ಈ ಬಾರಿಯ ಬೇಸಿಗೆಯಲ್ಲಿ ಒನ್‌ಪ್ಲಸ್ ಬಿಡುಗಡೆ ಮಾಡಿದ ನಾಲ್ಕು ಉತ್ಪನ್ನಗಳಲ್ಲಿ ಪ್ಯಾಡ್ 2 ಕೂಡಾ ಒಂದು. ಆಗಸ್ಟ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬಂದಿರುವ ಈ ಸಾಧನ, 12.1 ಇಂಚಿನ ದೊಡ್ಡ ಪರದೆ ಹಾಗೂ ಆಧುನಿಕ ಹಾರ್ಡ್‌ವೇರ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಅಳವಡಿಸಲಾಗಿದೆ.
ಉತ್ಕೃಷ್ಟ ಗುಣಮಟ್ಟದ ಆ್ಯಂಡ್ರಾಯ್ಡ್ ಟ್ಯಾಬ್‌ಲೆಟ್ ಅನ್ನು ಈ ಬಾರಿ ಒನ್‌ಪ್ಲಸ್ ಹೊರತಂದಿದೆ. ವಿನ್ಯಾಸ ಹಾಗೂ ಡಿಸ್‌ಪ್ಲೇಯಲ್ಲೂ ಸಾಕಷ್ಟು ಬದಲಾವಣೆ ಮಾಡಿದೆ.
ಇದರ ಮೆಟಾಲಿಕ್ ಹೊರಕವಚವು ಪ್ರೀಮಿಯಂ ಗುಣಮಟ್ಟವನ್ನು ಪುಷ್ಟೀಕರಿಸಲಿದೆ. ಅಂಚುಗಳು ಕರ್ವ್ ಆಕಾರದಲ್ಲಿರುವುದರಿಂದ ಹೆಚ್ಚು ಹಿತವೆನಿಸುತ್ತವೆ. ನೋಡಲು ಆಕರ್ಷಕವಾಗಿದೆ. ಈ ಹಿಂದಿನ ಮಾದರಿಗಿಂತ ಭಿನ್ನವಾಗಿದೆ.
ನಿಂಬಸ್ ಗ್ರೇ ಬಣ್ಣದ ಟ್ಯಾಬ್ ಇದಾಗಿದ್ದು, ಕ್ಯಾಮೆರಾವನ್ನು ಹಿಂಬದಿಯ ಮಧ್ಯ ಭಾಗದಲ್ಲಿ ಕೆಳಗೆ ಒನ್ ಪ್ಲಸ್ ಲೋಗೊ ನೀಡಲಾಗಿದೆ. ಉಳಿದಂತೆ ವಿನ್ಯಾಸ ಸರಳವಾಗಿದೆ.
ಮುಂಭಾಗದಲ್ಲಿ 12.1 ಇಂಚಿನ ಡಿಸ್‌ಪ್ಲೇ ಇದೆ. 3ಕೆ (3200X2120p) ಡಿಸ್‌ಪ್ಲೇ ಹೊಂದಿದೆ. ಇದು 144 ಹರ್ಟ್ಜ್‌ನ ರೆಫ್ರೆಶ್ ರೇಟ್ ಹೊಂದಿದೆ. ಪಿಕ್ಸೆಲ್ ಡೆನ್ಸಿಟಿಯು ಪ್ರತಿ ಇಂಚಿಗೆ 303ರಷ್ಟು ಪಿಕ್ಸೆಲ್ ಹೊಂದಿದೆ. ಹಾಗೂ 900 ನಿಟ್ಸ್‌ನಷ್ಟು ಪರದೆಯ ಬೆಳಕಿನ ಪ್ರಕರತೆ ಹೊಂದಿದೆ.
