ಸ್ಯಾಮ್ಸಂಗ್ ಕಂಪನಿಯು ಈಚೆಗಷ್ಟೇ ಗ್ಯಾಲಕ್ಸಿ ಎ ಸರಣಿಯಲ್ಲಿ ಐದು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎ53 ಸ್ಮಾರ್ಟ್‌ಫೋನ್ ಹಲವು ಪ್ಲಸ್ ಮತ್ತು ಮೈನಸ್ ಅಂಶಗಳನ್ನು ಒಳಗೊಂಡಿದೆ.8ಜಿಬಿ+128 ಜಿಬಿ ಬೆಲೆ ₹32,999.
ಆಕರ್ಷಕ ವಿನ್ಯಾಸ ಹೊಂದಿದ್ದು, ಮೇಲ್ನೋಟಕ್ಕೆ ಸೆಳೆಯುತ್ತದೆ. ಫೋನ್‌ನ ಚೌಕಟ್ಟನ್ನು ಲೋಹದಿಂದ ಮಾಡಲಾಗಿದೆ. ಆದರೆ ಹಿಂಭಾಗಕ್ಕೆ ಪ್ಲಾಸ್ಟಿಕ್ ಬಳಕೆ ಮಾಡಲಾಗಿದ್ದು, ಮ್ಯಾಟ್ ಫಿನಿಶಿಂಗ್ ಇದೆ. ಹೀಗಾಗಿ ಹಿಂಭಾಗದಲ್ಲಿ ಬೆರಳಚ್ಚು ಮೂಡುವುದಿಲ್ಲ. 6.5 ಇಂಚು ಸೂಪರ್ ಅಮೊಎಲ್‌ಇಡಿ ರೆಕ್ಟ್ಯಾಂಗಲ್ ಡಿಸ್‌ಪ್ಲೇ ಹೊಂದಿದೆ.
ಪ್ರೈಮರಿ ಕ್ಯಾಮೆರಾ 64 ಎಂಪಿ ಇದೆ. ಲ್ಯಾಂಡ್‌ಸ್ಕೇಪ್ ಚಿತ್ರಗಳು ಚೆನ್ನಾಗಿ ಮೂಡಿಬರುತ್ತದೆ. ಸಹಜ ಬಣ್ಣದಲ್ಲಿ ಫೊಟೊ ಸೆರೆಯಾಗುತ್ತದೆ. ಆದರೆ, ಚಿತ್ರ ತೆಗೆದ ಬಳಿಕ ಜೂಮ್ ಮಾಡಿದರೆ ಚಿತ್ರವು ತುಸು ಬ್ಲರ್ ಆಗುತ್ತದೆ. ಪೊರ್ಟೇಟ್ ಆಯ್ಕೆಯಲ್ಲಿ ಉತ್ತಮ ಚಿತ್ರಗಳನ್ನು ತೆಗೆಯಬಹುದು. ಮ್ಯಾಕ್ರೊ ಮೋಡ್ ಆಯ್ಕೆ ಚೆನ್ನಾಗಿ ಕೆಲಸ ಮಾಡುತ್ತದೆ. ಇಂಟರ್‌ನೆಟ್ ಸಂಪರ್ಕ ಇದ್ದಾಗ ‘ಫನ್ ಮೋಡ್’ ಆಯ್ಕೆ ಬಳಸುವುದು ಮಜವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಫೊಟೊ ಹಂಚಿಕೊಳ್ಳುವ ಗೀಳು ಇರುವವರಿಗೆ ಈ ಆಯ್ಕೆ ಇಷ್ಟವಾಗುತ್ತದೆ.
3.5 ಎಂಎಂ ಆಡಿಯೊ ಜಾಕ್ ನೀಡಿಲ್ಲ. ಹೀಗಾಗಿ ವಯರ್‌ಲೆಸ್ ಇಯರ್‌ಫೋನ್ ಮೇಲೆ ಅವಲಂಬನೆ ಅನಿವಾರ್ಯ. ಐಪಿ67 ರೇಟಿಂಗ್ಸ್ ಹೊಂದಿದ್ದು, 1 ಮೀಟರ್‌ನಷ್ಟು ಆಳದಲ್ಲಿ 30 ನಿಮಿಷಗಳವರೆಗೆ ನೀರಿನಲ್ಲಿ ಇಟ್ಟರೂ ಯಾವುದೇ ಸಮಸ್ಯೆ ಆಗುವುದಿಲ್ಲ.
