾಚ್ ಅನ್ನು ಪರಸ್ಪರ ಬೆಸೆದುಬಿಟ್ಟರೆ (ಪೇರ್ ಮಾಡಿದರೆ), ಉಳಿದೆಲ್ಲ ಕೆಲಸಗಳನ್ನೂ ಆ್ಯಪ್ ನೋಡಿಕೊಳ್ಳುತ್ತದೆ. ಎಲ್ಲ ಮಾಹಿತಿಯನ್ನೂ ಆ್ಯಪ್ ಮೂಲಕ ಸವಿಸ್ತಾರವಾಗಿ ನೋಡಬಹುದು. ಅಂದರೆ, ದಿನಕ್ಕೆ ಎಷ್ಟು ಹೆಜ್ಜೆ ನಡೆದೆವು, ಎಷ್ಟು ಕ್ಯಾಲೊರಿ ವ್ಯಯವಾಯಿತು, ನಿದ್ರಾ ಸಮಯದಲ್ಲಿ ಎಷ್ಟು ಸಮಯ ಭರ್ಜರಿ ನಿದ್ರೆಯಾಯಿತು, ಎಷ್ಟು ಕಾಲ ನಿದ್ರಾಭಂಗವಾಯಿತು, ಹೃದಯ ಬಡಿತದ ಪ್ರಮಾಣ, ರಕ್ತದೊತ್ತಡ, ರಕ್ತದ ಆಮ್ಲಜನಕ ಮಟ್ಟ - ಇವೆಲ್ಲವನ್ನೂ ತಿಳಿಯಬಹುದಾಗಿದೆ. ಆದರೆ, ಇದನ್ನು ವೈದ್ಯಕೀಯ ಉದ್ದೇಶಗಳಿಗಾಗಿ ನಂಬುವಂತಿಲ್ಲ ಎಂಬುದು ಗಮನದಲ್ಲಿರಬೇಕು. ಅಂದಾಜು ಮೌಲ್ಯವನ್ನಷ್ಟೇ ಅದು ನೀಡಬಲ್ಲುದು.
ಕ್ರಾಸ್‌ಬೀಟ್ಸ್ ಇಗ್ನೈಟ್ ಲೈಟ್ ಸ್ಮಾರ್ಟ್‌ವಾಚ್‌ಗೆ ಸಂಬಂಧಿಸಿದ Da Fit ಎಂಬ ಆ್ಯಪ್ ಅನ್ನು ನಮ್ಮ ಮೊಬೈಲ್ ಫೋನ್‌ಗೆ ಅಳವಡಿಸಿಕೊಂಡು, ಬ್ಲೂಟೂತ್ ಮೂಲಕ ಫೋನನ್ನು ವಾಚ್‌ಗೆ ಸಂಪರ್ಕಿಸಬೇಕಾಗುತ್ತದೆ.
ಕಾರ್ಯಾಚರಣೆ
ಮೊದಲನೆಯದಾಗಿ ಫೋನ್‌ಗೆ ಬಂದ ನೋಟಿಫಿಕೇಶನ್‌ಗಳೆಲ್ಲವನ್ನೂ ವಾಚ್ ಮೂಲಕವೇ ವೀಕ್ಷಿಸಬಹುದು. ಒಂದೇ ಒಂದು ಕೊರತೆಯೆಂದರೆ, ಈ ವಾಚ್ ಇಂಟರ್‌ಫೇಸ್‌ನಲ್ಲಿ ಯುನಿಕೋಡ್‌ಗೆ ಬೆಂಬಲ ಇಲ್ಲದಿರುವ ಕಾರಣದಿಂದಾಗಿ, ಕನ್ನಡ ಅಥವಾ ಯಾವುದೇ ಭಾಷೆಯಲ್ಲಿರುವ ನೋಟಿಫಿಕೇಶನ್‌ಗಳನ್ನು ಓದುವುದು ಸಾಧ್ಯವಾಗದು. ಬೇರೆ ಭಾಷೆಗಳ ಅಕ್ಷರಗಳೆಲ್ಲವೂ ಪ್ರಶ್ನಾರ್ಥಕ ಚಿಹ್ನೆಗಳ ಸಮೂಹವಾಗಿ ಗೋಚರಿಸುತ್ತವೆ. ಫೋನ್‌ಗೆ ಕರೆ ಬಂದರೆ ಅದನ್ನು ತಿರಸ್ಕರಿಸುವ ಆಯ್ಕೆ ವಾಚ್‌ನಲ್ಲಿದೆ, ಉತ್ತರಿಸಲಾಗದು.
