ADVERTISEMENT

ಗುಣಮಟ್ಟದ ಫೋಟೊ, ದೀರ್ಘ ಬ್ಯಾಟರಿಗೆ‌ ‘ಒನ್‌ಪ್ಲಸ್‌ ನಾರ್ಡ್‌ ಸಿಇ2’

ವಿಶ್ವನಾಥ್ ಎಸ್.
Published 21 ಮಾರ್ಚ್ 2022, 8:32 IST
Last Updated 21 ಮಾರ್ಚ್ 2022, 8:32 IST
ಒನ್‌ಪ್ಲಸ್‌ ನಾರ್ಡ್‌ ಸಿಇ2
ಒನ್‌ಪ್ಲಸ್‌ ನಾರ್ಡ್‌ ಸಿಇ2   

ಒನ್‌ಪ್ಲಸ್‌ ಕಂಪನಿಯು ಮೇಲ್ಮಧ್ಯಮ ಬೆಲೆಯ (₹ 23 ಸಾವಿರದಿಂದ ₹ 30 ಸಾವಿರದೊಳಗೆ) ವಿಭಾಗದಲ್ಲಿಈಚೆಗಷ್ಟೇ ಒನ್‌ಪ್ಲಸ್‌ ನಾರ್ಡ್‌ ಸಿಇ2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದರ ಬೆಲೆ ₹23,999. ‘ನಾರ್ಡ್‌ ಸಿಇ’ಗೆ ಹೋಲಿಸಿದರೆ ಚಿತ್ರದ ಗುಣಮಟ್ಟ, ಬ್ಯಾಟರಿ ಬಾಳಿಕೆ, ಸಂಗ್ರಹಣಾ ಸಾಮರ್ಥ್ಯದ ದೃಷ್ಟಿಯಿಂದ ಉತ್ತಮವಾಗಿದೆ.

ವಿನ್ಯಾಸ, ಬಣ್ಣದಲ್ಲಿ ತಕ್ಷಣಕ್ಕೆ ಸೆಳೆಯುವಂತೆ ಇದನ್ನು ರೂಪಿಸಲಾಗಿದೆ. ನಾರ್ಡ್‌ ಸಿಇಗೆ ಹೋಲಿಸಿದರೆ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಮೈಕ್ರೊಎಸ್‌ಟಿ ಕಾರ್ಡ್‌ ಸ್ಲಾಟ್‌ ನೀಡಿರುವುದು ಇದರ ಪ್ಲಸ್‌ ಪಾಯಿಂಟ್‌ಗಳಲ್ಲಿ ಒಂದು. ಹಿಂಬದಿ ಕವರ್‌ ಅನ್ನು ಲೋಹಕ್ಕೆ ಬದಲಾಗಿ ಪ್ಲಾಸ್ಟಿಕ್‌ನಿಂದ ಮಾಡಲಾಗಿದೆ. ಹೀಗಾಗಿ ಇದರ ತೂಕವು 173 ಗ್ರಾಂ ಇದೆ. 6.43 ಇಂಚು ಅಮೊಎಲ್‌ಇಡಿ ಪರದೆ, 20:9 ಆಸ್ಪೆಕ್ಟ್‌ ರೇಶಿಯೊ ಹೊಂದಿದೆ. 90ಹರ್ಟ್ಸ್‌ ರಿಫ್ರೆಶ್‌ ರೇಟ್‌ ಇದೆ. ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಇದೆ. ರೀಡಿಂಗ್‌ ಮೋಡ್‌ ಇಲ್ಲ. ಆಂಡ್ರಾಯ್ಡ್‌ 11 ಆಧಾರಿತ ಆಕ್ಸಿಜನ್‌ ಒಎಸ್‌ 11 ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ. ಈಗಾಗಲೇ ಆಂಡ್ರಾಯ್ಡ್‌ 12 ಒಎಸ್‌ ಮಾರುಕಟ್ಟೆಯಲ್ಲಿ ಇದೆ. ಹೀಗಾಗಿ ಸಾಫ್ಟ್‌ವೇರ್‌ ದೃಷ್ಟಿಯಿಂದ ಇದು ಹಿನ್ನಡೆ.

ಕ್ಯಾಮೆರಾ: ಹಗಲು ಮತ್ತು ಮಂದ ಬೆಳಕಿನಲ್ಲಿ ಉತ್ತಮ ಫೊಟೊಗಳನ್ನು ತೆಗೆಯಬಹುದು. 20x ವರೆಗೂ ಜೂಮ್‌ ಮಾಡಬಹುದಾಗಿದ್ದು, ಚಿತ್ರದ ಗುಣಮಟ್ಟದಲ್ಲಿ ಯಾವುದೇ ಕೊರತೆ ಕಾಣುವುದಿಲ್ಲ. ಪ‍್ರತಿಯೊಂದು ವಿವರವೂ ಸ್ಪಷ್ಟವಾಗಿ ಸೆರೆಯಾಗುತ್ತದೆ. ಕ್ಲೋಸ್‌ ಅಪ್‌ನಲ್ಲಿ ತೆಗೆದ ಚಿತ್ರವು ಚೆನ್ನಾಗಿದೆ. ನೈಟ್‌ಸ್ಕೇಪ್‌ ಆಯ್ಕೆಯಲ್ಲಿ ಫೋಟೊ ತೆಗೆದ ಮೇಲೆ ಅದು ಮೂಡಲು 7–8 ಸೆಕೆಂಡ್‌ ಬೇಕಾಗುತ್ತದೆ. ಇಲ್ಲಿಯೂ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಸೆಲ್ಫಿಯೂ ಉತ್ತಮವಾಗಿ ಮೂಡಿಬರುತ್ತದೆ. ಮ್ಯಾಕ್ರೊ ಮೋಡ್‌ ಆಯ್ಕೆಯಲ್ಲಿ ಚಿತ್ರಗಳ ಗುಣಮಟ್ಟ ಅಷ್ಟು ಚೆನ್ನಾಗಿ ಬರುವುದಿಲ್ಲ. ರಿವ್ಯುಗೆ ಬಂದಿದ್ದ ನಾರ್ಡ್‌ನ ಈ ಹಿಂದಿನ ಹ್ಯಾಂಡ್‌ಸೆಟ್‌ಗಳ ಒಎಸ್‌ ಸರಿಯಾಗಿ ಅಪ್‌ಡೇಟ್‌ ಆಗಿರಲಿಲ್ಲ. ಎರಡು ಬಾರಿ ಅಪ್‌ಡೇಟ್‌ ಆದ ಬಳಿಕ ಸ್ಮಾರ್ಟ್‌ಫೋನ್‌ನ ಕಾರ್ಯಸಾಮರ್ಥ್ಯದ ನೈಜ ಅನುಭವ ಸಾಧ್ಯವಾಗಿತ್ತು. ಆದರೆ, ಒನ್‌ಪ್ಲಸ್‌ ನಾರ್ಡ್‌ ಸಿಇ2ನಲ್ಲಿ ಆ ಸಮಸ್ಯೆ ನಿವಾರಿಸಲಾಗಿದೆ. ಬಾಕ್ಸ್‌ನಿಂದ ಫೋನ್‌ ತೆಗೆದು ಬಳಸಲು ಆರಂಭಿಸುತ್ತಿದ್ದಂತೆಯೇ ಇದರ ಎಲ್ಲಾ ವೈಶಿಷ್ಟ್ಯಗಳು ಸರಿಯಾಗಿ ಕೆಲಸಮಾಡಿವೆ.

ADVERTISEMENT

ಬ್ಯಾಟರಿ: 4,500 ಎಂಎಎಚ್‌ ಬ್ಯಾಟರಿ ಹೊಂದಿದ್ದು, ವೇಗದ ಚಾರ್ಜಿಂಗ್‌ಗೆ 65ಡಬ್ಲ್ಯು ಸೂಪರ್‌ ವಿಒಒಸಿ ಚಾರ್ಜಿಂಗ್‌ ವ್ಯವಸ್ಥೆ ಇರುವುದು ಇದರ ಅತಿದೊಡ್ಡ ಪ್ಲಸ್‌ ಪಾಯಿಂಟ್‌. ಬ್ಯಾಟರಿ ಶೇ 100ರಷ್ಟು ಚಾರ್ಜ್‌ ಆಗಲು 20 ನಿಮಿಷ ತೆಗೆದುಕೊಂಡಿತು. ಸಾಮಾನ್ಯ ಬಳಕೆಯ ದೃಷ್ಟಿಯಿಂದ ನೋಡಿದರೆ ಒಮ್ಮೆ ಶೇ 100ರಷ್ಟು ಚಾರ್ಜ್‌ ಮಾಡಿದರೆ ಒಂದೂವರೆ ದಿನ ಬಳಸಬಹುದು. ಹೆಚ್ಚು ಸಮಯ ವಿಡಿಯೊ ನೋಡುವುದು, ಬ್ರೌಸ್‌ ಮಾಡಿದರೆ, ಗೇಮ್‌ ಆಡಿದರೆ 15 ಗಂಟೆಯವರೆಗೆ ಬ್ಯಾಟರಿಯು ಬಾಳಿಕೆ ಬರುತ್ತದೆ. ವಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲಿಸುವುದಿಲ್ಲ.

ವೈಶಿಷ್ಟ್ಯಗಳು

ಪರದೆ: 6.43 ಇಂಚು 90 ಹರ್ಟ್ಸ್‌ ಫ್ಲ್ಯೂಯೆಡ್‌ ಅಮೊಎಲ್‌ಇಡಿ ಡಿಸ್‌ಪ್ಲೇ

ಒಎಸ್‌: ಆಂಡ್ರಾಯ್ಡ್‌ 11 ಆಧಾರಿತ ಆಕ್ಸಿಜನ್‌ ಒಎಸ್ 11

ಪ್ರೊಸೆಸರ್: ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 750ಜಿ

ಹಿಂಬದಿ ಕ್ಯಾಮೆರಾ: 64+8+2 ಎಂಪಿ

ಸೆಲ್ಫಿ ಕ್ಯಾಮೆರಾ: 16 ಎಂಪಿ‌

ಬ್ಯಾಟರಿ: 4500 ಎಂಎಎಚ್‌

ಬೆಲೆ: 8 ಜಿಬಿ‌+128ಜಿಬಿಗೆ ₹ ₹23,999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.