ADVERTISEMENT

OnePlus ನಾರ್ಡ್‌ CE4: ಮಧ್ಯಮ ಶ್ರೇಣಿಯ ಫೋನ್‌ನಲ್ಲಿ 5500mah ಬ್ಯಾಟರಿ, AI ಬಳಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2024, 11:11 IST
Last Updated 6 ಏಪ್ರಿಲ್ 2024, 11:11 IST
<div class="paragraphs"><p>ಒನ್‌ಪ್ಲಸ್‌ ನಾರ್ಡ್‌ ಸಿಇ4</p></div>

ಒನ್‌ಪ್ಲಸ್‌ ನಾರ್ಡ್‌ ಸಿಇ4

   

ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಒಂದನ್ನು ನಾರ್ಡ್ ಸರಣಿಯಲ್ಲಿ ಪರಿಚಯಿಸಿರುವ ಒನ್ ಪ್ಲಸ್, ಕ್ಯಾಮೆರಾ ಗುಣಮಟ್ಟ ಹೆಚ್ಚಿಸಿರುವುದರ ಜತೆಗೆ, ನೂತನ ಮದರ್‌ಬೋರ್ಡ್ ಹಾಗೂ ಇಂದಿನ ಅತಿ ಬೇಡಿಕೆಯ ಕೃತಕ ಬುದ್ಧಿಮತ್ತೆಯನ್ನು (AI) ಅತ್ಯಂತ ಹದವಾಗಿ ಬಳಸುವ ಮೂಲಕ ಫೋನ್ ಬಳಕೆದಾರರಿಗೆ ಹೊಸ ಬಗೆಯ ಅನುಭೂತಿ ನೀಡುವ ಪ್ರಯತ್ನ ನಡೆಸಿದೆ.

ಒನ್‌ಪ್ಲಸ್ ನಾರ್ಡ್ ಸಿಇ4 ಸ್ಮಾರ್ಟ್‌ಫೋನ್‌ ಹಿಂದಿನ ನಾರ್ಡ್ ಸರಣಿಯ ಇತರ ಫೋನ್‌ಗಳನ್ನು ಹೋಲುವಂತಿದೆ. ಆದರೆ ಈ ಬಾರಿ ಸೆಲಾಡನ್ ಮಾರ್ಬಲ್‌ ಎಂಬ ಹೊಸ ಬಣ್ಣವೊಂದನ್ನು ಈ ಹೊಸ ಶ್ರೇಣಿಯಲ್ಲಿ ಒನ್‌ಪ್ಲಸ್ ಪರಿಚಯಿಸಿದೆ. ಇದರೊಂದಿಗೆ ಡಾರ್ಕ್ ಕ್ರೋಮ್ ವೇರಿಯಂಟ್‌ ಆಯ್ಕೆಯೂ ಗ್ರಾಹಕರಿಗೆ ಇದೆ. 

ADVERTISEMENT

ಭಾರವೆನಿಸುವ ವಿನ್ಯಾಸಗಳಿಂದ ಈ ಬಾರಿ ಅಂತರ ಕಾಯ್ದುಕೊಂಡಿದೆ ಒನ್‌ಪ್ಲಸ್‌. ಹೀಗಾಗಿ ಹಿಂಬದಿ ಲಂಬವಾದ ಕ್ಯಾಮೆರಾ ಹಾಗೂ ಸೆನ್ಸರ್‌ಗಳಿಂದಾಗಿ ಫೋನ್ ಸುಂದರವಾಗಿ ಕಾಣಿಸುತ್ತದೆ. ಹೆಚ್ಚು ಭಾರವಿಲ್ಲದೆ ಹಾಗೂ ಹೆಚ್ಚು ಅಗಲವೂ ಇಲ್ಲದೆ ಹಿಡಿಯಲು ಹಿತವೆನಿಸುವಂತಿದೆ ಸಿಇ4. ಈ ಬಾರಿ ಡ್ರಾಗನ್‌ಟ್ರೈಲ್‌ ಗಾಜನ್ನು ಪರದೆಗೆ ಬಳಸಲಾಗಿದೆ. ಫೋನ್‌ನ ಹೊರಕವಚ ಹೆಚ್ಚಾಗಿ ಗೋಚರಿಸದ ಕಾರಣ, ಪರದೆ ವೀಕ್ಷಣೆಗೆ ಹೆಚ್ಚು ಸ್ಥಳ ಸಿಕ್ಕಂತ ಅನುಭವವಾಗಲಿದೆ.

