ಸ್ಮಾರ್ಟ್ ಫೋನ್‌ಗಳಲ್ಲಿ ಲೋಹದ ಕವಚ ಅಳವಡಿಸುವುದು ದೊಡ್ಡ ಸವಾಲು, ಶಾಖವನ್ನು ಬೇಗ ಅವರಿಸಿಕೊಳ್ಳುವ, ಅದರಿಂದಲೇ ಸಂವಹನಕ್ಕೆ ನೆಟ್‌ವರ್ಕ್ ಸಿಗದಿರುವ, ಕಾರ್ಯಕ್ಷಮತೆ ಕುಸಿಯುವ ಸಮಸ್ಯೆಗಳು ಸಾಮಾನ್ಯ. ಇದನ್ನೇ ಸವಲಾಗಿ ಸ್ವೀಕರಿಸಿದ ಒನ್‌ಪ್ಲಸ್, ನಾರ್ಡ್ 4 ಸರಣಿಯ ಮೂಲಕ ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದೆ.
ಒನ್‌ಪ್ಲಸ್ ಈ ಬಾರಿ ನಾರ್ಡ್ 4 ಎಂಬ ಹೊಸ ಸರಣಿಯನ್ನು ಪರಿಚಯಿಸಿದ್ದು, ಇದು 5ಜಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸಂಪೂರ್ಣ ಮೆಟಲ್‌ನ ಯೂನಿಬಾಡಿ ಹೊಂದಿದ ಮೊದಲ ಫೋನ್ ಎಂದೆನ್ನುವ ಮೂಲಕ ಈ ವಿಭಾದ ವಿನ್ಯಾಸದಲ್ಲಿ ಹೊಸ ಹೆಜ್ಜೆಯೊಂದನ್ನು ಇಟ್ಟಿದೆ.
ಒನ್ ಪ್ಲಸ್ ನಾರ್ಡ್ 4 ಮೊಬೈಲ್ ಗ್ರೇ ಹಾಗೂ ಓಯಸಿಸ್ ಗ್ರೀನ್ ಕಲರ್ ಒಳಗೊಂಡ ಡುಯಲ್ ಟೋನ್ ಸ್ಪರ್ಶದೊಂದಿಗೆ ಅಲುಮಿನಿಯಂ ಲೋಹದ ಮೃದುವಾದ, ಹಿತವಾದ ಹಿಡಿತದ ಅನುಭವ ನೀಡಲಿದೆ. ಫೋನ್‌ನ ಹಿಂಬದಿಯಲ್ಲಿ ಲೋಹದ ದೇಹವನ್ನೇ ಎರಡು ಭಾಗಗಳನ್ನಾಗಿ ವಿಭಜಿಸಲಾಗಿದೆ. ಮೇಲ್ಭಾಗದಲ್ಲಿ ಕ್ಯಾಮೆರಾಗಳಿರುವ ವಿಭಾಗವಾಗಿದೆ. ಇದನ್ನು ಗಾಜಿನಂತೆ ಗ್ಲಾಸಿ ಫಿನಿಶ್ ನೀಡಲಾಗಿದೆ. ಕೆಳಭಾಗದಲ್ಲಿ ಬ್ರಷ್ ಫಿನಿಶ್ ನೀಡಲಾಗಿದೆ. ಅಂಚುಗಳನ್ನು ಹೆಚ್ಚು ಹಿತವೆನಿಸುವಷ್ಟು ಆಪ್ತವಾಗಿದೆ. ಇದರಿಂದಾಗಿ ನಾರ್ಡ್ 4 ಹೆಚ್ಚು ಪ್ರೀಮಿಯಂ ಫೋನ್ ಎನಿಸುತ್ತದೆ. ಜತೆಗೆ ಫೋನ್‌ಗೆ ಹೊರಗಿನ ಕೇಸ್ ಇಲ್ಲದೆ ಹಿಡಿಯುವ ತವಕ ಹೆಚ್ಚಿಸುತ್ತದೆ. ಹೆಚ್ಚು ತೂಕವೂ ಇಲ್ಲದ, ಹೆಚ್ಚು ದಪ್ಪವೂ ಇಲ್ಲದ ಸಂಪೂರ್ಣ ಲೋಹದ ಕವಚವನ್ನು ಇದು ಹೊಂದಿರುವುದು ಪ್ರೀಮಿಂ ಫೋನ್‌ನ ಅನುಭೂತಿ ನೀಡಲಿದೆ.
