ಪ್ರೀಮಿಯಂ ವೈಶಿಷ್ಟ್ಯಗಳನ್ನು ಮಧ್ಯಮ ಬೆಲೆಗೂ ಸಿಗುವಂತೆ ಮಾಡಲು ಒನ್‌ಪ್ಲಸ್ ಕಂಪನಿಯು ‘ನಾರ್ಡ್’ ಪರಿಯಿಸಿದ್ದು, ಈ ಸಾಲಿನಲ್ಲಿ ಕಂಪನಿ ಬಿಡುಗಡೆ ಆಗಿರುವ ಮೂರನೇ ಹ್ಯಾಂಡ್‌ಸೆಟ್ ‘ಒನ್‌ಪ್ಲಸ್ ನಾರ್ಡ್ 2 5ಜಿ’. ಮೇಲ್ನೋಟಕ್ಕೆ ಇದರಲ್ಲಿ ಹೇಳಿಕೊಳ್ಳುವಂತಹ ಯಾವುದೇ ಬದಲಾವಣೆಗಳು ಕಾಣುವುದಿಲ್ಲವಾದರೂ ಪ್ರೊಸೆಸರ್ ದೃಷ್ಟಿಯಿಂದ ನಾರ್ಡ್‌ನ ಹಿಂದಿನ ಫೋನ್‌ಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಇದೆ. ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ ಬದಲಾಗಿ ಮೀಡಿಯಾಟೆಕ್ ಡೈಮೆನ್ಸಿಟಿ 1200–ಎಐ ಸಿಪಿಯು ಬಳಸಲಾಗಿದೆ. ಬಹಳ ಸುಲಲಿತವಾಗಿ ಕಾರ್ಯನಿರ್ವಹಿಸಬಹುದು. ಗೇಮ್ ಆಡುವಾಗ, ವಿಡಿಯೊ ನೋಡುವಾಗ ಯಾವುದೇ ರೀತಿಯ ಅಡಚಣೆ ಎದುರಾಗುವುದಿಲ್ಲ. 6.43 ಇಂಚು ಫ್ಲ್ಯೂಯೆಡ್ ಅಮೊ ಎಲ್‌ಇಡಿ ಪರದೆಯು 2400X1080 ರೆಸಲ್ಯೂಷನ್ ಹೊಂದಿದ್ದು, 410ಪಿಪಿಐ ಪಿಕ್ಸಲ್ ಡೆನ್ಸಿಟಿ ಇದೆ.
ಕ್ಯಾಮೆರಾ: ಇದರಲ್ಲಿ ಮೂರು ಕ್ಯಾಮೆರಾಗಳಿವೆ. 50 ಮೆಗಾಪಿಕ್ಸಲ್, 8 ಎಂಪಿ ಅಲ್ಟ್ರಾವೈಡ್ ಮತ್ತು 2 ಎಂಪಿ ಮೊನೊ. ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಬಹುದು. ಅಲ್ಟ್ರಾವೈಡ್ ಆ್ಯಂಗಲ್ ಕ್ಯಾಮೆರಾದಲ್ಲಿ ತೆಗೆದ ಚಿತ್ರದ ಗುಣಮಟ್ಟವು ತುಸು ಕಡಿಮೆ ಆಗಿದೆ. ಅತಿ ಕಡಿಮೆ ಬೆಳಕಿನಲ್ಲಿ ಚಿತ್ರಗಳನ್ನು ತೆಗೆಯಲು ಅನುಕೂಲ ಆಗುವಂತೆ ನೈಟ್‌ಸ್ಕೇಪ್ ಅಲ್ಟ್ರಾ ಮೋಡ್ ಅನ್ನು ಇದರಲ್ಲಿ ಪರಿಚಯಿಸಲಾಗಿದೆ. ಕತ್ತಲಿನಲ್ಲಿ ಇರುವ ಚಿತ್ರಗಳನ್ನು ‘ಎಐ’ ಗುರುತಿಸಿ ನೈಟ್‌ಸ್ಕೇಪ್ ಅಲ್ಟ್ರಾ ಮೋಡ್ ಅನ್ನು ಸ್ವಯಂಚಾಲನೆಗೊಳಿಸುತ್ತದೆ. ಈ ಆಯ್ಕೆಯಲ್ಲಿ ಚಿತ್ರ ಸೆರೆಯಾಗಲು ತುಸು ಸಮಯ ಹಿಡಿಯುತ್ತದೆಯಾದರೂ ಚಿತ್ರದ ಗುಣಮಟ್ಟ, ವಿವರಣೆ ಮತ್ತು ನೆರಳು ಬೆಳಕಿನ ಸಂಯೋಜನೆ ಉತ್ತಮವಾಗಿ ಮೂಡಿಬರುತ್ತದೆ. ಆಪ್ಟಿಕಲ್ ಝೂಮ್ ಆಯ್ಕೆ ಇಲ್ಲವಾದರೂ 2ಎಕ್ಸ್ ಡಿಜಿಟಲ್ ಸೂಪ್ ತಕ್ಕಮಟ್ಟಗೆ ಅದರ ಕೊರತೆಯನ್ನು ನೀಗಿಸುತ್ತದೆ. ಮ್ಯಾಕ್ರೊ ಮೋಡ್ ಆಯ್ಕೆ ನೀಡಿಲ್ಲ. ಹೀಗಾಗಿ ಕ್ಲೋಸಪ್ ಫೋಟೊ ತೆಗೆಯುವಾಗ ಫೋಕಸ್ ಮಾಡಿಕೊಳ್ಳಲು ಕ್ಯಾಮೆರಾ ಹೆಣಗಾಡುತ್ತದೆ. ಮುಂಬದಿಯ 32 ಎಂಪಿ ಕ್ಯಾಮೆರಾದ ಗುಣಮಟ್ಟ ಚೆನ್ನಾಗಿದೆ. ಬಹಳ ಸ್ಪಷ್ಟ ಮತ್ತು ಸೂಕ್ಷ್ಮವಾದ ಅಂಶಗಳು ಎದ್ದು ಕಾಣುವಂತೆ ಚಿತ್ರವು ಸೆರೆಯಾಗುತ್ತದೆ. ಹಗಲು ಮತ್ತು ರಾತ್ರಿ ವೇಳೆಯಲ್ಲಿಯೂ ವಿಡಿಯೊ ಗುಣಮಟ್ಟದಲ್ಲಿ ಯಾವುದೇ ಕೊರತೆ ಕಾಣಿಸುವುದಿಲ್ಲ.
ಬ್ಯಾಟರಿ: ನಾರ್ಡ್ 2 ಸ್ಮಾರ್ಟ್‌ಫೋನ್ 4,500 ಎಂಎಎಚ್ ಬ್ಯಾಟರಿ ಮತ್ತು 65 ಡಬ್ಲ್ಯು ವಾರ್ಪ್ ಚಾರ್ಜರ್ ಸೌಲಭ್ಯ ಹೊಂದಿದೆ. ಸಾಮಾನ್ಯ ಬಳಕೆಯಲ್ಲಿ ಒಂದೂವರೆ ದಿನದವರೆಗೂ ಚಾರ್ಜ್ ನಿಲ್ಲುತ್ತದೆ. ಸಂಗೀತ ಆಲಿಸುವುದು, ವಿಡಿಯೊ ನೋಡುವುದು ಹೀಗೆ ಹೆಚ್ಚು ಬಳಕೆ ಮಾಡಿದರೆ ಒಂದು ದಿನಕ್ಕಂತೂ ಯಾವುದೇ ಸಮಸ್ಯೆ ಆಗುವುದಿಲ್ಲ. ಗೇಮ್ ಆಡುವಾಗ ಹ್ಯಾಂಗ್ ಆಗುವ, ಸ್ಲೋ ಆಗುವ ಸಮಸ್ಯೆ ಎದುರಾಗಲಿಲ್ಲ. ಆದರೆ,ಅರ್ಧ ಗಂಟೆಗಿಂತ ಹೆಚ್ಚು ಸಮಯ ಗೇಮ್ ಆಡಿದಾಗ ಫೋನ್ ತುಸು ಬಿಸಿ ಆಗಿದ್ದು ಅನುಭವಕ್ಕೆ ಬಂತು.
