ಆ್ಯಪಲ್ ಕಂಪನಿಯು ಇತ್ತೀಚೆಗಷ್ಟೇ ವಿನೂತನ ಶಕ್ತಿಶಾಲಿಯಾದ ಮತ್ತು 15 ಇಂಚಿನ ಪರದೆಯುಳ್ಳ ಲ್ಯಾಪ್‌ಟಾಪ್ ‘ಮ್ಯಾಕ್‌ಬುಕ್ ಏರ್’ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಎರಡು ವಾರಗಳ ಕಾಲ ಇದರಲ್ಲೇ ಕೆಲಸ ಮಾಡಿದ ಅನುಭವದ ಆಧಾರದಲ್ಲಿ ಇದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ವಿನ್ಯಾಸ
ಸಾಮಾನ್ಯವಾಗಿ 13ರಿಂದ 16 ಇಂಚು ಸ್ಕ್ರೀನ್ ಗಾತ್ರ ಇರುವ ಲ್ಯಾಪ್‌ಟಾಪ್‌ಗಳು ಹೆಚ್ಚಿನವರ ಆಯ್ಕೆ. ಆದರೆ, ಇವೆರಡರ ನಡುವಿನ 15 ಇಂಚಿನ ಸ್ಕ್ರೀನ್ ಇರುವುದು ಈ ಬಾರಿಯ ಆ್ಯಪಲ್ ಮ್ಯಾಕ್‌ಬುಕ್ ಏರ್ ವೈಶಿಷ್ಟ್ಯ. ಅಗಲ ಪರದೆಯಿದ್ದರೂ, ಗಾತ್ರಕ್ಕೆ ಹೋಲಿಸಿದರೆ ಕಡಿಮೆ ತೂಕ ಮತ್ತು ಸ್ಲಿಮ್ ಆಗಿರುವ ಮ್ಯಾಕ್‌ಬುಕ್ ಇದು.
ಇದರಲ್ಲಿ, ಮ್ಯಾಕ್‌ಬುಕ್ ಸರಣಿಯ ಬಹುತೇಕ ಎಲ್ಲ ಪ್ರಮುಖ ವೈಶಿಷ್ಟ್ಯಗಳೂ ಇವೆ. ಉದಾಹರಣೆಗೆ, ಮ್ಯಾಗ್‌ಸೇಫ್ ಚಾರ್ಜಿಂಗ್, ಭರ್ಜರಿ 6 ಸ್ಪೀಕರ್‌ಗಳಿರುವ ಧ್ವನಿ ವ್ಯವಸ್ಥೆ, 1080 ಪಿಕ್ಸೆಲ್ ಸಾಮರ್ಥ್ಯದ ವೆಬ್‌ಕ್ಯಾಮೆರಾ, 15.3 ಇಂಚಿನ ಸ್ಕ್ರೀನ್ ಹಾಗೂ ಅತ್ಯಂತ ಶಕ್ತಿಶಾಲಿಯಾದ ಎಂ2 ಪ್ರೊಸೆಸರ್ ಚಿಪ್. ಇದರ ಬೆಲೆ ₹154900.00.
ನೋಡಲು 16 ಇಂಚಿನ ಮ್ಯಾಕ್‌ಬುಕ್ ಪ್ರೋ ಮಾಡೆಲ್‌ನಂತೆಯೇ ಆಕರ್ಷಕವೂ, ಐಷಾರಾಮದ ನೋಟವನ್ನೂ ಹೊಂದಿದೆ. ತೀರಾ ತ್ರಾಸದಾಯಕ ಮತ್ತು ಗ್ರಾಫಿಕ್ಸ್, ವಿಡಿಯೊ ಎಡಿಟಿಂಗ್ ಮುಂತಾದ ಕಾರ್ಯಗಳಿಗಾಗಿ ಹೆಚ್ಚುವರಿ RAM ಮತ್ತು ಹೆಚ್ಚುವರಿ ಸ್ಟೋರೇಜ್ ಬೇಕಿದ್ದರೆ ಮಾತ್ರವೇ ಹೆಚ್ಚು ಬೆಲೆ ಇರುವ ಪ್ರೋ ಮಾಡೆಲ್ ಖರೀದಿಸಬಹುದು. ಇಲ್ಲವೆಂದಾದರೆ, ಬಹುತೇಕ ಎಲ್ಲ ಅತ್ಯಾಧುನಿಕ ಸೌಕರ್ಯಗಳೂ ಈ ಏರ್ ಮಾಡೆಲ್‌ನಲ್ಲಿದೆ. ಅಗಲವಾದ ಟ್ರ್ಯಾಕ್‌ಪ್ಯಾಡ್ (ಮೌಸ್‌ನ ಕೆಲಸ ಮಾಡುವ ಜಾಗ) ಇದ್ದು, ಕೀಬೋರ್ಡ್‌ನ ಎರಡೂ ಪಾರ್ಶ್ವಗಳಲ್ಲಿ ಸಾಕಷ್ಟು ಖಾಲಿ ಜಾಗವಿದೆ.
