ಒನ್‌ಪ್ಲಸ್ ಕಂಪನಿಯ ಮಧ್ಯಮ ಬೆಲೆಯ ವಿಭಾಗದಲ್ಲಿ (₹20 ಸಾವಿರದಿಂದ ₹30 ಸಾವಿರ) ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸಾಲಿಗೆ ಈಚೆಗಷ್ಟೇ ಬಂದಿರುವ ’ನಾರ್ಡ್ ಸಿಇ 3 5ಜಿ’ (OnePlus Nord ce3 5g) ಸಹ ಸೇರಿಕೊಂಡಿದೆ. ಈ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಪ್ಲಸ್ ಮತ್ತು ಒಂದೆರಡು ಮೈನಸ್ ಅಂಶಗಳಿವೆ. ಅವುಗಳನ್ನು ವಿವರವಾಗಿ ತಿಳಿಯೋಣ.
ವಿನ್ಯಾಸ: ವಿನ್ಯಾಸವು ನಾರ್ಡ್ ಸರಣಿ ಈ ಹಿಂದಿನ ಫೋನ್‌ಗಳಂತೆಯೇ ಇದೆ. ಬಹಳ ವಿಶೇಷ ಎನ್ನುವಂತಹದ್ದು ಇಲ್ಲ. ಪ್ಲಾಸ್ಟಿಕ್ ಬಾಡಿ ಬಳಸಿರುವುದರಿಂದ ಹಗುರಾಗಿದೆ. ಬಲಭಾಗದಲ್ಲಿ ವಾಲ್ಯುಂ ಮತ್ತು ಪವರ್ ಬಟನ್‌ಗಳಿವೆ. ಒನ್‌ಪ್ಲಸ್‌ನ ಹೆಗ್ಗುರುತು ಎನ್ನಿಸಿಕೊಂಡಿರುವ ‘ಅಲರ್ಟ್ ಸ್ಲೈಡರ್’ ಬಟನ್ ಕೊರತೆ ಕಾಡುತ್ತದೆ. ಅನ್‌ಲಾಕ್ ಮಾಡದೇ ಮೊಬೈಲ್ ಅನ್ನು ರಿಂಗ್, ವೈಬ್ರೆಟ್, ಸೈಲೆಂಟ್ ಮೋಡ್‌ಗೆ ಇಡಲು ಈ ಬಟನ್ ಅನುಕೂಲವಾಗಿದೆ. ಆದರೆ, ಈ ಪೋನ್‌ನಲ್ಲಿ ಅದನ್ನು ನೀಡಲಾಗಿಲ್ಲ. ಇನ್ನೊಂದು ಮೈನಸ್ ಅಂಶ ಎಂದರೆ 3.5ಎಂಎಂ ಹೆಡ್‌ಫೋನ್ ಜಾಕ್ ನೀಡದೇ ಇರುವುದು. ಈಗಲೂ ಬಹಳಷ್ಟು ಮಂದಿ ವಯರ್ ಇರುವ ಇಯರ್‌ಫೋನ್ ಬಳಸುತ್ತಾರೆ. ಹೀಗಾಗಿ ಹೆಡ್‌ಫೋನ್ ಜಾಕ್ ಇದ್ದರೆ ಬ್ಲೂಟೂತ್ ಇಯರ್‌ಫೋನ್ ಅಥವಾ ಬಡ್ಸ್ ಖರೀದಿಗೆ ಹಣ ವ್ಯಯಿಸುವುದು ತಪ್ಪುತ್ತದೆ.
6.74 ಇಂಚು ಅಮೊಎಲ್‌ಇಡಿ ಡಿಸ್‌ಪ್ಲೇ ಇದ್ದು, ವಿಡಿಯೊ ನೋಡಲು ಮತ್ತು ಗೇಮ್ ಆಡುವ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ. 120 ಹರ್ಟ್ಸ್ ರಿಫ್ರೆಷ್‌ರೇಟ್ ಇದ್ದು, ಬಿಸಿಲಿನಲ್ಲಿಯೂ ಫೋನ್ ಬಳಸಲು ಯಾವುದೇ ಸಮಸ್ಯೆ ಆಗಿಲ್ಲ. ಬೀಜಲ್ ಅಂದರೆ ಫೋನ್‌ನ ಡಿಸ್‌ಪ್ಲೇ ಮತ್ತು ಫ್ರೇಮ್ ನಡುವಣ ಇರುವ ಅಂತರವನ್ನು ಕಡಿಮೆ ಮಾಡಲಾಗಿದೆ. ಮಂದ ಬೆಳಕಿನಲ್ಲಿ ಸ್ಕ್ರೀನ್‌ನ ಬ್ರೈಟ್‌ನೆಸ್ ಕಾಯ್ದುಕೊಳ್ಳಲು ಮತ್ತು ಫ್ಲಿಕರಿಂಗ್ ತಪ್ಪಿಸಲು 2160ಹರ್ಟ್ಸ್ ಪಿಡಬ್ಲ್ಯುಎಂ ಬಳಸಲಾಗಿದೆ.
