ಕೈಗೆಟಕುವ ಬೆಲೆಗೆ ಉತ್ತಮ ಗುಣಮಟ್ಟದ ಸ್ಮಾರ್ಟ್ ಸಾಧನಗಳನ್ನು ನೀಡುವ ಕಂಪನಿಗಳ ಸಾಲಿನಲ್ಲಿ ಬೌಲ್ಟ್ ಸಹ ಒಂದು. ಕಂಪನಿ ಈಚೆಗೆ ‘ಬೌಲ್ಟ್ ಕರ್ವ್ ಎಎನ್‌ಸಿ’ (Boult Curve ANC) ನೆಕ್‌ಬ್ಯಾಂಡ್ ಬಿಡುಗಡೆ ಮಾಡಿದ್ದು, ಮನರಂಜನೆ ಮತ್ತು ಕಾಲಿಂಗ್ ಆಯ್ಕೆಗಳೆರಡಕ್ಕೂ ಬಳಸಬಹುದಾದ ಸಾಧನ ಇದಾಗಿದೆ.
ಕತ್ತಿನಿಂದ ಜಾರದಂತೆ ಸರಿಯಾಗಿ ಕೂರುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇಯರ್‌ಬಡ್‌ಗಳು ಕಿವಿಯಲ್ಲಿ ಸರಿಯಾಗಿ ಕೂರುತ್ತವೆ. ಸಂಗೀತ ಕೇಳುವಾಗ ಹೊರಗಿನ ಶಬ್ಧವನ್ನು ತಡೆದು ಆಡಿಯೊ ಸ್ಪಷ್ಟವಾಗಿ ಕೇಳುವಂತೆ ಮಾಡಲು ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ಎಎನ್‌ಸಿ) ತಂತ್ರಜ್ಞಾನ ಇದೆ. ಅದೇ ರೀತಿ ಬ್ಯಾಕ್‌ಗ್ರೌಂಡ್ ಶಬ್ಧಗಳನ್ನು ಕಡಿಮೆ ಮಾಡುವ ಮೂಲಕ ಫೋನ್ ಕಾಲ್ ಮತ್ತು ವಾಯ್ಸ್ ರೆಕಾರ್ಡಿಂಗ್ ಸ್ಪಷ್ಟತೆಯನ್ನು ಸುಧಾರಿಸಲು ಎನ್‌ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ಇಎನ್‌ಸಿ) ವ್ಯವಸ್ಥೆಯನ್ನು ಒಳಗೊಂಡಿದೆ. ಹೀಗಾಗಿ ಸಂಗೀತ ಆಲಿಸುವುದು, ವಿಡಿಯೊ ನೋಡುವುದು, ಗೇಮ್ ಆಡುವುದಲ್ಲದೆ, ಫೋನ್ ಕಾಲ್ ಮಾಡುವಾಗ ಮನೆಯ ಒಳಗಡೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಇದ್ದರೂ ಯಾವುದೇ ತೊಂದರೆ ಆಗುವುದಿಲ್ಲ.
ಬ್ಯಾಟರಿ ಬಾಳಿಕೆ ಚೆನ್ನಾಗಿದೆ: 10 ನಿಮಿಷ ಚಾರ್ಜ್ ಮಾಡಿದರೆ ಎಎನ್‌ಸಿ ಆಯ್ಕೆಯೊಂದಿಗೆ 10 ಗಂಟೆಗಳವರೆಗೆ ಬಳಸಬಹುದು. ಬ್ಯಾಟರಿ ಪೂರ್ತಿ ಚಾರ್ಜ್ ಆದರೆ ಎಎನ್‌ಸಿಯೊಂದಿಗೆ 30 ಗಂಟೆ ಬಳಸಬಹುದು. 5ವಿ/1ಎ ಚಾರ್ಜರ್ ಮಾತ್ರವೇ ಬಳಸುವಂತೆ ಕಂಪನಿ ಸೂಚನೆ ನೀಡಿದೆ. ಟೈಪ್ ಸಿ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ. ಕಾಲಿಂಗ್ ಜೊತೆಗೆ ಮನರಂಜನೆ ಉದ್ದೇಶಕ್ಕೆ ದಿನಕ್ಕೆ ಸರಾಸರಿ 5 ಗಂಟೆ ಬಳಸಿದರೆ, ಒಂದು ವಾರದವರೆಗೆ ಬಾಳಿಕೆ ಬರುತ್ತದೆ. ಇದರ ಬಾಸ್ ಗುಣಮಟ್ಟ ಉತ್ತಮವಾಗಿದೆ. ಸಬ್‌ವೂಫರ್ ಬೂಮ್‌ಎಕ್ಸ್ ಹೊಂದಿದ್ದು, ರಿಚ್ ಬಾಸ್ ಟೆಕ್ನಾಲಜಿ, ಮ್ಯೂಸಿಕ್ ಪ್ರಿಯರಿಗೆ ಇಷ್ಟವಾಗಲಿದೆ. ಸೌಂಡ್ ಕ್ಲಾರಿಟಿ ಚೆನ್ನಾಗಿದೆ. ಸಣ್ಣ, ಮಧ್ಯಮ ಮತ್ತು ದೊಡ್ಡ... ಹೀಗೆ ಮೂರು ಗಾತ್ರದ ಇಯರ್‌ಟಿಪ್‌ಗಳನ್ನು ನೀಡಲಾಗಿದೆ.
