ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಕಂಪನಿಯು ತನ್ನದೇ ಹೆಜ್ಜೆಗುರುತು ಮೂಡಿಸಿದೆ. ‘ನೆವರ್ ಸೆಟಲ್’ ಟ್ಯಾಗ್‌ಲೈನ್‌ನೊಂದಿಗೆ ಆರಂಭವಾದ ಕಂಪನಿಯು ಪಯಣವು ಇದೀಗ ತನ್ನದೇ ಆದ ಅತಿದೊಡ್ಡ ಬಳಕೆದಾರರ ಸಮುದಾಯವನ್ನೂ ಹೊಂದಿದೆ.
ಆರಂಭದಲ್ಲಿ ವರ್ಷಕ್ಕೊಂದು ಹೊಸ ಫೋನ್ ನೀಡುವ ಗುರಿ ಇಟ್ಟುಕೊಂಡಿದ್ದ ಕಂಪನಿ ನಂತರದ ದಿನಗಳಲ್ಲಿ ವರ್ಷಕ್ಕೆ ಮೂರು ಫೋನ್ ಬಿಡುಗಡೆ ಮಾಡಲಾರಂಭಿಸಿದೆ. ಹೀಗಾಗಿ ವಿನ್ಯಾಸ ಮತ್ತು ವೈಶಿಷ್ಟ್ಯಗಳ ದೃಷ್ಟಿಯಿಂದ ಬಹಳ ದೊಡ್ಡ ಮಟ್ಟದ ಬದಲಾವಣೆಗಳನ್ನು ನಿರೀಕ್ಷಿಸುವುದು ಕಷ್ಟವಾಗಿತ್ತು. ಹೀಗಿರುವಾಗ ಕಂಪನಿಯು ಕ್ಯಾಮೆರಾ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ತನ್ನ ಒನ್‌ಪ್ಲಸ್ 9 ಮತ್ತು 9ಪ್ರೊ ಹ್ಯಾಂಡ್‌ಸೆಟ್‌ಗಳಲ್ಲಿ ಹ್ಯಾಸಲ್‌ಬ್ಲಾಡ್ ಕ್ಯಾಮೆರಾ ಅಳವಡಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿತ್ತು. ಚಿತ್ರದ ಗುಣಮಟ್ಟದಲ್ಲಿಯೂ ಅದು ಸ್ಪಷ್ಟವಾಗಿ ಕಂಡುಬಂದಿದೆ. ಆದರೆ, ಅದೇಕೋ ಒನ್‌ಪ್ಲಸ್ 9ಆರ್‌ಟಿ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ಹ್ಯಾಸಲ್‌ಬ್ಲಾಡ್ ಕ್ಯಾಮೆರಾ ಅಳವಡಿಸದೇ ಮತ್ತೆ ಒಂದು ಹೆಜ್ಜೆ ಹಿಂದೆ ಇಟ್ಟಂತೆ ಕಾಣುತ್ತಿದೆ. ಹಾಗಂತಾ, ಪ್ರೀಮಿಯಂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಂತೆ ಕಾಣುವುದಿಲ್ಲ.
ಒನ್‌ಪ್ಲಸ್ 9 ಹ್ಯಾಂಡ್‌ಸೆಟ್ ಆಧಾರದ ಮೇಲೆ ಒನ್‌ಪ್ಲಸ್ 9ಆರ್‌ಟಿ ರೂಪಿಸಲಾಗಿದೆ. ಪ್ರಮುಖ ಬದಲಾವಣೆ ಎಂದರೆ ಹಿಂಬದಿಯ ಕ್ಯಾಮೆರಾ ಅಳವಡಿಕೆಯ ವಿನ್ಯಾಸ.ಟ್ರಿಪಲ್ ಕ್ಯಾಪರಾ ಸೆಟಪ್ ಇದೆ. ಫೋನ್ ತೆಳುವಾಗಿದ್ದು 8.3 ಎಂಎಂ ಇದೆ. 198.5 ಗ್ರಾಂ ತೂಕ ಇದೆ.