ಆಕ್ಸಿಜನ್ 11.3 ಒಎಸ್ ಹೊಂದಿದ್ದು, ಬಿಡುಗಡೆ ಆದಾಗಿನಿಂದ ಮೂರುವರ್ಷಗಳ ತನಕ ಸಾಫ್ಟವೇರ್ ಬೆಂಬಲದ ಜೊತೆಗೆ ಎರಡು ವರ್ಷಗಳ ಆಂಡ್ರಾಯ್ಡ್ ಮಾದರಿಯ ಅಪ್‌ಡೇಟ್ ಇರಲಿದೆ. ಅಲ್ಲದೆ, ಮೂರು ತಿಂಗಳಿಗೆ ಒಮ್ಮೆ ಸುರಕ್ಷತಾ ಅಪ್‌ಡೇಟ್ ಅನ್ನೂ ಸಹ ಕಂಪನಿ ನೀಡಲಿದೆ. ಜಲನಿರೋಧಕದ ಮಾನದಂಡವನ್ನು ಹೊಂದಿಲ್ಲದೇ ಇರುವುದು ಇದರಲ್ಲಿನ ಪ್ರಮುಖ ಕೊರತೆ ಎನ್ನಬಹುದು. ಮಧ್ಯಮ ಬೆಲೆಯ ಸರಣಿಯಲ್ಲಿ ಬೆಲೆ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ನಿರೀಕ್ಷಿಸುವವರಿಗೆ ಇದು ಹೇಳಿ ಮಾಡಿಸಿದ್ದಾಗಿದೆ.
ವೈಶಿಷ್ಟ್ಯ
ಪರದೆ: 6.43 ಇಂಚು, 20:9 ಆಸ್ಪೆಕ್ಟ್ ರೇಶಿಯೊ
ಒಎಸ್: ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್ ಒಎಸ್ 11.3
ರ್‍ಯಾಮ್: 6ಜಿಬಿ/8ಜಿಬಿ/112ಜಿಬಿ
ಸಂಗ್ರಹಣಾ ಸಾಮರ್ಥ್ಯ: 128ಜಿಬಿ/256ಜಿಬಿ
ಬ್ಯಾಟರಿ: 4,500 ಎಂಎಎಚ್ ಡ್ಯುಯಲ್ ಸೆಲ್ ಬ್ಯಾಟರಿ. ವಾರ್ಪ್ ಚಾರ್ಜ್ 65ಡಬ್ಲ್ಯು
ಹಿಂಬದಿ ಕ್ಯಾಮೆರಾ: 50ಮೆಗಾ ಪಿಕ್ಸಲ್, 8ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಆ್ಯಂಗಲ್ , 2 ಮೆಗಾಪಿಕ್ಸಲ್ ಮೊನೊ ಲೆನ್ಸ್
ಸೆಲ್ಫಿ: 32 ಮೆಗಾಪಿಕ್ಸಲ್
ಬ್ಲೂಟೂತ್ 5.2. ಯುಎಸ್‌ಬಿ 2.0, ಟೈಪ್ ಸಿ.
ಬೆಲೆ: 6+128ಜಿಬಿ; ₹27,999, 8+128ಜಿಬಿ; ₹ 29,999. 12+256ಜಿಬಿ; ₹34,999
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.