ಅಡಕವಾಗಿರುವ ಸ್ಪೀಕರ್‌ಗಳು ಶಕ್ತಿಶಾಲಿಯಾಗಿದ್ದು, ಹಿಂದೆ ಇದ್ದದ್ದಕ್ಕಿಂತ 2 ಹೆಚ್ಚು ಎಂದರೆ ಆರು ಸ್ಪೀಕರ್‌ಗಳಿವೆ. ಧ್ವನಿಯನ್ನು ಅತ್ಯುತ್ತಮವಾಗಿ ಹೊರಹೊಮ್ಮಿಸಿ, ಸರೌಂಡ್ ಸೌಂಡ್ ಅನುಭವ ನೀಡಲು ಎರಡು ಟ್ವೀಟರ್‌ಗಳು ಹಾಗೂ ಎರಡು ಶಕ್ತಿಯುತ ವೂಫರ್‌ಗಳಿವೆ. ಧ್ವನಿಯ ಗುಣಮಟ್ಟ ಚೆನ್ನಾಗಿದ್ದು, ಮೂವೀ ಅಥವಾ ಯೂಟ್ಯೂಬ್ ವಿಡಿಯೊ ವೀಕ್ಷಣೆಯ ವೇಳೆ, ಪೂರ್ಣ ಪ್ರಮಾಣದಲ್ಲಿ ವಾಲ್ಯೂಮ್ ನೀಡಿದರೂ, ಯಾವುದೇ ಅಡ್ಡ ಧ್ವನಿ (ಗೊರ ಗೊರ ಧ್ವನಿ) ಕೇಳಿಲ್ಲ.
ಪಾರ್ಶ್ವಭಾಗದಲ್ಲಿ ಎರಡು ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗಳು ಹಾಗೂ ಚಾರ್ಜಿಂಗ್‌ಗಾಗಿ ಪ್ರತ್ಯೇಕವಾದ ಮ್ಯಾಗ್‌ಸೇಫ್ ಪೋರ್ಟ್ ಇದೆ. ಚಾರ್ಜರ್ ತುದಿಯನ್ನು ಅದರ ಸಮೀಪ ತೆಗೆದುಕೊಂಡು ಹೋದ ತಕ್ಷಣ ತಾನಾಗಿ ಅಂಟಿಕೊಳ್ಳುವುದು ಮ್ಯಾಗ್‌ಸೇಫ್ ವಿಶೇಷತೆ. ಮತ್ತೊಂದು ಪಾರ್ಶ್ವದಲ್ಲಿ 3.5ಮಿಮೀ ಹೆಡ್‌ಫೋನ್ ಜ್ಯಾಕ್ ಇದೆ. ಆದರೆ, ಇಷ್ಟು ದೊಡ್ಡ ಸ್ಕ್ರೀನ್ ಇದ್ದರೂ ಎಸ್‌ಡಿ ಕಾರ್ಡ್ ಸ್ಲಾಟ್ ಆಗಲೀ, ಎಚ್‌ಡಿಎಂಐ ಪೋರ್ಟ್ ಆಗಲೀ ಇಲ್ಲದಿರುವುದು ಕೆಲವರಿಗೆ ಕೊರತೆ ಎಂಬ ಭಾವನೆ ಬರಬಹುದು. ಇವೆರಡೂ ಮ್ಯಾಕ್‌ಬುಕ್ ಪ್ರೊ ಮಾದರಿಯಲ್ಲಿದೆ. ಆದರೆ ಇದು, ಸಾಧ್ಯವಿದ್ದಷ್ಟು ವೈರುಗಳನ್ನು ದೂರಮಾಡುವ ಆಧುನಿಕ ಚಿಂತನೆ ಎಂದುಕೊಳ್ಳಲೂಬಹುದು.