ಇದರಲ್ಲಿ ವಾಲ್ಯೂಮ್ '-' ಹಾಗೂ ವಾಲ್ಯೂಮ್ '+' ಹಾಗೂ ಮಲ್ಟಿ ಫಂಕ್ಷನ್ (ಎಂಎಫ್‌ಬಿ) ಹೀಗೆ ಪ್ರಮುಖವಾಗಿ ಮೂರು ಬಟನ್‌ಗಳಿವೆ. ಕರೆ ಸ್ವೀಕರಿಸಲು/ಎಂಡ್ ಮಾಡಲು ಮಲ್ಟಿ ಫಂಕ್ಷನ್ ಬಟನ್ ಪ್ರೆಸ್ ಮಾಡಬೇಕು. ಕರೆ ಕಟ್ ಮಾಡಲು ಮಲ್ಟಿ ಫಂಕ್ಷನ್ ಬಟನ್ ಅನ್ನು ಎರಡು ಸೆಕೆಂಡ್‌ವರೆಗೆ ಒತ್ತಿ ಹಿಡಿಯಬೇಕು. ಸಂಗೀತ ಅಲಿಸುವಾಗ ಎಂಎಫ್‌ಬಿ ಅನ್ನು ಒತ್ತಿದರೆ ಸಂಗೀತ ಪ್ಲೇ/ಪಾಸ್ ಆಗುತ್ತದೆ. ವಾಲ್ಯುಂ ಹೆಚ್ಚು ಅಥವಾ ಕಡಿಮೆ ಮಾಡಲು +, – ಬಟನ್‌ಗಳನ್ನು ಬಳಸಬೇಕು. ಮುಂದಿನ ಹಾಡು ಕೇಳಲು + ಬಟನ್ ಅನ್ನು 3 ಸೆಕೆಂಡ್, ಹಿಂದಿನ ಹಾಡು ಕೇಳಲು – ಬಟನ್ ಅನ್ನು 3 ಸೆಕೆಂಡ್ ಒತ್ತಿ ಹಿಡಿಯಬೇಕು. ಎರಡು ಬಡ್‌ಗಳು ಅಯಸ್ಕಾಂತೀಯವಾಗಿ ಕೂಡಿಕೊಳ್ಳುವ ವ್ಯವಸ್ಥೆ ಇಲ್ಲದಿರುವುದರಿಂದ ಆನ್/ಆಫ್ ಮಾಡಲು ಪವರ್ ಬಟನ್ ಒಂದನ್ನೇ ಅವಲಂಬಿಸಬೇಕಾಗಿದೆ.
ಹಲವು ಸಾಧನಗಳನ್ನು ಏಕಕಾಲಕ್ಕೆ ಸಂಪರ್ಕಿಸಬಹುದು. ಬ್ಲುಟೂತ್ 5.3 ವರ್ಷನ್ ಬ್ಲಿಂಕ್ ಆ್ಯಂಡ್ ಪೇರ್ ಟೆಕ್ನಾಲಜಿ, ಪ್ರೀಮಿಯಂ ಟಚ್ ಕಂಟ್ರೋಲ್, ವಾಯ್ಸ್ ಅಸಿಸ್ಟಂಟ್, ಐಪಿಎಕ್ಸ್5 ವಾಟರ್ ರೆಸಿಸ್ಟಂಟ್ ಹೊಂದಿದೆ. ಕಂಪನಿಯ ಜಾಲತಾಣದಲ್ಲಿ ಇದರ ಬೆಲೆ ₹1,499.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.