ಫೋನ್‌ಗೆ ಬ್ರಷ್ ಮಾದರಿ ರೂಪ ನೀಡಿದ್ದರಿಂದಾಗಿ, ಫೋನ್ ಮೇಲೆ ಅನಗತ್ಯವಾಗಿ ಬೆರಳಚ್ಚು ಮೂಡಿಸುವ ಗೋಜು ಇಲ್ಲ. ಆದರೆ ಆಗಾಗ ಕೈಯಿಂದ ಜಾರಿದ ಅನುಭವ ಆಗುವಷ್ಟರ ಮಟ್ಟಿಗೆ ನುಣುಪಾದ ಭಾವ ಮೂಡುತ್ತದೆ. ಆದರೆ ಫೋನ್‌ನ ಮೇಲಿನ ಭಾಗದಲ್ಲಿ (ಗ್ಲಾಸಿ ಫಿನಿಷ್) ಬೆರಳಚ್ಚಿನ ಚಿತ್ತಾರ ಮೂಡುವುದನ್ನು ತಡೆಯಲಾಗದು.
ಫೋನ್ ಅನ್ನು ರಿಂಗ್, ಸೈಲೆಂಟ್ ಹಾಗೂ ವೈಬ್ರೇಟ್ ಮೋಡ್‌ಗಳಿಗೆ ಸುಲಭವಾಗಿ ಬದಲಿಸಲು ಮೆಟಲ್‌ನ ಗುಂಡಿಯನ್ನು ಪಕ್ಕದಲ್ಲಿ ನೀಡಲಾಗಿದೆ. ಇದು ಐಫೋನ್ ಮಾದರಿಯಂತೆಯೇ ಆದರೂ, ಇದು ಲಂಬವಾಗಿದೆ.
ಫೋನ್‌ನ ಮುಂಭಾಗವೂ ಹಿಂಬದಿಯಲ್ಲಿ ನೀಡಿರುವ ಪ್ರೀಮಿಯಂ ಗುಣಮಟ್ಟದಂತೆಯೇ ಇದೆ. ಇದರ ಡಿಸ್‌ಪ್ಲೇ ಕೂಡಾ ಹುಬ್ಬೇರಿಸುವಂತೆ ಮಾಡುತ್ತದೆ. 6.74 ಇಂಚಿನ 1.5ಕೆ ಅಮೋಲೆಡ್ ಸ್ಕ್ರೀನ್ ಇದರದ್ದು. ಫೋನ್‌ನ ಕೊನೆಯ ತುದಿಯವರೆಗೂ ಡಿಸ್‌ಪ್ಲೇ ಇರುವುದರಿಂದ ಸ್ಕ್ರೀನ್ ಹೆಚ್ಚು ವಿಶಾಲವಾಗಿರುವಂತೆ ಭಾಸವಾಗುತ್ತದೆ. ಬಣ್ಣ ಹಾಗೂ ಬ್ರೈಟ್‌ನೆಸ್‌ನಲ್ಲಿ ಇದು ಹೆಚ್ಚು ಆಕರ್ಷಣೀಯವಾಗಿದೆ. ವಿವಿಧ ಬೆಳಕಿನ ಹೊಂದಾಣಿಕೆಗೆ ತಕ್ಕಂತೆ, ಮನೆಯೊಳಗೆ, ಹೊರಗೆ, ಬಿಸಿಲಿನಲ್ಲಿ ಹಾಗೂ ಬಗೆಬಗೆಯ ಬೆಳಕಿನ ವಾತಾವರಣದಲ್ಲಿ, ಬೇರೆ ಬೇರೆ ಕೋನಗಳಿಂದ ಪರದೆಯನ್ನು ನೋಡಿದರೂ, ಸ್ಕ್ರೀನ್‌ನ ಕಾರ್ಯಕ್ಷಮತೆ ಒಂದೇ ರೀತಿಯಾಗಿರುವುದು ಈ ಫೋನ್‌ನ ವಿಶೇಷ.