ಮ್ಯಾಕ್‌ಬುಕ್ ಏರ್‌ನ ವಿಶೇಷತೆಯೆಂದರೆ ಅದರ ಅಗಲವಾದ ಸ್ಕ್ರೀನ್. ಮೇಲ್ಭಾಗದಲ್ಲಿ 1080P ಸಾಮರ್ಥ್ಯದ ವೆಬ್ ಕ್ಯಾಮೆರಾ ಸ್ಥಿತವಾಗಿರುವ ‘ನಾಚ್’ ಇದೆ. 60Hz ರೀಫ್ರೆಶ್ ರೇಟ್ ಇರುವ ಎಲ್‌ಸಿಡಿ ಪ್ಯಾನೆಲ್ ಇದ್ದು, ಚಿತ್ರ ಮತ್ತು ವಿಡಿಯೊಗಳ ವರ್ಣವೈವಿಧ್ಯವನ್ನು ಅತ್ಯಂತ ಸ್ಪಷ್ಟವಾಗಿ ವೀಕ್ಷಿಸಬಹುದು.
ಬ್ಯಾಟರಿ: 66.5 ವ್ಯಾಟ್ ಲೀಥಿಯಮ್ ಪಾಲಿಮರ್ ಬ್ಯಾಟರಿ ಇದರಲ್ಲಿದ್ದು, 35W ವೇಗದ ಚಾರ್ಜಿಂಗ್‌ಗಾಗಿ ಡ್ಯುಯಲ್ ಯುಎಸ್‌ಬಿ-ಸಿ ಪೋರ್ಟ್ ಅನ್ನು ಬೆಂಬಲಿಸುವ ಪವರ್ ಅಡಾಪ್ಟರ್ ನೀಡಲಾಗಿದೆ. ಜೊತೆಗೆ, ಯುಎಸ್‌ಬಿ ‘ಸಿ’ಯಿಂದ ಮ್ಯಾಗ್‌ಸೇಫ್-3 ಸಂಪರ್ಕ ಕೇಬಲ್ ಒದಗಿಸಲಾಗಿದ್ದು, ವೇಗವಾಗಿಯೇ ಚಾರ್ಜ್ ಆಗುತ್ತದೆ. 70W ಚಾರ್ಜಿಂಗನ್ನು ಬೆಂಬಲಿಸುವುದರಿಂದ, ಮತ್ತಷ್ಟು ಬೇಗನೇ ಚಾರ್ಜ್ ಮಾಡಬಹುದಾಗಿದೆ. ನಿರಂತರ 15 ಗಂಟೆ ವೈಫೈ ವೆಬ್ ಬ್ರೌಸಿಂಗಿಗೆ ಏನೂ ಅಡ್ಡಿಯಿಲ್ಲ ಎಂದು ಆ್ಯಪಲ್ ಹೇಳಿದೆ. ಎರಡು ದಿನಗಳ ಕಾಲ ಕೆಲಸ ಮಾಡಿದ (ದಿನಕ್ಕೆ ಅಂದಾಜು 8 ಗಂಟೆ) ಬಳಿಕವೂ ಶೇ.20 ಚಾರ್ಜ್ ಉಳಿದಿತ್ತು.
ಸುಲಲಿತ ಕಾರ್ಯಾಚರಣೆ
ಮ್ಯಾಕ್‌ಬುಕ್ ಕಳೆದ ವರ್ಷದಿಂದೀಚೆಗೆ ಅತ್ಯಾಧುನಿಕ ಎಂ2 ಚಿಪ್‌ಗಳನ್ನು ಬಳಸುತ್ತಿದ್ದು, 8 ಕೋರ್ ಸಿಪಿಯು ಮತ್ತು 10 ಕೋರ್ ಜಿಪಿಯು ಮೂಲಕ ಈ ಮ್ಯಾಕ್‌ಬುಕ್ ಏರ್‌ನಲ್ಲಿ ಕೆಲಸ ಮಾಡುವುದು, ಬ್ರೌಸ್ ಮಾಡುವುದು ತೀರಾ ಸುಲಲಿತ. ಅದರ ಅನುಭವವೂ ನಮಗಾಗುತ್ತದೆ. ದೈನಂದಿನ ಕೆಲಸಗಳು, ಗೇಮ್ ಅಥವಾ ಅತ್ಯಂತ ಸ್ಫುಟವಾದ, ಗರಿಷ್ಠ ರೆಸೊಲ್ಯುಶನ್ ಇರುವ ವಿಡಿಯೊಗಳನ್ನು ನೋಡುವಾಗ, ಒಂದಿನಿತೂ ವಿಳಂಬ ಅಥವಾ ಲೇಟೆನ್ಸಿಯ ಅನುಭವ ಆಗಿಲ್ಲ. ಹಲವು ಟ್ಯಾಬ್‌ಗಳನ್ನು ತೆರೆದು ವೈವಿಧ್ಯಮಯ ಕೆಲಸ (ಮಲ್ಟಿ ಟಾಸ್ಕಿಂಗ್) ಮಾಡುವಾಗಲೂ ನಾನು ಉಪಯೋಗಿಸುತ್ತಿರುವ ವಿಂಡೋಸ್‌ಗಿಂತ ಹೆಚ್ಚು ವೇಗವಾಗಿ ಕೆಲಸ ಆಗಿದೆ.
