ವಿಶ್ವನಾಥ ಎಸ್.
ಒನ್‌ಪ್ಲಸ್ ಕಂಪನಿಯು ಸ್ಮಾರ್ಟ್ ಸಾಧನಗಳ ವಿಭಾಗದಲ್ಲಿ ಕಡಿಮೆ ಬೆಲೆಗೆ ಹೊಸ ವಯರ್‌ಲೆಸ್ ಇಯರ್‌ಬಡ್ಸ್ ‘ಒನ್‌ಪ್ಲಸ್ ನಾರ್ಡ್ ಬಡ್ಸ್ 2’ (OnePlus Nord Buds 2) ಬಿಡುಗಡೆ ಮಾಡಿದೆ. ಹೊರಗಿನ ಶಬ್ದವನ್ನು ತಡೆಯಲು ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ಎಎನ್‌ಸಿ) ಹಾಗೂ ಹೊರಗಿನ ಶಬ್ದವನ್ನೂ ಕೇಳುವಂತೆ ಮಾಡುವ ‘ಟ್ರಾನ್ಸ್‌ಪರೆನ್ಸಿ ಮೋಡ್’ ಇದರ ಹೈಲೈಟ್ಸ್. ಬಡ್ಸ್‌ನ ಗುಣಮಟ್ಟ, ಆಡಿಯೊ ಕ್ಲಾರಿಟಿ, ಬ್ಯಾಟರಿ ಬಾಳಿಕೆ ಹೀಗೆ ಎಲ್ಲಾ ದೃಷ್ಟಿಯಿಂದಲೂ ಇದು ಉತ್ತಮವಾಗಿದೆ.
ಬ್ಲುಟೂತ್ 5.3 ಆವೃತ್ತಿ ಹೊಂದಿದ್ದು, ಮೊಬೈಲ್ ಜೊತೆ ಸುಲಭವಾಗಿ ಸಂಪರ್ಕಿಸಬಹುದು. ಒನ್‌ಪ್ಲಸ್ ಫೋನ್ ಜೊತೆ ಇದನ್ನು ಬಳಸುವುದಾದರೆ ಸೆಟ್ಟಿಂಗ್ಸ್‌ನಲ್ಲಿ ಹೆಚ್ಚು ಬದಲಾವಣೆ ಅಗತ್ಯ ಇಲ್ಲ. ಬೇರೆ ಫೋನ್‌ಗಳ ಜೊತೆ ಬಳಸಲು ಹೇ-ಮೆಲೋಡಿ (HeyMelody) ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಾಯ್ಸ್ ಕಂಟ್ರೋಲ್, ಸೌಂಡ್ ಮಾಸ್ಟ್ ಇಕ್ಯು, ಗೇಮ್ ಮೋಡ್, ಕ್ಯಾಮೆರಾಗೆ ಸಂಬಂಧಿಸಿದ ಹೆಚ್ಚಿನ ಸೆಟ್ಟಿಂಗ್ಸ್‌ಗಳನ್ನು ಆ್ಯಪ್ ಮೂಲಕ ನಿರ್ವಹಿಸಬಹುದು.
ಟಚ್ ಕಂಟ್ರೋಲ್ ಬಳಕೆ ಸುಲಭವಾಗಿದೆ. ಮ್ಯೂಸಿಕ್ ಪ್ಲೇ/ಪಾಸ್, ಸ್ಕಿಪ್ ಟ್ರ್ಯಾಕ್ಸ್, ಕರೆ ಸ್ವೀಕರಿಸು/ಕಟ್ ಮಾಡುವುದು ಹಾಗೂ ವಾಯ್ಸ್ ಅಸಿಸ್ಟಂಟ್ ನಿರ್ವಹಿಸಬಹುದು. ಮ್ಯೂಸಿಕ್ ಪ್ಲೇ/ಪಾಸ್ ಮಾಡಲು, ಮುಂದಿನ ಟ್ರ್ಯಾಕ್‌ಗೆ ಹೋಗಬಹುದು. ಲಾಂಗ್ ಪ್ರೆಸ್ ಮಾಡುವ ಮೂಲಕ ಎಎನ್‌ಸಿ ಮತ್ತು ಟ್ರಾನ್ಸ್‌ಪರೆನ್ಸಿ ಮೋಡ್ ಆಯ್ಕೆ ಮಾಡಬಹುದು. ಹೊರಗಿನ ಶಬ್ದವನ್ನು ತಡೆದು ಆಡಿಯೊ ಅಥವಾ ಕರೆಯನ್ನು ಸ್ಪಷ್ಟವಾಗಿ ಕೇಳುವಂತೆ ಮಾಡಲು ಎಎನ್‌ಸಿ ಸಹಾಯಕ.
ಟ್ರಾನ್ಸ್‌ಪರೆನ್ಸಿ ಮೋಡ್ ಮೂಲತಃ ಎಎನ್‌ಸಿ ಮೊಡ್‌ಗೆ ವಿರುದ್ಧವಾಗಿದೆ. ಈ ಮೋಡ್ ಹೊರಗಿನ ಶಬ್ದಗಳನ್ನು ಕೇಳಲು ಅನುಮತಿಸುತ್ತದೆ. ಇದು ಈ ಇಯರ್‌ಬಡ್‌ಗಳಲ್ಲಿನ ವಿಶೇಷ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಎಎನ್‌ಸಿಯಲ್ಲಿ ಹೊರಗಿನ ಶಬ್ದವು ಒಳಬರದೇ ಇರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಸಂಚಾರದ ಸದ್ದು ಕಿವಿಗೆ ಬೀಳುವುದಿಲ್ಲ. ಹೀಗಾಗಿ ಪಾರದರ್ಶಕ ಮೋಡ್ ಆನ್ ಮಾಡಿಕೊಳ್ಳುವುದು ಹೆಚ್ಚು ಸೂಕ್ತವಾಗುತ್ತದೆ.