ಮುಂಭಾಗದಲ್ಲೂ ನೀಡಲಾಗಿರುವ ಕ್ಯಾಮೆರಾ, ಸಾಧನದ ಮೇಲ್ಭಾಗದ ಮಧ್ಯದಲ್ಲಿದೆ. ಇದು ವಿಡಿಯೊ ಕರೆಯ ಅನುಭೂತಿಯನ್ನು ಹೆಚ್ಚು ಆಪ್ತಗೊಳಿಸುವಂತಿದೆ. ಟ್ಯಾಬ್ –2 ಅನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ವಿಡಿಯೊ ಕರೆ ಮಾಡಲು, ಓದಲು ಹೆಚ್ಚು ಅನುಕೂಲವಾಗುವಂತಿದೆ. ಇದರೊಂದಿಗೆ ನೀಡಲಾಗಿರುವ ಫೋಲಿಯೊ ಬ್ಯಾಕ್ ಕವರ್ ಅನ್ನು ಸ್ಟಾಂಡ್ ಆಗಿಯೂ ಬಳಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಚಲನಚಿತ್ರ, ಚಿತ್ರ ವೀಕ್ಷಣೆಗೆ ಪ್ಯಾಡ್–2ರ ಡಿಸ್‌ಪ್ಲೇ ಉತ್ತಮವಾಗಿದೆ. ಒಳಾಂಗಣವೇ ಆಗಿರಲಿ, ಕಾರು, ಮೆಟ್ರೊದಲ್ಲಿ ಸಂಚರಿಸುವಾಗಲೇ ಆಗಿರಲಿ ಸ್ಕ್ರೀನ್ ಬೆಳಕಿನ ಪ್ರಕರತೆ ಹಾಗೂ ರೆಸಲೂಷನ್ ವೀಕ್ಷಣೆಗೆ ಉತ್ತಮವಾಗಿದೆ. ಇ–ಬುಕ್ ಓದುವುದಾದರೆ ರೀಡಿಂಗ್ ಮೋಡ್ ಆಯ್ಕೆ ಮಾಡಿಕೊಳ್ಳುವ ಸೌಲಭ್ಯದಿಂದಾಗಿ ನೀಲಿ ಬೆಳಕನ್ನು ಕಡಿಮೆ ಮಾಡುವ ಸೌಲಭ್ಯ ಕಣ್ಣಿಗೆ ಹೆಚ್ಚು ಹಿತವೆನಿಸುತ್ತದೆ.
ಒನ್‌ಪ್ಲಸ್ ಪ್ಯಾಡ್–2 ಸಾಧನವು ಕ್ವಾಲಕಮ್‌ನ ಜನಪ್ರಿಯ ಸ್ನಾಪ್‌ಡ್ರಾಗನ್ 8ರ 3ನೇ ತಲೆಮಾರಿನ ಚಿಪ್‌ಸೆಟ್ ಹೊಂದಿದೆ. ಇದರೊಂದಿಗೆ ಆಡ್ರೆನೊ 750 ಜಿಪಿಯು, 8 ಜಿಬಿ/ 12ಜಿಬಿ ಎಲ್‌ಪಿಡಿಡಿಆರ್5ಎಕ್ಸ್ ರ‍್ಯಾಮ್, 128 ಜಿಬಿ / 256 ಜಿಬಿ ಯುಎಫ್‌ಎಸ್ 3.1 ಸ್ಟೋರೇಜ್ ಇದರದ್ದು. ಆ್ಯಂಡ್ರಾಯ್ಡ್ 14 ಆಧಾರಿದ ಆಕ್ಸಿಜೆನ್ 14 ಆಪರೇಟಿಂಗ್ ಸಿಸ್ಟಂ ಅನ್ನು ಇದು ಹೊಂದಿದೆ. ಹೀಗಾಗಿ
ಅತಿಯಾದ ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಅತ್ಯಂತ ಲೀಲಾಜಾಲವಾಗಿ ಆಡಬಹುದಾದಷ್ಟು ಕಾನ್ಫಿಗರೇಷನ್ ಅನ್ನು ಇದು ಹೊಂದಿದೆ. ಗೂಗಲ್‌ನ ಆ್ಯಪ್‌ಗಳನ್ನು ಬಳಸಿ, ಪವರ್‌ಪಾಯಿಂಟ್ ಪ್ರಸಂಟೇಷನ್‌ಗಳನ್ನು ಸುಲಭವಾಗಿ ಸಿದ್ಧಪಡಿಸಬಹುದಾಗಿದೆ.
ಪ್ಯಾಡ್–2ರ ಹಿಂಬದಿಯಲ್ಲಿ 13 ಮೆಗಾ ಪಿಕ್ಸೆಲ್‌ನ ಪ್ರೈಮರಿ ಕ್ಯಾಮೆರಾ ಹಾಗೂ ಎಲ್‌ಇಡಿ ಲೈಟ್ ನೀಡಲಾಗಿದೆ. ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಕಾರಿ. ತೆಗೆದ ಚಿತ್ರಗಳನ್ನು ಪಿಡಿಎಫ್ ಆಗಿಯೂ ಪರಿವರ್ತಿಸಬಹುದು. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೊ ಕಾಲಿಂಗ್‌ಗೆ ಅನುಕೂಲವಾಗುವಂತೆ 8 ಮೆಗಾ ಪಿಕ್ಸೆಲ್ ಸೆನ್ಸರ್ ಅಳವಡಿಸಲಾಗಿದೆ.