ಉಳಿದಂತೆ ಈ ಹಿಂದಿನ ನಾರ್ಡ್ ಸರಣಿಯಂತೆ ಬಟನ್‌ಗಳು, ಪ್ಲಗ್‌ ಮಾಡುವ ಪೋರ್ಟ್‌ಗಳು ಅವೇ ಸ್ಥಳದಲ್ಲಿವೆ. ಪವರ್ ಗುಂಡಿ ಹಾಗೂ ವಾಲ್ಯೂಮ್‌ ಏರಿಳಿತದ ಗುಂಡಿ ಬಲಭಾಗದಲ್ಲಿದೆ. ಎಡ ಭಾಗ ಸಂಪೂರ್ಣವಾಗಿ ಗುಂಡಿಗಳಿಂದ ಮುಕ್ತವಾಗಿದೆ. ಮೇಲ್ಭಾಗದಲ್ಲಿ ಐಆರ್ ಎಮಿಟರ್‌ ಹಾಗೂ ಸೆಕೆಂಡರಿ ಮೈಕ್‌ ಇದೆ. ಕೆಳಭಾಗದಲ್ಲಿ ಹೈಬ್ರಿಡ್ ಸಿಮ್‌ ಕಾರ್ಡ್ ಹಾಕುವ ಟ್ರೇ, 1 ಟಿ.ಬಿ.ವರೆಗೂ ವಿಸ್ತರಿಸುವ ಸ್ಮೃತಿಕೋಶವಿದೆ. ಸ್ಪೀಕರ್ ಗ್ರಿಲ್ ಕೆಳಭಾಗದಲ್ಲಿದೆ.

ಫೋನ್‌ ಆಘಾತದಿಂದಲೂ ರಕ್ಷಣೆ ಹೊಂದಿದ್ದು, 1.5 ಮೀ. ಎತ್ತರದಿಂದ ಫೋನ್ ನೆಲಕ್ಕೆ ಬಿದ್ದರೂ ಹಾನಿಯಾಗದು ಎಂದು ಕಂಪನಿ ಹೇಳಿಕೊಂಡಿದೆ.

ಪರದೆ ವೀಕ್ಷಣೆಯ ಅನುಭವ

ಹೊಸ ನಾರ್ಡ್ ಸಿಇ4 ಸ್ಮಾರ್ಟ್‌ಫೋನ್‌ 6.7 ಇಂಚುಗಳ AMOLED ಡಿಸ್‌ಪ್ಲೇ ಹೊಂದಿದೆ. 394 ಪಿಪಿಐ ಸಾಂಧ್ರತೆ ಮೂಲಕ 2412x1080 ಪಿಕ್ಸೆಲ್‌ಗಳನ್ನು ಈ ಪರದೆ ಹೊಂದಿದೆ. ಹೀಗಾಗಿ ಚಿತ್ರಗಳು ಹೆಚ್ಚು ಸ್ಪಷ್ಟ ಮತ್ತು ಬಣ್ಣಗಳ ಶ್ರೀಮಂತಿಕೆ ಮತ್ತು ಕಡುಕಪ್ಪು ಮೂಡಿಸುವ ಸಾಮರ್ಥ್ಯವೂ ಉತ್ತಮವಾಗಿದೆ. ಹೀಗಾಗಿ ಇಡೀ ಫೋನ್‌ ಅನ್ನು ಪರಿಗಣಿಸುವುದಾದರೆ, ಇದರ ಡಿಸ್‌ಪ್ಲೇ ಪ್ರದೇಶವು ಶೇ 93.40ರಷ್ಟಿದೆ. ಹೀಗಾಗಿ ಸಿನಿಮಾ, ಗೇಮಿಂಗ್‌ ಹಾಗೂ ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಆಗುವ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮತ್ತು ದೊಡ್ಡದಾಗಿ ಕಾಣಿಸುತ್ತವೆ. ಸ್ಕ್ರಾಲಿಂಗ್ ಅನುಭವವೂ ಹೆಚ್ಚು ಹಿತಕರವಾಗಿದೆ.