120 ಹರ್ಟ್ಜ್ ರಿಫ್ರೆಷ್ ರೇಟ್ ಹೊಂದಿರುವ ನಾರ್ಡ್ 4, ಹಿತವೆನಿಸುವ ಆ್ಯನಿಮೇಷನ್, ಆಪ್ತವೆನಿಸುವ ಸ್ಕ್ರಾಲಿಂಗ್, ಮೆನು, ಸೆಟ್ಟಿಂಗ್‌ನಲ್ಲಿ ಧ್ವನಿ ಹಾಗೂ ಬ್ರೈಟ್‌ನೆಸ್ ಏರಿಳಿತ ಮಾಡುವ ಟಚ್ ಬೋರ್ಡ್‌ಗಳು ಹೊಸ ಅನುಭೂತಿ ನೀಡುತ್ತದೆ. ಒಂದು ರೀತಿಯಲ್ಲಿ ಆ್ಯಪಲ್ ರೀತಿಯೇ ಎಂದೆನಿಸುತ್ತದೆ.
ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ ಸ್ಕ್ರೀನ್ ರೆಸಲೂಷನ್ 2414X1080 ರಷ್ಟಿದೆ. ಇದನ್ನು 2772X1240ಗೆ ಮ್ಯಾನುಯಲ್ ಅಗಿ ಬದಲಿಸುವ ಆಯ್ಕೆಯನ್ನೂ ನೀಡಲಾಗಿದೆ. ಅಡಾಪ್ಟಿವ್ ಡೀಟೇಲ್ಸ್ ಎನ್‌ಹ್ಯಾನ್ಸ್‌ಮೆಂಟ್ ಎಂಬ ಸೌಕರ್ಯವು ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಪರದೆ ಮೇಲೆ ಏನು ಮೂಡುತ್ತಿದೆ ಎಂದು ಗ್ರಹಿಸಿ, ಅದಕ್ಕೆ ತಕ್ಕಂತೆ ಬೆಳಕು ಮತ್ತು ಬಣ್ಣವನ್ನು ಹೊಂದಿಸುವ ಚಾಕಚಕ್ಯತೆ ಈ ಫೋನ್‌ನ ತಂತ್ರಾಂಶದ್ದು. ಎಚ್‌ಡಿಆರ್10+ ಡಿಸ್‌ಪ್ಲೇ ನೆರವಾಗಲಿದೆ.
ಉತ್ತಮ ವಿಡಿಯೊ ವೀಕ್ಷಣೆಗಾಗಿ ಎಚ್‌ಡಿಆರ್10+ ಅನ್ನು ಡಿಸ್‌ಪ್ಲೇ ಬೆಂಬಲಿಸಲಿದೆ ಎಂದು ಒನ್‌ಪ್ಲಸ್ ಹೇಳಿದೆ. ಯುಟ್ಯೂಪ್ ವೀಕ್ಷಣೆಗೆ ಎಚ್‌ಡಿಆರ್ ಸೌಕರ್ಯ ಇದ್ದರೂ, ನೆಟ್‌ಫ್ಲಿಕ್ಸ್‌ನಲ್ಲಿ ಇದು ಕಾಣಿಸದು. ಆದರೆ ಗ್ಯಾಲರಿಯಲ್ಲಿ ಎಚ್‌ಡಿಆರ್ ಚಿತ್ರಗಳ ವೀಕ್ಷಣೆಗೆ ಅಲ್ಟ್ರಾಎಚ್‌ಡಿಆರ್ ಅವಕಾಶವಿದೆ.
