ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ಒನ್‌ಪ್ಲಸ್ ಕಂಪನಿಯು ‘ಒನ್‌ಪ್ಲಸ್ ಓಪನ್’ ಬಿಡುಗಡೆ ಮಾಡುವ ಮೂಲಕ ಮಡಚುವ ಸ್ಮಾರ್ಟ್‌ಫೋನ್ ವಿಭಾಗವನ್ನು ಪ್ರವೇಶಿಸಿದೆ. ಆಕರ್ಷಕ ವಿನ್ಯಾಸ, ಪ್ರೀಮಿಯಂ ವೈಶಿಷ್ಟ್ಯಗಳು, ಕಾರ್ಯಾಚರಣೆಯ ವೇಗ, ಕ್ಯಾಮೆರಾ ಕ್ಲಾರಿಟಿ ಹೀಗೆ ಹಲವು ವಿಷಯಗಳಲ್ಲಿ ಒನ್‌ಪ್ಲಸ್ ಬ್ರ್ಯಾಂಡ್‌ಗೆ ಹೊಸ ಹಿರಿಮೆ ತಂದುಕೊಟ್ಟಿದೆ.
ಲಂಬವಾಗಿ ಮಡಚುವ ಸ್ಮಾರ್ಟ್‌ಫೋನ್ ಇದಾಗಿದೆ. ಮಡಚಿದ್ದಾಗ 6.31 ಇಂಚು ಸೂಪರ್ ಫ್ಲುಯಿಡ್ ಅಮೊಎಲ್‌ಇಡಿ ಡಿಸ್‌ಪ್ಲೇ, ಬಿಡಿಸಿದಾಗ 7.82 ಇಂಚಿಗೆ (ಫ್ಲೆಕ್ಸಿ ಫ್ಲುಯಿಡ್ ಅಮೊಎಲ್‌ಇಡಿ) ತೆರೆದುಕೊಳ್ಳುತ್ತದೆ. ಗೊರಿಲ್ಲಾ ಗ್ಲಾಸ್ ಇರುವುದರಿಂದ ಸ್ಕ್ರೀನ್‌ಗೆ ಹೆಚ್ಚಿನ ಸುರಕ್ಷತೆ ಸಿಗುತ್ತದೆ. ಡೈನಮಿಕ್ ಅಮೊಎಲ್‌ಇಡಿ ಸ್ಕ್ರೀನ್ ಇದೆ. ಒನ್‌ಪ್ಲಸ್‌ನ ಹೆಗ್ಗುರುತಾಗಿರುವ ‘ಅಲರ್ಟ್ ಸ್ಲೈಡರ್’ ಬಟನ್ (ರಿಂಗ್, ಸೈಲೆಂಟ್,ವೈಬ್ರೆಟ್ ಇಡಲು) ಇದೆ. ಇನ್ನು ವಾಲ್ಯುಂ ಹೆಚ್ಚು, ಕಡಿಮೆ ಮಾಡುವ ಬಟನ್, ಪವರ್ ಆಫ್ ಬಟನ್ ಸಹ ಇದೆ. 239 ಗ್ರಾಂನಷ್ಟು ತೂಕ ಇದೆ.
ಯೂಸರ್ ಇಂಟರ್‌ಫೇಸ್ ವೇಗವಾಗಿ, ತೀಕ್ಷ್ಣವಾಗಿ ಕೆಲಸ ಮಾಡುತ್ತದೆ. ಯಾವುದೇ ಹಂತದಲ್ಲಿ ಹ್ಯಾಂಗ್ ಅಥವಾ ಸ್ಟ್ರಕ್ ಆಗುವುದಿಲ್ಲ. ಪರದೆಯನ್ನು ಓಪನ್ ಮಾಡಿಟ್ಟುಕೊಂಡರೆ, ಟ್ಯಾಬ್ ರೀತಿ ಬಳಸಬಹುದು. ಟೈಪಿಂಗ್ ಮಾಡಲು, ಸಣ್ಣಪುಟ್ಟ ಪಿಪಿಟಿ ಸಿದ್ಧಪಡಿಸಬಹುದು. ಮನರಂಜನೆಗಂತೂ ದೊಡ್ಡ ಪರದೆ ಉತ್ತಮವಾಗಿದೆ.