ನಾರ್ಡ್‌ ಸಿಇ4 ಸ್ಮಾರ್ಟ್‌ಫೋನ್‌ನಲ್ಲಿ sRGB, DCI-P3 ಜತೆಗೆ 10 ಬಿಟ್‌ನ ಕಲರ್ ಡೆಪ್ತ್‌, ಎಚ್‌ಡಿಆರ್‌ 10+ನಂತ ಕಲರ್‌ ತಂತ್ರಜ್ಞಾನ ಬಳಸಲಾಗಿದ್ದು, ಇದು ಚಿತ್ರ, ವಿಡಿಯೊ ಹಾಗೂ ಆ್ಯನಿಮೇಷನ್‌ಗಳ ವೀಕ್ಷಣೆಯನ್ನೂ ಉತ್ತಮವಾಗಿ ಪರದೆ ಮೇಲೆ ಮೂಡಿಸುತ್ತವೆ. 

ಆಕ್ವಾ ಟಚ್ ಟೆಕ್ನಾಲಜಿ ಈ ಫೋನ್‌ನಲ್ಲಿ ಅಳವಡಿಸಲಾಗಿದ್ದು, ಟಚ್‌ ಅನುಭವವೂ ಉತ್ತಮವಾಗಿದೆ. ಅದರಲ್ಲೂ ಬೆರಳು ಒದ್ದೆಯಾಗಿದ್ದರೂ,ಪರದೆ ತೇವವಾಗಿದ್ದರೂ, ಸ್ಪರ್ಶದ ಅನುಭವವನ್ನು ಗ್ರಹಿಸಲು ಫೋನ್‌ ತಡಮಾಡದು. 

ಒನ್‌ಪ್ಲಸ್ ನಾರ್ಡ್‌ ಸಿಇ4 ಫೋನ್‌ ಆಕ್ಸಿಜೆನ್‌–ಒಎಸ್‌ 14.0 ಆಪರೇಟಿಂಗ್ ಸಿಸ್ಟಂ ಹೊಂದಿದೆ. ಆಕ್ಸಿಜೆನ್–ಒಎಸ್‌ 13ರ ಆವೃತ್ತಿ ಆಧರಿಸಿ ಪರಿಷ್ಕೃತ ಆಪರೇಟಿಂಗ್ ಸಿಸ್ಟಂ ಅನ್ನು ಈ ಫೋನ್‌ನಲ್ಲಿ ಬಳಸಲಾಗಿದೆ. ಇದರಲ್ಲಿ ಹೊಸ ಬಗೆಯ ಆ್ಯನಿಮೇಷನ್‌, ಟ್ಯೂನ್‌ನಂತಹ ಸಂಗೀತ, ಹೊಸ ಬಗೆಯ ಬಣ್ಣಗಳು ಕಣ್ಣಿಗೆ ಹಿತವನ್ನುಂಟು ಮಾಡುವಂತಿವೆ. ಇದರೊಂದಿಗೆ ಮುಂದಿನ ಮೂರು ವರ್ಷಗಳಿಗೆ ಸೆಕ್ಯುರಿಟಿ ಅಪ್‌ಡೇಟ್ಸ್ ಮತ್ತು ಆ್ಯಂಡ್ರಾಯ್ಡ್‌ ಸಾಫ್ಟ್‌ವೇರ್‌ನ ಅಪ್‌ಡೇಟ್ಸ್‌ಗಳನ್ನು ಎರಡು ವರ್ಷಗಳವರೆಗೆ ನೀಡುವ ಭರವಸೆಯನ್ನು ಒನ್‌ಪ್ಲಸ್ ನೀಡಿದೆ.

