ADVERTISEMENT

ವೇಗ, ಮೊಮೊರಿಗೆ ರಿಯಲ್‌ಮಿ ಎಕ್ಸ್‌

ವಿಶ್ವನಾಥ ಎಸ್.
Published 14 ಆಗಸ್ಟ್ 2019, 9:19 IST
Last Updated 14 ಆಗಸ್ಟ್ 2019, 9:19 IST
Realme-X-FULL
Realme-X-FULL   

ರಿಯಲ್ ಮಿ ಎಕ್ಸ್ ಮೊಬೈಲ್ ಫೋನ್‌ನಲ್ಲಿ 48 ಮೆಗಾಪಿಕ್ಸಲ್‌ + 5 ಮೆಗಾಪಿಕ್ಸಲ್ ರಿಯರ್‌ ಕ್ಯಾಮೆರಾ ಇದೆ. ಸಹಜ ಬೆಳಕಿನಲ್ಲಿ ಚಿತ್ರದ ಗುಣಮಟ್ಟ ಉತ್ತಮವಾಗಿದೆ. ಅದರಲ್ಲಿಯೂ ಲ್ಯಾಂಡ್‌ಸ್ಕೇಪ್‌ ಚಿತ್ರಗಳು ಅತ್ಯುತ್ತಮವಾಗಿ ಸೆರೆಯಾಗುತ್ತವೆ. ಆದರೆ, ನಾಲ್ಕು ಗೋಡೆಗಳ ಒಳಗೆ ಕೃತಕ ಬೆಳಕಿನಲ್ಲಿ ಕ್ಲಿಕ್ಕಿಸಿದ ಚಿತ್ರಗಳ ಕ್ಲಾರಿಟಿ ತುಸು ಕಡಿಮೆ ಎನಿಸುತ್ತದೆ. ಚಿತ್ರವನ್ನು ಝೂಮ್‌ ಮಾಡಿದಂತೆಲ್ಲಾ ಅಸ್ಪಷ್ಟವಾಗುತ್ತದೆ.

ಪಾಪ್‌ಅಪ್‌ ಕ್ಯಾಮೆರಾ: ಫ್ರಂಟ್‌ ಕ್ಯಾಮೆರಾ 16 ಮೆಗಾಪಿಕ್ಸಲ್‌ ಇದ್ದು, ಪಾಪ್‌ ಆಯ್ಕೆ ಒಳಗೊಂಡಿದೆ. ಇದರಲ್ಲಿ ಪೋರ್ಟ್‌ಟ್ರೇಟ್‌ ಆಯ್ಕೆಯಲ್ಲಿ ಸೆಲ್ಫಿ ಹೆಚ್ಚು ಅಂದವಾಗಿ ಮೂಡಿಬರುತ್ತದೆ

ಅನ್‌ಲಾಕ್‌: ಫೇಸ್‌ ಅನ್‌ಲಾಕ್‌ ಆಯ್ಕೆ ಇದರಲ್ಲಿ ಮೆಚ್ಚುವಂತಹದ್ದಾಗಿದೆ. ಪರದೆಯನ್ನು ಸ್ವೈಪ್‌ ಮಾಡಿದಾಕ್ಷಣ ಪಾಪ್‌ಅಪ್‌ ಕ್ಯಾಮೆರಾ ತೆರೆದುಕೊಂಡು ಮುಖಚಹರೆ ಗುರುತಿಸಿ ಪಟ್ಟನೆ ಅನ್‌ಲಾಕ್‌ ಮಾಡಿ ತನ್ನ ಜಾಗ ಸೇರಿಕೊಳ್ಳುತ್ತದೆ. ಇದೊಂದು ರೀತಿಯಲ್ಲಿ ಮಜ ಕೊಡುವ ಅನುಭವ. ಕಣ್ಣು ಮುಚ್ಚಿದ್ದಾಗ ಅನ್‌ಲಾಕ್‌ ಆಗದಂತೆ ನಿರ್ಬಂಧಿಸುವ ಆಯ್ಕೆಯೂ ನೀಡಲಾಗಿದೆ. ದಿನಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಮೊಬೈಲ್‌ ಲಾಕ್‌ –ಅನ್‌ಲಾಕ್‌ ಮಾಡುತ್ತೇವೆ. ಹೀಗಾಗಿ, ಪಾಪ್‌ಅಪ್‌ ಕ್ಯಾಮೆರಾ ದೀರ್ಘಾವಧಿಯವರೆಗೆ ಬಾಳಿಕೆ ಬರುವುದೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ದಿನಕ್ಕೆ 50 ಬಾರಿಯಂತೆ 10 ವರ್ಷಗಳವರೆಗೆ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ADVERTISEMENT

ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಆಯ್ಕೆಗೆ ನಮ್ಮ ಬೆರಳಚ್ಚು ದಾಖಲಿಸುವಾಗ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಸುಲಭಕ್ಕೆ ಎಲ್ಲಾ ಗೆರೆಗಳೂ ಮೂಡುವುದಿಲ್ಲ. ಒಮ್ಮೆ ಬೆರಳಚ್ಚು ದಾಖಲಾದರೆ ನಂತರ ಅನ್‌ಲಾಕ್‌ ಸಮಸ್ಯೆ ಕೊಡುವುದಿಲ್ಲ. ಇದರ ಗಾತ್ರ ದೊಡ್ಡದಾಗಿದೆ. ಪರದೆ 6.5 ಇಂಚು ಇದೆ. ಒಂದು ಕೈಯಲ್ಲಿ ಹಿಡಿದುಕೊಂಡು ಬಳಸಲು ದೊಡ್ಡ ಮತ್ತು ಭಾರವೂ ಹೌದು. ಹಸ್ತ ತುಸು ಸಣ್ಣಗಿದ್ದರಂತೂ ಹಿಡಿದುಕೊಳ್ಳಲು ಇನ್ನೂ ಕಷ್ಟಪಡಬೇಕು. ಪ್ಯಾಂಟ್‌ ಜೇಬಿಗೆ ಸರಿಯಾಗಿ ಹಿಡಿಸುವುದಿಲ್ಲ.

ಪಿಂಚ್‌, ಸ್ಪ್ಲಿಟ್‌ ಸ್ಕ್ರೀನ್‌, ಸ್ಕ್ರೀನ್‌ ರೆಕಾರ್ಡರ್‌ ಆಯ್ಕೆಗಳು ಉಪಯುಕ್ತವಾಗಿವೆ. ಗೇಮ್‌ ಮತ್ತು ಚಲನಚಿತ್ರ ಪ್ರಿಯರಿಗಾಗಿ ವಿನೂತನವಾಗಿ ಡಾಲ್ಬಿ ಅಟ್ಮಾಸ್‌ ಸ್ಪೀಕರ್‌ ತಂತ್ರಜ್ಞಾನವನ್ನು ಈ ಫೋನ್‌ ಮೂಲಕ ಪರಿಚಯಿಸಲಾಗಿದೆ. ಗೇಮಿಂಗ್ ಅನುಭವವನ್ನು ಹೆಚ್ಚು ಉತ್ತಮಗೊಳಿಸಲು ಗೇಮ್‌ ಸ್ಪೇಸ್‌ ಬಳಸಬಹುದು. ಆಡಿಯೊ ಮತ್ತು ವಿಡಿಯೊ ಗುಣಮಟ್ಟ ತೃಪ್ತಿದಾಯಕ. ಇಯರ್‌ ಫೋನ್‌ ನೀಡಿಲ್ಲ.

ಚಾರ್ಜಿಂಗ್‌: ವಿಒಒಸಿ ಫ್ಲ್ಯಾಷ್‌ ಚಾರ್ಜರ್‌ 3.0 ಒಳಗೊಂಡಿದೆ. ಬ್ಯಾಟರಿ ಬಾಳಿಕೆಯನ್ನು ಕಾಪಾಡಿಕೊಳ್ಳುವ ಆಯ್ಕೆಗಳಿವೆ. ಇಂಟರ್‌ನೆಟ್‌, ಗೇಮ್‌ ಬಳಸಿದರೆ ಬ್ಯಾಟರಿ ಒಂದು ದಿನ ಬಾಳಿಕೆ ಬರುತ್ತದೆ. ಬೆಲೆಯನ್ನು (₹19,999) ಗಮನದಲ್ಲಿ ಇಟ್ಟುಕೊಂಡು ನೋಡುವುದಾದರೆ ದುಬಾರಿ ಎನ್ನಿಸುತ್ತದೆ. ಆದರೆ, ವೇಗ ಮತ್ತು ಮೊಮೊರಿ ದೃಷ್ಟಿಯಿಂದ ಬೆಲೆಗೆ ತಕ್ಕ ಮೌಲ್ಯ ಹೊಂದಿದೆ.

ಕೊರತೆ: ಎಫ್‌ಎಂ ರೇಡಿಯೊ ಆಯ್ಕೆ ಇಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಎಫ್‌ಎಂ ಕೇಳುಗರ ಸಂಖ್ಯೆಗೇನೂ ಕೊರತೆ ಇಲ್ಲ. ಆದರೆ, ರಿಯಲ್‌ ಮಿ ಕಂಪನಿಯು ಇದರ ಅಗತ್ಯವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇದು ಬಹಳ ಬೇಸರದ ಸಂಗತಿ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.