ಈ ಫೋನ್ ಮಲ್ಟಿ ಟಾಸ್ಕ್ ಮಾಡಲು ಉಪಯುಕ್ತವಾಗಿದೆ. ಅಂದರೆ, ಏಕಕಾಲಕ್ಕೆ ಪರದೆಯ ಮೇಲೆ ಹಲವು ಆ್ಯಪ್‌ಗಳನ್ನು ಬಳಸುವುದು. ಫೋನ್ ಓಪನ್ ಮಾಡಿ, ವಾಟ್ಸ್‌ಆ್ಯಪ್ ಅಥವಾ ಫೇಸ್‌ಬುಕ್ ಹೀಗೆ ಒಂದು ಆ್ಯಪ್ ತೆರೆದ ಬಳಿಕ ಸ್ಕ್ರೀನ್ ಮೇಲೆ ಎರಡು ಬೆರಳನ್ನು ಇಟ್ಟು ಮೇಲಿನಿಂದ ಕೆಳಕ್ಕೆ ಎಳೆದರೆ ಆಗ ಸ್ಕ್ರೀನ್‌ನ ಎಡಭಾಗಕ್ಕೆ ಆ್ಯಪ್ ಫಿಟ್ ಆಗುತ್ತದೆ. ನಂತರ ಇನ್ನೊಂದು ಆ್ಯಪ್ ಓಪನ್ ಮಾಡಿದರೆ ಅದು ಸ್ಕ್ರೀನ್‌ನ ಬಲಭಾಗಕ್ಕೆ ಫಿಟ್ ಆಗುತ್ತದೆ. ಹೀಗೆ ಏಕಕಾಲಕ್ಕೆ ಹಲವು ಕೆಲಸಗಳನ್ನು ತೆರೆದು ಬಳಕೆ ಮಾಡಲು ದೊಡ್ಡ ಪರದೆ ಹೆಚ್ಚು ಅನುಕೂಲಕರ. ಇನ್ನು ರೀಸೆಂಟ್ ಆಗಿ ಬಳಸಿದ ಆ್ಯಪ್‌ಗಳು ಟಾಸ್ಕ್‌ಬಾರ್‌ನಲ್ಲಿ ಕೂರುವುದರಿಂದ ಅಂತಹ ಆ್ಯಪ್‌ಗಳು ತಕ್ಷಣಕ್ಕೆ ಸಿಗುತ್ತವೆ.
ಆಂಡ್ರಾಯ್ಡ್ 13 ಆಧಾರಿತ ಆಕ್ಸಿಜನ್ ಒಎಸ್ 13.2 ನಿಂದ ಕಾರ್ಯಾಚರಿಸುತ್ತದೆ. ಕಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8ಜೆನ್ 2 ಮೊಬೈಲ್ ಫ್ಲಾಟ್‌ಫಾರಂ ಒಳಗೊಂಡಿದೆ. 5ಜಿ ಚಿಪ್‌ಸೆಟ್. ಆಡ್ರೆನೊ 740 ಜಿಪಿಯು ಇದೆ. ಕಾರ್ಯಾಚರಣೆ ವೇಗ ಉತ್ತಮವಾಗಿದೆ. 16ಜಿಬಿ ರ್‍ಯಾಮ್ ಇದೆ. ರ್‍ಯಾಮ್ ಎಕ್ಸ್‌ಪ್ಯಾನ್ಶನ್ 4/8/12 ಜಿಬಿ ಇದೆ. ಸಂಗ್ರಹಣಾ ಸಾಮರ್ಥ್ಯ 512 ಜಿಬಿ ಹೊಂದಿದೆ.