ಸ್ನಾಪ್‌ಡ್ರಾಗನ್ 3ನೇ ತಲೆಮಾರಿನ ಪ್ರಾಸೆಸರ್

ಕ್ವಾಲ್ಕಂ ಸ್ನಾಪ್‌ಡ್ರಾಗನ್ 7 ಜೆನ್‌ 3 ಚಿಪ್‌ ಅನ್ನು ಒನ್‌ಪ್ಲಸ್‌ ನಾರ್ಡ್‌ ಸಿಇ4 ಫೋನ್‌ನಲ್ಲಿ ಬಳಸಲಾಗಿದೆ. ಇದು ಆಕ್ಟ ಕೋರ್‌ ಪ್ರಾಸಸರ್‌ ಆಗಿದೆ. ಇದರ ಹಿಂದಿನ ಸಿಇ3 ಫೋನ್‌ಗೆ ಹೋಲಿಸಿದಲ್ಲಿ ಸಿಪಿಯು ಮತ್ತು ಜಿಪಿಯು ಕಾರ್ಯಕ್ಷಮತೆ ಸಿಇ4ನಲ್ಲಿ ಉತ್ತಮ ಎಂದೆನಿಸುವ ಸಾಧ್ಯತೆ ಹೆಚ್ಚು. ಮಲ್ಟಿಟಾಸ್ಕಿಂಗ್‌ ಸಾಮರ್ಥ್ಯವೂ ನೂತನ ಮಾದರಿಯಲ್ಲಿ ಉತ್ತಮವಾಗಿದೆ. ಬ್ಯಾಟರಿ ಬಳಕೆಯೂ ಹೊಸ ಚಿಪ್‌ ಉತ್ತಮವಾಗಿ ನಿರ್ವಹಿಸುವ ಅನುಭವ ಆಗಲಿದೆ.

ಇದರೊಂದಿಗೆ ಈ ನೂತನ ಮಾದರಿ ಚಿಪ್‌ನ ಮತ್ತೊಂದು ವಿಶೇಷವೆಂದರೆ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್‌ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ. 8 ಜಿ.ಬಿ.ಗಳ LPDDR4x RAM ಇರುವ ಈ ಫೋನ್ ಮಲ್ಟಿಟಾಸ್ಕಿಂಗ್ ಹಾಗೂ ಸ್ಮೃತಿಕೋಶದ ನಿರ್ವಹಣೆಯೂ ಉತ್ತಮವಾಗಿದೆ. ಆಂತರಿಕ ಸ್ಮೃತಿಕೋಶವು 256 ಜಿ.ಬಿ.ಯಷ್ಟಿದ್ದು, ಇನ್ನೂ ಹೆಚ್ಚಿನ ಸ್ಟೋರೇಜ್ ಬೇಕೆಂದವರಿಗೆ 1ಟಿ.ಬಿ.ವರೆಗೂ ವಿಸ್ತರಿಸುವ ಅವಕಾಶವನ್ನು ಒನ್‌ಪ್ಲಸ್ ನೀಡಿದೆ. 