ಇದರಲ್ಲಿ ಉಸಿರಾಟದ ವ್ಯಾಯಾಮ ಮಾಡಿಸಬಲ್ಲ ಆ್ಯಪ್ ಇದೆ, ಅಲ್ಲದೆ ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 12 ತರಬೇತಿ ಮೋಡ್‌ಗಳಿವೆ. ಓಟ, ಸೈಕ್ಲಿಂಗ್, ಸ್ಕಿಪ್ಪಿಂಗ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಟೆನಿಸ್, ಡಂಬೆಲ್, ಯೋಗ, ಜಿಮ್, ಡ್ಯಾನ್ಸಿಂಗ್, ಸಿಟ್-ಅಪ್ಸ್ - ಹೀಗೆ ನಮಗೆ ಬೇಕಾದುದನ್ನು ಆನ್ ಮಾಡಿಕೊಂಡರೆ, ಎಷ್ಟು ಸಮಯ ದೇಹಕ್ಕೆ ಶ್ರಮ ನೀಡಿದೆವು, ಎಷ್ಟು ಕ್ಯಾಲೊರಿ ವ್ಯಯವಾಯಿತು ಎಂಬುದನ್ನೆಲ್ಲ ಲೆಕ್ಕ ಹಾಕಿ ತೋರಿಸುತ್ತದೆ. ಜೊತೆಗೆ, ಮಹಿಳೆಯರ ಆರೋಗ್ಯದ ಮೇಲೆ ನಿಗಾ ಇರಿಸಲು ಅನುಕೂಲವಾಗುವಂತೆ ಋತುಚಕ್ರದ ಮೇಲೆ ನಿಗಾ ಇರಿಸುವ ಆ್ಯಪ್ ಕೂಡ ಅಡಕವಾಗಿದೆ.
ವಾಚ್‌ನಲ್ಲಿರುವ ಕ್ಯಾಮೆರಾ ಬಟನ್ ಅದುಮಿದರೆ ಫೋನ್‌ನ ಕ್ಯಾಮೆರಾ ಆನ್ ಆಗುತ್ತದೆ. ಫೋನ್‌ನಲ್ಲಿರುವ ಹಾಡುಗಳನ್ನೂ ವಾಚ್ ಮೂಲಕವೇ ನಿಯಂತ್ರಿಸಬಹುದು. ಅಲ್ಲದೆ, ಸಾಕಷ್ಟು ಸಂಖ್ಯೆಯಲ್ಲಿ ವಾಚ್ ಫೇಸ್‌ಗಳು (ಡಯಲ್‌ಗೆ ಅಥವಾ ಸ್ಕ್ರೀನ್‌ಗೆ ವೈವಿಧ್ಯಮಯ ಹಿನ್ನೆಲೆ ವಿನ್ಯಾಸಗಳು) ಲಭ್ಯ ಇವೆ.
ಬ್ಯಾಟರಿ, ಬೆಲೆ
ಗಮನ ಸೆಳೆದ ಎರಡು ಪ್ರಮುಖ ವಿಷಯಗಳಿವು. ಜನರಿಗೆ ಕಡಿಮೆ ಬೆಲೆಯಲ್ಲೂ ಬೇಕು, ಬ್ಯಾಟರಿ ಚಾರ್ಜ್ ಹೆಚ್ಚು ಉಳಿಯಬೇಕು. ಅಂಥವರಿಗೆ ಈ ಸ್ಮಾರ್ಟ್ ವಾಚ್ ಅತ್ಯುತ್ತಮ ಸಾಧನ. ಯಾಕೆಂದರೆ, ಒಮ್ಮೆ ಪೂರ್ತಿ ಚಾರ್ಜ್ ಮಾಡಿ ಸಾಮಾನ್ಯ ಬಳಕೆಯಲ್ಲಿ 13 ದಿನಗಳ ಬಳಿಕವೂ 10% ಚಾರ್ಜ್ ಉಳಿದಿತ್ತು. ಕಂಪನಿ ಹೇಳಿಕೊಳ್ಳುವ ಪ್ರಕಾರ ಇದರಲ್ಲಿರುವ ಲೀಥಿಯಂ ಪಾಲಿಮರ್ ಬ್ಯಾಟರಿ ಚಾರ್ಜ್ 15 ದಿನಗಳ ಅವಧಿಗೆ ಬರುತ್ತದೆ. ಬೆಲೆ ₹1799. ಪ್ರಮುಖ ಮಳಿಗೆಗಳಲ್ಲಿ, ಆನ್‌ಲೈನ್ ಮಳಿಗೆಗಳಲ್ಲಿಯೂ ಇದು ಲಭ್ಯ.