ಈ ನೂತನ ಸಾಧನವು 9,510 ಎಂಎಎಚ್ ಬ್ಯಾಟರಿ ಹೊಂದಿದೆ. 67 ವಾಟ್‌ನ ವಿಒಒಸಿ ಚಾರ್ಜಿಂಗ್ ಸೌಕರ್ಯವೂ ಇದೆ. ಬ್ಯಾಟರಿ ಬ್ಯಾಕ್‌ಅಪ್ ದೀರ್ಘಕಾಲದವರೆಗೂ ಕೆಲಸ ಮಾಡಲು ಅನುಕೂಲವಾಗುವಂತಿದೆ. ಒಟಿಟಿಯ ವೆಬ್‌ಸಿರೀಸ್‌ನ ಕೆಲವೊಂದು ಎಪಿಸೋಡ್‌ಗಳನ್ನು ಒಂದೇ ಚಾರ್ಜ್‌ನಲ್ಲಿ ನೋಡಬಹುದು.
ಒನ್‌ಪ್ಲಸ್ ಪ್ಯಾಡ್ 2 ಹಲವು ಹೊಸತು ಹಾಗೂ ಭರವಸೆ ಮೂಡಿಸುವಂತ ಸಾಧವನ್ನು ಕಂಪನಿ ಪರಿಚಯಿಸಿದೆ. ಇದರ ಕಾರ್ಯಕ್ಷಮತೆ ಹೆಚ್ಚಿಸುವ ಕ್ವಾಲ್ಕಮ್ ಪ್ರೊಸೆಸ್ಸರ್ ಇರುವುದರಿಂದ ವಿಳಂಬವಿಲ್ಲದ ಬಳಕೆ ಹೆಚ್ಚು ಹಿತ ನೀಡುತ್ತದೆ. ಡಿಸ್‌ಪ್ಲೇ ಕೂಡಾ ಹೆಚ್ಚು ಪ್ರಕರವಾಗಿದ್ದು, ವೀಕ್ಷಣೆಗೆ ಸುಲಭವಾಗಿದೆ. ಬ್ಯಾಟರಿ ಸಾಮರ್ಥ್ಯವೂ ಉತ್ತಮವಾಗಿರುವುದರಿಂದ ಮಲ್ಟಿಮೀಡಿಯಾ ಕಂಟೆಂಟ್‌ಗಳನ್ನು ಹಲವು ಗಂಟೆಗಳ ಕಾಲ ಬಳಸಬಹುದಾಗಿದೆ.
ಒನ್‌ಪ್ಲಸ್ ಪ್ಯಾಡ್ 2 ಎರಡು ವೇರಿಯಂಟ್‌ಗಳಲ್ಲಿ ಲಭ್ಯ. 8ಜಿ.ಬಿ. ರ‍್ಯಾಮ್ ಮತ್ತು 128 ಜಿ.ಬಿ. ಸ್ಮೃತಿಕೋಶ ಹಾಗೂ ಮತ್ತೊಂದು 12 ಜಿ.ಬಿ. ರ‍್ಯಾಮ್ ಮತ್ತು 256 ಜಿ.ಬಿ. ಸ್ಟೋರೇಜ್‌ನ ಎರಡು ವೇರಿಯಂಟ್‌ಗಳಿವೆ. ಇವುಗಳು ಕ್ರಮವಾಗಿ ₹39,999 ಹಾಗೂ ₹42,999 ಬೆಲೆಯವುಗಳಾಗಿವೆ.
ಒನ್‌ಪ್ಲಸ್‌ನ ಈ ನೂತನ ಟ್ಯಾಬ್ಲೆಟ್‌ನಲ್ಲಿ ಕೈಬರಹ ಹಾಗೂ ಚಿತ್ರ ರಚನೆಗೆ ಅನುಕೂಲವಾಗುವಂತೆ ಸ್ಟೈಲೊ 2 (₹ 5,499) ಹಾಗೂ ಸ್ಮಾರ್ಟ್ ಕೀಬೋರ್ಡ್ (₹ 8,499) ಪ್ಯಾಡ್ 2ರೊಂದಿಗೆ ಪರಿಚಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.