ಕ್ಯಾಮೆರಾ: ಹಿಂಭಾಗದಲ್ಲಿ ದೊಡ್ಡ ವೃತ್ತದೊಳಗೆ ಮೂರು ಕ್ಯಾಮೆರಾ ಅಳವಡಿಸಲಾಗಿದೆ. 48ಎಂಪಿ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ, 64 ಎಂಪಿ ಟೆಲೆಫೋಟೊ, 48 ಎಂಪಿ ಅಲ್ಟ್ರಾವೈಡ್ ಲೆನ್ಸ್‌ಗಳನ್ನು ಒಳಗೊಂಡಿದೆ. ಫ್ಲಾಷ್‌ಗೆ ಎಲ್‌ಇಡಿ ನೀಡಲಾಗಿದೆ. ವೃತ್ತಿಪರ ಕ್ಯಾಮೆರಾ ಕಂಪನಿ ಹ್ಯಾಸಲ್‌ಬ್ಲಾಡ್‌ನ ಕ್ಯಾಮೆರಾ ಬಳಸಲಾಗಿದೆ. ಮೊದಲಿಗೆ ಒನ್‌ಪ್ಲಸ್ 9 ಸರಣಿಯಲ್ಲಿ ಹ್ಯಾಸಲ್‌ಬ್ಲಾಡ್ ಕ್ಯಾಮೆರಾ ಅಳವಡಿಸಲಾಯಿತು. ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಹ್ಯಾಸಲ್‌ಬ್ಲಾಡ್ ಕ್ಯಾಮೆರಾ ನೀಡಲಾಗುತ್ತಿದೆ. ಇದೀಗ ಸಹಜವಾಗಿಯೇ ಒನ್‌ಪ್ಲಸ್ ಓಪನ್‌ನಲ್ಲಿಯೂ ಹ್ಯಾಸಲ್‌ಬ್ಯಾಡ್ ಕ್ಯಾಮೆರಾ ನೀಡಲಾಗಿದೆ. ಹೀಗಾಗಿ ಇದರಲ್ಲಿ ಸಹಜ ಬಣ್ಣದಲ್ಲಿ ಫೋಟೊ ಸೆರೆ ಆಗುತ್ತದೆ. ಬಣ್ಣ, ಬೆಳಕಿನ ವಿನ್ಯಾಸ ಮತ್ತು ನೈಜತೆಯಲ್ಲಿ ಅತ್ಯುತ್ತಮವಾಗಿವೆ. ಲ್ಯಾಂಡ್‌ಸ್ಕೇಪ್, ಪೋರ್ಟೆಟ್, ಸೆಲ್ಫಿ, ಮ್ಯಾಕ್ರೊ, ಪನೋರಮಾ ಆಯ್ಕೆಗಳಲ್ಲಿ ಸಹಜ ಬಣ್ಣದಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ತೆಗೆಯಬಹುದು. ಪನೋರಮಾ ಮೋಡ್‌ನಲ್ಲಿಯೂ ಬಹಳ ಡಿಟೇಲ್ ಆದ ಮತ್ತು ಸ್ಪಷ್ಟವಾದ ಚಿತ್ರ ಸೆರೆಹಿಡಿಯಬಹುದು. ವಿಡಿಯೊ ಸಹ ಉತ್ತಮ ಗುಣಮಟ್ಟದಲ್ಲಿ ರೆಕಾರ್ಡ್ ಆಗುತ್ತದೆ.