ಆಬ್ಜೆಕ್ಟ್ ಇರೇಸರ್ ಆಯ್ಕೆ ಒಂದು ಹಂತದ ಮಟ್ಟಿಗೆ ಕೆಲಸ ಮಾಡುತ್ತದೆ. ಚಿತ್ರದಲ್ಲಿ ಒಂದು ನಿರ್ದಿಷ್ಟ ವಸ್ತು ತೆಗೆಯಬೇಕು ಎಂದಾದರೆ ಆಬ್ಜೆಕ್ಟ್ ಇರೇಸರ್ ಆಯ್ಕೆ ಮಾಡಿ ಆ ವಸ್ತುವಿನ ಮೇಲೆ ಕ್ಲಿಕ್ ಮಾಡಿದರೆ ಅದು ಅಲ್ಲಿಂದ ಇರೇಸ್ ಆಗುತ್ತದೆ. ಆದರೆ, ಮೂಲ ಚಿತ್ರದಲ್ಲಿ ಏನನ್ನೂ ಅಳಿಸಲಾಗಿದೆ ಎನ್ನುವ ಸುಳಿವು ಸಿಗುವಂತೆ ಆ ಜಾಗವು ಸ್ವಲ್ಪ ಬ್ಲರ್ ಆಗಿರುತ್ತದೆ. ಚಿತ್ರದಲ್ಲಿರುವ ವಸ್ತುಗಳು ಒಂದಕ್ಕೊಂದು ಅಂಟಿಕೊಂಡಿದ್ದರಂತೂ ಆಗ ಮೂಲ ಚಿತ್ರವನ್ನು ಮ್ಯಾನುಪ್ಯುಲೇಟ್ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಫೊಟೊ ರಿ–ಮಾಸ್ಟರ್ ಆಯ್ಕೆ ಉತ್ತಮವಾಗಿದೆ. ಹಳೆಯ ಬ್ಲಾಕ್ ಆ್ಯಂಡ್ ವೈಟ್ ಚಿತ್ರಗಳಿಗೆ ಹೊಸತನ ನೀಡಲು ಇದು ಉಪಯುಕ್ತ.
ರ್‍ಯಾಮ್ ಪ್ಲಸ್: ಭಾರಿ ಗಾತ್ರದ ಗೇಮ್ ಆಡುವಾಗ ಫೋನ್‌ನ ರ್‍ಯಾಮ್ ಸಾಮರ್ಥ್ಯವನ್ನು 2, 4, 6 ಅಥವಾ 8 ಜಿಬಿಯಷ್ಟು ಹೆಚ್ಚಿಸಿಕೊಳ್ಳಬಹುದಾದ ರ್‍ಯಾಮ್ ಪ್ಲಸ್ ಆಯ್ಕೆ ಉಪಯುಕ್ತವಾಗಿದೆ. ಆದರೆ, ಹೀಗೆ ಮಾಡುವಾಗ ಪ್ರತಿ ಬಾರಿಯೂ ಫೋನ್ ಅನ್ನು ರಿಸ್ಟಾರ್ಟ್ ಮಾಡಬೇಕಾಗುತ್ತದೆ. ಇದು ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ. ಹಲವು ಥರ್ಡ್‌ಪಾರ್ಟಿ ಆ್ಯಪ್‌ಗಳು ಮೊದಲೇ ಇನ್‌ಸ್ಟಾಲ್ ಆಗಿರುತ್ತದೆ. ಇವುಗಳಲ್ಲಿ ಬಹಳಷ್ಟನ್ನು ಅನ್‌ಇನ್‌ಸ್ಟಾಲ್ ಮಾಡಲು ಆಗುವುದಿಲ್ಲ. ಇದರಿಂದ ಅನವಶ್ಯಕವಾಗಿ ಫೋನ್‌ನ ಜಾಗ ವ್ಯರ್ಥವಾಗುತ್ತದೆ. ಹೆಚ್ಚಿನ ರೆಸಲ್ಯೂಷನ್ ಇರುವ ಗೇಮ್ ಆಡುವಾಗ ಫೋನ್ ಸ್ವಲ್ಪ ಬಿಸಿ ಆಗುತ್ತದೆ. ಆದರೆ, ಒಟ್ಟಾರೆಯಾಗಿ ಆಟದ ಅನುಭವಕ್ಕೆ ಯಾವುದೇ ಅಡ್ಡಿ ಆಗುವುದಿಲ್ಲ. ಗೇಮ್ ಆಡುವಾಗ ಯಾವ ಹಂತದಲ್ಲಿಯೂ ಹ್ಯಾಂಗ್ ಆಗುವುದಿಲ್ಲ.