ಚಿತ್ರ ಹೆಚ್ಚು ಸ್ಪಷ್ಟ

ಉರಿಬಿಸಿಲು, ತಂಪಾದ ಇಳಿ ಸಂಜೆ, ರಾತ್ರಿಯ ಮಬ್ಬುಗತ್ತಲು... ಇಂಥ ಬೆಳಕಿನಲ್ಲೂ ಚಿತ್ರ ಹೆಚ್ಚು ಸ್ಪಷ್ಟ. ಸಿಇ4 ಫೋನ್‌ನಲ್ಲಿ 50 ಮೆಗಾಪಿಕ್ಸೆಲ್‌ನ ಸೋನಿ ಎಲ್‌ವೈಟಿ–600 ಸೆನ್ಸರ್‌ ಅನ್ನು ಒನ್‌ಪ್ಲಸ್ ಬಳಸಿದೆ. ಹೀಗಾಗಿ ತೆಗೆದ ಚಿತ್ರ ದಾಖಲಾಗುವುದು ಹೆಚ್ಚು ಸ್ಪಷ್ಟತೆ ಮತ್ತು ಬಣ್ಣದ ಬಳಕೆಯೂ ಅಷ್ಟೇ ಉತ್ತಮವಾಗಿದೆ. ಚಿತ್ರ ಹೆಚ್ಚು ಸ್ಪಷ್ಟವಾಗಿರುವಂತೆ ಮಾಡಲು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್‌ (OIS) ಕೂಡಾ ಇದರಲ್ಲಿದೆ. ಇದರಿಂದ ಫೋಟೊ ತೆಗೆಯುವಾಗ ಕೈಗಳು ಅಲುಗಾಡಿದರೂ ಅದನ್ನು ತಕ್ಕಮಟ್ಟಿಗೆ ತಡೆಯುವ ಸಾಮರ್ಥ್ಯ ಈ ಸಾಧನಕ್ಕಿದೆ. ತೆಗೆದ ಚಿತ್ರದ ಸ್ಪಷ್ಟತೆಯು ಇದರ ವೇಗವಾದ ಗ್ರಹಿಕೆಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತದೆ. 

ಹಿಂಬದಿಯ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್‌ನ ಸೋನಿ IMX355 ಲೆನ್ಸ್ ಹೊಂದಿದೆ. ಅಲ್ಟ್ರಾ ವೈಡ್ ಸೆನ್ಸರ್‌ ಇದಾಗಿದ್ದು, ಉತ್ತಮ ಲ್ಯಾಂಡ್‌ಸ್ಕೇಪ್ ಚಿತ್ರ, ಸ್ನೇಹಿತರ ಗುಂಪಿನ ಚಿತ್ರಗಳನ್ನು ಒಂದೇ ಪರದೆಯಲ್ಲಿ ದಾಖಲಿಸಲು ಹೆಚ್ಚು ಅನುಕೂಲವಾಗಲಿದೆ. ಪೋಟ್ರೇಟ್‌ ಮೋಡ್ ಕೂಡಾ ಮುಖದ ಸ್ಪಷ್ಟತೆ ನಿಖರವಾಗಿ ದಾಖಲಾಗುವಂತೆ ವಿನ್ಯಾಸಗೊಳಿಸಲಾಗಿದೆ. ಬ್ಲರ್‌ ಮಾದರಿಯೂ ಇದರಿಂದ ಸಾಧ್ಯ

ಹೆಚ್ಚಿನ ಬೆಳಕಿನ ಅವಕಾಶ ಇಲ್ಲದಿದ್ದಾಗಲೂ ಒನ್‌ಪ್ಲಸ್ ನಾರ್ಡ್ ಸಿಇ4 ಉತ್ತಮ ಚಿತ್ರ ದಾಖಲಿಸಲಿದೆ. RAW HDR ಮಾದರಿಯ ಚಿತ್ರ ದಾಖಲಿಸುವ ಸಾಮರ್ಥ್ಯವೂ ಇದಕ್ಕಿದೆ. 

ಹಿಂದಿನ ನಾರ್ಡ್ ಸಿಇ 3ಗೆ ಹೋಲಿಸಿದಲ್ಲಿ ಈ ಆವೃತ್ತಿಯಲ್ಲಿ 2 ಮೆಗಾಪಿಕ್ಸೆಲ್‌ನ ಮ್ಯಾಕ್ರೊ ಲೆನ್ಸ್‌ ಲಭ್ಯವಿಲ್ಲ. ಫೋನ್‌ನ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇದೆ. ಆಳವಾದ ವಿವರಗಳನ್ನೊಳಗೊಂಡ ಇದರ ಚಿತ್ರಗಳು ಸೋಷಿಯಲ್ ಮಿಡಿಯಾಗಳಿಗೆ ಸೆಲ್ಫಿ ಕ್ಲಿಕ್ಕಿಸುವವರಿಗೆ ಇದು ಹೆಚ್ಚು ಅನುಕೂಲ.