ನೈಟ್ ಮೋಡ್‌ನಲ್ಲಿ ಚಿತ್ರಗಳು ಚೆನ್ನಾಗಿ ಬರುತ್ತವೆಯಾದರೂ ಫೋಕಸ್ ಸ್ವಲ್ಪಮಟ್ಟಿಗೆ ಸಮಸ್ಯೆ ಇದೆ ಅನ್ನಿಸಿತು. ಪ್ರಧಾನ ಕ್ಯಾಮೆರಾದಲ್ಲಿ ಆಟೊಫೋಕಸ್ ಇದೆಯಾದರೂ ರಾತ್ರಿ ವೇಳೆ ದೀಪದ ಬೆಳಕಿನಲ್ಲಿ ಆಟೊಫೋಕಸ್ ಕಾರ್ಯವೈಖರಿ ನಿಖರವಾಗಿಲ್ಲ. ಹಲವು ಹಣತೆಗಳಲ್ಲಿ ಒಂದಕ್ಕೆ ಫೋಕಸ್ ಮಾಡಿ ಇನ್ನೇನು ಕ್ಲಿಕ್ ಮಾಡಬೇಕು ಎನ್ನುವಷ್ಟರಲ್ಲಿ ಪಕ್ಕದ ಹಣತೆಗೆ ಅಥವಾ ಖಾಲಿ ಜಾಗಕ್ಕೆ ಫೋಕಸ್ ಆಗಿ ಚಿತ್ರ ಸೆರೆಯಾಗುತ್ತದೆ. ಅದರಲ್ಲಿಯೂ ಹಲವು ದೀಪಗಳ ಮಧ್ಯೆ ವ್ಯಕ್ತಿಯನ್ನು ಫೋಕಸ್ ಮಾಡಿದಾಗ ಫೋಕಸ್ ಸರಿಯಾಗಿ ಗುರುತಿಸಿಲ್ಲ, ಅಲ್ಲದೆ ವ್ಯಕ್ತಿ ಕೇಂದ್ರಿತ ಆಗದೆ ಬೆಳಕು ಕೇಂದ್ರಿತ ಆಗಿಟ್ಟುಕೊಂಡು ಚಿತ್ರ ಸೆರೆಯಾಗಿದೆ. ಹೀಗಾಗಿ ಚಿತ್ರದಲ್ಲಿ ವ್ಯಕ್ತಿಯ ಮುಖ ಸ್ಪಷ್ಟವಾಗಿ ಕಾಣುವುದಿಲ್ಲ. ಫೋನ್ ಮಡಚಿದ್ದಾಗ 32 ಎಂಪಿ ಸೆಲ್ಫಿ ಕ್ಯಾಮೆರಾ, ಓಪನ್ ಮಾಡಿದ್ದಾಗ 20ಎಂಪಿ ಸೆಲ್ಫಿ ಕ್ಯಾಮೆರಾ ಇದೆ. ಸೆಲ್ಫಿ ತೆಗೆದಾಗ ಸಹಜವಾದ ಬಣ್ಣದಲ್ಲಿ ಚಿತ್ರ ಮೂಡಿಬಂದಿದೆ. ವಿಡಿಯೊ ಕಾಲ್ ಮಾಡುವಾಗಲೂ ಕ್ಲಾರಿಟಿ ಸ್ಪಷ್ಟವಾಗಿದೆ.
ಬ್ಯಾಟರಿ 4,805 ಎಂಎಎಚ್ (ಡ್ಯುಯಲ್ ಸೆಲ್, 3295+1510 ಎಂಎಎಚ್). 67ಡಬ್ಲ್ಯು ಸೂಪರ್ ವಿಒಒಸಿ ಚಾರ್ಜಿಂಗ್ ವ್ಯವಸ್ಥೆ ಇದೆ. ಶೇ 100ರಷ್ಟು ಚಾರ್ಜ್ ಆಗಲು 42 ನಿಮಿಷ ಬೇಕು. ಬ್ಯಾಟರಿ ಬಾಳಿಕೆ ಸರಾಸರಿ ಬಳಕೆಯಲ್ಲಿ ಒಂದು ದಿನಕ್ಕೆ ಸೀಮಿತ. ದೀರ್ಘ ಸಮಯದವರೆಗೆ ಬ್ರೌಸ್ ಮಾಡಿದರೆ, ವಿಡಿಯೊ ನೋಡಿದಾರೆ ಆಗ ಬಾಳಿಕೆ ಅವಧಿಯು 8 ಗಂಟೆಗೆ ತಗ್ಗುತ್ತದೆ. ಬ್ಯಾಟರಿ ಬಾಳಿಕೆ ಬಗ್ಗೆ ಗಮನ ಹರಿಸಬಹುದಿತ್ತು.