ತನ್ನ ಪ್ರೀಮಿಯಂ ಗುಣಮಟ್ಟದ ಫೋನ್‌ನಂತೆಯೇ ನಾರ್ಡ್4 ಸರಣಿಯಲ್ಲಿ ಒನ್‌ಪ್ಲಸ್ 50 ಮೆಗಾ ಪಿಕ್ಸೆಲ್‌ನ ಸೋನಿ LYTIA ಸೆನ್ಸರ್ ಹೊಂದಿರುವ ಕ್ಯಾಮೆರಾ ಅಳವಡಿಸಿದೆ. ಇದರಲ್ಲಿ ಆಪ್ಟಿಕಲ್ ಸ್ಟೆಬಿಲೈಸೇಷನ್ ಕೂಡಾ ಲಭ್ಯ. ಹೀಗಾಗಿ ಪ್ರಾಥಮಿಕ ಕ್ಯಾಮೆರಾ ಮೂಲಕ ಸೆರೆ ಹಿಡಿಯುವ ಚಿತ್ರಗಳು ಹೆಚ್ಚು ಸ್ಪಷ್ಟ ಹಾಗೂ ಸಹಜವಾಗಿ ದಾಖಲಾಗಲಿವೆ. ಕಡಿಮೆ ಬೆಳಕು ಇರಲಿ, ಹೆಚ್ಚಿನ ಪ್ರಕರತೆ ಇರಲಿ, ಅದಕ್ಕೆ ತಕ್ಕಂತೆ ಕ್ಯಾಮೆರಾದ ಅಪಾರ್ಚರ್ ಹೊಂದಿಸಿಕೊಳ್ಳುವ ಈ ಕ್ಯಾಮೆರಾ, ಚಿತ್ರವನ್ನು ಸ್ಪಷ್ಟವಾಗಿ ಸೆರೆ ಹಿಡಿದು, ದಾಖಲಿಸಲಿದೆ.
ಅಲ್ಟ್ರಾವೈಡ್‌ಗಾಗಿ 8 ಮೆಗಾ ಪಿಕ್ಸೆಲ್‌ನ ಕ್ಯಾಮೆರಾ ನೀಡಲಾಗಿದೆ. ಕ್ಯಾಮೆರಾದಲ್ಲಿ ದಾಖಲಾಗುವ ಚಿತ್ರಗಳು ನೈಜತೆಗೆ ಹತ್ತಿರವಾಗಿವೆ. ಮಂದ ಬೆಳಕಿನಲ್ಲಿ ಚಿತ್ರಗಳು ಕಡಿಮೆ ಕಾಂಟ್ರಾಸ್ಟ್‌ನಿಂದ ಮಸುಕಾಗಿ ಕಾಣುವಂತೆ ಭಾಸವಾಗುತ್ತದೆ. ಸಹಜ ಬೆಳಕಿನಲ್ಲಿ ಪೋಟ್ರೇಟ್ ಚಿತ್ರಗಳು ನಾರ್ಡ್ 4ರಲ್ಲಿ ಉತ್ತಮವಾಗಿವೆ. ಅದರಂತೆಯೇ ಮುಂಭಾಗದಲ್ಲಿರುವ 16 ಮೆಗಾ ಪಿಕ್ಸೆಲ್‌ನ ಫ್ರಂಟ್ ಕ್ಯಾಮೆರಾ ಗುಣಮಟ್ಟವೂ ಉತ್ತಮವಾಗಿದೆ.
ವಿಡಿಯೊ ಗುಣಮಟ್ಟವೂ ನಾರ್ಡ್ 4ರ ಸರಣಿಯಲ್ಲಿ ಉತ್ತಮವಾಗಿದೆ. 4ಕೆ, 1080 ಪಿಕ್ಸೆಲ್ ಹಾಗೂ 720 ಪಿಕ್ಸೆಲ್‌ನ ರೆಸಲೂಷನ್ ಆಯ್ಕೆ ಇದೆ. ಪ್ರತಿ ಸೆಕೆಂಡ್‌ಗೆ 30 ಹಾಗೂ 60 ಫ್ರೇಮ್ ಸೆರೆಯಾಗುವ ಸಾಮರ್ಥ್ಯ ಇದರದ್ದು. ಆದರೆ EIS ಹಾಗೂ OIS ಕಾರ್ಯಕ್ಷಮತೆಯ ಮಿತಿಯು 1080 ಪಿಕ್ಸೆಲ್‌ನಲ್ಲಿ ಪ್ರತಿ ಸೆಕೆಂಡ್‌ಗೆ 60 ಫ್ರೇಮ್ಸ್ ರೆಕಾರ್ಡಿಂಗ್‌ಗೆ ಮಾತ್ರ ಅನ್ವಯಿಸುತ್ತದೆ. ವಿಡಿಯೊ ರೆಕಾರ್ಡಿಂಗ್ ಹೆಚ್ಚು ಸ್ಪಷ್ಟವಾಗಿದೆ. ಚಲನೆಯಲ್ಲಿ ದಾಖಲಾಗುವ ವಿಡಿಯೊಗಳೂ ಹೆಚ್ಚು ಅಲುಗಾಡದಂತೆ ದಾಖಲಾಗುವಷ್ಟರ ಮಟ್ಟಿಗೆ ಸ್ಟಬಿಲಿಟಿಯನ್ನು ಈ ಫೋನ್ ಕಾಯ್ದುಕೊಂಡಿದೆ.