ಇದರ ಆಡಿಯೊ ಗುಣಮಟ್ಟ ಚೆನ್ನಾಗಿದೆ. ಬಾಸ್ ಮತ್ತು ವೋಕಲ್ಸ್ ಮಧ್ಯೆ ಸಮತೋಲನ ಕಾಯ್ದುಕೊಳ್ಳಲಾಗಿದೆ. ಎರಡು ಮೈಕ್ರೊಫೋನ್ ಹೊಂದಿವೆ. ಡಾಲ್ಬಿ ಅಟ್ಮೋಸ್ ಸ್ಪೀಕರ್ ಬಳಸಿರುವುದರಿಂದ ಸಂಗೀತ ಆಲಿಸುವಾಗ ಮತ್ತು ಫೋನ್‌ನಲ್ಲಿ ಮಾತನಾಡುವಾಗ ಆಡಿಯೊ ಗುಣಮಟ್ಟ ಉತ್ತಮವಾಗಿದೆ. ಎಎನ್‌ಸಿ ಇರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕರೆ ಮಾಡಲು ಅಥವಾ ಸ್ವೀಕರಿಸಲು ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಮನೆಯೊಳಗೆ ಇದ್ದಾಗ ನಮ್ಮ ಧ್ವನಿಯು ಫೋನ್ ಮಾಡಿರುವವರಿಗೆ ಕೇಳುವಷ್ಟು ಸ್ಪಷ್ಟವಾಗಿ ಮನೆಯಾಚೆಗೆ ಗದ್ದಲದ ಪ್ರದೇಶದಲ್ಲಿ ಕೇಳಿಸುವುದಿಲ್ಲ. ಮೂರು ಗಾತ್ರದ ಸಿಲಿಕಾನ್ ಟಿಪ್ಸ್‌ಗಳಿವೆ. ಹೆಚ್ಚಿನ ಸಮಯದವರೆಗೆ ಕಿವಿಯಲ್ಲಿ ಇಟ್ಟಕೊಂಡರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಫೋನ್ ಇರುವಲ್ಲಿಂದ 10ಮೀಟರ್ ವ್ಯಾಪ್ತಿಯಲ್ಲಿ ಹಾಡು ಕೇಳಲು, ಮಾತನಾಡಲು ಬಳಸಬಹುದು.
ನೀರು ಮತ್ತು ದೂಳಿನಿಂದ ರಕ್ಷಣೆಗೆ ಐಪಿ55 ರೇಟಿಂಗ್ಸ್ ಹೊಂದಿದೆ. ಬ್ಯಾಟರಿ ಬಾಳಿಕೆಯೇ ಇದರ ಅತಿದೊಡ್ಡ ಪ್ಲಸ್ ಪಾಯಿಂಟ್. ಪೂರ್ತಿ ಚಾರ್ಜ್ ಆಗಲು ಸುಮಾರು ಒಂದೂವರೆ ಗಂಟೆ ಬೇಕು. ಒಮ್ಮೆ ಚಾರ್ಜ್ ಮಾಡಿದರೆ 7 ಗಂಟೆ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಹೀಗೆ ಒಮ್ಮೆ ಪೂರ್ತಿ ಚಾರ್ಜ್ ಮಾಡಿದ ಬಳಿಕ ಬಡ್‌ಗಳನ್ನು ಮತ್ತೆ ಕೇಸ್‌ನಲ್ಲಿ ಇಡದೇ 4 ಗಂಟೆ ಬಳಸಿದರೂ ಚಾರ್ಜ್ ಖಾಲಿ ಆಗಲಿಲ್ಲ. ಬಳಸಿದ ನಂತರ ಬಡ್‌ಗಳನ್ನು ಕೇಸ್‌ನಲ್ಲಿ ಇಡುತ್ತಿದ್ದರೆ 25 ರಿಂದ 30 ಗಂಟೆಯವರೆಗೆ ಬಳಕೆ ಮಾಡಬಹುದು. ಆಡಿಯೊ ಗುಣಮಟ್ಟ, ಅದರಲ್ಲಿಯೂ ಮುಖ್ಯವಾಗಿ ಬಾಸ್ ದೃಷ್ಟಿಯಿಂದ, ನಾಯ್ಸ್ ಕ್ಯಾನ್ಸಲೇಷನ್ ಹಾಗೂ ಬ್ಯಾಟರಿ ಬಾಳಿಕೆಯ ದೃಷ್ಟಿಯಿಂದ ಒನ್‌ಪ್ಲಸ್ ನಾರ್ಡ್‌ನ ಆಡಿಯೊ ವಿಭಾಗದಲ್ಲಿ ಉತ್ತಮ ಬಡ್ಸ್ ಇದಾಗಿದೆ. ಬೆಲೆ ₹2,999 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.