ದೀರ್ಘ ಕಾಲದವರೆಗೆ ಬೆಂಬಲಿಸುವ ಬ್ಯಾಟರಿ

ಒನ್‌ಪ್ಲಸ್ ನಾರ್ಡ್‌ ಸಿಇ4 ಈ ಬಾರಿ 5500 ಎಂಎಎಚ್ ಬ್ಯಾಟರಿಯನ್ನು ಅಳವಡಿಸಿದೆ. ಒಂದೇ ಚಾರ್ಜ್‌ನಲ್ಲಿ ಹೆಚ್ಚು ಸಮಯದವರೆಗೂ ಫೋನ್ ಬಳಸಬಹುದಾಗಿದೆ. ಚಾರ್ಜಿಂಗ್‌ಗೆ 100 ವ್ಯಾಟ್‌ನ SUPERVOOCs ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇದು ಫೋನ್ ಚಾಲನೆಯಲ್ಲಿರುವ ಸಂದರ್ಭದಲ್ಲಿ 30ರಿಂದ 35 ನಿಮಿಷಗಳವರೆಗೂ ಪೂರ್ಣ ಪ್ರಮಾಣದ ಚಾರ್ಜ್ ಆಗಲಿದೆ.

ರಾತ್ರಿ ವೇಳೆಯಲ್ಲಿ ಫೋನ್ ಚಾರ್ಜ್‌ಗೆ ಹಾಕಿದಲ್ಲಿ ಶೇ 80ರವರೆಗೂ ಬೇಗನೆ ಚಾರ್ಜ್ ಆಗಲಿದೆ. ಉಳಿದಿದ್ದು ಬೆಳಿಗ್ಗೆ ಆದ ನಂತರ ಆರಂಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಅತಿಯಾದ ಚಾರ್ಜ್‌ನಿಂದ ಬ್ಯಾಟರಿಯನ್ನು ರಕ್ಷಿಸುವ ತಂತ್ರ ಉತ್ತಮವಾಗಿದೆ.

ಸುಂದರ ಹಾಗೂ ಸರಳ ವಿನ್ಯಾಸದ ಒನ್‌ಪ್ಲಸ್‌ ನಾರ್ಡ್ ಸಿಇ4 ಸ್ಮಾರ್ಟ್‌ಫೋನ್‌ 3ನೇ ತಲೆಮಾರಿನ ಸ್ಯಾಪ್‌ಡ್ರಾಗನ್ 7 ಚಿಪ್‌ಸೆಟ್, ಸೋನಿಯ ಅತ್ಯಾಧುನಿಕ ಸೆನ್ಸರ್ ಹೊಂದಿರುವ ಕ್ಯಾಮೆರಾ, ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಯೊಂದಿಗೆ ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಫೋನ್ ಅನ್ನು ಪರಿಚಯಿಸಿದೆ. ₹24,999ರಿಂದ ಲಭ್ಯವಿರುವ ಈ ಫೋನ್‌ನ (8 ಜಿ.ಬಿ. RAM ಮತ್ತು 128 ಜಿ.ಬಿ. ROM) ಹಿಂಬದಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯನ್ನು ಇನ್ನಷ್ಟು ಉತ್ತಮ ಮಾಡುವ ಅವಕಾಶವಿತ್ತು. ಆದರೆ ಅದಕ್ಕೆ ಪೂರಕವಾದ ರಬ್ಬರ್ ಕವರ್ ಅನ್ನು ಫೋನ್‌ ಬಾಕ್ಸ್‌ನೊಂದಿಗೆ ನೀಡಿರುವುದರಿಂದ ಅದು ಅಷ್ಟಾಗಿ ಬಾಧಿಸದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.