ADVERTISEMENT

OnePlus Nord Burds 3 Pro: ಅಗ್ಗದ ಬೆಲೆಯಲ್ಲಿ ಉತ್ತಮ ಶಬ್ಧ, ತ್ವರಿತ ಚಾರ್ಜಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2024, 14:32 IST
Last Updated 30 ಜುಲೈ 2024, 14:32 IST
<div class="paragraphs"><p>ಒನ್‌ಪ್ಲಸ್ ನಾರ್ಡ್ ಬಡ್ಸ್‌ 3 ಪ್ರೊ</p></div>

ಒನ್‌ಪ್ಲಸ್ ನಾರ್ಡ್ ಬಡ್ಸ್‌ 3 ಪ್ರೊ

   

ಹೆಚ್ಚು ಗ್ಲಾಸಿ ಅಲ್ಲದ, ಹೆಚ್ಚು ದೊಡ್ಡದೂ ಅನಿಸದ ಪುಟ್ಟದಾದ ಹಾಗೂ ಜೇಬಿನೊಳಗೆ ಹೆಚ್ಚು ಜಾಗವನ್ನು ಆಕ್ರಮಿಸದ ಇಯರ್‌ ಬಡ್ಸ್‌ ಅನ್ನು ಒನ್‌ಪ್ಲಸ್‌ ಪರಿಚಯಿಸಿದೆ. ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 3 ಪ್ರೊ ಎಂಬ ಈ ಸಾಧನ, ತಂತ್ರಜ್ಞಾನದಲ್ಲಿ ಹಲವು ಹೊಸತುಗಳನ್ನು ಹೊಂದಿರುವುದರ ಜತೆಗೆ, ದೀರ್ಘ ಬಾಳಿಕೆಯ ಬ್ಯಾಟರಿ ಬ್ಯಾಕಪ್‌ ಹೊಂದಿದೆ.

ಡುಯಲ್ ಟೋನ್‌ ಮ್ಯಾಟ್‌ ಫಿನಿಷ್ ಕೇಸ್‌ನಲ್ಲಿರುವ ಈ ಬಡ್‌ನ ಮೇಲ್ಭಾಗ ಸಂಪೂರ್ಣ ಕಪ್ಪು ವರ್ಣದ್ದಾಗಿದ್ದರೆ, ಕೆಳಗಿನ ಭಾಗದಲ್ಲಿ ನಕ್ಷತ್ರಗಳು ತುಂಬಿರುವ ಕತ್ತಲ ಆಗಸದಂತೆ ಕಾಣುವಂತೆ ವಿನ್ಯಾಸ ಮಾಡಲಾಗಿದೆ. ಹಗುರವಾಗಿದೆ, ನೋಡಲು ಸುಂದರವಾಗಿದೆ. ಒನ್‌ಪ್ಲಸ್‌ ಹೆಸರನ್ನು ಮುಂಭಾಗದಲ್ಲಿ ನೀಡಲಾಗಿದೆ. ಯುಎಸ್‌ಬಿ ಸಿ–ಪೋರ್ಟ್‌ ಹಾಗೂ ಪೇರ್ ಮಾಡುವ ಗುಂಡಿಯನ್ನು ಕೆಳಗೆ ನೀಡಲಾಗಿದೆ. ಈ ಬಾಕ್ಸ್‌ನ ತೆರೆದು, ಮುಚ್ಚಲು ನೀಡಿರುವ ಹಿಂಜಸ್‌ನ ಗುಣಮಟ್ಟ ಉತ್ತಮವಾಗಿದೆ.