ನಾರ್ಡ್ ಸಿಇ 3 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 113 ಆಧಾರಿತ ಆಕ್ಸಿಜನ್ ಒಎಸ್ 13.1ನಿಂದ ಚಾಲಿತವಾಗಿದೆ. ಎರಡು ಒಎಸ್ ಅಪ್‌ಡೇಟ್ ಮತ್ತು ಮೂರು ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ಭರವಸೆಯನ್ನು ಕಂಪನಿ ನೀಡಿದೆ. ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 782 ಚಿಪ್‌ಸೆಟ್ ಬಳಸಿರುವುದರಿಂದ ಯಾವುದೇ ಹಂತದಲ್ಲಿಯೂ ಮೊಬೈಲ್ ಹ್ಯಾಂಗ್ ಆಗುವುದಿಲ್ಲ.
ಕ್ಯಾಮೆರಾ: ಇದರಲ್ಲಿ 50ಎಂಪಿ ಸೋನಿ ಐಮ್ಯಾಕ್ಸ್890 ಪ್ರೈಮರಿ ಕ್ಯಾಮೆರಾ, 8ಎಂಪಿ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಮತ್ತು 2ಎಂಪಿ ಮ್ಯಾಕ್ರೊ ಸೆನ್ಸರ್ ಇದೆ. 50ಎಂಪಿ ಕ್ಯಾಮೆರಾ ಚೆನ್ನಾಗಿದೆ. ಮಂದ ಮತ್ತು ಹೆಚ್ಚು ಬೆಳಕು ಇರುವ ಜಾಗದಲ್ಲಿಯೂ ಫೋಟೊ ಕ್ಲಾರಿಟಿ ಚೆನ್ನಾಗಿದೆ. ಪೊರ್ಟೇಟ್ ಆಯ್ಕೆಯೂ ಬಹಳ ಚೆನ್ನಾಗಿದೆ. ಸಹಜ ಮೈಬಣ್ಣದಲ್ಲಿ ಚಿತ್ರ ಸೆರೆಯಾಗುತ್ತದೆ. ಆದರೆ ಮ್ಯಾಕ್ರೊ ಮೋಡ್ ಅಷ್ಟು ಸಮಾಧಾನ ನೀಡಿಲ್ಲ. ಫೋಟೊಗಳು ಬ್ಲರ್ ಆಗುತ್ತವೆ. ಇದಕ್ಕಿಂತಲೂ ಪೊರ್ಟ್ರೇಟ್ ಮೋಡ್‌ನಲ್ಲಿಯೇ ಹೆಚ್ಚು ಚೆನ್ನಾಗಿ ಫೋಟೊ ತೆಗೆಯಬಹುದು. ನೈಟ್ ಮೋಡ್‌ನಲ್ಲಿ ತೆಗೆದ ಫೋಟೊದ ಕ್ಲಾರಿಟಿ ಚೆನ್ನಾಗಿದೆ. 16ಎಂಪಿ ಫ್ರಂಟ್ ಕ್ಯಾಮೆರಾ ಇದ್ದು, ಹಗಲಿನಲ್ಲಿ ಮತ್ತು ಚೆನ್ನಾಗಿ ಲೈಟ್ ಇರುವಲ್ಲಿ ಸೆಲ್ಫಿ ಚೆನ್ನಾಗಿ ಸೆರೆಯಾಗುತ್ತದೆ. ಆದರೆ ಮಂದ ಬೆಳಕಿನಲ್ಲಿ ಅಷ್ಟು ಕ್ಲಾರಿಟಿ ಇರುವುದಿಲ್ಲ.
ಬ್ಯಾಟರಿ: 5 ಸಾವಿರ ಎಂಎಎಚ್ ಬ್ಯಾಟರಿ ಹೊಂದಿದ್ದು, ಪೂರ್ತಿ ಚಾರ್ಜ್ ಆಗಲು 35 ರಿಂದ 40 ನಿಮಿಷ ಬೇಕು. 80ವಾಟ್ ವೇಗದ ಚಾರ್ಜರ್ ಹೊಂದಿದೆ. ವಿಡಿಯೊ, ಸಿನಿಮಾ ನೋಡುವುದು, ಹೆಚ್ಚು ಇಂಟರ್‌ನೆಟ್ ಬಳಕೆ ಮಾಡಿದರೆ 8–9 ಗಂಟೆ ಬಳಸಬಹುದು. ಸಾಮಾನ್ಯ ಬಳಕೆಯಲ್ಲಿ ಒಂದು ದಿನದವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಬೆಲೆ: 8+128ಜಿಬಿಗೆ ₹26,999, 12+256ಜಿಬಿಗೆ ₹28,999.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.