ಒನ್‌ಪ್ಲಸ್ ನಾರ್ಡ್ 4ರಲ್ಲಿ ಕ್ವಾಲ್ಕಮ್ 7 ಪ್ಲಸ್ 3ನೇ ತಲೆಮಾರಿನ ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ. ಹೀಗಾಗಿ ದಿನನಿತ್ಯದ ಬಳಕೆಯಲ್ಲಿ ಯಾವುದೇ ವಿಳಂಬವನ್ನು ಅನುಸರಿಸದೇ ಈ ಫೋನ್ ಬಳಕೆ ಮಾಡಬಹುದು. ಅಂತರ್ಜಾಲದಲ್ಲಿ ಸುತ್ತಾಟ, ಸಾಮಾಜಿಕ ಜಾಲತಾಣದಲ್ಲಿ ಅಲೆದಾಟ, ಹೆಚ್ಚು ರೆಸಲೂಷನ್‌ನ ವಿಡಿಯೊಗಳ ವೀಕ್ಷಣೆ ಸೇರಿದಂತೆ ದಿನನಿತ್ಯ ಕೈಗೊಳ್ಳುವ ಹತ್ತು ಹಲವು ಕಾರ್ಯಗಳಿಗೆ ಇದು ಹೆಚ್ಚು ಸೂಕ್ತ. ಏಕಕಾಲಕ್ಕೆ ಹಲವು ಹಲವು ಆ್ಯಪ್‌ಗಳ ಬಳಕೆಯಲ್ಲೂ, ತಡೆರಹಿತವಾಗಿ ಫೋನ್ ಬಳಸಬಹುದು.
ಗೇಮಿಂಗ್‌ಗೂ ನಾರ್ಡ್ 4 ಹೆಚ್ಚು ಸೂಕ್ತ. ರೇಸಿಂಗ್ ಸೇರಿದಂತೆ ರಿಯಲ್ ಟೈಂ ಗೇಮ್‌ಗಳ ಬಳಕೆಯಲ್ಲೂ ಫೋನ್ ಹ್ಯಾಂಗ್ ಸಮಸ್ಯೆಯಿಂದ ದೂರವೇ ಉಳಿದಿದೆ. ಜತೆಗೆ ಚಿತ್ರಗಳ ಗುಣಮಟ್ಟವೂ ಉತ್ತಮವಾಗಿದೆ.