ADVERTISEMENT

ಒಳಗಿರುವ ಎರಡು ಇಯರ್‌ ಪೀಸ್‌ಗಳು ಹೊಸ ವಿನ್ಯಾಸ ಪಡೆದಿವೆ. ಕೆಲವೊಮ್ಮೆ ನೋಡಲು ಒಪ್ಪೊ ಎನ್ಕೊ ಬಡ್ಸ್‌ನಂತೆಯೇ ಅನಿಸಿದರೂ ತಪ್ಪಾಗದು. ಏಕರೂಪದ ಲಂಭವಾದ ಬಡ್‌ ವಿನ್ಯಾಸವನ್ನು ಬದಲಿಸಿ, ಈ ಬಾರಿ ಒನ್‌ ಪ್ಲಸ್‌ ನೀರಿನ ಬಿಂದುವಿನ ಮಾದರಿಯನ್ನು ಅಳವಡಿಸಿಕೊಂಡಿದೆ. ಹೀಗಾಗಿ, ಕಿವಿಯಲ್ಲಿ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಲಾಗಿದೆ.

ಕಿವಿಯೊಳಗೆ ಹಿತವಾಗಿ ಸೇರಿಕೊಳ್ಳುವ ನಾರ್ಡ್‌ ಬಡ್ಸ್ 3 ಪ್ರೊ, ಒಂದು ದೀರ್ಘ ಕಾಲದ ಸಿನಿಮಾ, ವೆಬ್‌ ಸಿರೀಸ್ ನೋಡಿದರೂ ಭಾದಿಸದು.

ಬ್ಲೂಟೂತ್‌ ಸಂಪರ್ಕದಲ್ಲೂ ಮುಂದು

ನಿಸ್ತಂತು ಇಯರ್‌ಬಡ್ಸ್‌ ಆದ ನಾರ್ಡ್‌ ಬಡ್ಸ್‌ 3 ಪ್ರೊ, 5.4 ಬ್ಲೂಟೂತ್ ಹಾಗೂ ಗೂಗಲ್‌ ಫಾಸ್ಟ್ ಪೇರ್ ಬೆಂಬಲಿಸುತ್ತದೆ. ಇದು ಈ ಹಿಂದಿನ ಅವತರಣಿಕೆ ನಾರ್ಡ್‌ ಬಡ್ಸ್‌ 2ರ ಮುಂದುವರಿದ ತಂತ್ರಜ್ಞಾನವಾಗಿದೆ. ಆದರೆ ಮೈಕ್ರೊಸಾಫ್ಟ್‌ನ ಸ್ವಿಫ್ಟ್‌ಪೇರ್‌ ಅನ್ನು ಇದು ಬೆಂಬಲಿಸುವುದು ತುಸು ಕಷ್ಟ. ಒಮ್ಮೆ ಫೋನ್‌ನೊಂದಿಗೆ ಸಂಪರ್ಕ ಸಾಧ್ಯವಾದಲ್ಲಿ, ಅದು ಸ್ಥಗಿತಗೊಂಡ ಉದಾಹರಣೆ ಇಲ್ಲ ಎಂಬುದು ಈ ಕೆಲ ದಿನಗಳ ಬಳಕೆಯಲ್ಲಿ ಕಂಡುಬಂದ ಅನುಭವ.

ಈ ಹೊಸ ಮಾದರಿಯಲ್ಲಿ ಡುಯಲ್ ಡಿವೈಸ್‌ ಪೇರಿಂಗ್ ಅವಕಾಶವನ್ನು ನೀಡಲಾಗಿದೆ. ಅಂದರೆ ಏಕಕಾಲಕ್ಕೆ ಫೋನ್ ಹಾಗೂ ಲ್ಯಾಪ್‌ಟಾಪ್‌ನೊಂದಿಗೆ ಇದನ್ನು ಪೇರ್‌ ಮಾಡಿ ಬಳಸಬಹುದು.