ಕನ್ನಡ
ಆ್ಯಪಲ್ ಕಂಪನಿಯು ಪ್ರಾದೇಶಿಕ ಭಾಷೆಗಳ ಮಾರುಕಟ್ಟೆಗೂ ಪೂರಕವಾಗಿ, ಸಾಧನಗಳನ್ನು ತಯಾರಿಸಿದೆ. ಹೀಗಾಗಿ, ಇದುವರೆಗೆ ಕನ್ನಡ ಕೀಬೋರ್ಡ್ ಸಮಸ್ಯೆಯೇ ದೊಡ್ಡ ತೊಡಕಾಗಿತ್ತು. ಆದರೆ, ಅದರಲ್ಲಿ ಅಂತರ್‌ನಿರ್ಮಿತವಾಗಿ ಕನ್ನಡ ಕೀಬೋರ್ಡ್ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಕ್ವೆರ್ಟಿ ಹಾಗೂ ಇನ್‌ಸ್ಕ್ರಿಪ್ಟ್ ಕೀಲಿಮಣೆ ವಿನ್ಯಾಸವಿದೆ. ಇದಕ್ಕೆ ಹೊರತಾಗಿ ಬೇರೆ ಕೀಬೋರ್ಡ್‌ಗಳನ್ನು ಆ್ಯಪ್ ಸ್ಟೋರ್‌ನಿಂದ ಅಳವಡಿಸಿಕೊಳ್ಳಬಹುದು. ಮೈಕ್ರೋಸಾಫ್ಟ್ ಆಫೀಸ್ ಎಂಬ ಪಠ್ಯ ಸಂಸ್ಕರಣಾ ತಂತ್ರಾಂಶಕ್ಕೆ ಪರ್ಯಾಯವಾಗಿ ನಂಬರ್ಸ್ (ಎಕ್ಸೆಲ್), ಕೀನೋಟ್ (ಪವರ್ ಪಾಯಿಂಟ್) ಹಾಗೂ ಪೇಜಸ್, ಟೆಕ್ಸ್ಟ್-ಎಡಿಟ್ (ವರ್ಡ್) ತಂತ್ರಾಂಶಗಳಿವೆ.
ಒಟ್ಟಿನಲ್ಲಿ ಹೇಳುವುದಾದರೆ, 15 ಇಂಚಿನ ಮ್ಯಾಕ್‌ಬುಕ್ ಏರ್ - ದೊಡ್ಡದಾದ ಡಿಸ್‌ಪ್ಲೇ ಹಾಗೂ ತೆಳು ಮತ್ತು ಹಗುರ - ಇವುಗಳಿಂದ ಗಮನ ಸೆಳೆಯುತ್ತದೆ. ಅತ್ಯುತ್ತಮ ಸ್ಪಷ್ಟತೆಯ ಚಿತ್ರ-ವಿಡಿಯೊಗಳ ವೀಕ್ಷಣೆ, ಉತ್ತಮ ಧ್ವನಿ ಮತ್ತು ಉತ್ತಮ ಬ್ಯಾಟರಿ ಇದೆ.