50+16+4ಎಂಪಿ... ಹೀಗೆ ಹಿಂಬದಿ ಟ್ರಿಪಲ್ ಕ್ಯಾಮೆರಾ ಹೊಂದಿದೆ. ಒನ್‌ಪ್ಲಸ್ 9 ಮತ್ತು 9ಪ್ರೊ ಹ್ಯಾಂಡ್‌ಸೆಟ್‌ಗಳಲ್ಲಿ ವೃತ್ತಿಪರ ಕ್ಯಾಮೆರಾ ತಯಾರಿಸುವ ಹ್ಯಾಸೆಲ್‌ಬ್ಲಾಡ್ ಕಂಪನಿಯ ಕ್ಯಾಮೆರಾ ಅಳವಡಿಸಲಾಗಿತ್ತು. ಇದರಿಂದಾಗಿ ಇದರಿಂದಾಗಿ ಸಹಜ ಬೆಳಕಿನಲ್ಲಿ ಅಷ್ಟೇ ಅಲ್ಲದೆ, ಮಂದ ಬೆಳಕಿನಲ್ಲಿ, ದೀಪದ ಬೆಳಕಿನಲ್ಲಿಯೂ ಚಿತ್ರದ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಆದರೆ, ಒನ್‌ಪ್ಲಸ್ 9ಆರ್‌ಟಿಯಲ್ಲಿ ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾ ಇಲ್ಲ. ಕಂಪನಿ ಇದಕ್ಕೆ ಕಾರಣ ತಿಳಿಸಿಲ್ಲ. ಹಿಂದಿನ ಎರಡು ಹ್ಯಾಂಡ್‌ಸೆಟ್‌ಗಳಲ್ಲಿ ಹ್ಯಾಸಲ್‌ಬ್ಲಾಡ್ ಕ್ಯಾಮೆರಾದಿಂದ ತೆಗೆದಿರುವ ಚಿತ್ರಗಳಿಗೆ ಹೋಲಿಸಿದರೆ ಒನ್‌ಪ್ಲಸ್ 9ಆರ್‌ಟಿಯಲ್ಲಿ ತೆಗೆದ ಚಿತ್ರದ ಗುಣಮಟ್ಟವು ಕಡಿಮೆ. ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾದೊಂದಿಗೆ ಹೋಲಿಸದೇ ಇದರೆ, ಸಹಜ ಬೆಳಕಿನಲ್ಲಿ ತೆಗೆದ ಚಿತ್ರದ ಗುಣಮಟ್ಟ ಉತ್ತಮವಾಗಿದೆ. ಜೂಮ್ ಮಾಡಿದರೂ ಸ್ಪಷ್ಟತೆಯಲ್ಲಿ ಯಾವುದೇ ಕೊರತೆ ಕಾಣುವುದಿಲ್ಲ. ಆದರೆ, ಮಂದ ಬೆಳಕಿನಲ್ಲಿ ತೆಗೆದ ಚಿತ್ರವು ಅಷ್ಟು ಚೆನ್ನಾಗಿ ಮೂಡಿಬಂದಿಲ್ಲ. ಮ್ಯಾಕ್ರೊ ಮೋಡ್ ಆಟೊಫೋಕಸ್ ಆಗದೇ ಇರುವುದರಿಂದ ಚಿತ್ರದ ಗುಣಮಟ್ಟ ಅಷ್ಟು ಚೆನ್ನಾಗಿ ಬರುವುದಿಲ್ಲ. ಮುಂಬದಿಯಲ್ಲಿ 16ಎಂಪಿ ಕ್ಯಾಮೆರಾ ಇದ್ದು, ಸೆಲ್ಫಿ ತಕ್ಕ ಮಟ್ಟಿಗೆ ಚೆನ್ನಾಗಿ ಬರುತ್ತದೆ. ಸ್ಲೊ ಮೋಷನ್‌ನಲ್ಲಿ ತೆಗೆದ ವಿಡಿಯೊದ ವಿಡಿಯೊ ಮತ್ತು ಆಡಿಯೊ ಗುಣಮಟ್ಟ ಚೆನ್ನಾಗಿದೆ.
ಗೇಮ್ ಆಡುವಾಗ ಫೋನ್ ಬಿಸಿ ಆಗುವುದಿಲ್ಲ. ಒಂದು ಗಂಟೆಗೂ ಹೆಚ್ಚು ಸಮಯದವರೆಗೆ ಆಡಿದರೂ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿ ಆಗುವುದಿಲ್ಲ. 600ಹರ್ಟ್ಸ್ ಅಲ್ಟ್ರಾ ಫಾಸ್ಟ್ ಟಚ್ ಬೆಂಬಲಿಸುತ್ತದೆ. ಹೀಗಾಗಿ ಗೇಮ್ ಆಡುವಾಗ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಫೋನ್ ಹ್ಯಾಂಗ್ ಸಹ ಆಗುವುದಿಲ್ಲ.