ಧ್ವನಿ ಹಾಗೂ ಶಬ್ಧ ಗ್ರಹಣದಲ್ಲಿ ಕಾಯ್ದುಕೊಂಡ ಗುಣಮಟ್ಟ

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 3 ಪ್ರೊ ಒಳಗೆ 12.4 ಮಿ.ಮೀ. ಡ್ರೈವರ್‌ ಅಳವಡಿಸಲಾಗಿದೆ. ಇದು ಎಸ್‌ಬಿಸಿ ಹಾಗೂ ಎಎಸಿ ಕೋಡೆಕ್ಸ್‌ಗಳಿಗೆ ನೆರವಾಗಲಿದೆ. ಹೆಚ್ಚು ಬೇಸ್ ಇಷ್ಟಪಡುವವರಿಗೆ ಇದು ಇಷ್ಟವಾಗದು. ಆದರೆ ನಾರ್ಡ್‌ ಬಡ್ಸ್‌ 3 ಪ್ರೊ ಅತ್ಯಂತ ಸಂತುಲಿತ ಧ್ವನಿಯನ್ನು ಹೊರಹೊಮ್ಮಿಸುತ್ತದೆ. ಹಳೆಯ ಹಾಡುಗಳಾಗಲೀ, ಇತ್ತೀಚಿನ ಜಾನರ್‌ಗಳಾಗಲಿ ಕಿವಿಗೆ ಹೆಚ್ಚು ಹಿತವೆನಿಸುತ್ತದೆ. ಬೇಸ್ ಹಾಗೂ ಟ್ರಿಬಲ್‌ ಸಮತೋಲನದಲ್ಲಿರುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಒನ್‌ಪ್ಲಸ್‌ 3ಡಿ ಆಡಿಯೊ ಕೂಡಾ ಇದರಲ್ಲಿ ಅಳವಡಿಸಲಾಗಿದೆ. ಆದರೆ ಅದು ಅಂಥ ಗುರುತರ ಫೀಚರ್ ಎಂದು ಹೇಳಲಾಗದು. ಸೌಂಡ್‌ ಮಾಸ್ಟರ್‌ ಇಕ್ವಿಲೈಸರ್ ನೀಡಲಾಗಿದೆ. ಇದು ಕೇಳುಗರ ಅಪೇಕ್ಷೆಗೆ ತಕ್ಕಂತೆ ಹೊಂದಿಸಿಕೊಳ್ಳಬಹುದಾಗಿದೆ. ದಿನನಿತ್ಯದ ಬಳಕೆಗೆ ಇದು ಉತ್ತಮ ಆಯ್ಕೆ.

ಕರೆ ಸ್ವೀಕರಿಸುವವರಿಗೂ ಹಿತವೆನಿಸುವ ಮೈಕ್ರೊಫೋನ್

ಕರೆಗೆ ಅನುಕೂಲವಾಗುವಂತೆ ಹಾಗೂ ಹೊರಗಿನ ಶಬ್ದ ರದ್ದುಪಡಿಸಲು ಒನ್‌ಪ್ಲಸ್ ನಾರ್ಡ್‌ ಇಯರ್‌ಬಡ್‌ನ ಪ್ರತಿಯೊಂದರಲ್ಲೂ 3 ಮೈಕ್‌ಗಳನ್ನು ನೀಡಲಾಗಿದೆ. ಇದರ ಗುಣಮಟ್ಟ ಉತ್ತಮವಾಗಿದೆ. ಇದರ ಮೂಲಕ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ವ್ಯಕ್ತಿಯಿಂದ ಯಾವುದೇ ದೂರುಗಳು ಎದುರಾಗಲಿಲ್ಲ. ಟ್ರಾಫಿಕ್‌ನಲ್ಲೂ ಕರೆ ಸ್ವೀಕರಿಸುವವರಿಗೆ ನಮ್ಮ ಧ್ವನಿ ಉತ್ತಮವಾಗಿ ಕೇಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಮೈಕ್ರೊಫೋನ್‌ನ ಗುಣಮಟ್ಟವೂ ಉತ್ತಮವಾಗಿದೆ.

ನಾಯ್ಸ್ ಕ್ಯಾನ್ಸಲೇಷನ್‌ ಗುಣಮಟ್ಟವೂ ಉತ್ತಮವಾಗಿದೆ. 49 ಡೆಸಿಬಲ್‌ವರೆಗೂ ಹೊರಗಿನ ಶಬ್ದ ರದ್ದುಪಡಿಸುವ ಸಾಮರ್ಥ್ಯ ಈ ನೂತನ ಸಾಧನಕ್ಕಿದೆ. ಇದರೊಂದಿಗೆ ನೀಡಿರುವ ಟ್ರಾನ್ಸ್‌ಪರೆನ್ಸಿ ಮೋಡ್ ಕೂಡಾ ಉತ್ತಮವಾಗಿದೆ. ಶೇ 50ರಷ್ಟು ಧ್ವನಿ ಇರಿಸಿ, ಎದುರಿಗಿರುವ ವ್ಯಕ್ತಿಯೊಂದಿಗೆ ಸಂವಹನ ನಡೆಸಲು ಯಾವುದೇ ತೊಡಕಾಗದಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಬಡ್ಸ್‌ 3 ಪ್ರೊನ ಟಚ್ ಕಂಟ್ರೋಲ್