5000 ಎಂಎಎಚ್ ಬ್ಯಾಟರಿ ಹೊಂದಿದೆ. ಫೋನ್ ಜೊತೆ ಚಾರ್ಜಿಂಗ್ ಅಡಾಪ್ಟರ್ ನೀಡಿಲ್ಲ. ಯುಎಸ್‌ಬಿ ಚಾರ್ಜಿಂಗ್ ಕೇಬಲ್ ಮಾತ್ರ ನೀಡಲಾಗಿದೆ. ಈ ಕೇಬಲ್ ಸಹ ಎರಡೂ ಕಡೆ ‘ಸಿ’ ಟೈಪ್‌ನದ್ದು. ಇದು ಈ ಫೋನ್‌ನ ದೊಡ್ಡ ಮೈನಸ್. ಯುಎಸ್‌ಬಿ ಚಾರ್ಜಿಂಗ್ ಕೇಬಲ್ ₹ 100ಕ್ಕೆಲ್ಲಾ ಖರೀದಿಸಬಹುದು. ಆದರೆ, ಅಡಾಪ್ಟರ್ ಮುಖ್ಯ. ನಿರ್ದಿಷ್ಟವಾಗಿ ಇಂತಿಷ್ಟೇ ವೊಲ್ಟ್ಸ್‌ನದ್ದು ಇರಬೇಕು. ಆದರೆ, ಮೊಬೈಲ್ ಅಂಗಡಿಗಳಲ್ಲಿ ಖರೀದಿಸುವ ಅಡಾಪ್ಟರ್ ಒರಿಜಿನಲ್ ಎನ್ನುವುದಕ್ಕೆ ಯಾವುದೇ ಖಾತರಿ ಇರುವುದಿಲ್ಲ. ಈಗಂತೂ ಬ್ರ್ಯಾಂಡ್ ಹೆಸರಿನಲ್ಲಿಯೇ ನಕಲಿ ಚಾರ್ಜರ್‌ಗಳು ಎಲ್ಲೆಡೆಯೂ ಸಿಗುತ್ತಿವೆ.. ಹೀಗಿರುವಾಗ ಕಂಪನಿ ಚಾರ್ಜಿಂಗ್ ಅಡಾಪ್ಟರ್ ನೀಡದೇ ಇರುವುದು ಅಚ್ಚರಿಯ ನಿರ್ಧಾರವೇ ಸರಿ. ಕಂಪನಿಯದ್ದೇ ಚಾರ್ಜರ್ ಬಳಸಿದರೆ ವೊಲ್ಟೇಜ್‌ನಲ್ಲಿ ವ್ಯತ್ಯಾಸ ಆಗುವುದಿಲ್ಲ. ಬ್ಯಾಟರಿಯೂ ಹೆಚ್ಚು ಬಾಳಿಕೆ ಬರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಬ್ಯಾಟರಿ ಪೂರ್ತಿ ಚಾರ್ಜ್ ಆಗಲು ಎರಡು ಗಂಟೆ ಬೇಕು. ಈಗಿನ ಫಾಸ್ಟ್ ಚಾರ್ಜರ್ ಕಾಲದಲ್ಲಿ ಇಷ್ಟು ಸಮಯ ತೆಗೆದುಕೊಳ್ಳುವುದು ಈ ಫೋನ್‌ನ ತಾಂತ್ರಿಕ ಹಿನ್ನಡೆ ಎನ್ನಬಹುದು. ಬಾಳಿಕೆ ದೃಷ್ಟಿಯಿಂದ ಸಾಮಾನ್ಯ ಬಳಕೆಯಲ್ಲಿ ಒಂದೂವರೆ ದಿನ ಬಳಸಬಹುದು. ಹೆಚ್ಚಿನ ರೆಸಲ್ಯೂಷನ್ ಇರುವ ವಿಡಿಯೊ ನೋಡಿದರೆ, ಗೇಮ್ ಆಡಿದರೆ ಆಗ ಒಂದು ದಿನಕ್ಕಂತೂ ಯಾವುದೇ ಸಮಸ್ಯೆ ಆಗುವುದಿಲ್ಲ.
ಒಟ್ಟಾರೆ ಹೇಳುವುದಾದರೆ, ವಿನ್ಯಾಸ, ಕಾರ್ಯಾಚರಣೆ, ಬ್ಯಾಟರಿ ಬಾಳಿಕೆ ದೃಷ್ಟಿಯಿಂದ ಉತ್ತಮವಾಗಿದೆ. ಬ್ಯಾಟರಿ ಚಾರ್ಜಿಂಗ್ ಸಮಯ, ಫೋಟೊ ಕ್ಲಾರಿಟಿಯಲ್ಲಿ ಇನ್ನಷ್ಟು ಸುಧಾರಣೆ ಮಾಡಬಹುದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.