ಡಿಸ್‌ಪ್ಲೇ ಗುಣಮಟ್ಟ ಚೆನ್ನಾಗಿದೆ. ಅಮೊಎಲ್‌ಇಡಿ ಎಚ್‌ಡಿ+ ಡಿಸ್‌ಪ್ಲೇ ಒಳಗೊಂಡಿದೆ. ವೇಗ ಮತ್ತು ಮೃದುವಾದ ಬಳಕೆಯ ಅನುಭವ ಆಗುತ್ತದೆ. 120ಹರ್ಟ್ ರಿಫ್ರೆಷ್ ರೇಟ್ ಇದೆ. ಕ್ಯಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 888 ಚಿಪ್‌ಸೆಟ್, 12ಜಿಬಿ ರ್‍ಯಾಮ್ ಮತ್ತು 256 ಜಿಬಿ ಯುಎಫ್‌ಎಸ್ 3.1 ಸ್ಟೋರೆಜ್ ಇದೆ. ಎಚ್‌ಡಿಆರ್10+ ವಿಡಿಯೊಗೆ ಬೆಂಬಲಿಸುತ್ತದೆ. ಗೇಮಿಂಗ್, ಮೂವಿಗೆ ಉತ್ತಮ ಆಯ್ಕೆ ಆಗಿದೆ. ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್ ಒಎಸ್ 11.3 ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ. ಈಗಾಗಲೇ ಆಂಡ್ರಾಯ್ಡ್ 12 ಒಎಸ್ ಮಾರುಕಟ್ಟೆಯಲ್ಲಿ ಇದೆ. ಹೀಗಾಗಿ ಸಾಫ್ಟ್‌ವೇರ್ ದೃಷ್ಟಿಯಿಂದ ಇದು ಹಿನ್ನಡೆ ಎನ್ನಬಹುದು. ಡಾಲ್ಬಿ ಅಟ್ಮೋಸ್ ಸ್ಟೀರಿಯೊ ಸ್ಪೀಕರ್ ಒಳಗೊಂಡಿದೆ.
4,500 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ವಾರ್ಪ್ ಚಾರ್ಜರ್ 65ಟಿ ಮೂಲಕ 40 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದು. ನಿತ್ಯದ ಬಳಕೆಯಲ್ಲಿ ಬ್ಯಾಟರಿ ಬಾಳಿಕೆಯು ಒಂದು ದಿನಕ್ಕೆ ಸಾಕಾಗುತ್ತದೆ. ಫಿಲಂ ನೋಡಿದರೆ, ಗೇಮ್ ಆಡಿದರೆ ಬಾಳಿಕೆ ಅವಧಿ ಕಡಿಮೆ ಆಗುತ್ತದೆ. ವಯರ್‌ಲೆಸ್ ಚಾರ್ಜಿಂಗ್ ಆಯ್ಕೆ ಇಲ್ಲ. ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸುವ ವ್ಯವಸ್ಥೆಯೂ ಇದರಲ್ಲಿ ಇಲ್ಲ.
ವೈಶಿಷ್ಟ್ಯ
ಪರದೆ: 6.62 ಇಂಚು
ರೆಸಲ್ಯೂಷನ್; 1080*2400 (ಎಫ್‌ಎಚ್‌ಡಿ+)
ಆಸ್ಪೆಕ್ಟ್ ರೇಶಿಯೊ; 20:9
ಒಎಸ್; ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್ ಒಎಸ್
ಸಿಪಿಯು; ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 888
ಬ್ಯಾಟರಿ; 4,500 ಎಂಎಎಚ್
ವಾರ್ಪ್ ಚಾರ್ಜರ್ 65ಟಿ
ಕ್ಯಾಮೆರಾ; 50+16+2ಎಂಪಿ
ಸೆಲ್ಫಿ; 16 ಎಂಪಿ
ಬ್ಲುಟೂತ್;5.2
ಬೆಲೆ; 8+128ಜಿಬಿಗೆ ₹ 42,999. 12ಜಿಬಿ+256ಜಿಬಿಗೆ 46,999
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.