ಬಣ್ಣಗಳು: ಸಿಲ್ವರ್, ಸ್ಟಾರ್‌ಲೈಟ್, ಸ್ಪೇಸ್‌ಗ್ರೇ ಹಾಗೂ ಮಿಡ್‌ನೈಟ್
ಚಿಪ್: ಎಂ2, 8 ಕೋರ್
ಡಿಸ್‌ಪ್ಲೇ: 15.3 ಇಂಚು ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ, ಎಲ್‌ಇಡಿ ಬ್ಯಾಕ್‌ಲಿಟ್, ಐಪಿಎಸ್ ತಂತ್ರಜ್ಞಾನ ಆಧಾರಿತ, 224 ಪಿಕ್ಸೆಲ್ಸ್/ಇಂಚು, 2880x1864 ರೆಸೊಲ್ಯುಶನ್
ಬ್ಯಾಟರಿ: 66.5 ವ್ಯಾಟ್ ಲೀಥಿಯಮ್ ಪಾಲಿಮರ್ ಬ್ಯಾಟರಿ, 35W ಡ್ಯುಯಲ್ ಯುಎಸ್‌ಬಿ-ಸಿ ಪೋರ್ಟ್ ಬೆಂಬಲಿಸುವ ಪವರ್ ಅಡಾಪ್ಟರ್, ಯುಎಸ್‌ಬಿ ಸಿ ಟು ಮ್ಯಾಗ್‌ಸೇಫ್ 3 ಕೇಬಲ್
ಮ್ಯಾಗ್‌ಸೇಫ್ 3 ಚಾರ್ಜಿಂಗ್ ಪೋರ್ಟ್, 2 ಯುಎಸ್‌ಬಿ-ಸಿ ಪೋರ್ಟ್‌ಗಳು, 3.5mm ಹೆಡ್‌ಫೋೋನ್ ಜ್ಯಾಕ್
ಮೆಮೊರಿ: 8GB RAM, 16GB ಅಥವಾ 24GBಗೂ ವಿಸ್ತರಿಸಬಹುದು. 256GB SSD ಸ್ಟೋರೇಜ್ ಇದ್ದು 512GB, 1TB ಅಥವಾ 2TBಗೂ ಕಾನ್ಫಿಗರ್ ಮಾಡಬಹುದು.
ಕೀಬೋರ್ಡ್: ಬ್ಯಾಕ್‌ಲಿಟ್ (ಹಿನ್ನೆಲೆ ಬೆಳಕಿರುವ) ಮ್ಯಾಜಿಕ್ ಕೀಬೋರ್ಡ್, ಟಚ್ ಐಡಿ ಬೆಂಬಲವಿದ್ದು, ಸುತ್ತಲಿನ ವಾತಾವರಣದ ಬೆಳಕಿಗೆ ಅನುಗುಣವಾಗಿ ಸ್ಪಂದಿಸುವ ಸೆನ್ಸರ್ ಇದೆ. ಟ್ರ್ಯಾಕ್‌ಪ್ಯಾಡ್‌ನಲ್ಲಿ ಮಲ್ಟಿ-ಟಚ್ ಕಾರ್ಯಗಳನ್ನು ಮಾಡಬಹುದು.
ವೈಫೈ, ಬ್ಲೂಟೂತ್ ಬೆಂಬಲವಿದ್ದು, ಫೇಸ್‌ಟೈಂ ಹೆಚ್‌ಡಿ ಕ್ಯಾಮೆರಾ ಇದೆ.
ಆರು ಸ್ಪೀಕರ್‌ಗಳಿರುವ ಸ್ಟೀರಿಯೊ ಧ್ವನಿ ವ್ಯವಸ್ಥೆ
ಗಾತ್ರ: 1.15cm ಎತ್ತರ, 34.04cm ಅಗಲ, 23.76cm ಎತ್ತರ, ಹಾಗೂ 1.51kg ತೂಕ.
ಆಪರೇಟಿಂಗ್ ಸಿಸ್ಟಂ: ಮ್ಯಾಕ್‌ನ ಅತ್ಯಾಧುನಿಕ ವೆಂಚುರಾ ಒಎಸ್.
ಬಾಕ್ಸ್‌ನಲ್ಲಿ: 15-ಇಂಚಿನ MacBook Air, 35W ಡ್ಯುಯಲ್ USB-C ಪೋರ್ಟ್ ಕಾಂಪ್ಯಾಕ್ಟ್ ಪವರ್ ಅಡಾಪ್ಟರ್
USB-C to MagSafe 3 ಕೇಬಲ್ (2 ಮೀಟರ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.