ಒನ್‌ಪ್ಲಸ್ ನಾರ್ಡ್ 4 ಫೋನ್ ಆಕ್ಸಿಜೆನ್ 14.1 ಆಪರೇಟಿಂಗ್ ಸಿಸ್ಟಂ ಹೊಂದಿದೆ. ಹೊಸ ತಲೆಮಾರಿನ ಅಗತ್ಯಕ್ಕೆ ಪೂರಕವಾದ ಕೃತಕ ಬುದ್ಧಿಮತ್ತೆಯನ್ನೂ ಇದು ಬೆಂಬಲಿಸುತ್ತದೆ. ಉದಾಹರಣೆಗೆ ಅಂತರ್ಜಾಲಪುಟದಲ್ಲಿರುವ ಲೇಖನಗಳನ್ನು ಓದಿ ಹೇಳುವ ಎಐ ಸ್ಪೀಕ್ ಹಾಗೂ ಅದರಲ್ಲಿನ ಪ್ರಮುಖ ಅಂಶಗಳನ್ನು ಹೆಕ್ಕಿ ಹೇಳುವ ಎಐ ಸಮ್ಮರಿ ಇದರಲ್ಲಿದೆ. ಪ್ರಮುಖ ಬ್ರೌಸರ್‌ಗಳಲ್ಲೂ ಇದು ಸುಲಭವಾಗಿ ಕೆಲಸ ಮಾಡಲಿದೆ. ಇಮೇಲ್ ಸಂದೇಶ ಕಳುಹಿಸುವ ಎಐ ರೈಟರ್‌ಗೂ ಇದು ನೆರವಾಗಲಿದೆ. ಚಿತ್ರಗಳ ಎಡಿಟಿಂಗ್‌ಗೂ ಎಐ ಇದ್ದಿದ್ದರೆ ಹೆಚ್ಚು ಚಂದ ಇರುತ್ತಿತ್ತು ಎಂದೆನಿಸದಿರದು.
ಬ್ಯಾಟರಿ ಬಳಕೆಯಲ್ಲಿ ಇತ್ತೀಚಿನ ಒನ್‌ಪ್ಲಸ್ ಫೋನ್‌ಗಳು ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇದರಲ್ಲಿ ನಾರ್ಡ್ 4 ಕೂಡಾ ಹೊರತಾಗಿಲ್ಲ. 5500 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಬಳಸಲಾಗಿದೆ. ಒಂದು ಬಾರಿ ಚಾರ್ಜ್‌ನಿಂದ ಸಹಜ ಬಳಕೆ ಮಾಡಿದಲ್ಲಿ ಕನಿಷ್ಠ 36 ರಿಂದ 48 ಗಂಟೆಗಳ ಕಾಲ ಕೆಲಸ ಮಾಡಬಹುದಾಗಿದೆ. ಅತಿಯಾದ ವಿಡಿಯೊಗಳ ಬಳಕೆ ಇದ್ದಲ್ಲಿ, ದಿನದ ಅಂತ್ಯದ ಹೊತ್ತಿಗೆ ಒಂದಷ್ಟು ಚಾರ್ಜ್ ಉಳಿಯುವಷ್ಟರ ಮಟ್ಟಿಗೆ ಬ್ಯಾಟರಿ ಬ್ಯಾಕ್ ಅಪ್ ಹೊಂದಿದೆ. ಇದಕ್ಕೆ 100 ವಾಟ್‌ನ ವೇಗದ ಚಾರ್ಜಿಂಗ್ ಸೌಕರ್ಯ ನೀಡಲಾಗಿದೆ. ಅರ್ಧ ಗಂಟೆಯೊಳಗಾಗಿ 0ಯಿಂದ ಶೇ 100ರಷ್ಟು ಬ್ಯಾಟರಿ ಮರುಪೂರಣಗೊಳಿಸುವ ಸಾಮರ್ಥ್ಯ ಇದರದ್ದು.
ಸಂಪೂರ್ಣ ಲೋಹದ ಕವಚ ಹೊಂದಿರುವ ನಾರ್ಡ್ 4 ಫೋನ್, ವಿಲಾಸಿತನದಿಂದ ಕೂಡಿದೆ. ಉತ್ತಮ ಫ್ಲಾಟ್ ಡಿಸ್‌ಪ್ಲೇ, ಉತ್ತಮ ಕಾರ್ಯಕ್ಷಮತೆ, ದೀರ್ಘ ಕಾಲಿಕ ಬ್ಯಾಟರಿ ಬ್ಯಾಕ್‌ಅಪ್, ಉತ್ತಮ ಕ್ಯಾಮೆರಾ, ಕೃತಕ ಬುದ್ಧಿಮತ್ತೆಯ ನೆರವಿನೊಂದಿಗೆ ಫೋನ್ ಹೆಚ್ಚು ಆಕರ್ಷಕವಾಗಿದೆ.
ಇದರ ಬೆಲೆ ₹29,999ರಿಂದ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.