ಪವರ್ ಬಟನ್ ಜಾಗದಲ್ಲಿಯೇ ಫಿಂಗರ್‌ಪ್ರಿಂಟ್ ಅನ್‌ಲಾಕ್ ಆಯ್ಕೆ ನೀಡಿರುವುದು ಕಿರಿಕಿರಿ ಮೂಡಿಸುತ್ತದೆ. ಫೋನ್ ಅನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದಂತೆಯೇ ಅಗತ್ಯ ಇಲ್ಲದೇ ಇದ್ದಾಗಲೂ ಅನ್‌ಲಾಕ್ ಆಗಿಬಿಡುತ್ತದೆ.
ಡಾಲ್ಬಿ ಅಟ್ಮೋಸ್ ಸ್ಪೀಕರ್ ಇದ್ದು, ಸಂಗೀತ ಆಲಿಸುವಾಗ, ವಿಡಿಯೊ ನೋಡುವಾಗ ಸ್ಪಷ್ಟವಾಗಿ ಕೇಳಿಸುತ್ತದೆ. ವಿಡಿಯೊ ಗುಣಮಟ್ಟವೂ ಉತ್ತಮವಾಗಿದೆ. ಹೈ –ರೆಸಲ್ಯೂಷನ್ ವಿಡಿಯೊ ನೋಡುವಾಗ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ಗೇಮ್ ಆಡುವಾಗಲೂ ಯಾವುದೇ ಹಂತದಲ್ಲಿಯೂ ಹ್ಯಾಂಗ್ ಆಗುವುದಿಲ್ಲ.
ಇನ್ನು ಪದೇ ಪದೇ ಫೋನ್ ಓಪನ್ ಮತ್ತು ಫೋಲ್ಡ್ ಮಾಡುವುದರಿಂದ ಹಾಳಾಗುವುದಿಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಕಂಪನಿ ಹೇಳುವ ಪ್ರಕಾರ, ಪ್ರತಿ ದಿನ 100ಕ್ಕೂ ಹೆಚ್ಚು ಬಾರಿ ಓಪನ್ ಮಾಡಿ, ಫೋಲ್ಡ್ ಮಾಡಬಹುದು. ಹೀಗೆ ಮಾಡಿದರೆ 10 ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎಂದು ಹೇಳಿದೆ. ಹೊಸ ಫೋನ್ ಖರೀದಿಸಿದ ಖುಷಿಗೆ ಆರಂಭದಲ್ಲಿ ಪದೇ ಪದೇ ಫೋನ್ ಓಪನ್ ಮಾಡುತ್ತೇವೆ ಎಂದೇ ಇಟ್ಟುಕೊಳ್ಳೋಣ. ಆದರೆ ಅದು 100 ಬಾರಿಯನ್ನು ದಾಟುವುದು ಅನುಮಾನ. ಎಲ್ಲಿ ಹಾಳಾಗಿಬಿಡುವುದೋ ಎನ್ನುವ ಆತಂಕದಿಂದಲೇ ಬಳಸುತ್ತೇವೆ. ಹೀಗಾಗಿ ಕ್ರಮೇಣ ಓಪನ್ ಮಾಡುವ ಸಂಖ್ಯೆಯೂ ಕಡಿಮೆ ಆಗುತ್ತದೆ.
ಕಾರ್ಯಾಚರಣೆಯ ವೇಗ, ಕ್ಯಾಮೆರಾ ಕ್ಲಾರಿಟಿ, ಆಡಿಯೊ, ವಿಡಿಯೋ ಗುಣಮಟ್ಟ ಹೀಗೆ ಹಲವು ವಿಷಯಗಳಲ್ಲಿ ‘ಒನ್‌ಪ್ಲಸ್ ಓಪನ್’ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಹಣಕ್ಕೆ ತಕ್ಕ ಮೌಲ್ಯ ತಂದುಕೊಡುತ್ತದೆ. ಬೆಲೆ ₹1,39,999.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.