ಒಟ್ಟಾರೆ ಹೇಗಿದೆ?
ದುಬಾರಿ ಬೆಲೆಯ ಆ್ಯಪಲ್ ವಾಚ್ ಕೂಡ ಬಳಸಿ ನೋಡಿದ್ದೆನಾದುದರಿಂದ ಕೇವಲ 2 ಸಾವಿರ ರೂ. ಒಳಗಿನ ಈ ಸಾಧನ ಹೇಗಿದ್ದೀತು ಎಂಬ ಕುತೂಹಲ ಸಹಜವಾಗಿತ್ತು. ಆದರೆ, ಎಲ್ಲ ಪ್ರೀಮಿಯಂ ಸ್ಮಾರ್ಟ್ ವಾಚ್‌ಗಳು ಮಾಡಬಲ್ಲ ಕಾರ್ಯಗಳು ಈ ಅಗ್ಗದ ದರದ ಕ್ರಾಸ್‌ಬೀಟ್ಸ್ ಇಗ್ನೈಟ್ ಲೈಟ್‌ನಲ್ಲೂ ಇದೆ. ಇಷ್ಟಲ್ಲದೆ, ಗಮನ ಸೆಳೆದ ಪ್ರಧಾನ ಅಂಶ ಇದರ ಬ್ಯಾಟರಿ ಚಾರ್ಜ್. ಸಾಮಾನ್ಯ ಬಳಕೆಯಲ್ಲಿ ತಿಂಗಳಿಗೆ ಕೇವಲ ಎರಡು ಬಾರಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಆರೋಗ್ಯದ ವೈಶಿಷ್ಟ್ಯಗಳು ಕೂಡ ಗಮನ ಸೆಳೆದವು. ಐದಾರು ಸಾವಿರ ರೂಪಾಯಿಯಿಂದ 70-80 ಸಾವಿರ ರೂ. ಮೌಲ್ಯದ ಸ್ಮಾರ್ಟ್‌ವಾಚ್‌ಗಳು ಮಾಡುವ ಎಲ್ಲ ಪ್ರಮುಖ ಕೆಲಸಗಳು ಇದರಲ್ಲಿ ಸಾಧ್ಯ. ಒಳ್ಳೆಯ ಫಿಟ್ನೆಸ್ ಸಂಗಾತಿ ಎಂದೂ ಪರಿಗಣಿಸಬಹುದು. ಕೊರತೆಯೆಂದರೆ, ನಮ್ಮ ಭಾಷೆಯ ನೋಟಿಫಿಕೇಶನ್‌ಗಳನ್ನು ಓದಲಾಗದು ಮತ್ತು ಇದರ ಐಪಿಎಸ್ ಡಿಸ್‌ಪ್ಲೇ 240 x280 ಪಿಕ್ಸೆಲ್ ರೆಸೊಲ್ಯುಶನ್ ಇದೆ. ಆದರೆ ಬೆಲೆಗೆ ಹೋಲಿಸಿದರೆ ಇದಕ್ಕಿಂತ ಹೆಚ್ಚಿನ ಶಾರ್ಪ್ ಡಿಸ್‌ಪ್ಲೇ ಗುಣಮಟ್ಟ ನಿರೀಕ್ಷಿಸಲಾಗದು. ಒಂದು ವರ್ಷ ವಾರಂಟಿಯೂ ಜೊತೆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.