ಬಡ್ಸ್ 3 ಪ್ರೊ ಅನ್ನು ನಮ್ಮ ಅಪೇಕ್ಷೆಗೆ ತಕ್ಕಂತೆ ಹೊಂದಿಸಲು ಇಡೀ ಸಾಧನವನ್ನೇ ಹೊರತೆಗೆಯಬೇಕೆಂದೇನೂ ಇಲ್ಲ. ಇದನ್ನು ನಮ್ಮ ಫೋನ್‌ನಲ್ಲೇ ಹೊಂದಿಸಿಕೊಳ್ಳುವಂತ ಸೌಕರ್ಯವನ್ನು ಒನ್‌ಪ್ಲಸ್ ನೀಡಿದೆ. 

ಕೇಸ್‌ನಿಂದ ಹೊರತೆಗೆದರೆ 12 ಗಂಟೆಯವರೆಗೂ ಬಡ್ಸ್‌ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಕೇಸ್‌ ಒಳಗೆ 44 ಗಂಟೆಗಳ ಕಾಲ ಕಾರ್ಯನಿರ್ವಹಿಸುವಷ್ಟು ಬ್ಯಾಟರಿ ಬಳಕೆ ಇದರದ್ದು. ಒಂದೊಮ್ಮೆ ಚಾರ್ಜ್‌ ಮುಗಿದಿದ್ದರೆ, 10 ನಿಮಿಷಗಳ ಚಾರ್ಜ್‌ನೊಂದಿಗೆ 11 ಗಂಟೆಗಳ ಕಾಲ ಕಾರ್ಯನಿರ್ವಹಿಸುವಷ್ಟು ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಕಂಪನಿ ಹೇಳಿದೆ.

₹4 ಸಾವಿರದೊಳಗೆ ಲಭ್ಯವಿರುವ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 3 ಪ್ರೊ, ಅಗ್ಗದ ಬೆಲೆಗೆ ಉತ್ತಮ ಗುಣಮಟ್ಟ, ದೀರ್ಘ ಬಾಳಿಕೆಯ ಬ್ಯಾಟರಿ ನೀಡುವ ಸಾಧನವಾಗಿದೆ. ಇಂದಿನ ದಿನಮಾನಕ್ಕೆ ಅಗತ್ಯವಿರುವ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಒನ್‌ಪ್ಲಸ್‌ ಹಲವು ಹೊಸತುಗಳನ್ನು ನೀಡುವ ಪ್ರಯತ್ನ ನಡೆಸಿದೆ.

ಬಡ್ಸ್‌ 3 ಪ್ರೊ ಕಿಟ್‌ನಲ್ಲಿ ಏನಿದೆ?

ಒನ್‌ಪ್ಲಸ್ ನಾರ್ಡ್‌ ಬಡ್ಸ್‌ 3 ಪ್ರೊ ಬಾಕ್ಸ್‌ನಲ್ಲಿ ಇಯರ್‌ಫೋನ್‌, ಚಿಕ್ಕದಾದ ಹಾಗೂ ದೊಡ್ಡ ಗಾತ್ರದ ಎರಡು ಜೊತೆ ಇಯರ್ ಟಿಪ್ಸ್‌, ಬಳಕೆದಾರರ ಮಾಹಿತಿಗೆ ಮ್ಯಾನುಯಲ್, ಯುಎಸ್‌ಬಿ ಎ ಟು ಸಿ ಚಾರ್ಜಿಂಗ್ ಕೇಬಲ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.